ಧಾರ್ಮಿಕ ಪದ್ಧತಿಗಳ ಬಗ್ಗೆ ನ್ಯಾಯಾಲಯ ತೀರ್ಪು ನೀಡಲು ಸಾಧ್ಯವಿಲ್ಲ!

ಶಬರಿಮಲೆ ದೇವಸ್ಥಾನದ ವಕೀಲರಿಂದ ಸುಪ್ರೀಂ ಕೋರ್ಟ್ ನಲ್ಲಿ ವಾದ

ನವದೆಹಲಿ – ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶವನ್ನು ವಿರೋಧಿಸುವ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತವನ್ನು ನೋಡಿಕೊಳ್ಳುವ ‘ತಿರುವಾಂಕೂರು ದೇವಸ್ವಂ ಮಂಡಳಿ’ಯ ಪರವಾಗಿ ವಾದ ಮಂಡಿಸಿದ ವಕೀಲ ಅಭಿಷೇಕ್ ಮನು ಸಿಂಘ್ವಿ, “ಯಾವುದೇ ಧರ್ಮದ ಪದ್ಧತಿಯು ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಆ ಸಮುದಾಯದ ನಂಬಿಕೆಯ ಆಧಾರದ ಮೇಲೆ ನಿರ್ಧರಿಸಬೇಕು. ನ್ಯಾಯಾಧೀಶರು ಅದನ್ನು ಸ್ವತಃ ನಿರ್ಧರಿಸಲು ಸಾಧ್ಯವಿಲ್ಲ,” ಎಂದು ಹೇಳಿದರು.

೧. ವಕೀಲ ಅಭಿಷೇಕ್ ಮನು ಸಿಂಘ್ವಿ ಮಾತು ಮುಂದುವರೆಸಿ, “ಧರ್ಮವು ಒಂದು ಗುಂಪು ಅಥವಾ ಸಮುದಾಯದ ನಂಬಿಕೆಗೆ ಸಂಬಂಧಿಸಿದೆ. ಆದ್ದರಿಂದ ಕೆಲವು ವ್ಯಕ್ತಿಗಳ (ಮಹಿಳೆಯರ ಪ್ರವೇಶದ) ಹಕ್ಕುಗಳು ಇಡೀ ಸಮುದಾಯದ ಹಕ್ಕುಗಳ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬಾರದು,” ಎಂದರು.

೨. ಇದಕ್ಕೂ ಮೊದಲು ಏಪ್ರಿಲ್ ೭ ರಿಂದ ೯ ರವರೆಗೆ ಮೂರು ದಿನಗಳ ಕಾಲ ನಡೆದ ವಿಚಾರಣೆಯಲ್ಲಿ ಮಹಿಳೆಯರ ಪ್ರವೇಶವನ್ನು ವಿರೋಧಿಸುವ ಪರವಾಗಿ ವಾದಗಳನ್ನು ಮಂಡಿಸಲಾಗಿತ್ತು. ಕೇಂದ್ರ ಸರಕಾರವು, “ದೇಶದ ಅನೇಕ ದೇವಿ ದೇವಸ್ಥಾನಗಳಲ್ಲಿ ಪುರುಷರ ಪ್ರವೇಶಕ್ಕೂ ನಿಷೇಧವಿದೆ. ಆದ್ದರಿಂದ ಧಾರ್ಮಿಕ ಸಂಪ್ರದಾಯಗಳನ್ನು ಗೌರವಿಸಬೇಕು,” ಎಂದು ಹೇಳಿತ್ತು.

೩. ಕೇರಳ ಹೈಕೋರ್ಟ್ ೧೯೯೧ ರಲ್ಲಿ ಶಬರಿಮಲೆಗೆ ೧೦ ರಿಂದ ೫೦ ವರ್ಷದೊಳಗಿನ ಮಹಿಳೆಯರ ಪ್ರವೇಶವನ್ನು ನಿಷೇಧಿಸಿತ್ತು. ಸುಪ್ರೀಂ ಕೋರ್ಟ್ ೨೦೧೮ ರಲ್ಲಿ ಈ ನಿಷೇಧವು ತಾರತಮ್ಯದಿಂದ ಕೂಡಿದೆ ಎಂದು ಹೇಳಿ ಆ ಆದೇಶವನ್ನು ರದ್ದುಗೊಳಿಸಿತ್ತು. ನಂತರ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾದ ಮರುಪರಿಶೀಲನಾ ಅರ್ಜಿಗಳ ಆಧಾರದ ಮೇಲೆ ೭ ಪ್ರಮುಖ ಪ್ರಶ್ನೆಗಳನ್ನು ನಿಗದಿಪಡಿಸಲಾಗಿದ್ದು, ಅವುಗಳ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ.