ವಾಸ್ತುಶಾಸ್ತ್ರ ವಿಷಯದ ಲೇಖನಮಾಲೆ : ಲೇಖನ ಕ್ರ. ೨೦

ನಾವು ಲೇಖನ ಕ್ರ. ೧೯ ರಲ್ಲಿ (೨೭/೪೦ ನೆಯ ಸಂಚಿಕೆಯಲ್ಲಿ) ಅಡುಗೆ ಮನೆಯ ಮಾಹಿತಿಯನ್ನು ತಿಳಿದುಕೊಂಡೆವು. ಈ ವಾರದ ಲೇಖನದಲ್ಲಿ ನಾವು ಮಲಗುವ ಕೋಣೆಯ ಮಾಹಿತಿಯನ್ನು ತಿಳಿದುಕೊಳ್ಳೋಣ. ಮಲಗುವ ಕೋಣೆಯೂ ನಮ್ಮ ವಾಸ್ತುವಿನ ಒಂದು ಮಹತ್ವದ ಭಾಗವಾಗಿರುತ್ತದೆ; ಏಕೆಂದರೆ ಮಲಗುವ ಕೋಣೆಯಲ್ಲಿ ನಾವು ಸರಿಸುಮಾರು ೭ ರಿಂದ ೮ ಗಂಟೆಗಳ ಕಾಲ ಒಂದೇ ಸ್ಥಳದಲ್ಲಿ ಮಲಗಿರುತ್ತೇವೆ. ಮಲಗುವ ಕೋಣೆಯ ಸ್ಪಂದನಗಳ ಪರಿಣಾಮ ನಮ್ಮ ಮೇಲೆ ಆಗುತ್ತಿರುತ್ತದೆ. ಆದುದರಿಂದ ಮಲಗುವ ಕೋಣೆಯ ದಿಕ್ಕು ಮತ್ತು ರಚನೆ ಇತ್ಯಾದಿ ವಿಷಯಗಳು ಯೋಗ್ಯವಾಗಿರುವುದು ಆವಶ್ಯಕವಾಗಿದೆ.

೧. ಕುಟುಂಬದ ಪ್ರತಿಯೊಬ್ಬ ವ್ಯಕ್ತಿಗನುಗುಣವಾಗಿ ಮಲಗುವ ಕೋಣೆಯ ವಿಚಾರ
ಮಲಗುವ ಕೋಣೆಯ ವಿಚಾರ ಮಾಡುವಾಗ ವಾಸ್ತುಶಾಸ್ತ್ರದಲ್ಲಿ ಮನೆಯ ಯಜಮಾನನ ಕೋಣೆಗೆ ಪ್ರಾಧಾನ್ಯತೆ ನೀಡಲಾಗಿದೆ. ಇದರ ಬಗ್ಗೆ ಮುಂದಿನ ಶ್ಲೋಕವಿದೆ.
ದಕ್ಷಿಣಾವಸಥಕಂ ಗೃಹೇಶಿತುರ್ವಾಮರಂಗಮುದಿತಂ ತು ಯೋಷಿತಃ |
ತದ್ವಿಪರ್ಯಯಮಶೋಭನಂ ತಯೋಶ್ಚಿತ್ತದುಃಖಮನಿಶಂ ದದಾತಿ ಹಿ ||
– ಮಯಮತಮ್, ಅಧ್ಯಾಯ ೨೭, ಶ್ಲೋಕ ೧೩೩
ಅರ್ಥ : ಮನೆಯ ಯಜಮಾನನ ಕೋಣೆಯು ದಕ್ಷಿಣಕ್ಕೆ ಇರಬೇಕು ಮತ್ತು ಅವನ ಎಡಭಾಗದಲ್ಲಿ ಪತ್ನಿಯ ವ್ಯವಸ್ಥೆ ಇರಬೇಕು. ಇದಕ್ಕೆ ವಿರುದ್ದವಾದರೆ ಕೆಟ್ಟ ವಿಚಾರಗಳಿಂದ ಇಬ್ಬರ ಮನಃಶಾಂತಿಯು ದೂರವಾಗಬಹುದು.

ಹಾಗೆಯೇ ಮನೆಮಾಲೀಕನ ಕೋಣೆಯು ನೈಋತ್ಯ ದಿಕ್ಕಿನಲ್ಲಿ ಇರಬೇಕು ಎಂಬ ನಿಯಮವನ್ನೂ ಹೇಳಲಾಗಿದೆ, ಆ ನಿಯಮದಲ್ಲಿ ನೈಋತ್ಯ ದಿಕ್ಕು ಪೃಥ್ವಿ ತತ್ತ್ವದ ದಿಕ್ಕಾಗಿರುವುದರಿಂದ ವಾಸ್ತು ಮಾಲೀಕನಿಗೆ ಸ್ಥಿರತೆಯನ್ನು ಪ್ರದಾನಿಸುತ್ತದೆ. ಮಲಗುವಾಗ ಮಾತ್ರ ತಲೆಯು ಪೂರ್ವಕ್ಕೆ ಇರುವಂತೆ ವ್ಯವಸ್ಥೆ ಇರಬೇಕು.
ಅವಿವಾಹಿತ ಹೆಣ್ಣುಮಕ್ಕಳಿಗಾಗಿ ಕೋಣೆಯ ವಿಚಾರ ಮಾಡುವಾಗ ವಾಯವ್ಯದ ಕಡೆಗಿನ ರುದ್ರ ಅಥವಾ ಯಕ್ಷ್ಮಾ ಪದದಲ್ಲಿ ಅವಳ ಮಲಗುವ ವ್ಯವಸ್ಥೆ ಇರಬೇಕು. ಇದರಿಂದ ಮುಂದೆ ಅವಳ ವಿವಾಹಾದಿ ವಿಷಯಗಳಲ್ಲಿ ಅವಳಿಗೆ ಲಾಭವಾಗುತ್ತದೆ, ಹಾಗೆಯೇ ಅವಿವಾಹಿತ ಗಂಡುಮಕ್ಕಳಿಗಾಗಿ ಆಗ್ನೇಯ ದಿಕ್ಕಿನ ‘ಸವಿತೃ’ ಮತ್ತು ‘ಸಾವಿತೃ’ ಪದದಲ್ಲಿ ಮಲಗುವ ವ್ಯವಸ್ಥೆ ಇರಬೇಕು. ಈ ದಿಕ್ಕು ಅಗ್ನಿತತ್ತ್ವದ ದಿಕ್ಕಾಗಿರುವುದರಿಂದ ಗಂಡುಮಕ್ಕಳು ಶಕ್ತಿಶಾಲಿಯಾಗಲು ಸಹಾಯವಾಗುತ್ತದೆ.
ಒಂದೇ ಕುಟುಂಬದಲ್ಲಿ ೩ ಜನ ಸಹೋದರರಿದ್ದರೆ, ಎಲ್ಲರಿಗಿಂತ ಹಿರಿಯ ಸಹೋದರನ ಕೋಣೆಯು ನೈಋತ್ಯ ದಿಕ್ಕಿನಲ್ಲಿ ಇರಬೇಕು. ಎರಡನೇ ಸಹೋದರನ ಕೋಣೆಯು ದಕ್ಷಿಣ ದಿಕ್ಕಿನಲ್ಲಿ ಮತ್ತು ಮೂರನೇ ಸಹೋದರನ ಕೋಣೆಯು ಪಶ್ಚಿಮದಿಕ್ಕಿನಲ್ಲಿ ಇರಬೇಕು. ಸಹೋದರರ ಸಂಖ್ಯೆ ಹೆಚ್ಚಿದ್ದರೆ ಇದೇ ಕ್ರಮವನ್ನು ಅನುಸರಿಸಬೇಕು.
೨. ಮಲಗುವಾಗ ತಲೆ ಎಲ್ಲಿ ಇರಬೇಕು ?
ಮಲಗುವ ಕೋಣೆ ಮಲಗುವಾಗ ತಲೆ ಯಾವ ದಿಕ್ಕಿಗೆ ಇರಬೇಕು ಎಂಬ ವಿಷಯದಲ್ಲಿ ಎಲ್ಲರಿಗೂ ಒಂದೇ ನಿಯಮಗಳಿವೆ.
ಸೌಮ್ಯಂ ಪ್ರತ್ಯಕ್ಛಿರೋ ಮೃತ್ಯುರ್ವಂಶಾದ್ಯಾ ರುಕ್ಸುತಾರ್ತಿದಾ |
ಪ್ರಾಕ್ಛಿರಾಃ ಶಯನೇ ವಿದ್ಯಾದ್ ದಕ್ಷಿಣೇ ಸುಖಸಂಪದಃ ||
– ವಿಶ್ವಕರ್ಮಪ್ರಕಾಶ, ಅಧ್ಯಾಯ ೧೦, ಶ್ಲೋಕ ೪೯
ಅರ್ಥ : ಮಲಗುವಾಗ ಉತ್ತರಕ್ಕೆ ಅಥವಾ ಪಶ್ಚಿಮಕ್ಕೆ ತಲೆ ಮಾಡಿ ಮಲಗಿದರೆ ಸಾವು ಬರುತ್ತದೆ. ಮಂಚದ ಪಟ್ಟಿಯ ಮೇಲೆ ತಲೆಯಿಟ್ಟು ಮಲಗುವುದು ರೋಗಕಾರಕ ಮತ್ತು ಸಣ್ಣ ಮಕ್ಕಳಿಗೆ ದುಃಖಕಾರಕವಾಗಿರುತ್ತದೆ. ಪೂರ್ವಕ್ಕೆ ತಲೆ ಮಾಡಿದರೆ ವಿದ್ಯೆಯ ಲಾಭವಾಗುತ್ತದೆ ಮತ್ತು ದಕ್ಷಿಣಕ್ಕೆ ತಲೆ ಮಾಡಿದರೆ ಸುಖ-ಸಂಪತ್ತಿನ ಲಾಭವಾಗುತ್ತದೆ.
ನಮ್ಮ ಶರೀರದ ಧ್ರುವ ಬಿಂದುಗಳ ಪ್ರಕಾರ ವಿಚಾರ ಮಾಡಿದರೆ ತಲೆಯನ್ನು ಉತ್ತರ ಧ್ರುವ ಮತ್ತು ಕಾಲುಗಳನ್ನು ದಕ್ಷಿಣ ಧ್ರುವವೆಂದು ಪರಿಗಣಿಸಲಾಗುತ್ತದೆ. ಎರಡು ವಿಜಾತಿಯ ಬಿಂದುಗಳು ಒಟ್ಟಿಗೆ ಇರಬಲ್ಲವು; ಆದರೆ ಸಜಾತಿಯ ಬಿಂದುಗಳು ಒಟ್ಟಿಗೆ ಬಂದರೆ ಅಸ್ವಸ್ಥತೆ ನಿರ್ಮಾಣವಾಗುತ್ತದೆ. ಆದ್ದರಿಂದ ಉತ್ತರಕ್ಕೆ ತಲೆ ಮಾಡಿ ಮಲಗಬಾರದು.

೩. ಮಲಗುವ ಮಂಚವನ್ನು ಯಾವ ಹಲಗೆಯಿಂದ ತಯಾರಿಸಬೇಕು ?
ಮಲಗುವ ಮಂಚವನ್ನು ಯಾವ ಹಲಗೆಯಿಂದ ತಯಾರಿಸ ಬೇಕು ಎಂಬುದಕ್ಕೂ ವಾಸ್ತುಶಾಸ್ತ್ರದಲ್ಲಿ ನಿಯಮಗಳಿವೆ; ಏಕೆಂದರೆ ಅದರ ಪರಿಣಾಮವೂ ಮಲಗುವ ವ್ಯಕ್ತಿಯ ಮೇಲೆ ಆಗುತ್ತದೆ.
ಕಥಯಾಮಿ ತಥಾ ಶಯ್ಯಾಂ ಯೇನ ಸೌಖ್ಯಮವಾಪ್ನುಯಾತ್ |
ಅಶನಸ್ಪಂದನಚಂದನಹರಿದ್ರುಸುರದಾರುತಿಂದುಕೀಶಾಲಾಃ ||
ಕಾಶ್ಮರ್ಯಾರ್ಜ್ಜುನಪದ್ಮಕಶಾಕಾಮ್ರಾಃ ಶಿಂಶಿಪಾ ಚ ಶುಭಾಃ |
– ವಿಶ್ವಕರ್ಮಪ್ರಕಾಶ, ಅಧ್ಯಾಯ ೧೦, ಶ್ಲೋಕ ೫೪, ೫೫
ಅರ್ಥ : ಈಗ ನಾನು ಮಾನವನಿಗೆ ಸುಖವನ್ನು ಪ್ರದಾನಿಸುವ ಮಂಚಕ್ಕಾಗಿ ಯೋಗ್ಯ ಹಲಗೆಗ ಬಗ್ಗೆ ಹೇಳುತ್ತೇನೆ. ಅಶನ (ವಿಜಯಸಾರ), ಸ್ಪಂದನ, ಚಂದನ (ಶ್ರೀಗಂಧ), ಅರಿಶಿನ, ದೇವದಾರು, ಟೆಂಭುರ್ಣಿ (ತಪಸಿ ಅಥವಾ ಮುರಕಲು ಮರ), ಸಾಲ ವೃಕ್ಷ, ಅಸ್ಮರಿ, ಅರ್ಜುನ (ಮತ್ತಿ ಮರ), ಪದ್ಮಕಾಷ್ಠ, ಶಾಕ (ತೇಗದ ಮರ), ಮಾವು, ಸಾಗುವಾನಿ ಈ ವೃಕ್ಷಗಳ ಹಲಗೆಗಳು ಮಂಚ ಮುಂತಾದವುಗಳನ್ನು ತಯಾರಿಸಲು ಶುಭವಾಗಿರುತ್ತವೆ.
೪. ಮಂಚ ತಯಾರಿಸಲು ಯಾವ ಹಲಗೆಗಳನ್ನು ಬಳಸಬಾರದು ?
ಅಶನಿಜಲಾನಿಲಹಸ್ತಿಪ್ರಪಾತಿತಾ ಮಧುವಿಹಂಗಕೃತನಿಲಯಾಃ ||
ಚೈತ್ಯಶ್ಮಶಾನಪಥಿಜಾರ್ಧಶುಷ್ಕವಲ್ಲಿನಿಬದ್ಧಾಶ್ಚ |
ಕಂಟಕಿನೋ ಯೇ ಸ್ಯುರ್ಮಹಾನದೀಸಂಗಮೋದ್ಭವಾ ಯೇ ಚ ||
ಸೂರಪ್ರಾಸಾದಗಾ ಯೇ ಚ ಯಾಮ್ಯಪಶ್ಚಿಮದಿರಗತಾಃ |
ಪ್ರತಿಷಿದ್ಧವೃಕ್ಷಜಾ ಯೇ ಯೇ ಚಾನ್ಯೇಽಪಿ ಅನೇಕಧಾ ||
ತ್ಯಾಜ್ಯಾಸ್ತೇ ದಾರವಸ್ಸರ್ವಂ ಶಯ್ಯಾಕರ್ಮಣಿ ಕರ್ಮವಿತ್ |
– ವಿಶ್ವಕರ್ಮಪ್ರಕಾಶ, ಅಧ್ಯಾಯ ೧೦, ಶ್ಲೋಕ ೫೫ ರಿಂದ ೫೮
ಅರ್ಥ : ಸಿಡಿಲು, ನೀರು, ಗಾಳಿ ಅಥವಾ ಆನೆಗಳು ಉರುಳಿಸಿದ ಮರಗಳು (ಗಿಡಗಳು), ಜೇನುಗೂಡು ಇರುವ ಮರಗಳು, ಅನೇಕ ಪಕ್ಷಿಗಳ ಗೂಡುಗಳಿರುವ ಮರಗಳು, ಚೈತ್ಯ (ಬೌದ್ಧ ಸ್ತೂಪ ಅಥವಾ ಮಂದಿರ), ಸ್ಮಶಾನ ಅಥವಾ ರಸ್ತೆಯ ಬದಿಗಳಲ್ಲಿರುವ ಮರಗಳು, ಪೂರ್ಣ ಒಣಗದ, ಬಳ್ಳಿಗಳಿಂದ ಸುತ್ತುವರಿಯಲ್ಪಟ್ಟ, ಮುಳ್ಳಿನ ಮರಗಳು, ದೊಡ್ಡ ನದಿಗಳ ಸಂಗಮದಲ್ಲಿ ಬೆಳೆದ ಮರಗಳು, ದೇವಾಲಯದ ಆವರಣದಲ್ಲಿನ ಮರಗಳು, ಯಾವುದೇ ಗ್ರಾಮದ ದಕ್ಷಿಣಕ್ಕೆ ಅಥವಾ ಪಶ್ಚಿಮದಲ್ಲಿ ಬೆಳೆದ ಮರಗಳು ಮತ್ತು ನಿಷಿದ್ಧವಾದ ವೃಕ್ಷಗಳ ಹಲಗೆಗಳನ್ನು ಮಂಚ ತಯಾರಿಸಲು ಬಳಸಬಾರದು.
೫. ಇತರ ಕೆಲವು ಅಂಶಗಳು
ಅ. ಮಲಗುವಾಗ ನಮ್ಮ ಶರೀರದ ಮೇಲೆ ಬೀಮ್ (ತೊಲೆ) ಇತ್ಯಾದಿ ವಿಷಯಗಳು ಬರಬಾರದು. ಮಲಗಿದಾಗ ದೇಹದ ಯಾವ ಭಾಗದ ಮೇಲೆ ಬೀಮ್ ಬರುತ್ತದೆಯೋ ಆ ಅವಯವಕ್ಕೆ ಸಂಬಂಧಿಸಿದ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ.
ಆ. ಶಯನಗೃಹದಲ್ಲಿ (ಮಲಗುವ ಕೋಣೆಯಲ್ಲಿ) ಮಲಗುವಾಗ ಕನ್ನಡಿಯು ಎದುರಿಗೆ ಇರಬಾರದು, ಅಂದರೆ ನಾವು ಮಲಗಿರುವ ಸ್ಥಿತಿಯ ಪ್ರತಿಬಿಂಬವು ಕನ್ನಡಿಯಲ್ಲಿ ಕಾಣಿಸಬಾರದು.
ಇ. ಮಲಗುವಾಗ ತಲೆಯ ಪಕ್ಕದಲ್ಲಿ ಹವಾನಿಯಂತ್ರಣ ಯಂತ್ರ (ಎಸಿ) ಅಥವಾ ಅದಕ್ಕೆ ಸಮನಾದ ಹೆಚ್ಚಿನ ವಿದ್ಯುತ್ ಸಾಮರ್ಥ್ಯದ ಉಪಕರಣಗಳು ಇರಬಾರದು.
ಈ. ಮನೆಮಾಲೀಕನ ಕೋಣೆಯನ್ನು ನೈಋತ್ಯ ದಿಕ್ಕಿನಲ್ಲಿ ನಿರ್ಮಿಸಿದ ನಂತರ ದಕ್ಷಿಣ ದಿಕ್ಕಿನಲ್ಲಿ ಕಿಟಕಿ ಇರಬಾರದು. ಇದ್ದರೂ ಅದನ್ನು ಆದಷ್ಟು ಮುಚ್ಚಿಡಬೇಕು.
ಉ. ಅತಿಥಿಗಳಿಗಾಗಿ ಕೋಣೆಯ ವ್ಯವಸ್ಥೆಯನ್ನು ವಾಯವ್ಯ ದಿಕ್ಕಿನಲ್ಲಿ ಮಾಡಬೇಕು, ಇನ್ನು ಮನೆಯ ನಿವೃತ್ತ ಮತ್ತು ವಯಸ್ಸಾದವರ ವ್ಯವಸ್ಥೆಯನ್ನು ಈಶಾನ್ಯ ದಿಕ್ಕಿನಲ್ಲಿ ಮಾಡಬೇಕು. ಅನಾರೋಗ್ಯ ಪೀಡಿತ ವ್ಯಕ್ತಿಗಳಿಗೆ ಈಶಾನ್ಯ ದಿಕ್ಕಿನಲ್ಲಿ ಕೋಣೆ ನೀಡಿದರೆ ಅವರ ಕಾಯಿಲೆ ಕಡಿಮೆಯಾಗಲು ಸಹಾಯವಾಗುತ್ತದೆ.
೬. ವಿದ್ಯಾಭ್ಯಾಸಕ್ಕಾಗಿ ಯೋಗ್ಯ ಸ್ಥಾನ
ಮೃಗೇ ಚ ಸರ್ವಜಾತೀನಾಂ ವಿದ್ಯಾಭ್ಯಾಸಾರ್ಥ ಮಂಡಪಮ್ |
– ಮಾನಸಾರ
ಅರ್ಥ : ಮನೆಯಲ್ಲಿ ಅಧ್ಯಯನಕ್ಕಾಗಿ ಮೃಗ ಪದವು (ಸ್ಥಾನವು) ಅತ್ಯಂತ ಲಾಭದಾಯಕವಾಗಿದೆ. ಆ ಸ್ಥಳದಲ್ಲಿ ನಾವು ವಿದ್ಯಾಭ್ಯಾಸಕ್ಕಾಗಿ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಮಾಡಬಹುದು.
(ಆಧಾರ ಗ್ರಂಥ : ಮಯಮತಮ್, ವಿಶ್ವಕರ್ಮಪ್ರಕಾಶ, ಮಾನಸಾರ)
– ಶ್ರೀ. ಶ್ರೇಯಸ ಪಿಸೋಳಕರ (ವಾಸ್ತುವಿಶಾರದ, ಜ್ಯೋತಿಷ್ಯ ಹೋರಾಭೂಷಣ, ಹೋರಾರತ್ನ), ಫೋಂಡಾ, ಗೋವಾ)
ಗುರುವೇ ಆತ್ಮಜ್ಞಾನ, ಬ್ರಹ್ಮಜ್ಞಾನ ಹಾಗೂ ಭಗವಂತನ ಪ್ರಾಪ್ತಿಯ ಕಾರಣ
ಬ್ರಹ್ಮಚಾರಿಯ (ಶಿಷ್ಯನ) ಆಚರಣೆ ಹೇಗಿರಬೇಕು? ಎಂಬ ಬಗ್ಗೆ ಕೂರ್ಮಪುರಾಣಕ್ಕನುಸಾರ ವಿವರಣೆ
ಗುರುಪೂರ್ಣಿಮೆಯ ನಿಮಿತ್ತ ಸಂದೇಶ
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರಿಂದ ಜೈಪುರದ ಪ್ರಸಿದ್ಧ ‘ಖೋಲೆ ಹನುಮಾನ’ಗೆ ಪ್ರಾರ್ಥನೆ !
ಕೃತಕ ಬುದ್ಧಿಮತ್ತೆಯ ಮಿತಿ !
ಗುರುಕುಲ ಶಿಕ್ಷಣಪದ್ಧತಿಯ ಅವಶ್ಯಕತೆ !