ದೇವಸ್ಥಾನದಲ್ಲಿ ಪದೇ ಪದೇ ಅಪಮಾನವಾಗಿದ್ದರಿಂದಲೇ ಹಿಂದೂ ಧರ್ಮವನ್ನು ತೊರೆದು ಇಸ್ಲಾಂ ಸ್ವೀಕರಿಸಿದೆ !

ತಮಿಳು ನಟ ಜಯ್ ನೀಡಿದ ಮಾಹಿತಿ

ಚೆನ್ನೈ (ತಮಿಳುನಾಡು) – ದೇವಸ್ಥಾನದಲ್ಲಿ ಅಪಮಾನವಾಯಿತು ಎಂಬ ಕಾರಣಕ್ಕಾಗಿ ತಮಿಳು ನಟ ಜಯ ಹಿಂದೂ ಧರ್ಮವನ್ನು ತೊರೆದು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾರೆ. ಈ ಮಾಹಿತಿಯನ್ನು ಸ್ವತಃ ಜಯರವರೇ ಸಂದರ್ಶನವೊಂದರಲ್ಲಿ ನೀಡಿದ್ದಾರೆ. ತಾನು ೨೦೧೧ ರಿಂದ ಇಸ್ಲಾಂನ್ನು ಪಾಲಿಸುತ್ತಿರುವುದಾಗಿ ಅವರು ಹೇಳಿದ್ದಾರೆ. ಆದರೆ ಅವರು ಇದುವರೆಗೆ ತಮ್ಮ ಹೆಸರನ್ನು ಬದಲಾಯಿಸಿಕೊಂಡಿಲ್ಲ.

ಜಯರವರು ಸಂದರ್ಶನದಲ್ಲಿ,

೧. ನಾನು ಶಬರಿಮಲೆಗಾಗಿ ಕೊರಳಿಗೆ ಮಾಲೆ ಧರಿಸಿದ್ದೆ. ಆನಂತರ ಒಂದು ವರ್ಷ ಏಸುವಿಗಾಗಿಯೂ ಮಾಲೆ ಧರಿಸಿ ಉಪವಾಸ ವ್ರತ ಮಾಡಿದ್ದೆ; ಆದರೆ ಒಂದು ಸಮಯವಿತ್ತು, ಆಗ ದೇವಸ್ಥಾನದಲ್ಲಿ ಪದೇ ಪದೇ ನನಗೆ ಅಪಮಾನ ಮಾಡಲಾಯಿತು. ಇಂತಹ ಕೆಲವು ಘಟನೆಗಳಿಂದಾಗಿ ನನಗೆ ತುಂಬಾ ಬೇಸರವಾಯಿತು.

೨. ನಾನು ಮಸೀದಿಗೆ ಹೋದಾಗ, ಅಲ್ಲಿ ಎಲ್ಲರೂ ಒಂದೇ ಸಾಲಿನಲ್ಲಿ ನಿಂತು ಪ್ರಾರ್ಥನೆ ಮಾಡುತ್ತಿರುವುದನ್ನು ನೋಡಿದೆ. ನಾನು ಒಬ್ಬ ನಟ ಎಂಬುದು ಅಲ್ಲಿ ಎಲ್ಲರಿಗೂ ಗೊತ್ತಿತ್ತು. ಆದರೂ ಮಸೀದಿಯೊಳಗೆ ಯಾರೂ ನನ್ನೊಂದಿಗೆ ಮಾತನಾಡಲಿಲ್ಲ. ಮಸೀದಿಯಿಂದ ಹೊರಗೆ ಬಂದ ನಂತರವೇ ಕೆಲವು ಜನರು ನನ್ನೊಂದಿಗೆ ಮಾತನಾಡಿದರು, ಅದೂ ಸಹ ಅತ್ಯಂತ ನಮ್ರತೆಯಿಂದ. ಯಾರೂ ನನಗೆ ಛಾಯಾಚಿತ್ರಕ್ಕಾಗಿ ಒತ್ತಾಯಿಸಲಿಲ್ಲ.

೩. ಆಗ ನನಗೆ ಇಲ್ಲಿ ಎಲ್ಲರೂ ಸಮಾನರು ಎಂದು ಅನ್ನಿಸಿತು. (ಇಸ್ಲಾಂ ಧರ್ಮದ ಅಧ್ಯಯನ ಮತ್ತು ಪ್ರಸ್ತುತ ಸ್ಥಿತಿಯ ಅರಿವಿಲ್ಲದ ಕಾರಣ ಇಂತಹ ತಪ್ಪು ಕಲ್ಪನೆಗಳು ಮೂಡುತ್ತವೆ! – ಸಂಪಾದಕರು) ಮಸೀದಿಯೊಳಗೆ ಹೋದಾಗ ಕೇವಲ ಅಲ್ಲಾಹ್ ಮಾತ್ರ ಅತ್ಯುನ್ನತ. ಎಷ್ಟೇ ದೊಡ್ಡ ವ್ಯಕ್ತಿ ಬಂದರೂ ಅವರಿಗೆ ಸಮಾನವಾದ ಗೌರವ ಸಿಗುತ್ತದೆ. ಮಸೀದಿಯೊಳಗೆ ನೀವು ಪ್ರಾರ್ಥನೆ ಮಾಡುತ್ತಿರುವಾಗ ಯಾರೂ ನೂಕುನುಗ್ಗಲು ಮಾಡುವುದಿಲ್ಲ ಅಥವಾ ಅಲ್ಲಿಂದ ಹೋಗಲು ಹೇಳುವುದಿಲ್ಲ. ನಿಮಗೆ ಎಷ್ಟು ಸಮಯ ಅಲ್ಲಿ ಇರಬೇಕೋ ಅಷ್ಟು ಸಮಯ ಕುಳಿತು ಪ್ರಾರ್ಥನೆ ಮಾಡಬಹುದು.

೪. ಇಸ್ಲಾಂ ಸ್ವೀಕರಿಸಿದಾಗಿನಿಂದ ನನ್ನ ಸ್ವಭಾವದಲ್ಲೂ ಸಾಕಷ್ಟು ಬದಲಾವಣೆ ಕಂಡುಬಂದಿದೆ. ವರ್ಷ ೨೦೧೯ ರಲ್ಲಿ ನಾನು ಮತಾಂತರಗೊಂಡೆ. ನನಗೆ ಇಸ್ಲಾಂ ಧರ್ಮದ ಮೇಲೆ ಶ್ರದ್ಧೆಯಿದೆ. ಮನೆಯಲ್ಲಿ ಎಲ್ಲರೂ ಸಂತೋಷವಾಗಿದ್ದಾರೆ; ಏಕೆಂದರೆ ಯಾವ ದೇವರ ಪೂಜೆಯನ್ನೂ ಮಾಡದ ಮಗನು ಈಗ ಧಾರ್ಮಿಕನಾಗಿದ್ದಾನೆ. (ಮುಂದೆ ಅವನು ಮತಾಂಧನಾಗದಿದ್ದರೆ ಸಾಕು! – ಸಂಪಾದಕರು) ಮತಾಂತರಗೊಂಡ ನಂತರವೂ ನಾನು ಇನ್ನೂ ನನ್ನ ಹೆಸರನ್ನು ಬದಲಾಯಿಸಿಲ್ಲ. ನಾನು ನನ್ನ ಹೆಸರನ್ನು ಬದಲಾಯಿಸಿ ‘ಅಜೀಜ್ ಜಯ’ ಎಂದು ಇಟ್ಟುಕೊಳ್ಳುವ ಆಲೋಚನೆಯಲ್ಲಿದ್ದೇನೆ.

ಸಂಪಾದಕೀಯ ನಿಲುವು

  • ದೇವಸ್ಥಾನದಲ್ಲಿ ಅಪಮಾನ ಮಾಡುವವರು ತಪ್ಪಾಗಿರಬಹುದು; ಆದರೆ ಧರ್ಮ ತಪ್ಪಾಗಿರಲು ಸಾಧ್ಯವಿಲ್ಲ. ಆದ್ದರಿಂದ ಅದಕ್ಕಾಗಿ ಧರ್ಮವನ್ನು ಬದಲಾಯಿಸುವುದು ದೊಡ್ಡ ತಪ್ಪು. ಹಿಂದೂಗಳಿಗೆ ಧರ್ಮಶಿಕ್ಷಣ ಸಿಗದಿರುವುದರಿಂದಲೇ ಅವರು ಇಂತಹ ಹಾಸ್ಯಾಸ್ಪದ ಕೃತ್ಯಗಳನ್ನು ಮಾಡುವ ಮೂಲಕ ಆತ್ಮಘಾತ ಮತ್ತು ರಾಷ್ಟ್ರಾಘಾತ ಮಾಡಿಕೊಳ್ಳುತ್ತಿದ್ದಾರೆ!
  • ಹಿಂದೂಗಳ ದೇವಸ್ಥಾನಗಳು ಎಲ್ಲಾ ಹಿಂದೂಗಳಿಗಾಗಿ, ಮಹಿಳೆಯರಿಗಾಗಿ ಮುಕ್ತವಾಗಿರುತ್ತವೆ; ಆದರೆ ಮುಸಲ್ಮಾನರ ಮಸೀದಿಗಳು ಅವರ ಶಿಯಾ, ಸುನ್ನಿ, ಅಹಮದಿಯಾ ಮುಂತಾದ ಸಂಪ್ರದಾಯಗಳಿಗಾಗಿ ಪ್ರತ್ಯೇಕವಾಗಿರುತ್ತವೆ ಹಾಗೂ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧವಿರುತ್ತದೆ, ಈ ಬಗ್ಗೆ ಜಯರವರಿಗೆ ತಿಳಿದಿದೆಯೇ?