ತೈವಾನ್‌: ಭಾರತೀಯ ಕಾರ್ಮಿಕರನ್ನು ದೇಶದಿಂದ ಹೊರಹಾಕಲು ಹೆಚ್ಚುತ್ತಿರುವ ಬೇಡಿಕೆ!

ಭಾರತೀಯ ಕಾರ್ಮಿಕರು ಅಪರಾಧ ಪ್ರವೃತ್ತಿಯವರೆಂದು ವಿರೋಧ ಪಕ್ಷದ ಆರೋಪ

ತೈಪೆ (ತೈವಾನ್) – ತೈವಾನ್‌ನ ಸ್ಥಳೀಯ ಚುನಾವಣೆಗಳಲ್ಲಿ ಅಲ್ಲಿನ ಭಾರತೀಯ ಕಾರ್ಮಿಕರನ್ನು ದೇಶದಿಂದ ಹೊರಹಾಕುವ ವಿಷಯವನ್ನು ಪ್ರಸ್ತಾಪಿಸಿ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಓರ್ವ ಪಕ್ಷೇತರ ಅಭ್ಯರ್ಥಿ ಭಾರತ ವಿರೋಧಿ ಪೋಸ್ಟರ್ ಕೂಡ ಹಚ್ಚಿದ್ದಾನೆ. ಪೇಟ ಧರಿಸಿದ ಒಬ್ಬ ಸಿಖ್ ವ್ಯಕ್ತಿಯ ಚಿತ್ರದ ಮೇಲೆ ದೊಡ್ಡದಾಗಿ ‘ನೋ’ ಅಂದರೆ ನಿಷೇಧದ ಚಿಹ್ನೆ ಇರುವ ಪೋಸ್ಟರ್ ಹಾಕಲಾಗಿದೆ. ಇಂತಹ ಪೋಸ್ಟರ್‌ಗಳ ಮೂಲಕ ಭಾರತದಿಂದ ಬರುವ ವಲಸೆ ಕಾರ್ಮಿಕರನ್ನು ವಿರೋಧಿಸಬೇಕು ಮತ್ತು ಅವರನ್ನು ದೇಶದಿಂದ ಹೊರಹಾಕಬೇಕೆಂಬ ಬೇಡಿಕೆ ಕೇಳಿಬರುತ್ತಿದೆ. ತೈವಾನ್ ಭಾರತದೊಂದಿಗೆ ಮಾಡಿಕೊಂಡಿರುವ ಕಾರ್ಮಿಕ ಸಹಕಾರ ಒಪ್ಪಂದದಡಿ ಭಾರತೀಯ ಕಾರ್ಮಿಕರನ್ನು ಕರೆಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ. ಇಂತಹ ಸಮಯದಲ್ಲಿ ಈ ವಿವಾದ ಭುಗಿಲೆದ್ದಿರುವುದರಿಂದ ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಒಪ್ಪಂದದ ಪ್ರಕಾರ ಸುಮಾರು 1,೦೦೦ ಭಾರತೀಯ ಕಾರ್ಮಿಕರು ಈ ವರ್ಷದ ಕೊನೆಯಲ್ಲಿ ತೈವಾನ್ ತಲುಪಲಿದ್ದಾರೆ. ಇದರ ನಂತರ ಒಂದು ವೇಳೆ ವ್ಯವಸ್ಥೆಯು ಸರಿಯಾಗಿ ನಡೆದು, ಉದ್ಯಮಗಳ ಬೇಡಿಕೆ ಹೆಚ್ಚಾದರೆ, ಈ ಸಂಖ್ಯೆಯನ್ನು ಮುಂದೆ ಇನ್ನಷ್ಟು ಹೆಚ್ಚಿಸಬಹುದು.

೧. ತೈವಾನ್ ಹಲವು ವರ್ಷಗಳಿಂದ ಕಾರ್ಮಿಕರ ಕೊರತೆಯ ಸಮಸ್ಯೆಯನ್ನು ಎದುರಿಸುತ್ತಿದೆ. ಅಲ್ಲಿ ಜನನ ಪ್ರಮಾಣವು ನಿರಂತರವಾಗಿ ಕುಸಿಯುತ್ತಿದೆ, ವೃದ್ಧರ ಸಂಖ್ಯೆ ಹೆಚ್ಚುತ್ತಿದ್ದು ಯುವಕರ ಸಂಖ್ಯೆ ಕಡಿಮೆಯಾಗುತ್ತಿದೆ. ಇದರ ಪರಿಣಾಮ ವಿಶೇಷವಾಗಿ ಕಾರ್ಖಾನೆ, ಕೃಷಿ, ನಿರ್ಮಾಣ ಮತ್ತು ವೃದ್ಧರ ಆರೈಕೆಯಂತಹ ಕ್ಷೇತ್ರಗಳ ಮೇಲೆ ಬೀರುತ್ತಿದೆ. ಇದೇ ಕಾರಣಕ್ಕಾಗಿ ತೈವಾನ್ ದೀರ್ಘಕಾಲದಿಂದ ಇಂಡೋನೇಷ್ಯಾ, ವಿಯೆಟ್ನಾಂ, ಫಿಲಿಪೈನ್ಸ್ ಮತ್ತು ಥೈಲ್ಯಾಂಡ್‌ನಂತಹ ಇತರ ಏಷ್ಯನ್ ದೇಶಗಳಿಂದ ಕಾರ್ಮಿಕರನ್ನು ಕರೆಸಿಕೊಳ್ಳುತ್ತಿದೆ. ಈಗ ಭಾರತದಿಂದಲೂ ಕಾರ್ಮಿಕರನ್ನು ಕರೆಸಲು ನಿರ್ಧರಿಸಿದೆ.

೨. ತೈವಾನ್‌ನ ವಿರೋಧ ಪಕ್ಷವಾದ ‘ಕುವೋಮಿಂಟಾಂಗ್’ ಭಾರತೀಯ ಕಾರ್ಮಿಕರನ್ನು ಕರೆಸಿಕೊಳ್ಳುವುದನ್ನು ವಿರೋಧಿಸುತ್ತಿದೆ. ಸಂಸದ ಹುವಾಂಗ್ ಚಿಯೆನ್-ಪಿನ್ ಅವರು ಭಾರತದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ (NCRB) ಅಂಕಿ-ಅಂಶಗಳನ್ನು ಉಲ್ಲೇಖಿಸಿದ್ದಾರೆ. ಅವರು ಸಂಸತ್ತಿನಲ್ಲಿ ಮಾತನಾಡಿ, ಭಾರತದಲ್ಲಿ 2022 ರ ವರ್ಷದಲ್ಲಿ ಮಹಿಳೆಯರ ವಿರುದ್ಧ 4 ಲಕ್ಷದ 45 ಸಾವಿರಕ್ಕೂ ಹೆಚ್ಚು ಅಪರಾಧಗಳು ದಾಖಲಾಗಿದ್ದವು, ಅದರಲ್ಲಿ 31,೦೦೦ ಕ್ಕೂ ಹೆಚ್ಚು ಅತ್ಯಾಚಾರದ ಘಟನೆಗಳು ವರದಿಯಾಗಿದ್ದವು ಎಂದು ಹೇಳಿದ್ದರು. ಇಂತಹ ಪರಿಸ್ಥಿತಿಯಲ್ಲಿ ಭಾರತೀಯ ಕಾರ್ಮಿಕರ ಮೇಲೆ ಹೆಚ್ಚು ಕಠಿಣ ತಪಾಸಣೆ ಮತ್ತು ನಿಗಾ ಇಡಬೇಕು. ಭಾರತೀಯ ಕಾರ್ಮಿಕರು ಇಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗಬಹುದೆಂದು ಅವರು ಆರೋಪಿಸಿದ್ದಾರೆ.

೩. ತೈವಾನ್‌ನ ಸ್ಥಳೀಯ ರಾಜಕೀಯ ಪಕ್ಷವಾದ ‘ನ್ಯೂ ಪವರ್ ಪಾರ್ಟಿ’ಯ ನಾಯಕ ವಾಂಗ್ ಯಿ-ಹೆಂಗ್ ಅವರು ಈ ಪೋಸ್ಟರ್ ಅನ್ನು ಟೀಕಿಸಿದ್ದಾರೆ. ಭಾರತದ ಧ್ವಜ ಮತ್ತು ಪೇಟದ ಮೇಲೆ ನಿಷೇಧದ ಚಿಹ್ನೆ ಹಾಕುವುದು ಅಜ್ಞಾನವನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ. ಪೇಟ ಕೇವಲ ಒಂದು ಬಟ್ಟೆಯಲ್ಲ, ಅದು ಶ್ರದ್ಧೆ ಮತ್ತು ಗೌರವದ ಸಂಕೇತವಾಗಿದೆ ಎಂದಿದ್ದಾರೆ.

ಇದು ಜನಾಂಗೀಯ ದ್ವೇಷವಾಗಿದೆ! – ಭಾರತೀಯರು

ತೈವಾನ್‌ನಲ್ಲಿ ವಾಸಿಸುತ್ತಿರುವ ಓರ್ವ ಭಾರತೀಯರು ಸಾಮಾಜಿಕ ಮಾಧ್ಯಮದಲ್ಲಿ ಇದನ್ನು ‘ಜನಾಂಗೀಯ ತಾರತಮ್ಯ’ ಎಂದು ಕರೆದಿದ್ದಾರೆ. ಯಾವುದೇ ನೀತಿಯನ್ನು ವಿರೋಧಿಸುವುದು ಬೇರೆ ವಿಷಯ; ಆದರೆ ಒಂದು ಸಮುದಾಯದ ಗುರುತು ಮತ್ತು ಸಾಂಸ್ಕೃತಿಕ ಸಂಕೇತಗಳನ್ನು ಗುರಿಯಾಗಿಸುವುದು ತಪ್ಪು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.