ಕೆನಡಾ : ಭಾರತೀಯ ವಿದ್ಯಾರ್ಥಿ ಕಾರ್ತಿಕ್ ವಾಸುದೇವ್ ಹತ್ಯೆ ಪ್ರಕರಣದ ದೋಷಿಗೆ ಜೀವಾವಧಿ ಶಿಕ್ಷೆ ! – Kartik Vasudev Canada

ಟೊರೊಂಟೊ (ಕೆನಡಾ) – ಇಲ್ಲಿನ ನ್ಯಾಯಾಲಯವು ಭಾರತೀಯ ವಿದ್ಯಾರ್ಥಿ ಕಾರ್ತಿಕ ವಾಸುದೇವ್ ಹತ್ಯೆ ಪ್ರಕರಣದ ದೋಷಿಗೆ ಇತ್ತೀಚೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಟೊರೊಂಟೊ ಹೈಕೋರ್ಟ್ ನ್ಯಾಯಾಧೀಶರಾದ ಜೇನ್ ಕೆಲ್ಲಿ ಅವರು ಆರೋಪಿ ರಿಚರ್ಡ್ ಎಡ್ವಿನ್‌ನನ್ನು 2 ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ದೋಷಿ ಎಂದು ತೀರ್ಪು ನೀಡಿದ್ದಾರೆ. ಈ ಕೊಲೆಗಳನ್ನು ಆತ 2022 ರ ಏಪ್ರಿಲ್ 7 ಮತ್ತು ಏಪ್ರಿಲ್ 9 ರಂದು ಮಾಡಿದ್ದನು. ಈ ಪ್ರಕರಣದಲ್ಲಿ ಆರೋಪಿಯು 21 ವರ್ಷದ ಕಾರ್ತಿಕ ವಾಸುದೇವ್ ಮೇಲೆ ಗುಂಡು ಹಾರಿಸಿರುವುದನ್ನು ಒಪ್ಪಿಕೊಂಡಿದ್ದನು. ಘಟನೆಯ ಸಮಯದಲ್ಲಿ ಆರೋಪಿಯು ‘ಸ್ಕಿಜೋಫ್ರೇನಿಯಾ’ ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದನು ಮತ್ತು ಸರಿ-ತಪ್ಪುಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವ ಸ್ಥಿತಿಯಲ್ಲಿರಲಿಲ್ಲ ಎಂದು ಪ್ರತಿವಾದಿ ಪರ ವಕೀಲರು ವಾದಿಸಿದ್ದರು. ಆದ್ದರಿಂದ ಅವನನ್ನು ಹೊಣೆಗಾರನನ್ನಾಗಿ ಮಾಡಬಾರದು; ಆದರೆ ನ್ಯಾಯಾಲಯವು ಈ ವಾದವನ್ನು ತಳ್ಳಿಹಾಕಿತು.

ಕಾರ್ತಿಕ ವಾಸುದೇವ್ ಗಾಜಿಯಾಬಾದ್ ನಿವಾಸಿಯಾಗಿದ್ದನು. ಆತ 2022 ರ ಜನವರಿಯಲ್ಲಿ ಉನ್ನತ ವ್ಯಾಸಂಗಕ್ಕಾಗಿ ಕೆನಡಾಕ್ಕೆ ಹೋಗಿದ್ದನು; ಆದರೆ ಕೆಲವೇ ತಿಂಗಳುಗಳಲ್ಲಿ ಅಲ್ಲಿ ಆತನ ಹತ್ಯೆಯಾಗಿತ್ತು. 4 ವರ್ಷಗಳ ಕಾನೂನು ಹೋರಾಟದ ನಂತರ ಕುಟುಂಬಕ್ಕೆ ಅಂತಿಮವಾಗಿ ನ್ಯಾಯ ಸಿಕ್ಕಿದೆ ಎಂದು ಕಾರ್ತಿಕ ತಂದೆ ಜಿತೇಶ್ ವಾಸುದೇವ್ ಹೇಳಿದ್ದಾರೆ. ಅಂತಿಮ ವಿಚಾರಣೆಗಾಗಿ ಅವರು ಮತ್ತು ಅವರ ಪತ್ನಿ ಕೆನಡಾದಲ್ಲಿ ಹಾಜರಿದ್ದರು.