ಇರಾನ್ ನಾಯಕತ್ವವನ್ನು ನಾವು ಕ್ಷಣ ಮಾತ್ರದಲ್ಲಿ ಮುಗಿಸಬಹುದು! – ಟ್ರಂಪ್ ಎಚ್ಚರಿಕೆ

ವಾಷಿಂಗ್ಟನ್ (ಅಮೆರಿಕ) – ನಾವು ನಿರ್ಧರಿಸಿದರೆ, ಇರಾನ್‌ ನ ಇನ್ನುಳಿದ ಇಡೀ ನಾಯಕತ್ವವನ್ನು ಒಂದೇ ಕ್ಷಣದಲ್ಲಿ ಅಂತ್ಯಗೊಳಿಸಬಹುದೆಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಇರಾನ್‌ ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಸಂಸ್ಕಾರದ ಹಿನ್ನೆಲೆಯಲ್ಲಿ ‘ಆಕ್ಸಿಯೋಸ್’ಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡುತ್ತಿದ್ದರು.

​ಆದಾಗ್ಯೂ, ನಮಗೆ ಇರಾನ್ ಸರಕಾರದೊಂದಿಗೆ ಮಾತುಕತೆಗಳನ್ನು ಮುಂದುವರಿಸಬೇಕಾಗಿರುವುದರಿಂದ ನಾವು ಹಾಗೆ ಮಾಡುವುದಿಲ್ಲ; ಏಕೆಂದರೆ ಅವರೆಲ್ಲರೂ ಒಂದೇ ಸ್ಥಳದಲ್ಲಿದ್ದಾರೆ, ನಾವು ಅವರನ್ನು ಮುಗಿಸಿಬಿಟ್ಟರೆ ಯಾರೊಂದಿಗೆ ಚರ್ಚೆ ಮಾಡುವುದು?, ಎಂದು ಟ್ರಂಪ್ ವ್ಯಂಗ್ಯವಾಗಿ ಪ್ರಶ್ನಿಸಿದರು.

​ಟ್ರಂಪ್ ಮುಂದುವರಿದು, ‘‘ಜನರು ಖಮೇನಿ ಅವರನ್ನು ದ್ವೇಷಿಸುತ್ತಾರೆ ಎಂದು ನಾನು ಭಾವಿಸಿದ್ದೆ. ನಾಗರಿಕರು ಸುರಿಸುತ್ತಿರುವ ಕಣ್ಣೀರು ನಿಜವೋ ಅಥವಾ ನಕಲಿಯೋ?, ಎಂಬ ಬಗ್ಗೆ ನನಗೆ ಸಂಶಯವಿದೆ’’ ಎಂದರು.

​ಅಮೆರಿಕದ ಬಳಿ ಸಂಸ್ಕೃತಿಯೂ ಇಲ್ಲ, ಇತಿಹಾಸ ಮತ್ತು ಗೌರವವೂ ಇಲ್ಲ! – ಇರಾನ್ ಪ್ರತ್ಯುತ್ತರ

​ಟ್ರಂಪ್ ಅವರ ಈ ಹೇಳಿಕೆಗೆ ಅರ್ಮೇನಿಯಾದಲ್ಲಿರುವ ಇರಾನ್ ರಾಯಭಾರ ಕಚೇರಿಯು ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯುತ್ತರ ನೀಡಿದ್ದು, ‘ನಿಮ್ಮ ಬಳಿ ಸಂಸ್ಕೃತಿಯೂ ಇಲ್ಲ, ಇತಿಹಾಸವೂ ಇಲ್ಲ ಮತ್ತು ಗೌರವವೂ ಇಲ್ಲ’, ಎಂದು ಟೀಕಿಸಿದೆ. ​ಇನ್ನು ಇರಾನ್‌ ನ ಸೇನಾ ಅಧಿಕಾರಿಗಳು, ‘ನಮ್ಮ ಮೇಲೆ ದಾಳಿಯಾದರೆ ಅದಕ್ಕೆ ತಕ್ಷಣ ಮತ್ತು ಕಠಿಣ ಪ್ರತ್ಯುತ್ತರ ನೀಡಲಾಗುವುದು’, ಎಂದು ಸ್ಪಷ್ಟಪಡಿಸಿದ್ದಾರೆ. ಇರಾನ್ ವಿದೇಶಾಂಗ ಸಚಿವರಾದ ಅಬ್ಬಾಸ್ ಅರಾಘಚಿ ಕೂಡ ಪ್ರತಿಕ್ರಿಯೆ ನೀಡಿದ್ದು ‘ಇರಾನ್ ನಾಯಕತ್ವವನ್ನು ಗುರಿಯಾಗಿಸುವ ಪ್ರಯತ್ನ ಸಹಿಸುವುದಿಲ್ಲ’, ಎಂದು ಎಚ್ಚರಿಸಿದ್ದಾರೆ.

​ಅಲಿ ಖಮೇನಿ ಅವರ ಅಂತ್ಯಸಂಸ್ಕಾರದ ಮೆರವಣಿಗೆ ಆರಂಭ

​ಅಲಿ ಖಮೇನಿ ಅವರ ಅಂತ್ಯಸಂಸ್ಕಾರದ ಮೆರವಣಿಗೆಯು ಜುಲೈ ೩ ರಿಂದ ಟೆಹರಾನ್‌ ನಲ್ಲಿ ಆರಂಭವಾಗಿದ್ದು, ಜುಲೈ ೯ ರಂದು ಅವರ ಜನ್ಮಸ್ಥಳವಾದ ಮಶ್ಹದ್‌ ನಲ್ಲಿ ಅಂತ್ಯವಿಧಿ ನೆರವೇರಲಿದೆ. ಜುಲೈ ೩ ರಿಂದ ಜುಲೈ ೯ ರ ಅವಧಿಯಲ್ಲಿ ಇರಾನ್‌ ನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.