೪.೪% ಶೇಕಡಾಕ್ಕೆ ತಲುಪಲಿದ ಜಾಗತಿಕ ಹಣದುಬ್ಬರ ದರ !

ಅಮೆರಿಕಾ-ಇರಾನ್ ಯುದ್ಧದ ಪರಿಣಾಮ!

​ನವ ದೆಹಲಿ – ಇರಾನ್ ವಿರುದ್ಧ ನಡೆಯುತ್ತಿರುವ ಅಮೆರಿಕಾ ಯುದ್ಧವು ಸದ್ಯಕ್ಕೆ ಸ್ಥಗಿತಗೊಂಡಿದ್ದರೂ, ಈ ಯುದ್ಧದ ಪರಿಣಾಮಗಳು ಜಗತ್ತಿನ ಮೇಲುಂಟಾಗುತ್ತಿವೆ ಮತ್ತು ಭವಿಷ್ಯದಲ್ಲಿಯೂ ಈ ಪರಿಣಾಮಗಳು ಕಾಣಿಸಲಿವೆ. ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯು ತಿಳಿಸಿರುವಂತೆ, ಯುದ್ಧಕ್ಕೂ ಮೊದಲು ಈ ವರ್ಷ ಜಾಗತಿಕ ಹಣದುಬ್ಬರ ದರ ೪.೧% ಶೇಕಡಾದಿಂದ ೩.೮% ಶೇಕಡಾಕ್ಕೆ ಇಳಿಕೆಯಾಗುವ ನಿರೀಕ್ಷೆಯಿತ್ತು; ಆದರೆ ಈಗ ಅದು ೪.೪% ಶೇಕಡಾಕ್ಕೆ ತಲುಪುವ ಅಂದಾಜಿದೆ. ಈ ಯುದ್ಧದಿಂದಾಗಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜನಪ್ರಿಯತೆಯೂ ಕುಸಿದಿದೆ.

೧. ಇರಾನ್‌ನಲ್ಲಿನ ಮಾನವ ಹಕ್ಕುಗಳ ಸಂಘಟನೆಗಳ ಪ್ರಕಾರ, ಯುದ್ಧದಲ್ಲಿ ಈವರೆಗೆ ೩,೬೦೦ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, ೧,೭೦೦ಕ್ಕೂ ಹೆಚ್ಚು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.

​೨. ಹಾರ್ವರ್ಡ್ ಅರ್ಥಶಾಸ್ತ್ರಜ್ಞೆ ಲಿಂಡಾ ಬಿಲ್ಮ್ಸ್ ಅವರ ಅಂದಾಜಿನ ಪ್ರಕಾರ, ಈ ಯುದ್ಧದ ಒಟ್ಟು ವೆಚ್ಚ ೧ ಟ್ರಿಲಿಯನ್ ಡಾಲರ್, ಅಂದರೆ ಅಂದಾಜು ೯೪ ಲಕ್ಷ ೯೧ ಸಾವಿರ ಕೋಟಿ ರೂಪಾಯಿಗಳಿಗೆ ತಲುಪಿದೆ.​

ಜಾಗತಿಕ ಅಭಿವೃದ್ಧಿ ದರ ೩.೩% ಶೇಕಡಾದಿಂದ ೩.೧% ಶೇಕಡಾಕ್ಕೆ ಕುಸಿತ

​ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯು ಜಾಗತಿಕ ಅಭಿವೃದ್ಧಿಯ ಅಂದಾಜನ್ನು ಸಹ ಕಡಿಮೆ ಮಾಡಿದೆ. ಈ ವರ್ಷ ಜಾಗತಿಕ ಅರ್ಥವ್ಯವಸ್ಥೆಯು ೩.೧% ಶೇಕಡಾ ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ, ಆದರೆ ಜನವರಿಯಲ್ಲಿ ಈ ಅಂದಾಜು ೩.೩% ಶೇಕಡಾ ಇತ್ತು.

​ಗೊಬ್ಬರದ ಬೆಲೆಗಳಲ್ಲೂ ಭಾರಿ ಏರಿಕೆಯಾಗಿದೆ. ಯಾವ ದೇಶಗಳಲ್ಲಿನ ಜನರು ಕೃಷಿಯ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೋ ಮತ್ತು ತಮ್ಮ ಆದಾಯದ ಬಹುದೊಡ್ಡ ಪಾಲನ್ನು ಆಹಾರಕ್ಕಾಗಿ ಖರ್ಚು ಮಾಡುತ್ತಾರೋ, ಅಂತಹವರಿಗೆ ಈ ಹಣದುಬ್ಬರದ ನೇರ ಮತ್ತು ಹೆಚ್ಚಿನ ಹೊರೆ ಬೀಳಲಿದೆ.