ಅಮೆರಿಕದೊಂದಿಗಿನ ಎರಡನೇ ಸುತ್ತಿನ ಮಾತುಕತೆಗೆ ಇರಾನ್ ನಿರಾಕರಣೆ

ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಇಡೀ ದೇಶವನ್ನೇ ನಾಶ ಮಾಡುತ್ತೇವೆ! - ಟ್ರಂಪ್ ಬೆದರಿಕೆ

ತೆಹ್ರಾನ್ (ಇರಾನ್) – ಇರಾನ್ ಮತ್ತು ಅಮೆರಿಕ ನಡುವಿನ 15 ದಿನಗಳ ಕದನ ವಿರಾಮವು ಏಪ್ರಿಲ್ 22ರಂದು ಅಂತ್ಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಎರಡೂ ದೇಶಗಳ ನಡುವಿನ ಯುದ್ಧವನ್ನು ಕಾಯಂ ಆಗಿ ನಿಲ್ಲಿಸುವ ಕುರಿತು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ನಡೆದ ಮೊದಲ ಹಂತದ ಮಾತುಕತೆ ವಿಫಲವಾಗಿತ್ತು. ಹೀಗಾಗಿ, ಎರಡನೇ ಸುತ್ತಿನ ಸಭೆಯನ್ನು ಏಪ್ರಿಲ್ 22ರಂದೇ ಆಯೋಜಿಸಲಾಗಿತ್ತು. ಆದರೆ, ಈ ಸಭೆಗೆ ಬರಲು ಇರಾನ್ ನಿರಾಕರಿಸಿದೆ ಎಂದು ಇರಾನ್‌ನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇರಾನ್ ಮಾತುಕತೆಗೆ ನಿರಾಕರಿಸಿದ್ದೇಕೆ?

ಅಮೆರಿಕದ ಅವಾಸ್ತವಿಕ ಬೇಡಿಕೆಗಳು ಮತ್ತು ನಿರೀಕ್ಷೆಗಳು, ನಿರಂತರವಾಗಿ ಬದಲಾಗುತ್ತಿರುವ ನಿಲುವುಗಳು, ಪರಸ್ಪರ ವಿರೋಧಾಭಾಸದ ಹೇಳಿಕೆಗಳು ಹಾಗೂ ನೌಕಾಪಡೆಯ ಮೂಲಕ ಅಮೆರಿಕ ನಡೆಸುತ್ತಿರುವ ಸತತ ದಿಗ್ಬಂಧನದಿಂದಾಗಿ ಮಾತುಕತೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದೇವೆ ಎಂದು ಇರಾನ್‌ನ ಅಧಿಕೃತ ಸುದ್ದಿ ಸಂಸ್ಥೆ ತಿಳಿಸಿದೆ. ಅಮೆರಿಕದ ದಿಗ್ಬಂಧನ ಮುಂದುವರಿಯುವವರೆಗೆ ಸಾಮಾನ್ಯ ಸಾರಿಗೆ ಸಂಚಾರಕ್ಕೆ ಅವಕಾಶ ನೀಡುವುದಿಲ್ಲವೆಂದು ಇರಾನ್ ಸ್ಪಷ್ಟಪಡಿಸಿದೆ.

ಇರಾನ್‌ನ ಹಿರಿಯ ಅಧಿಕಾರಿ ಇಬ್ರಾಹಿಂ ಜೊಲ್ಫಾಘರಿ ಈ ಕುರಿತು ಮಾತನಾಡಿ, ಅಮೆರಿಕದೊಂದಿಗಿನ ಎಲ್ಲಾ ಸಮಾಲೋಚನೆಗಳನ್ನು ಇರಾನ್ ಅಧಿಕೃತವಾಗಿ ತಿರಸ್ಕರಿಸಿದೆ. ಶಾಂತಿ ಒಪ್ಪಂದವು ಈಗ ರದ್ದಾಗಿದ್ದು, ಹಾರ್ಮುಜ್ ಜಲಸಂಧಿಯನ್ನು (ಎರಡು ದೊಡ್ಡ ಸಮುದ್ರಗಳನ್ನು ಸಂಪರ್ಕಿಸುವ ಕಿರಿದಾದ ಜಲಮಾರ್ಗ) ಮತ್ತೆ ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ತಿಳಿಸಿದ್ದಾರೆ. ಇನ್ನೊಂದೆಡೆ, ಈ ಸಭೆಗೆ ಅಮೆರಿಕ ತನ್ನ ನಿಯೋಗವನ್ನು ಕಳುಹಿಸುವುದಾಗಿ ಘೋಷಿಸಿದೆ.

ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಇಡೀ ದೇಶವನ್ನೇ ನಾಶ ಮಾಡುತ್ತೇವೆ! – ಟ್ರಂಪ್ ಬೆದರಿಕೆ

ಈ ಪ್ರಸ್ತಾವಿತ ಮಾತುಕತೆಯು ಇರಾನ್‌ಗೆ ಒಪ್ಪಂದ ಮಾಡಿಕೊಳ್ಳಲು ಇರುವ ಕೊನೆಯ ಅವಕಾಶವೆಂದು ಟ್ರಂಪ್ ಹೇಳಿದ್ದಾರೆ. “ಒಂದು ವೇಳೆ ಇರಾನ್ ಈ ಒಪ್ಪಂದಕ್ಕೆ ಸಹಿ ಹಾಕದಿದ್ದರೆ, ಇಡೀ ದೇಶವನ್ನೇ ನಾಶ ಮಾಡಲಾಗುವುದು. ಇರಾನ್‌ನ ವಿದ್ಯುತ್ ಸ್ಥಾವರಗಳು, ಸೇತುವೆಗಳು ಮತ್ತು ಮೂಲಸೌಕರ್ಯಗಳನ್ನು ಗುರಿಯಾಗಿಸಲಾಗುವುದು” ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕ ನೌಕಾಪಡೆಯ ವಶದಲ್ಲಿರುವ ಇರಾನ್‌ ಸರಕು ನೌಕೆ!

ಓಮನ್ ಕೊಲ್ಲಿಯಲ್ಲಿ ಇರಾನ್‌ನ ‘ತುಸ್ಕಾ’ ಎಂಬ ಸರಕು ನೌಕೆಯನ್ನು ಅಮೆರಿಕದ ನೌಕಾಪಡೆ ತನ್ನ ವಶಕ್ಕೆ ಪಡೆದಿದೆ. ಅಮೆರಿಕ ವಿಧಿಸಿರುವ ನೌಕಾ ದಿಗ್ಬಂಧನವನ್ನು ಮುರಿಯಲು ಈ ನೌಕೆ ಪ್ರಯತ್ನಿಸಿದಾಗ, ಅಮೆರಿಕದ ಯುದ್ಧನೌಕೆಯು ಆಕ್ರಮಣಕಾರಿ ಕ್ರಮ ಕೈಗೊಂಡು ತಡೆದಿದೆ. ಟ್ರಂಪ್ ಈ ಘಟನೆಯನ್ನು ದೃಢಪಡಿಸಿದ್ದಾರೆ. ‘ತುಸ್ಕಾ’ ನೌಕೆಯು ಸುಮಾರು 900 ಅಡಿ ಉದ್ದವಿದ್ದು, ಅದರ ತೂಕವು ವಿಮಾನವಾಹಕ ಯುದ್ಧನೌಕೆಯಷ್ಟಿದೆ. “ಇರಾನ್ ಸಿಬ್ಬಂದಿ ನಮ್ಮ ಎಚ್ಚರಿಕೆಯನ್ನು ನಿರ್ಲಕ್ಷಿಸಿದರು. ಪರಿಣಾಮವಾಗಿ ನಮ್ಮ ನೌಕಾಪಡೆಯು ಆ ಹಡಗಿನ ಇಂಜಿನ್ ರೂಮ್‌ಗೆ ರಂಧ್ರ ಕೊರೆದು ಅವರನ್ನು ತಡೆದರು. ಸದ್ಯ ಈ ನೌಕೆ ಮತ್ತು ಸಿಬ್ಬಂದಿ ಅಮೆರಿಕ ನೌಕಾಪಡೆಯ ವಶದಲ್ಲಿದ್ದಾರೆ” ಎಂದು ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಈ ಹಿಂದೆ ನಡೆದ ಅಕ್ರಮ ಚಟುವಟಿಕೆಗಳ ಕಾರಣದಿಂದಾಗಿ ಈ ನೌಕೆಯ ಮೇಲೆ ಅಮೆರಿಕ ಈಗಾಗಲೇ ನಿರ್ಬಂಧ ಹೇರಿತ್ತು.

ಹಿಜ್ಬುಲ್ಲಾದಿಂದ ಅಪಾಯ ಎದುರಾದರೆ ಪೂರ್ಣ ಶಕ್ತಿಯೊಂದಿಗೆ ದಾಳಿ ಮಾಡುತ್ತೇವೆ! – ಇಸ್ರೇಲ್

ಹಿಜ್ಬುಲ್ಲಾದಿಂದ ಒಂದು ಚಿಕ್ಕ ಅಪಾಯ ಎದುರಾದರೂ, ಪ್ರಸ್ತುತ ಕದನ ವಿರಾಮ ಜಾರಿಯಲ್ಲಿದ್ದರೂ ಕೂಡ ಇಸ್ರೇಲ್ ಸೇನೆಯು ತನ್ನ ಪೂರ್ಣ ಶಕ್ತಿಯೊಂದಿಗೆ ದಾಳಿ ನಡೆಸಲಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಎಚ್ಚರಿಸಿದ್ದಾರೆ.