ಯೋಗ್ಯ ಪದ್ಧತಿಯಿಂದ ‘ವ್ಯಾಯಾಮ’ ಮಾಡುವುದರಿಂದ ನರಗಳಿಗೆ ಆಗುವ ಲಾಭ !

ಆರೋಗ್ಯಕರ ಜೀವನಕ್ಕಾಗಿ ವ್ಯಾಯಾಮ – ೪೧

‘ಆಧುನಿಕ ಜೀವನಶೈಲಿಯಿಂದ ಉಂಟಾಗುವ ಅನೇಕ ದೈಹಿಕ ಸಮಸ್ಯೆಗಳಿಗೆ ‘ವ್ಯಾಯಾಮ’ ಒಂದು ಪರಿಣಾಮಕಾರಿ ಉಪಾಯವಾಗಿದೆ. ಪ್ರಾಚೀನ ಗ್ರಂಥಗಳಲ್ಲಿನ ವ್ಯಾಯಾಮದ ತತ್ವಜ್ಞಾನವು ಇಂದಿಗೂ ಅಷ್ಟೇ ಉಪಯುಕ್ತವಾಗಿದ್ದು, ನಾವು ಅದರಿಂದ ಪ್ರೇರಣೆ ಪಡೆಯಬಹುದು. ಈ ಲೇಖನಮಾಲೆಯ ಮೂಲಕ ನಾವು ‘ವ್ಯಾಯಾಮದ ಮಹತ್ವ, ವ್ಯಾಯಾಮದ ಬಗೆಗಿನ ಸಂದೇಹಗಳ ನಿವಾರಣೆ, ‘ಅರ್ಗೋನಾಮಿಕ್ಸ್’ ತತ್ವ ಮತ್ತು ವ್ಯಾಧಿಗನುಗುಣವಾಗಿ ಯೋಗ್ಯ ವ್ಯಾಯಾಮ’, ಇವುಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. ವ್ಯಾಯಾಮದ ಮಾಧ್ಯಮದಿಂದ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಈ ಪ್ರಯಾಣವು ಎಲ್ಲರಿಗೂ ಖಂಡಿತವಾಗಿಯೂ ಪ್ರೇರಣಾದಾಯಿಯಾಗಲಿದೆ !

 

೧. ನರಗಳ ಕಾಯಿಲೆಗಳ ಕಾರಣಗಳು

೧ ಅ. ವ್ಯಕ್ತಿಯ ಕೀಲುಗಳಲ್ಲಿ ಊತ ಕಾಣಿಸಿಕೊಂಡರೆ ಅಥವಾ ಕೀಲುಗಳಲ್ಲಿ ಬಿಗಿತ ಉಂಟಾದಾಗ ಅಲ್ಲಿನ ನರಗಳ ಮೇಲೆ ಒತ್ತಡ ಬಿದ್ದು ವ್ಯಕ್ತಿಗೆ ವಿವಿಧ ರೀತಿಯ ತೊಂದರೆಗಳಾಗುವುದು : ನರಗಳ ಕಾಯಿಲೆಗಳು ಹೆಚ್ಚಾಗಿ ಅವುಗಳ ಮೇಲೆ ಬೀಳುವ ಒತ್ತಡದಿಂದ ಉಂಟಾಗುತ್ತವೆ. ನರಗಳ ಮೇಲೆ ಒತ್ತಡ ಬಿದ್ದಾಗ ಉಂಟಾಗುವ ವ್ಯಾಧಿಗಳಿಂದ ‘ನಿರ್ದಿಷ್ಟ ಭಾಗಗಳಲ್ಲಿ ಇರುವೆ ಹರಿದಂತಾಗುವುದು, ನೋವು, ಉರಿ, ಅಶಕ್ತತೆ ಅಥವಾ ಆ ಭಾಗವು ಶಕ್ತಿಹೀನವಾಗುವುದು’ ಇಂತಹ ಗಂಭೀರ ತೊಂದರೆಗಳು ಉಂಟಾಗಬಹುದು. ನರಗಳು ಸ್ನಾಯುಗಳ ನಡುವಿನಿಂದ ಹಾದುಹೋಗುತ್ತವೆ ಮತ್ತು ಕೀಲುಗಳ ಚಲನೆಗೆ ಅನುಗುಣವಾಗಿ ಅವು ಒತ್ತಡಕ್ಕೊಳಗಾಗುತ್ತವೆ. ಆದ್ದರಿಂದ ಸ್ನಾಯುಗಳು ಮತ್ತು ಕೀಲುಗಳ ಸ್ಥಿತಿಯು ನರಗಳ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಒಬ್ಬ ವ್ಯಕ್ತಿಯ ಕೀಲುಗಳಲ್ಲಿ ಊತ ಬಂದಾಗ ಅಥವಾ ಕೀಲುಗಳಲ್ಲಿ ಬಿಗಿತ ಉಂಟಾದಾಗ, ಅಲ್ಲಿನ ನರಗಳ ಮೇಲೆ ಒತ್ತಡ ಬೀಳುತ್ತದೆ ಮತ್ತು ಮೇಲೆ ಉಲ್ಲೇಖಿಸಿದಂತೆ ಪರಿಣಾಮಗಳು ಕಾಣಿಸಿಕೊಳ್ಳತೊಡಗುತ್ತವೆ. ಈ ಪ್ರಕ್ರಿಯೆಗೆ ಕೆಲವು ದಿನಗಳು ಅಥವಾ ಅನೇಕ ತಿಂಗಳುಗಳು ಅಥವಾ ಅನೇಕ ವರ್ಷಗಳೂ ತಗುಲಬಹುದು. ಆದ್ದರಿಂದ ಇಂತಹ ಲಕ್ಷಣಗಳು ಕಂಡುಬಂದ ತಕ್ಷಣ ಆ ನಿಟ್ಟಿನಲ್ಲಿ ಜಾಗರೂಕರಾಗಿ ಪರಿಹಾರೋಪಾಯಗಳನ್ನು ಕೈಗೊಳ್ಳು ವುದು ಅವಶ್ಯಕವಾಗಿದೆ.

ಶ್ರೀ. ನಿಮಿಷ ಮ್ಹಾತ್ರೆ

೧ ಆ. ಚಲನವಲನ ಇಲ್ಲದ ಕಾರಣ ಕೀಲುಗಳಲ್ಲಿ ಬಿಗಿತ ಉಂಟಾಗಿ ಅಲ್ಲಿನ ನರಗಳ ಮೇಲೆ ಒತ್ತಡ ಬರುವುದು ಮತ್ತು ಅದರಿಂದ ರೋಗಿಗೆ ತೊಂದರೆಯಾಗುವುದು ಹಾಗೂ ಸರಿಯಾದ ವ್ಯಾಯಾಮದಿಂದ ಕೀಲುಗಳು ಸಡಿಲಗೊಂಡು ತೊಂದರೆ ಕಡಿಮೆ ಯಾಗುವುದು : ಜೀವನದಲ್ಲಿ ಮೂಳೆ ಮುರಿತಕ್ಕೆ ಒಳಗಾದವರು ಈ ಲಕ್ಷಣಗಳನ್ನು ಇನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲರು. ಉದಾಹರಣೆಗೆ, ಕೈಮೂಳೆ ಮುರಿದಾಗ ಕೆಲವು ತಿಂಗಳುಗಳ ಕಾಲ ನಮಗೆ ಕೈಯನ್ನು ಅಲುಗಾಡಿಸಲು ಸಾಧ್ಯವಾಗುವುದಿಲ್ಲ. ನಂತರ ಮೂಳೆಗಳು ಕೂಡಿಕೊಂಡ ಮೇಲೂ ಕೈಯ ಚಲನೆಗಳು ಸರಾಗ ವಾಗಿ ಆಗುವುದಿಲ್ಲ. ಅದಕ್ಕಾಗಿ ವ್ಯಾಯಾಮ ಮಾಡಬೇಕಾಗುತ್ತದೆ. ಈ ಅವಧಿಯಲ್ಲಿ ರೋಗಿಗೆ ಅದೆಷ್ಟೋ ಬಾರಿ ‘ಕೈಯಲ್ಲಿ ಇರುವೆ ಹರಿದಂತಾಗುವುದು, ಮರಗಟ್ಟುವಿಕೆ, ಉರಿ, ಸೂಜಿ ಚುಚ್ಚಿದಂತೆ ಸಂವೇದನೆ’ ಇಂತಹ ತೊಂದರೆಗಳಾಗಬಹುದು. ರೋಗಿಯು ವ್ಯಾಯಾಮ ಮಾಡಿದಂತೆಲ್ಲಾ ಕೈಯ ಕೀಲುಗಳು ಸಡಿಲಗೊಂಡು ಈ ತೊಂದರೆಗಳು ಕಡಿಮೆಯಾಗತೊಡಗುತ್ತವೆ. ಚಲನವಲನ ಇಲ್ಲದ ಕಾರಣ ಕೀಲುಗಳಲ್ಲಿ ಉಂಟಾದ ಬಿಗಿತ ಅಥವಾ ಕೆಲವೊಮ್ಮೆ ಬರುವ ಊತ ಇವೆಲ್ಲವೂ ಕೀಲುಗಳ ಚಲನೆಯ ಸಂದರ್ಭದಲ್ಲಿ ನರಗಳ ಮೇಲೆ ಒತ್ತಡ ನೀಡುತ್ತವೆ.

– ಶ್ರೀ. ನಿಮಿಷ ಮ್ಹಾತ್ರೆ, ಭೌತಿಕೋಪಚಾರ ತಜ್ಞ, ಗೋವಾ. (೨೯.೧೨.೨೦೨೪)