ಇರಾನ್ ಒಪ್ಪಂದ ಹಿನ್ನೆಲೆ; ಇಸ್ರೇಲ್ ಪ್ರಧಾನಿಗೆ ಅಮೆರಿಕ ಉಪಾಧ್ಯಕ್ಷರ ಎಚ್ಚರಿಕೆ

ವಾಷಿಂಗ್ಟನ್ (ಅಮೆರಿಕ) – ಇಸ್ರೇಲ್ ವಾಸ್ತವದ ಅರಿವನ್ನು ಹೊಂದಿರಬೇಕು ಮತ್ತು ತನ್ನ ಅತ್ಯಂತ ದೊಡ್ಡ ಮಿತ್ರರಾಷ್ಟ್ರದ ಮೇಲೆ ವಿನಾಕಾರಣ ಟೀಕೆ ಮಾಡುವುದನ್ನು ನಿಲ್ಲಿಸಬೇಕೆಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಕಠಿಣ ಪದಗಳಲ್ಲಿ ಎಚ್ಚರಿಕೆ ನೀಡಿದ್ದಾರೆ. ವೈಟ್ ಹೌಸ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಅಮೆರಿಕ ಮತ್ತು ಇರಾನ್ ನಡುವೆ ನಡೆದಿರುವ ಶಾಂತಿ ಒಪ್ಪಂದದ ಬಗ್ಗೆ ನೆತನ್ಯಾಹು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅಮೆರಿಕ ಇಸ್ರೇಲ್‌ಗೆ ಕಿವಿಮಾತು ಹೇಳಿದೆ.
ಜೆ.ಡಿ. ವ್ಯಾನ್ಸ್ ಅವರು ಮಾತು ಮುಂದುವರಿಸಿ, “ಜಗತ್ತಿನಲ್ಲಿ ಇಸ್ರೇಲ್ ಅನ್ನು ಯಾರೂ ಇಷ್ಟಪಡುವುದಿಲ್ಲ. ಅಮೆರಿಕ ಮಾತ್ರವೇ ಪ್ರಸ್ತುತ ಅದರ ಏಕೈಕ ಪ್ರಬಲ ಮಿತ್ರರಾಷ್ಟ್ರವಾಗಿ ಉಳಿದಿದೆ. ಇಸ್ರೇಲ್‌ಗೆ ನನ್ನ ಎರಡು ಸಂದೇಶಗಳಿವೆ. ಮೊದಲನೆಯದಾಗಿ, ಇಂದಿನ ಜಗತ್ತಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಬ್ಬರೇ ಇಸ್ರೇಲ್ ಬಗ್ಗೆ ಸಹಾನುಭೂತಿ ಹೊಂದಿರುವ ಏಕೈಕ ಪ್ರಭಾವಿ ರಾಷ್ಟ್ರದ ಮುಖ್ಯಸ್ಥರಾಗಿದ್ದಾರೆ. ಎರಡನೆಯದಾಗಿ, ಇಸ್ರೇಲ್ ಅಮೆರಿಕವನ್ನು ಟೀಕಿಸಬಾರದು” ಎಂದರು.
‘ಪ್ರತಿಯೊಂದು ಸಮಸ್ಯೆಗೆ ‘ಜನರನ್ನು ಕೊಲ್ಲುವುದು’ ಉತ್ತರವಲ್ಲ!’
ಜೆ.ಡಿ. ವ್ಯಾನ್ಸ್ ಅವರು ‘ದಿ ನ್ಯೂಯಾರ್ಕ್ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ, ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಚಿವ ಇತಾಮರ್ ಬೆನ್ ಗ್ವಿರ್ ಮತ್ತು ಹಣಕಾಸು ಸಚಿವ ಬೆಜಾಲೆಲ್ ಸ್ಮೋಟ್ರಿಚ್ ಅವರ ನಿಲುವನ್ನು ಟೀಕಿಸಿದ್ದಾರೆ. “ಅವರ ನಿಖರವಾದ ಪ್ರಸ್ತಾಪವೇನು? ಕೇವಲ 90 ಲಕ್ಷ ಜನಸಂಖ್ಯೆ ಹೊಂದಿರುವ ದೇಶದ (ಅಂದರೆ ಇಸ್ರೇಲ್‌ನ) ಭದ್ರತೆಗೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಗೆ ಜನರನ್ನು ಕೊಲ್ಲುವುದೇ ಉತ್ತರವಾಗಲು ಸಾಧ್ಯವಿಲ್ಲ. ಇರಾನ್ ಒಪ್ಪಂದದ ವಿಚಾರದಲ್ಲಿ ಇಸ್ರೇಲ್‌ನಲ್ಲಿ ಅನಗತ್ಯ ಭಯ ಸೃಷ್ಟಿಸಲಾಗುತ್ತಿದೆ. ದೀರ್ಘಕಾಲೀನ ಶಾಂತಿ ಮತ್ತು ರಾಜತಾಂತ್ರಿಕ ಪರಿಹಾರವೇ ಈ ಪ್ರದೇಶದ ಸ್ಥಿರತೆಗೆ ಇರುವ ಏಕೈಕ ಮಾರ್ಗವಾಗಿದೆ” ಎಂದು ಹೇಳಿದರು.
ಇಸ್ರೇಲ್ ರಕ್ಷಣೆಗೆ ಅಮೆರಿಕದಿಂದ ಶತಕೋಟಿ ಡಾಲರ್ ನೆರವು
ಇಸ್ರೇಲ್‌ಗೆ ಸಿಗುವ ಅಮೆರಿಕದ ಮಿಲಿಟರಿ ನೆರವನ್ನು ಉಲ್ಲೇಖಿಸಿದ ಜೆ.ಡಿ. ವ್ಯಾನ್ಸ್, “ಇಸ್ರೇಲ್‌ನ ರಕ್ಷಣೆಗಾಗಿ ಬಳಸಲಾಗುವ ಒಟ್ಟು ಶಸ್ತ್ರಾಸ್ತ್ರಗಳಲ್ಲಿ ಸುಮಾರು ಮೂರನೇ ಎರಡರಷ್ಟು ಶಸ್ತ್ರಾಸ್ತ್ರಗಳನ್ನು ಅಮೆರಿಕದಲ್ಲೇ ತಯಾರಿಸಲಾಗುತ್ತದೆ ಮತ್ತು ಅದಕ್ಕಾಗಿ ಅಮೆರಿಕದ ತೆರಿಗೆದಾರರ ಹಣ ಬಳಸಲಾಗುತ್ತದೆ. ಆದ್ದರಿಂದ ಅಮೆರಿಕವನ್ನೇ ಒಂದು ಸಮಸ್ಯೆ ಎಂದು ಭಾವಿಸುವ ಇಸ್ರೇಲಿ ನಾಯಕರು ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕು” ಎಂದರು. ‘ರಾಯಿಟರ್ಸ್’ ವರದಿಯ ಪ್ರಕಾರ, ಅಮೆರಿಕವು ಇಸ್ರೇಲ್‌ಗೆ ಪ್ರತಿ ವರ್ಷ ಸುಮಾರು 4 ಬಿಲಿಯನ್ (ಅಬ್ಜ) ಡಾಲರ್ (ಸುಮಾರು 37,760 ಕೋಟಿ ರೂಪಾಯಿ) ಮಿಲಿಟರಿ ನೆರವನ್ನು ನೀಡುತ್ತದೆ.
ಈ ಒಪ್ಪಂದದಿಂದಾಗಿ ಇರಾನ್‌ನ ಪರಮಾಣು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಕ್ಕೆ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಇಸ್ರೇಲಿ ಅಧಿಕಾರಿಗಳು ಖಾಸಗಿಯಾಗಿ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಉಪಾಧ್ಯಕ್ಷರ ಹೇಳಿಕೆಗೆ ನೇರವಾಗಿ ಪ್ರತಿಕ್ರಿಯಿಸುವುದನ್ನು ತಡೆದಿದ್ದರೂ, “ಇಸ್ರೇಲ್ ಅಮೆರಿಕದೊಂದಿಗಿನ ಸಂಬಂಧಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ; ಆದರೆ ದಕ್ಷಿಣ ಲೆಬನಾನ್‌ನಲ್ಲಿನ ತನ್ನ ಕಾರ್ಯಾಚರಣೆಯನ್ನು ಇಸ್ರೇಲ್ ಮುಂದುವರಿಸಲಿದೆ” ಎಂದು ಜಾಗರೂಕ ನಿಲುವು ತಳೆದಿದ್ದಾರೆ.
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman
‘ವಿಶ್ವಸಂಸ್ಥೆಯ ಠರಾವಿನಂತೆ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಬೇಕಂತೆ!’