ಭಾರತೀಯ ಸಂಸ್ಕೃತಿ ಮತ್ತು (ಹಿಂದೂ) ಧರ್ಮವೇ ಭಾರತದ ಆತ್ಮ ! – ಕರ್ನಾಟಕ ಹೈಕೋರ್ಟ್

  • ಶಂಕರಾಚಾರ್ಯ ಜಯಂತಿಗೆ ಸಭಾಂಗಣ ನೀಡದ ಬೆಂಗಳೂರು ಮಹಾನಗರ ಪಾಲಿಕೆಯ ಕಿವಿ ಹಿಂಡಿದ ಕರ್ನಾಟಕ ಹೈಕೋರ್ಟ್

  • ಭಾರತ ಜಾತ್ಯತೀತವಾಗಿದ್ದರೂ, (ಹಿಂದೂ) ಧಾರ್ಮಿಕ ಕಾರ್ಯಕ್ರಮಗಳ ಮೇಲೆ ಯಾವುದೇ ನಿಷೇಧವಿಲ್ಲ ಎಂದು ಸ್ಪಷ್ಟಪಡಿಸುತ್ತಾ ಕಾರ್ಯಕ್ರಮ ನಡೆಸಲು ಅನುಮತಿ ನೀಡಿತು

ಬೆಂಗಳೂರು – ಶಂಕರಾಚಾರ್ಯರು ಭಾರತದ ಅತ್ಯಂತ ಗೌರವಾನ್ವಿತ ಆಚಾರ್ಯರಲ್ಲಿ ಒಬ್ಬರು ಮತ್ತು ಅವರು ಪ್ರಸಾರ ಮಾಡಿದ ‘ಅದ್ವೈತ ತತ್ತ್ವಜ್ಞಾನ’ವು ದೇಶದ ಪ್ರಮುಖ ತಾತ್ವಿಕ ಪರಂಪರೆಗಳಲ್ಲಿ ಒಂದಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಶ್ರೀ ಶಂಕರಾಚಾರ್ಯ ಜಯಂತಿಯನ್ನು ಆಚರಿಸುವುದನ್ನು ‘ಧಾರ್ಮಿಕ’ ಹಾಗೂ ‘ಸಾಂಸ್ಕೃತಿಕ’ ಎರಡೂ ಸ್ವರೂಪದ್ದೆಂದು ಪರಿಗಣಿಸಬೇಕು. ಭಾರತವು ಜಾತ್ಯತೀತ ದೇಶವಾಗಿದ್ದರೂ, ಇದರರ್ಥ ದೇಶದಲ್ಲಿನ (ಹಿಂದೂ) ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದಲ್ಲ ಎಂದು ಹೇಳುತ್ತಾ, ಮಲ್ಲೇಶ್ವರಂ ಬ್ರಾಹ್ಮಣ ಸಭೆಗೆ ಶಂಕರಾಚಾರ್ಯ ಜಯಂತಿ ಆಚರಿಸಲು ಸಭಾಂಗಣ ಒದಗಿಸದ ಬೆಂಗಳೂರು ಪಶ್ಚಿಮ ನಗರ ಮಹಾನಗರ ಪಾಲಿಕೆಯ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಹಿಂದೂ ಧರ್ಮ ಮತ್ತು ಭಾರತೀಯ ಸಂಸ್ಕೃತಿಯು ಎಂದಿಗೂ ಅಸಂವಿಧಾನಿಕ ಅಥವಾ ಅಕ್ರಮವಾಗಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಮಹತ್ವದ ವೀಕ್ಷಣೆಯನ್ನು ದಾಖಲಿಸುವಾಗ ಹೇಳಿದೆ. ಭಾರತೀಯ ಸಂಸ್ಕೃತಿ ಮತ್ತು (ಹಿಂದೂ) ಧರ್ಮವು ಭಾರತದ ಆತ್ಮವಾಗಿದೆ.

ಮಹಾನಗರ ಪಾಲಿಕೆಯ ಹಿಂದೂದ್ವೇಷಿ ವಾದ !

ಸಭಾಂಗಣವನ್ನು ಧಾರ್ಮಿಕ ಕಾರ್ಯಗಳಿಗಾಗಿ ಬಳಸುವಂತಿಲ್ಲ; ಏಕೆಂದರೆ ಸಭಾಂಗಣವನ್ನು ಯೋಗ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗಾಗಿ ಬಳಸಲಾಗುತ್ತದೆ ಎಂದು ಮಹಾನಗರ ಪಾಲಿಕೆ ಹೇಳಿತ್ತು. (ವಾಸ್ತವವಾಗಿ ಯೋಗವೂ ಹಿಂದೂ ಧರ್ಮದ ಕೊಡುಗೆಯೇ ಆಗಿದೆ. ಇದನ್ನು ‘ಸೆಕ್ಯುಲರ್’ (ಜಾತ್ಯತೀತ) ಎಂದು ಭಾವಿಸುವ ಮಹಾನಗರ ಪಾಲಿಕೆಯನ್ನು ಎಷ್ಟು ಖಂಡಿಸಿದರೂ ಕಡಿಮೆಯೇ ! – ಸಂಪಾದಕರು)

ಭಾರತೀಯ ಸಂವಿಧಾನದಲ್ಲಿ ಭಾರತೀಯ ಪರಂಪರೆಗೆ ಸಂಬಂಧಿಸಿದ ಚಿತ್ರಗಳು ! – ಹೈಕೋರ್ಟ್

ಪಾಲಿಕೆಯ ತರ್ಕದ ಬಗ್ಗೆ ನ್ಯಾಯಾಲಯ ಹೀಗೆ ಹೇಳಿದೆ,

೧. ಶಂಕರಾಚಾರ್ಯ ಜಯಂತಿಯು ಕೇವಲ ಧಾರ್ಮಿಕ ಮಾತ್ರವಲ್ಲ, ಒಂದು ಸಾಂಸ್ಕೃತಿಕ ಚಟುವಟಿಕೆಯೂ ಆಗಿದೆ. ವಾಸ್ತವವಾಗಿ, ಭಾರತೀಯ ಸಂಸ್ಕೃತಿಯ ಹಿರಿಮೆಯು ಇಲ್ಲಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಹೆಣೆದುಕೊಂಡಿದೆ ಮತ್ತು ಅದನ್ನು ತೆಗೆದುಹಾಕುವುದು ಎಂದರೆ ದೇಶದ ಆತ್ಮವನ್ನೇ ತೆಗೆದುಹಾಕಿದಂತೆ. ಈ ಕಾರ್ಯಕ್ರಮವನ್ನು ನಿಷೇಧಿಸಲಾಗಿಲ್ಲ, ಅಂದರೆ ಅದಕ್ಕೆ ಅನುಮತಿ ಇದೆ.

೨. ಭಾರತದ ಸಂವಿಧಾನವು ಸ್ವತಃ ಭಾರತೀಯ ಸಂಸ್ಕೃತಿಯ ಮುದ್ರೆಗಳು, ಭಾರತೀಯ ಶಿಕ್ಷಣ ಪದ್ಧತಿಯ ಅವಿಭಾಜ್ಯ ಅಂಗವಾಗಿರುವ ‘ಗುರುಕುಲ’, ರಾಮಾಯಣ, ಭಗವದ್ಗೀತೆ, ಗೌತಮ ಬುದ್ಧ, ಮಹಾವೀರ ಸ್ವಾಮಿ ಮತ್ತು ಇಂತಹ ಇತರ ಪರಂಪರೆಗಳ ಚಿತ್ರಗಳನ್ನು ಒಳಗೊಂಡಿದೆ. ಆದ್ದರಿಂದ, ಧಾರ್ಮಿಕ ಚಟುವಟಿಕೆಗಳಿಗೆ ಪೂರಕವಾಗಿರುವ ಭಾರತೀಯ ಸಂಸ್ಕೃತಿಯನ್ನು ಆಚರಿಸುವುದನ್ನು ರಾಜ್ಯ ಸರಕಾರ ಅಥವಾ ಅದರ ವ್ಯಾಪ್ತಿಗೆ ಬರುವ ಸಂಸ್ಥೆಗಳ ಜಾಗದಲ್ಲಿ ನಿಷೇಧಿಸುವಂತಿಲ್ಲ.