ಶೇ. ೧೭ ರಷ್ಟು ಓಬಿಸಿ ಮೀಸಲಾತಿಯನ್ನು ಶೇ. ೭ ಕ್ಕೆ ಇಳಿಸಿದ ಸರಕಾರ! :Bengal OBC Reservation

ಬಂಗಾಳದ ಭಾಜಪ ಸರಕಾರದ ನಿರ್ಧಾರ

ಬಂಗಾಳ ಮುಖ್ಯಮಂತ್ರಿ ಶುಭೇಂದು ಅಧಿಕಾರಿ

ಕೋಲಕಾತಾ (ಬಂಗಾಳ) – ಬಂಗಾಳದಲ್ಲಿ ಭಾಜಪ ಸರಕಾರವು ಓಬಿಸಿ ಮೀಸಲಾತಿಯನ್ನು ಶೇ. ೧೭ ರಿಂದ ಶೇ. ೭ ಕ್ಕೆ ಇಳಿಸಿದೆ. ಹೊಸ ಪಟ್ಟಿಯ ಪ್ರಕಾರ ಇನ್ನು ಮುಂದೆ ಕೇವಲ ೬೬ ಜಾತಿಗಳು ಮಾತ್ರ ಓಬಿಸಿ ಮೀಸಲಾತಿಯ ವ್ಯಾಪ್ತಿಯಲ್ಲಿ ಇರಲಿವೆ.

. ಸರಕಾರದ ಹೇಳಿಕೆಯ ಪ್ರಕಾರ, ಈ ನಿರ್ಧಾರವು ಕೋಲಕಾತಾ ಉಚ್ಚ ನ್ಯಾಯಾಲಯದ ೨೦೨೪ ರ ಆದೇಶವನ್ನು ಆಧರಿಸಿದೆ. ೨೦೧೦ ರಿಂದ ೨೦೧೨ ರ ಅವಧಿಯಲ್ಲಿ ಓಬಿಸಿ ಪಟ್ಟಿಗೆ ೭೭ ಹೆಚ್ಚುವರಿ ಜಾತಿಗಳನ್ನು ಸೇರಿಸುವ ಪ್ರಕ್ರಿಯೆಯು ಕಾನೂನುಬಾಹಿರ ಮತ್ತು ಸಂವಿಧಾನಬಾಹಿರ ಎಂದು ನ್ಯಾಯಾಲಯವು ಘೋಷಿಸಿತ್ತು. ಆದಾಗ್ಯೂ, ೨೦೧೦ ಕ್ಕಿಂತ ಮೊದಲು ಓಬಿಸಿ ವರ್ಗದಲ್ಲಿ ಸೇರಿಸಲ್ಪಟ್ಟಿದ್ದ ಜಾತಿಗಳ ಸ್ಥಾನಮಾನವು ಹಾಗೇ ಮುಂದುವರಿಯಲಿದೆ.

. ಈ ನಿರ್ಧಾರದಿಂದಾಗಿ ಮಮತಾ ಬ್ಯಾನರ್ಜಿ ಸರಕಾರದ ಅವಧಿಯಲ್ಲಿ ಜಾರಿಯಲ್ಲಿದ್ದ ‘ಓಬಿಸಿ-ಎ’ ಮತ್ತು ‘ಓಬಿಸಿ-ಬಿ’ ವ್ಯವಸ್ಥೆಯು ಕೊನೆಗೊಂಡಿದೆ. ‘ಓಬಿಸಿ-ಎ’ ಗೆ ಶೇ. ೧೦ ಮತ್ತು ‘ಓಬಿಸಿ-ಬಿ’ ಗೆ ಶೇ. ೭ ರಷ್ಟು ಮೀಸಲಾತಿ ಸಿಗುತ್ತಿತ್ತು. ಈ ಅವಧಿಯಲ್ಲಿ ಅನೇಕ ಹೊಸ ಜಾತಿಗಳನ್ನೂ ಸೇರಿಸಲಾಗಿತ್ತು.

. ಇದರ ವಿರುದ್ಧ ೨೦೨೪ ರಲ್ಲಿ ಕೋಲಕಾತಾ ಉಚ್ಚ ನ್ಯಾಯಾಲಯವು ತೀರ್ಪು ನೀಡಿತ್ತು. ನ್ಯಾಯಾಲಯದ ಈ ತೀರ್ಪಿನಿಂದಾಗಿ ೨೦೧೦ ರ ನಂತರ ವಿತರಿಸಲಾಗಿದ್ದ ಸುಮಾರು ೧೨ ಲಕ್ಷ ಓಬಿಸಿ ಪ್ರಮಾಣಪತ್ರಗಳು ರದ್ದಾಗಿದ್ದವು.

ಧಾರ್ಮಿಕ ಆಧಾರದ ಮೇಲೆ ನೀಡಲಾಗುತ್ತಿದ್ದ ಗೌರವಧನ ಸ್ಥಗಿತ

ಸಚಿವ ಸಂಪುಟವು ಇಮಾಮ್ (ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸುವವರು), ಮುಅಜ್ಜಿನ (ಮಸೀದಿಯಲ್ಲಿ ನಮಾಜ್‌ ಗಾಗಿ ಜನರನ್ನು ಅಜಾನ್ ಮೂಲಕ ಕರೆಯುವವರು) ಮತ್ತು ಪೂಜಾರಿಗಳಿಗೆ ಧಾರ್ಮಿಕ ಆಧಾರದ ಮೇಲೆ ನೀಡಲಾಗುತ್ತಿದ್ದ ಸರಕಾರಿ ಗೌರವಧನವನ್ನು ಜೂನ್ ೧ ರಿಂದ ನಿಲ್ಲಿಸಲು ನಿರ್ಧರಿಸಿದೆ. ಈ ಹಿಂದೆ ಇಮಾಮ್‌ ಗಳಿಗೆ ೩ ಸಾವಿರ ರೂಪಾಯಿ ಹಾಗೂ ಮುಅಜ್ಜಿನ ಮತ್ತು ಪೂಜಾರಿಗಳಿಗೆ ಮಾಸಿಕ ೨ ಸಾವಿರ ರೂಪಾಯಿಗಳ ಸರಕಾರಿ ಸಹಾಯಧನವನ್ನು ನೀಡಲಾಗುತ್ತಿತ್ತು.

ಮಹಿಳೆಯರಿಗೆ ಪ್ರತಿ ತಿಂಗಳು ೩ ಸಾವಿರ ರೂಪಾಯಿ ಲಭ್ಯ

ರಾಜ್ಯ ಸರಕಾರವು ‘ಅನ್ನಪೂರ್ಣ ಯೋಜನೆ’ಗೆ ಅನುಮೋದನೆ ನೀಡಿದೆ. ಇದರ ಅಡಿಯಲ್ಲಿ ಮಹಿಳೆಯರಿಗೆ ಜೂನ್ ೧ ರಿಂದ ಪ್ರತಿ ತಿಂಗಳು ೩ ಸಾವಿರ ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡಲಾಗುವುದು. ಈ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಇದರೊಂದಿಗೆ ಜೂನ್ ೧ ರಿಂದ ಮಹಿಳೆಯರಿಗೆ ಸರಕಾರಿ ಬಸ್‌ ಗಳಲ್ಲಿ ಉಚಿತ ಪ್ರಯಾಣಕ್ಕೂ ಅನುಮತಿ ನೀಡಲಾಗಿದೆ.