ಯುದ್ಧ ನಿಲ್ಲಿಸುವ ಇರಾನ್ ಪ್ರಸ್ತಾವನೆಯನ್ನು ಮತ್ತೊಮ್ಮೆ ತಿರಸ್ಕರಿಸಿದ ಟ್ರಂಪ್

ಪರಮಾಣು ಬಾಂಬ್ ಸೂತ್ರದ ಉಲ್ಲೇಖವಿಲ್ಲದ ಕಾರಣ ಅಸಮಾಧಾನ

ವಾಷಿಂಗ್ಟನ್ (ಅಮೆರಿಕಾ) – ಯುದ್ಧವನ್ನು ನಿಲ್ಲಿಸಲು ಇರಾನ್ ನೀಡಿದ ಪ್ರಸ್ತಾವನೆಯನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ತಿರಸ್ಕರಿಸಿದ್ದಾರೆ. ‘ಇರಾನ್ ನಾಯಕತ್ವವು ಗೊಂದಲದಲ್ಲಿದೆ ಮತ್ತು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಅವರಿಗೆ ಒಪ್ಪಂದ ಮಾಡಿಕೊಳ್ಳುವ ಇಚ್ಛೆಯಿದೆ; ಆದರೆ ಅವರು ತಮ್ಮ ತಮ್ಮಲ್ಲೇ ಒಮ್ಮತಕ್ಕೆ ಬರಲು ಸಾಧ್ಯವಾಗುತ್ತಿಲ್ಲ’ ಎಂದು ಟ್ರಂಪ್ ಟೀಕಿಸಿದ್ದಾರೆ. ವೈಟ್ ಹೌಸ್ ಅಧಿಕಾರಿಯೊಬ್ಬರು ನೀಡಿದ ಮಾಹಿತಿಯ ಪ್ರಕಾರ, ಇರಾನ್ ತನ್ನ ಹೊಸ ಪ್ರಸ್ತಾವನೆಯಲ್ಲಿ ಪರಮಾಣು ಬಾಂಬ್ ಸೂತ್ರದ ಬಗ್ಗೆ ಎಲ್ಲಿಯೂ ಉಲ್ಲೇಖಿಸಿಲ್ಲ, ಇದು ಟ್ರಂಪ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿಂದೆ ಏಪ್ರಿಲ್ 26 ಮತ್ತು 27 ರಂದು ಇರಾನ್ ಕಳುಹಿಸಿದ್ದ ಪ್ರಸ್ತಾವನೆಗಳನ್ನು ಸಹ ಟ್ರಂಪ್ ತಿರಸ್ಕರಿಸಿದ್ದರು.

ಹಾರ್ಮುಜ್ ಜಲಸಂಧಿಯನ್ನು ಕೂಡಲೇ ಮುಕ್ತಗೊಳಿಸಬೇಕು ಮತ್ತು ಪರಮಾಣು ಬಾಂಬ್ ಸೂತ್ರದ ಬಗ್ಗೆ ನಂತರ ಚರ್ಚಿಸಬಹುದು ಎಂಬುದು ಇರಾನ್ ವಾದವಾಗಿದೆ. ಆದರೆ ಟ್ರಂಪ್ ಅವರಿಗೆ ಈ ಎರಡೂ ವಿಷಯಗಳ ಬಗ್ಗೆ ಏಕಕಾಲದಲ್ಲೇ ನಿರ್ಧಾರವಾಗಬೇಕಿದೆ. ಇರಾನ್ ಮಾತುಕತೆಗೆ ಬರುವ ಮೊದಲು ತನ್ನಲ್ಲಿರುವ ಸಮೃದ್ಧ ಯುರೇನಿಯಂ ಅನ್ನು ಹಸ್ತಾಂತರಿಸಬೇಕೆಂದು ಟ್ರಂಪ್ ಹೇಳಿದ್ದಾರೆ.

ಜರ್ಮನಿಯಿಂದ 5,000 ಸೈನಿಕರನ್ನು ವಾಪಸ್ ಪಡೆಯಲಿರುವ ಅಮೆರಿಕಾ!

ಅಮೆರಿಕಾ ತನ್ನ ‘ನಾಟೋ’ (NATO) ಮಿತ್ರ ರಾಷ್ಟ್ರವಾದ ಜರ್ಮನಿಯಿಂದ 5,೦೦೦ ಸೈನಿಕರನ್ನು ಹಿಂಪಡೆಯಲು ನಿರ್ಧರಿಸಿದೆ. ಈ ಹಿಂದೆ ಜರ್ಮನಿಯ ಚಾನ್ಸಲರ್ ಫ್ರೆಡ್ರಿಕ್ ಮರ್ಜ್ ಅವರು ಟ್ರಂಪ್ ಸರಕಾರವನ್ನು ಟೀಕಿಸುತ್ತಾ, ‘ಅಮೆರಿಕಾ ಇರಾನ್ ಮುಂದೆ ಅವಮಾನಕ್ಕೀಡಾಗುತ್ತಿದೆ’ ಎಂದು ಹೇಳಿದ್ದರು. ಇದು ಟ್ರಂಪ್ ಅವರ ಕೆಂಗಣ್ಣಿಗೆ ಗುರಿಯಾಗಿತ್ತು. ‘ಮರ್ಜ್ ಅವರ ಕೆಲಸ ಅತ್ಯಂತ ಕೆಟ್ಟದಾಗಿದೆ’ ಎಂದು ಟ್ರಂಪ್ ಕಿಡಿಕಾರಿದ್ದಾರೆ. ಕಳೆದ ವರ್ಷ ಡಿಸೆಂಬರ್‌ವರೆಗೆ ಜರ್ಮನಿಯಲ್ಲಿ 36,೦೦೦ಕ್ಕೂ ಹೆಚ್ಚು ಅಮೆರಿಕಾ ಸೈನಿಕರು ನಿಯೋಜಿತರಾಗಿದ್ದರು.

ಇಟಲಿ ಮತ್ತು ಸ್ಪೇನ್ ದೇಶಗಳಿಂದಲೂ ಅಮೆರಿಕಾ ಸೈನ್ಯವನ್ನು ಹಿಂಪಡೆಯುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಈ ಎರಡೂ ದೇಶಗಳು ಇರಾನ್ ವಿರುದ್ಧ ಅಮೆರಿಕಾವನ್ನು ಬೆಂಬಲಿಸುತ್ತಿಲ್ಲ ಮತ್ತು ಹಾರ್ಮುಜ್ ಜಲಸಂಧಿಯನ್ನು ಪುನಃ ಮುಕ್ತಗೊಳಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿವೆ, ಹೀಗಾಗಿ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.