ಕದನವಿರಾಮದ ಕುರಿತು ಮೂರು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಿ, ಇಲ್ಲದಿದ್ದರೆ ತೈಲ ಕೊಳವೆಗಳು ಸ್ಫೋಟಗೊಳ್ಳಲಿವೆ! – ಟ್ರಂಪ್

ವಾಷಿಂಗ್ಟನ್ (ಅಮೆರಿಕಾ) – ಮುಂಬರುವ ಮೂರು ದಿನಗಳಲ್ಲಿ ಕದನವಿರಾಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳಿ, ಇಲ್ಲದಿದ್ದರೆ ನಿಮ್ಮ ತೈಲ ಕೊಳವೆಗಳು ಸ್ಫೋಟಗೊಳ್ಳಲಿವೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ ಗೆ ಎಚ್ಚರಿಕೆ ನೀಡಿದ್ದಾರೆ. ‘ಫಾಕ್ಸ್ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡುತ್ತಿದ್ದರು.

ಟ್ರಂಪ್ ಮುಂದುವರಿದು, ಇರಾನ್ ಒಂದು ವೇಳೆ ತೈಲವನ್ನು ರಫ್ತು ಮಾಡಲು ಸಾಧ್ಯವಾಗದಿದ್ದರೆ, ನೌಕೆಗಳಿಗೆ ಅಥವಾ ತೈಲ ಸಂಗ್ರಹಿಸಿಟ್ಟಿರುವ ಟ್ಯಾಂಕ್‌ ಗಳಿಗೆ ತೈಲವನ್ನು ವರ್ಗಾಯಿಸುವ ಮಾರ್ಗವಾಗಿರುವ ತೈಲ ಕೊಳವೆಗಳ ಮೇಲೆ ಒತ್ತಡ ಹೆಚ್ಚಾಗಲಿದೆ. ಇದರಿಂದಾಗಿ ತೈಲದ ಹರಿವು ಹಠಾತ್ತಾಗಿ ನಿಂತುಹೋಗುತ್ತದೆ. ಆಗ ತೈಲ ಕೊಳವೆಗಳಲ್ಲಿ ಒತ್ತಡ ನಿರ್ಮಾಣವಾಗಿ ಅವು ತಾಂತ್ರಿಕ ಅಥವಾ ನೈಸರ್ಗಿಕ ಕಾರಣಗಳಿಂದ ಸ್ಫೋಟಗೊಳ್ಳಬಹುದು. ಇಂತಹ ಸಮಯದಲ್ಲಿ ತೈಲ ಕೊಳವೆಗಳನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವುದು ಅಸಾಧ್ಯವೆಂದೇ ಹೇಳಬಹುದು ಮತ್ತು ಈ ಕೊಳವೆಗಳ ಸಾಮರ್ಥ್ಯವೂ ಸಹ ಕಡಿಮೆಯಾಗುತ್ತದೆ. ಪ್ರಸ್ತುತ ಅಮೆರಿಕಾದ ದಿಗ್ಬಂಧನ ನಡೆಯುತ್ತಿರುವುದರಿಂದ ಇರಾನ್‌ ಗೆ ತೈಲ ರಫ್ತು ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ದಿಗ್ಬಂಧನದ ಕಾರಣದಿಂದ ಇರಾನ್ ಬಳಿ ನೌಕೆಗಳಿಲ್ಲ. ಆದ್ದರಿಂದ ಒಮ್ಮೆ ಅವರ ತೈಲ ಕೊಳವೆ ಸ್ಫೋಟಗೊಂಡರೆ, ಇರಾನ್‌ ಗೆ ಆ ತೈಲ ಕೊಳವೆಯ ಮೂಲ ಸಾಮರ್ಥ್ಯದಂತೆಯೇ ಹೊಸ ತೈಲ ಕೊಳವೆಯನ್ನು ಪುನರ್ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಸಂಗ್ರಹಣೆಯ ಆಯ್ಕೆಗಳು ಮುಗಿದಂತೆ ಭೀಕರ ಪರಿಸ್ಥಿತಿ ನಿರ್ಮಾಣವಾಗಲಿದೆ. ಇರಾನ್‌ ಗೆ ಉದ್ವಿಗ್ನತೆಯನ್ನು ಕೊನೆಗಾಣಿಸಲು ಮತ್ತು ಮಾತುಕತೆ ನಡೆಸಲು ಇಚ್ಛೆಯಿದ್ದರೆ, ಅವರು ಅಮೆರಿಕಾವನ್ನು ಸಂಪರ್ಕಿಸಬೇಕು.

ಯುದ್ಧ ಅಂತ್ಯಕ್ಕೆ ಇರಾನ್‌ ನ ಹೊಸ ಪ್ರಸ್ತಾವನೆ!

ಯುದ್ಧವನ್ನು ಕೊನೆಗೊಳಿಸಲು ಇರಾನ್ ಅಮೆರಿಕಾಕ್ಕೆ ಹೊಸ ಪ್ರಸ್ತಾವನೆಯನ್ನು ಸಲ್ಲಿಸಿದೆ. ಹಾರ್ಮುಜ್ ಜಲಸಂಧಿಯನ್ನು ನೌಕೆಗಳ ಸಂಚಾರಕ್ಕಾಗಿ ಮತ್ತೆ ಮುಕ್ತಗೊಳಿಸುವ ಅಂಶವನ್ನು ಈ ಹೊಸ ಪ್ರಸ್ತಾವನೆಯಲ್ಲಿ ಮಂಡಿಸಲಾಗಿದೆ. ಅಮೆರಿಕಾದ ಸ್ಥಳೀಯ ಸುದ್ದಿ ಸಂಸ್ಥೆಯೊಂದು ಈ ಬಗ್ಗೆ ವರದಿ ಪ್ರಸಾರ ಮಾಡಿದೆ. ಇರಾನ್‌ ನ ಅಣು ಕಾರ್ಯಕ್ರಮದ ಬಗ್ಗೆ ಚರ್ಚೆ ನಂತರ ನಡೆಯಲಿದ್ದು; ಸದ್ಯಕ್ಕೆ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಿ ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧವನ್ನು ತಕ್ಷಣವೇ ಕೊನೆಗೊಳಿಸಬೇಕೆಂಬ ಪ್ರಸ್ತಾವನೆಯನ್ನು ಇರಾನ್ ಮುಂದಿಟ್ಟಿದೆ.

ಅಮೆರಿಕಾದ ನಿಲುವೇನು?

ಈ ಬಗ್ಗೆ ಟ್ರಂಪ್ ಪ್ರತಿಕ್ರಿಯಿಸಿ, ಇರಾನ್‌ಗೆ ಅಗತ್ಯವಿದ್ದರೆ ಶಾಂತಿ ಪ್ರಸ್ತಾವನೆಗಾಗಿ ಮುಂದಾಗಬೇಕು. ಇರಾನ್ ಬಳಿ ಎಂದಿಗೂ ಅಣ್ವಸ್ತ್ರಗಳು ಇರಬಾರದು ಎಂದು ಟ್ರಂಪ್ ಹೇಳಿದರು. ಇದರಿಂದ ಮತ್ತೊಮ್ಮೆ ಶಾಂತಿ ಪ್ರಸ್ತಾವನೆಯ ಪ್ರಕ್ರಿಯೆಯಲ್ಲಿ ಅಡೆತಡೆಗಳು ಉಂಟಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.