ದೇವಸ್ಥಾನಗಳ ಮೇಲಾಧಾರಿತ ಹಿಂದೂಗಳ ಅದ್ಭುತ ದೈವೀ ಅರ್ಥವ್ಯವಸ್ಥೆ !

ಹಿಂದಿನಿಂದಲೂ ಭಾರತದಲ್ಲಿ ಒಂದು ಮಹತ್ವದ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿತ್ತು, ಅದೇ ದೇವಸ್ಥಾನಗಳ ಮೇಲಾಧಾರಿತ ಅರ್ಥವ್ಯವಸ್ಥೆ ಅಥವಾ ದೇವಸ್ಥಾನಗಳನ್ನು ಅವಲಂಬಿಸಿರುವ ಸಂಸ್ಕೃತಿಯ ವ್ಯವಸ್ಥೆ ! ಈ ವ್ಯವಸ್ಥೆ ಈಗಲೂ ಇದೆ. ಈ ಈಶ್ವರದತ್ತ ವ್ಯವಸ್ಥೆಯ ಕುರಿತು ಮಾಡಿದ ವಿಮರ್ಶೆ...

೧. ಭಾರತದ ದೇವಸ್ಥಾನಗಳ ವ್ಯಾಪ್ತಿ

ಭಾರತದಾದ್ಯಂತ ಸಾವಿರಾರು ಅಲ್ಲ, ಬದಲಾಗಿ ೩೦ ಲಕ್ಷಕ್ಕೂ ಹೆಚ್ಚು ಹಿಂದೂ ದೇವಸ್ಥಾನಗಳಿವೆ. ಈ ದೇವಸ್ಥಾನಗಳಲ್ಲಿ ಕೆಲವು ಸಾವಿರ ದೇವಸ್ಥಾನಗಳಂತೂ ಅತಿ ಪ್ರಾಚೀನವಾಗಿವೆ. ೫೧ ಶಕ್ತಿಪೀಠಗಳು, ೧೨ ಜ್ಯೋತಿರ್ಲಿಂಗಗಳು, ಚಾರಧಾಮಗಳು ಭಾರತದಲ್ಲಿ ಪ್ರಸಿದ್ಧವಾಗಿವೆ. ಅವುಗಳ ಹೆಸರಿನಿಂದಲೇ ಕೆಲವು ಕಡೆ ನಗರ, ಪಟ್ಟಣ ಮತ್ತು ಜಿಲ್ಲೆಗಳ ಹೆಸರುಗಳಿವೆ.

೨. ದೇವಸ್ಥಾನಗಳಿಗೆ ಸಂಬಂಧಿಸಿದಂತೆ ಮಾಡಬೇಕಾಗಲಿರುವ ವ್ಯವಸ್ಥೆಗಳು

ದೇವಸ್ಥಾನದ ಖ್ಯಾತಿಗನುಸಾರ ಅಲ್ಲಿಗೆ ಬರುವ ಭಕ್ತರ ಸಂಖ್ಯೆ ಕಡಿಮೆ-ಹೆಚ್ಚು ಇರಬಹುದು. ದೇವಸ್ಥಾನದ ಆವರಣದಲ್ಲಿ ಭಕ್ತರಿಗಾಗಿ ಲಾಡ್ಜ್, ಧರ್ಮಶಾಲೆ, ದೊಡ್ಡ ಹೋಟೆಲ್‌ಗಳ ವ್ಯವಸ್ಥೆ ಮಾಡಬೇಕಾಗುತ್ತದೆ. ಅದರ ಮೂಲಕ ಅನೇಕ ಸ್ಥಳೀಯರಿಗೆ ಉದ್ಯೋಗ ದೊರೆಯುತ್ತದೆ. ದೇವಸ್ಥಾನಕ್ಕೆ ಬಂದು-ಹೋಗಲು ಆಟೋ, ನಾಲ್ಕು ಚಕ್ರದ ವಾಹನಗಳು, ಬಸ್ಸುಗಳು, ಟಾಂಗಾ, ಕೆಲವು ಕಡೆ ಕುದುರೆ, ‘ರೋಪ್‌ವೇ (ತೂಗುದಾರಿ)ಗಳ ವ್ಯವಸ್ಥೆ ಇರುತ್ತದೆ. ಸರಕಾರವು ಆ ಸ್ಥಳಗಳಲ್ಲಿ ರಸ್ತೆ, ಕುಡಿಯುವ ನೀರು ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾಗುತ್ತದೆ. ರೈಲು ಮಾರ್ಗ ಅಥವಾ ವಿಮಾನ ಸಂಚಾರವನ್ನು ಪ್ರಾರಂಭಿಸಬೇಕಾಗುತ್ತದೆ. ಈ ರೀತಿ ಆ ಕ್ಷೇತ್ರದ ಭೌತಿಕ ಅಭಿವೃದ್ಧಿಯೂ ಸಾಧ್ಯವಾಗುತ್ತದೆ.

ಶ್ರೀ. ಯಜ್ಞೇಶ ಸಾವಂತ

೩. ದೇವಸ್ಥಾನಗಳಿಂದ ಹಿಂದೂಗಳ ಪೋಷಣೆ

ದೇವಸ್ಥಾನದ ಸ್ಥಳದಲ್ಲಿರುವ ಅನೇಕ ಉಪದೇವಸ್ಥಾನಗಳು, ಧಾರ್ಮಿಕ ಮತ್ತು ಪವಿತ್ರಸ್ಥಳಗಳನ್ನು ನೋಡಲು, ಭೇಟಿ ನೀಡಲು ಸ್ಥಳೀಯ ವ್ಯವಸ್ಥೆಗಳನ್ನು ಮಾಡಬೇಕಾಗುತ್ತದೆ. ಅವುಗಳ ಮಾಹಿತಿಯನ್ನು ಹೇಳುವ ಮಾರ್ಗದರ್ಶಕ (ಗೈಡ್), ಈ ಸ್ಥಳಗಳ ವ್ಯವಸ್ಥೆಯನ್ನು ಮಾಡುವ ನೂರಾರು ಜನರಿಗೆ ಉದ್ಯೋಗ ಲಭ್ಯವಿರುತ್ತದೆ. ದ್ವಾರಕೆಯಲ್ಲಿರುವ ದ್ವಾರಕಾಧೀಶ ದೇವಸ್ಥಾನವನ್ನು ಗಮನಿಸಿದರೆ, ಈ ದೇವಸ್ಥಾನದ ಮೇಲೆ ಸ್ಥಳೀಯರ ಪ್ರಕಾರ ೨ ಲಕ್ಷ ಜನರ ಜೀವನೋಪಾಯವು ಅವಲಂಬಿತವಾಗಿದೆ. ಇದರಿಂದ ದೇವಸ್ಥಾನದ ಒಳಗೆ ಮತ್ತು ಹೊರಗೆ ನಡೆಯುವ ಒಂದು ಅದ್ಭುತ ವ್ಯವಸ್ಥೆಯ ಕಲ್ಪನೆ ಬರಬಹುದು. ಈ ರೀತಿ ಒಂದು ದೇವಸ್ಥಾನವು ಕೇವಲ ಧಾರ್ಮಿಕ ಸ್ಥಳ, ಹಿಂದೂಗಳ ಧಾರ್ಮಿಕ ಶ್ರದ್ಧೆಯನ್ನು ಕಾಪಾಡುವ ಕೇಂದ್ರವಾಗಿ ಮಾತ್ರವಲ್ಲ, ಹಿಂದೂಗಳನ್ನು ಪೋಷಿಸುವ ಈಶ್ವರನಿರ್ಮಿತ ವ್ಯವಸ್ಥೆಯೇ ಆಗಿದೆ.

೪. ದೇವಸ್ಥಾನಗಳ ಆರ್ಥಿಕವ್ಯವಸ್ಥೆಯ ವ್ಯಾಪ್ತಿ

‘ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ನಿಂದ (ಎನ್.ಎಸ್.ಎಸ್.ಒ.) ನಡೆಸಿದ ಸಮೀಕ್ಷೆಯಲ್ಲಿ ಹಿಂದೂ ದೇವಸ್ಥಾನಗಳ ಅರ್ಥವ್ಯವಸ್ಥೆಯು ೩.೦೨ ಲಕ್ಷ ಕೋಟಿ ರೂಪಾಯಿಗಳಷ್ಟಿದೆ. ಅಂದರೆ ಅದು ಭಾರತದ ಸಕಲ ರಾಷ್ಟ್ರೀಯ ಉತ್ಪನ್ನದ ಶೇ. ೩ ರಷ್ಟಿದೆ. ಈ ಅಂಕಿ-ಅಂಶವು ಕೇವಲ ದೇವಸ್ಥಾನಗಳಿಗೆ ಸಂಬಂಧಿಸಿದ ನೇರ ವ್ಯವಹಾರಗಳದ್ದಾಗಿದೆ, ದೇವಸ್ಥಾನದ ಹೊರಗೆ ನಡೆಯುವ ವ್ಯವಹಾರಗಳು ಇದರಲ್ಲಿ ಸೇರಿಲ್ಲ. ದುರದೃಷ್ಟವಶಾತ್ ದೇವಸ್ಥಾನಗಳಿಗೆ ದಾನವಾಗಿ ನೀಡಿದ ಭೂಮಿಯ ಬಗ್ಗೆ ಪ್ರಸ್ತುತ ಸರಕಾರಿ ವಿಶ್ವಸ್ಥರು ಸರಿಯಾದ ನಿರ್ವಹಣೆ ಮಾಡದ ಕಾರಣ ಕೆಲವು ಭೂಮಿಗಳು ಅತಿಕ್ರಮಣಕ್ಕೊಳಗಾಗಿವೆ.

೫. ಯಾರಿಗೂ ಏನೂ ಕಡಿಮೆಯಾಗದಂತೆ ನೋಡಿಕೊಳ್ಳುವ ಹಿಂದೂಗಳ ದೇವಸ್ಥಾನಗಳು !

ತಿರುಪತಿಗೆ ೨೦೨೨ ರಲ್ಲಿ ೧ ಸಾವಿರದ ೪೫೦ ಕೋಟಿ ರೂಪಾಯಿಗಳ ದಾನ ದೊರೆಯಿತು, ಶಿರಡಿಯಲ್ಲಿ ಕಳೆದ ವರ್ಷ ೯೦೦ ಕೋಟಿ ರೂಪಾಯಿಗಳ ದಾನ ದೊರೆಯಿತು. ದೊರೆತ ಈ ದಾನದಿಂದ ದೇವಸ್ಥಾನಗಳ ವ್ಯವಸ್ಥೆಗಳ ಸುಧಾರಣೆ, ಸ್ಥಳೀಯ ಕಡಿಮೆ ಅರ್ಪಣೆ ದೊರೆತ ದೇವಸ್ಥಾನಗಳಿಗೆ ಸಹಾಯ, ಹಳೆಯ ದೇವಸ್ಥಾನಗಳ ಜೀರ್ಣೋದ್ಧಾರ, ಮುಂತಾದ ಧರ್ಮಕಾರ್ಯಗಳನ್ನು ಮಾಡಬಹುದು; ಆದರೆ ಹಾಗೆ ಆಗುವುದು ಕಾಣುತ್ತಿಲ್ಲ.

ವಾರಾಣಸಿಯ ಡಿ.ಎ.ವಿ.ಪಿಜಿ ಮಹಾವಿದ್ಯಾಲಯವು ೨೦೨೧-೨೨ ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ವಾರಾಣಸಿಯ ಹೋಟೆಲುಗಳ ಆದಾಯ ಶೇ. ೬೫, ಅಂಗಡಿ ಮಾಲೀಕರ ಆದಾಯ ಶೇ. ೪೫ ಮತ್ತು ಇ-ರಿಕ್ಷಾ ಚಾಲಕರ ಆದಾಯ ಶೇ. ೩೦ ರಷ್ಟು ಹೆಚ್ಚಳವಾಗಿದೆ.ಹಿಂದೂ ಸಮಾಜದ ಆಧಾರಶಿಲೆಯಾಗಿರುವ, ಹಿಂದೂಗಳಿಗೆ ಶಕ್ತಿ, ಚೈತನ್ಯ ಮತ್ತು ಸಾಮರ್ಥ್ಯವನ್ನು ನೀಡುವ ಅನೇಕ ಆಘಾತಗಳನ್ನು ಸಹಿಸಿಕೊಂಡರೂ ಹಿಂದೂಗಳಿಗೆ ಭಕ್ತಿಯನ್ನು ಕಲಿಸುವ ದೇವಸ್ಥಾನಗಳನ್ನು ಸರಕಾರೀಕರಣದಿಂದ ಮುಕ್ತಗೊಳಿಸಿ ನಿಜವಾದ ಭಕ್ತರ ಕೈಗೆ ಅವುಗಳ ನಿರ್ವಹಣೆಯನ್ನು ಒಪ್ಪಿಸಲು ಪ್ರಯತ್ನಿಸುವುದು ಹಿಂದೂ ಸಮಾಜದ ಧರ್ಮದ ಕುರಿತಾದ ಕರ್ತವ್ಯಗಳಲ್ಲಿ ಮುಖ್ಯ ಕರ್ತವ್ಯವಾಗಬೇಕು. ಪ್ರಸ್ತುತ ದೇವಸ್ಥಾನಗಳಲ್ಲಿನ ತಪ್ಪು ಆಚಾರಗಳು, ದೇವಸ್ಥಾನದ ದುರಾಡಳಿತವನ್ನು ದೂರ ಮಾಡಲು ಹಿಂದೂ ಸಮಾಜವು ಕ್ರಿಯಾಶೀಲವಾದರೆ ದೇವಸ್ಥಾನಗಳ ಸ್ಥಳಗಳಲ್ಲಿ ಮಾತ್ರವಲ್ಲ, ದೇವಸ್ಥಾನದ ಆವರಣ ಮತ್ತು ಗ್ರಾಮ, ತಾಲೂಕು ಮತ್ತು ಜಿಲ್ಲೆಯು ರಾಮರಾಜ್ಯವಾಗುವುದು

– ಶ್ರೀ. ಯಜ್ಞೇಶ ಸಾವಂತ, ಸನಾತನ ಆಶ್ರಮ, ದೇವದ, ಪನವೇಲ್.