‘ವಲಸಿಗರು ಚೀನಾ, ಭಾರತ ಅಥವಾ ಇತರ ಯಾವುದೇ ‘ನರಕಸದೃಶ’ ಸ್ಥಳಗಳಿಂದ ಅಮೆರಿಕಕ್ಕೆ ಬರುತ್ತಾರೆ!

ಅಮೆರಿಕದ ವಿಕ್ಷಿಪ್ತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಕ್ರೋಶಕಾರಿ ಹೇಳಿಕೆ!

ವಾಷಿಂಗ್ಟನ್ (ಅಮೆರಿಕ) – ವಲಸಿಗರು ಚೀನಾ, ಭಾರತ ಅಥವಾ ಭೂಮಿಯ ಮೇಲಿನ ಯಾವುದೇ ನರಕಸದೃಶ ಸ್ಥಳಗಳಿಂದ ಅಮೆರಿಕಕ್ಕೆ ಬರುತ್ತಾರೆ; ಇಲ್ಲಿ ಮಕ್ಕಳಿಗೆ ಜನ್ಮ ನೀಡುತ್ತಾರೆ, ಆ ಮಕ್ಕಳು ಅಮೆರಿಕದ ಪ್ರಜೆಗಳಾಗುತ್ತಾರೆ. ನಂತರ ಅವರು ಚೀನಾ ಅಥವಾ ಭಾರತದಿಂದ ತಮ್ಮ ಇಡೀ ಕುಟುಂಬವನ್ನೇ ಇಲ್ಲಿಗೆ ಕರೆಸಿಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ‘ಜನ್ಮಸಿದ್ಧ ಪೌರತ್ವ’ದ ವಿಷಯವನ್ನು ಮತ್ತೆ ಚರ್ಚೆಗೆ ತಂದಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅದರ ವ್ಯಾಪ್ತಿಯ ಬಗ್ಗೆ ಅಮೆರಿಕದ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಟ್ರಂಪ್ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.

ಅಮೆರಿಕ ತನ್ನ ಘನತೆಯನ್ನು ಕಳೆದುಕೊಳ್ಳಬೇಕಾಗುತ್ತದೆಯಂತೆ!

ಜನ್ಮಸಿದ್ಧ ಪೌರತ್ವದ ಬಗ್ಗೆ ಬರಲಿರುವ ತೀರ್ಪಿನ ಕುರಿತು ಮಾತನಾಡಿದ ಟ್ರಂಪ್, ಒಂದು ವೇಳೆ ಅವರು ಜನ್ಮಸಿದ್ಧ ಪೌರತ್ವದ ವಿಷಯದಲ್ಲಿ ದೇಶದ ವಿರುದ್ಧವಾಗಿ ತೀರ್ಪು ನೀಡಿದರೆ ಮತ್ತು ಹಾಗಾಗುವ ಸಾಧ್ಯತೆಯೇ ಹೆಚ್ಚಿದ್ದರೆ ಅಮೆರಿಕವು ಭಾರಿ ಆರ್ಥಿಕ ಹೊರೆಯನ್ನು ಹೊರಬೇಕಾಗುತ್ತದೆ; ಆದರೆ ಅದಕ್ಕಿಂತ ಮುಖ್ಯವಾಗಿ, ಅಮೆರಿಕವು ತನ್ನ ಘನತೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ. (ಟ್ರಂಪ್ ಈಗಾಗಲೇ ಅಮೆರಿಕದ ಅಲ್ಪಸ್ವಲ್ಪ ಉಳಿದಿದ್ದ ಪ್ರತಿಷ್ಠೆಯನ್ನೂ ಮಣ್ಣುಪಾಲು ಮಾಡಿದ್ದಾರೆ, ಹಾಗಾಗಿ ಕಳೆದುಕೊಳ್ಳಲು ಅಲ್ಲಿ ಈಗೇನೂ ಉಳಿದಿಲ್ಲ! – ಸಂಪಾದಕರು)

ಟ್ರಂಪ್ ಮಾತು ಮುಂದುವರೆಸಿ, ಇಲ್ಲಿ ಖಚಿತವಾಗಿ ಏನು ನಡೆಯುತ್ತಿದೆ ಎಂಬುದು ತಿಳಿಯುವವರೆಗೆ ನಾನು ಭಾರತೀಯರ ದೊಡ್ಡ ಬೆಂಬಲಿಗನಾಗಿದ್ದೆ ಎಂದಿದ್ದಾರೆ. ಇದರೊಂದಿಗೆ ಅವರು ಒಂದು ವಿಡಿಯೋವನ್ನು ಉಲ್ಲೇಖಿಸಿದ್ದು, ಅದರಲ್ಲಿ ಅಮೆರಿಕದ ಕೆಲವು ಭಾಗಗಳಲ್ಲಿ, ವಿಶೇಷವಾಗಿ ಕ್ಯಾಲಿಫೋರ್ನಿಯಾದ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರತೀಯರದ್ದೇ ಪ್ರಾಬಲ್ಯವಿದೆ ಎಂದು ಹೇಳಿದ್ದಾರೆ. ಈ ವಿಷಯ ನನಗೆ ಖಚಿತವಾಗಿ ತಿಳಿದಿದೆ ಮತ್ತು ಇದರ ಬಗ್ಗೆ ಯಾರೂ ನನ್ನೊಂದಿಗೆ ವಾದ ಮಾಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಟ್ರಂಪ್ ಮಾಡಿರುವ ಈ ಎಲ್ಲಾ ವಾದಗಳನ್ನು ಯಾವುದೇ ಪುರಾವೆಗಳಿಲ್ಲದೆ ಮಂಡಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಸಂಪಾದಕೀಯ ನಿಲುವು

ಅಮೆರಿಕವು ಭೂಮಿಯ ಮೇಲಿನ ಅನೇಕ ದೇಶಗಳನ್ನು ನರಕಸದೃಶವನ್ನಾಗಿ ಮಾಡಲು ವರ್ಷಗಳಿಂದ ಪ್ರಯತ್ನಿಸುತ್ತಿದೆ ಎಂಬುದು ಅಫ್ಘಾನಿಸ್ತಾನ, ಸಿರಿಯಾ, ಇರಾನ್‌ನಂತಹ ದೇಶಗಳನ್ನು ನೋಡಿದರೆ ಯಾರಿಗಾದರೂ ಅರ್ಥವಾಗುತ್ತದೆ. ಇಂತಹ ಅಮೆರಿಕವು ಭಾರತ ಮತ್ತು ಇತರ ದೇಶಗಳ ಬಗ್ಗೆ ಇಂತಹ ಹೇಳಿಕೆ ನೀಡುವುದು ಒಂದು ಹಾಸ್ಯಾಸ್ಪದ ಸಂಗತಿಯೇ ಸರಿ!