ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಮುಂದುವರಿಕೆ: ಉಗ್ರರ ಬಳಿ ೨೭ ವಿಧದ ೧ ಸಾವಿರಕ್ಕೂ ಹೆಚ್ಚು ಮಾರಕಾಸ್ತ್ರಗಳು!

ಭದ್ರತಾ ಪಡೆಗಳಿಗೆ ದೊಡ್ಡ ಸವಾಲು!

ಇಂಫಾಲ (ಮಣಿಪುರ) – ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಮುಂದುವರಿದಿದೆ. ರಾಜ್ಯದಲ್ಲಿರುವ ಉಗ್ರರ ಬಳಿ ೨೭ ವಿಧದ ೧ ಸಾವಿರಕ್ಕೂ ಹೆಚ್ಚು ಮಾರಕಾಸ್ತ್ರಗಳಿವೆ. ಇದರಿಂದಾಗಿ ಭದ್ರತಾ ಪಡೆಗಳ ಮುಂದೆ ದೊಡ್ಡ ಸವಾಲು ಎದುರಾಗಿದೆ. ಈ ಶಸ್ತ್ರಾಸ್ತ್ರಗಳಲ್ಲಿ ಎಕೆ-ಸರಣಿಯ ರೈಫಲ್‌ಗಳು, ಸ್ನೈಪರ್ ರೈಫಲ್‌ಗಳಂತಹ ಆಧುನಿಕ ಶಸ್ತ್ರಾಸ್ತ್ರಗಳು ಸೇರಿವೆ. ಈ ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವುದು ಭದ್ರತಾ ಪಡೆಗಳ ಮೊದಲ ಆದ್ಯತೆಯಾಗಿದೆ.

೧. ಭದ್ರತಾ ಪಡೆಗಳು ಮುಂದಿನ ಕೆಲವು ದಿನಗಳಲ್ಲಿ ರಾಜ್ಯಾದ್ಯಂತ ವಿಶೇಷ ಭದ್ರತಾ ಜಾಲವನ್ನು ಸಿದ್ಧಪಡಿಸುತ್ತಿವೆ. ಇದರ ನಂತರ, ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿರುವವರ ವಿರುದ್ಧ ಕ್ರಮವನ್ನು ತೀವ್ರಗೊಳಿಸಲು ವಿವಿಧ ಪ್ರದೇಶಗಳಲ್ಲಿ ಏಕಕಾಲದಲ್ಲಿ ವಿಶೇಷ ಕಾರ್ಯಾಚರಣೆಯನ್ನು ಕೈಗೊಳ್ಳಲಾಗುವುದು

೨. ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) ೨ ಕೋಬ್ರಾ ಬೆಟಾಲಿಯನ್ (ತುಕಡಿಗಳನ್ನು) ಮಣಿಪುರದಲ್ಲಿ ನಿಯೋಜಿಸಲಾಗಿದೆ.

೩. ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್, ಸಿಆರ್‌ಪಿಎಫ್, ಬಿಎಸ್‌ಎಫ್, ಸ್ಥಳೀಯ ಪೊಲೀಸರು ಮತ್ತು ಇತರ ಭದ್ರತಾ ಪಡೆಗಳನ್ನು ಒಳಗೊಂಡ ಒಂದು ಜಾಲವನ್ನು (ಗ್ರಿಡ್) ಸಿದ್ಧಪಡಿಸಲಾಗುತ್ತಿದೆ.

೪. ಮೂಲಗಳ ಪ್ರಕಾರ, ಈ ಕಾರ್ಯಾಚರಣೆಯು ದೊಡ್ಡ ಪ್ರಮಾಣದಲ್ಲಿ ನಕ್ಸಲಿಸಂ ಅನ್ನು ಕೊನೆಗೊಳಿಸಲು ಬಳಸಲಾದ ಕಾರ್ಯಾಚರಣೆಯಂತೆಯೇ ಇರಲಿದೆ. ಆದಾಗ್ಯೂ ಮಣಿಪುರದಲ್ಲಿ ಉಗ್ರರ ಪೂರೈಕೆ ಸರಪಳಿಯನ್ನು ಮುರಿಯುವುದು ಸುಲಭವಲ್ಲ. ಮಣಿಪುರದ ಅಂತರರಾಷ್ಟ್ರೀಯ ಗಡಿಯು ಮ್ಯಾನ್ಮಾರ್‌ಗೆ ಹೊಂದಿಕೊಂಡಿದ್ದು, ಗಡಿಗೆ ಬೇಲಿ ಇಲ್ಲ. (ಇದಕ್ಕೆ ದೇಶವನ್ನು ೬ ದಶಕಗಳಿಗೂ ಹೆಚ್ಚು ಕಾಲ ಆಳಿದ ಕಾಂಗ್ರೆಸ್ ಪಕ್ಷವೇ ಪ್ರಮುಖ ಕಾರಣ! – ಸಂಪಾದಕರು)