ಸನಾತನ ಭಾರತ ಮತ್ತು ಇರಾನ್ :’ತೈಲಕ್ಕಿಂತಲೂ’ ಗಟ್ಟಿಯಾಗಿರುವ – ’ಆರ್ಯ’ರ ಸಂಬಂಧ !

ಸನಾತನ ಭಾರತ : ಸಮಾಜ, ರಾಷ್ಟ್ರ, ಧರ್ಮ ಮತ್ತು ಅಧ್ಯಾತ್ಮಕ್ಕೆ ಸಂಬಂಧಿಸಿದ ಪ್ರಾಸಂಗಿಕ ಅಂಶಗಳ ಕುರಿತು ಬರೆಯುವ ಅಂಕಣ

ಇರಾನ್ ಮತ್ತು ಇಸ್ರೇಲ್-ಅಮೆರಿಕಾ ನಡುವಿನ ಯುದ್ಧದ ಸಮಯದಲ್ಲಿ ಇರಾನ್ ‘ಹೋರ್ಮುಜ್ ಜಲಸಂಧಿ’ಯನ್ನು ಮುಚ್ಚಿದ್ದರಿಂದ ಜಗತ್ತಿನಾದ್ಯಂತ ಇಂಧನ ಬಿಕ್ಕಟ್ಟು ಎದುರಾಗಿದೆ. ಕೊಲ್ಲಿ ರಾಷ್ಟ್ರಗಳ ಎಲ್ಲಾ ತೈಲ ಉತ್ಪಾದಕ ಇಸ್ಲಾಮಿಕ್ ದೇಶಗಳನ್ನು ಒಂದಾಗಿಸುವ ಈ ಜಲಸಂಧಿಯ ಮೂಲಕವೇ ಜಗತ್ತಿನಾದ್ಯಂತ ಪೆಟ್ರೋಲ್, ಡೀಸೆಲ್, ಗ್ಯಾಸ್ ಮುಂತಾದ ಇಂಧನವಾಹಕ ನೌಕೆಗಳು ಸಂಚರಿಸುತ್ತವೆ. ಇಂತಹ ಸಂದರ್ಭದಲ್ಲಿ ಇರಾನ್ ಕೇವಲ ಭಾರತದ ಇಂಧನವಾಹಕ ನೌಕೆಗಳಿಗೆ ಮಾತ್ರ ಸುರಕ್ಷಿತ ಮಾರ್ಗವನ್ನು ನೀಡಿರುವುದು ಜಾಗತಿಕ ಚರ್ಚೆಯ ವಿಷಯವಾಗಿದೆ.

ಇರಾನ್ ಭಾರತಕ್ಕೆ ಮಾತ್ರ ಈ ರಿಯಾಯಿತಿಯನ್ನು ಏಕೆ ನೀಡಿತು ? ಇದರ ಉತ್ತರ ಇತಿಹಾಸದಲ್ಲಿದೆ ! ಒಂದು ಕಾಲದಲ್ಲಿ ’ಆರ್ಯಾವರ್ತ’ವಾಗಿದ್ದ ಸನಾತನ ಭಾರತಕ್ಕೆ ’ಆರ್ಯಾಣ’, ಅಂದರೆ ಇಂದಿನ ಇರಾನ್ ಜೊತೆಗೆ ತೈಲಕ್ಕಿಂತಲೂ ಮಿಗಿಲಾಗಿ ಗಟ್ಟಿಯಾಗಿರುವ ’ಆರ್ಯರ ಸಂಬಂಧ’ವಿದೆ. ಇದು ಭಾವನಾತ್ಮಕ ಮಾತ್ರವಲ್ಲದೇ ಇದರ ಹಿಂದೆ ಸಾವಿರಾರು ವರ್ಷಗಳ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯಿದೆ. ಈ ಪರಂಪರೆಯು ‘ಆರ್ಯ’ ಎಂಬ ಶಬ್ದದ ಸುತ್ತ ಹೆಣೆಯಲ್ಪಟ್ಟಿದೆ. ಇದನ್ನು ಬಿಚ್ಚಿಡುವ ಲೇಖನವಿದು !

೧. ‘ಇರಾನ್’ ಎಂದರೇನೆ ಆರ್ಯರ ದೇಶ !

ಇಂದು ನಾವು ಇರಾನ್ ಎಂದು ಕರೆಯುವ ದೇಶದ ಮೂಲ ಹೆಸರು ’ಆರ್ಯ’ ಎಂಬ ಶಬ್ದದೊಂದಿಗೆ ಬೆಸೆದುಕೊಂಡಿದೆ. ಜೊರೊಸ್ಟರ್ (ಜರತುಷ್ಟ್ರ) ಕಾಲದಿಂದಲೂ ಮತ್ತು ವಿಶೇಷವಾಗಿ ಭೂತಕಾಲದ ಸಸಾನಿಯನ್ ಸಾಮ್ರಾಜ್ಯದ ಸಮಯದಲ್ಲಿ ಇರಾನಿ ಜನರು ತಮ್ಮ ದೇಶವನ್ನು ‘ಆರ್ಯಾಣ’, ‘ಇರಾನ್’, ’ಇರಾನ್ ಝಮೀನ್’ ಅಥವಾ ‘ಇರಾನ್ ಶಹರ್’ ಎನ್ನುತ್ತಿದ್ದರು. ’ಇರಾನ್’ ಪದದ ಅಕ್ಷರಶಃ ಅರ್ಥವೇ ’ಆರ್ಯರ ಭೂಮಿ.’

ಶ್ರೀ ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ

ಕ್ರಿಸ್ತಪೂರ್ವ ೫ ನೇ ಶತಮಾನದಲ್ಲಿ ಸೈರಸ್ ದ ಗ್ರೇಟ್ ಇವನು ಇರಾನಿನ ಪಾರ್ಸ್ ಪ್ರಾಂತ್ಯದಲ್ಲಿ ಮೊದಲ ಪರ್ಷಿಯನ್ (ಅಕೆಮೇನಿಯನ್) ಸಾಮ್ರಾಜ್ಯವನ್ನು ಸ್ಥಾಪಿಸಿದನು. ಮುಂದೆ ಲ್ಯಾಟಿನ್ ಭಾಷೆಯಿಂದ ’ಪರ್ಷಿಯಾ’ ಎಂಬ ಪದ ರೂಢಿಗೆ ಬಂದಿತು. ಅವರ ’ಪಾರ್ಸಾ’ (ಪಾರಸಿ) ಜನಾಂಗವು ವಾಸಿಸುತ್ತಿದ್ದ ಪ್ರದೇಶವನ್ನು ಇಂದು ’ಫಾರ್ಸ್’ (ಫಾರಸ) ಅಥವಾ ’ಪಾರ್ಸ್’ (ಪಾರಸ) ಪ್ರಾಂತ್ಯ ಎಂದು ಕರೆಯಲಾಗುತ್ತದೆ. ಭಾರತೀಯ ಸಂಸ್ಕೃತಿಯ ಅಡಿಪಾಯವಾದ ’ಋಗ್ವೇದ’ ಮತ್ತು ಪಾರಸಿ ಸಂಸ್ಕೃತಿಯ ’ಅವೆಸ್ತಾ’ ( Vendidad- ವೆಂದಿದಾದ್) ಗ್ರಂಥಗಳ ನಡುವೆ ಅದ್ಭುತ ಸಾಮ್ಯವಿದೆ. ‘ಅವೆಸ್ತಾ’ದಲ್ಲಿನ ‘ಐರ್ಯಾನಾಮ್’ ಎಂಬುದು ವೈದಿಕ ದೇವ ’ಆರ್ಯಮನ್’ನ ಪ್ರತಿಬಿಂಬವೆಂದೇ ಪರಿಗಣಿಸಲಾಗುತ್ತದೆ. ಎರಡೂ ಕಡೆಗಳಲ್ಲಿ ‘ಆರ್ಯ’ ಪದಕ್ಕೆ ’ಸುಸಂಸ್ಕೃತ’, ‘ಉದಾತ್ತ’, ‘ಕುಲೀನ’ ಅಥವಾ ’ಪ್ರತಿಷ್ಠಿತ’ ಎಂದಾಗುತ್ತದೆ.

ಪಾರಸಿ ಧರ್ಮದ ಪವಿತ್ರ ಗ್ರಂಥ ‘ಅವೆಸ್ತಾ’ದಲ್ಲಿ ಆರ್ಯರ ಮೂಲ ವಾಸಸ್ಥಾನಕ್ಕೆ ಸಂಬಂಧಿಸಿದ ೧೬ ಉತ್ತಮ ಮತ್ತು ಪವಿತ್ರ ಭೂಮಿಗಳ (ದೇಶಗಳ) ಉಲ್ಲೇಖವಿದೆ. ಅದರಲ್ಲಿ ಮೊದಲನೆಯ ಭೂಮಿಯನ್ನು ಪ್ರಾಚೀನ ಇರಾನಿ ಭಾಷೆಯಲ್ಲಿ ’ಆರ್ಯಾನಾಮ್ ವೈಜಹ’ ಎಂದು ಕರೆಯಲಾಗುತ್ತದೆ. ಇದರ ಅರ್ಥ ’ಆರ್ಯರ ಉಗಮಸ್ಥಾನ’ ಅಥವಾ ’ಆರ್ಯರ ಭೂಮಿ’ ಎಂದಾಗುತ್ತದೆ. ಉಳಿದ ೧೫ ಆರ್ಯಭೂಮಿಗಳ ಇಂದಿನ ಭೂಗೋಳವನ್ನು ಗಮನಿಸಿದರೆ ಅದರಲ್ಲಿ ಭಾರತ (ಆರ್ಯಾವರ್ತ), ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾಕ್, ಸಿರಿಯಾ, ಉಜ್ಬೇಕಿಸ್ತಾನ, ತಜಿಕಿಸ್ತಾನ ಮತ್ತು ತುರ್ಕಮೆನಿಸ್ತಾನ ಎಂಬ ಮಧ್ಯ-ದಕ್ಷಿಣ ಏಷ್ಯಾದ ದೇಶಗಳು ಬರುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಸಾಂಸ್ಕೃತಿಕವಾಗಿ ಭಾರತ ಮತ್ತು ಇರಾನ್ ದೇಶಗಳ ಉಗಮಸ್ಥಾನವು ಒಂದೇ ಭೌಗೋಳಿಕ ಪರಿಸರದ ಸುತ್ತ ಸುತ್ತುತ್ತಿರುವುದು ಕಂಡುಬರುತ್ತದೆ.

೨. ರಾಜ ದರಾಯಸ್‌ನ ಐತಿಹಾಸಿಕ ಘೋಷಣಾಪತ್ರ

ಇರಾನ್ನ ’ನಕ್ಷ್-ಎ-ರುಸ್ತಮ್’ನಲ್ಲಿರುವ ಶಿಲಾಶಾಸನದಲ್ಲಿ ರಾಜ ದರಾಯಸ್ ಪ್ರಥಮ ( Darius I) ತನ್ನನ್ನು ಪರಿಚಯಿಸಿಕೊಳ್ಳುವಾಗ ಬಳಸಿರುವ ಶಬ್ದಗಳು ಯಾವುದೇ ಭಾರತೀಯನನ್ನು ಆಶ್ಚರ್ಯಚಕಿತಗೊಳಿಸಬಹುದು. ಅವನು ಹೇಳುತ್ತಾನೆ, ‘ಪಾರ್ಸ್ ಪಾರ್ಸಹ್ಯ ಪುತ್ರ ಅರಿಯ ಅರಿಯಚಿಷ್ಣ’ ಎಂದರೆ ’ನಾನು ದರಾಯಸ್, ಮಹಾನ್ ರಾಜ, ರಾಜಾಧಿರಾಜ… ಒಬ್ಬ ಪಾರ್ಸಿ, ಪಾರ್ಸಿಯ ಮಗ, ಒಬ್ಬ ಆರ್ಯ, ಆರ್ಯರ ವಂಶದವನು.’

ಭಾಷೆಗಳ ನಡುವಿನ ಅದ್ಭುತ ಸಾಮ್ಯ

ಭಾರತದ ಧರ್ಮಭಾಷೆಯಾದ ‘ಸಂಸ್ಕೃತ’ ಮತ್ತು ಪ್ರಾಚೀನ ಇರಾನಿ ಜನರ ಧರ್ಮಭಾಷೆಯಾದ ‘ಅವೆಸ್ತನ್’ ನಡುವೆ ಎಂತಹ ಸಾಮ್ಯತೆಯಿದೆಯೆಂದರೆ, ಕೇವಲ ಕೆಲವು ಧ್ವನಿ ಬದಲಾವಣೆಗಳನ್ನು ( Phonetic shifts) ಮಾಡಿದರೆ ಸಾಕು, ಅರ್ಥವು ಒಂದೇ ಆಗಿರುತ್ತದೆ. ಎಲ್ಲಕ್ಕಿಂತ ಮುಖ್ಯವಾದ ಬದಲಾವಣೆಯೆಂದರೆ, ಸಂಸ್ಕೃತದಲ್ಲಿನ ‘ಸ’ ಅಕ್ಷರದ ಉಚ್ಚಾರಣೆಯು ಅವೆಸ್ತನ್ ಭಾಷೆಯಲ್ಲಿ ‘ಹ’ ಎಂದಾಗುತ್ತದೆ.

ಈ ಶಿಲಾಶಾಸನವು ‘ಆರ್ಯ’ ಎಂಬ ಗುರುತು ಯಾವುದೇ ವಿದೇಶಿ ಪರಿಕಲ್ಪನೆಯಾಗಿರದೆ ಅದು ಇರಾನಿನ ಮಣ್ಣಿನ ಮೂಲ ಗುರುತಾಗಿತ್ತು ಎಂಬುದನ್ನು ಸಾಬೀತುಪಡಿಸುತ್ತದೆ.

– ಶ್ರೀ. ಚೇತನ ರಾಜಹಂಸ

೩. ವ್ಯಾಪಾರದ ಪ್ರಾಚೀನ ಮಾರ್ಗಗಳು

ಭಾರತ ಮತ್ತು ಇರಾನ್ ನಡುವಿನ ವ್ಯಾಪಾರವು ಕೇವಲ ವಸ್ತುಗಳ ವಿನಿಮಯವಾಗಿರದೆ, ಅದು ಸಂಸ್ಕೃತಿಯ ಸೇತುವೆಯಾಗಿತ್ತು.

ಅ. ರೇಷ್ಮೆ ಮಾರ್ಗ ( Silk Road) : ಪ್ರಾಚೀನ ಕಾಲದಿಂದಲೂ ಇರಾನ್ ರೇಷ್ಮೆ ಮಾರ್ಗದ ಪ್ರಮುಖ ಕೇಂದ್ರಬಿಂದುವಾಗಿತ್ತು. ಭಾರತೀಯ ವ್ಯಾಪಾರಿಗಳು ಅಫ್ಘಾನಿಸ್ತಾನದ ಮೂಲಕ ಇರಾನ್‌ಗೆ  ಪ್ರವೇಶಿಸಿ ಅಲ್ಲಿಂದ ಮುಂದೆ ಯುರೋಪ್‌ನ ವರೆಗೆ ಹೋಗುತ್ತಿದ್ದರು.

೩ ಆ. ಸಮುದ್ರ ವ್ಯಾಪಾರ : ಸಿಂಧ್, ಗುಜರಾತ್ ಮತ್ತು ಕೊಂಕಣ ಕರಾವಳಿಯಿಂದ ಪರ್ಷಿಯನ್ ಕೊಲ್ಲಿಯ ‘ಹೋರ್ಮುಜ್’ ( Hormuz ) ಮತ್ತು ’ಸಿರಾಫ್’ ( Siraf) ಬಂದರುಗಳೊಂದಿಗೆ ಭಾರತವು ದೊಡ್ಡ ಪ್ರಮಾಣದ ವ್ಯಾಪಾರವನ್ನು ನಡೆಸುತ್ತಿತ್ತು.

ತೈಲಕ್ಕಿಂತಲೂ ಮಿಗಿಲಾದ ಗಟ್ಟಿಯಾಗಿರುವ ಸಂಬಂಧಕ್ಕೆ ಕೆಲವು ಸಾಕ್ಷ್ಯಗಳು

೧. ಮೌರ್ಯ ಸಾಮ್ರಾಜ್ಯದ ಕಾಲದಲ್ಲಿ (ವಿಶೇಷವಾಗಿ ಸಾಮ್ರಾಟ್ ಚಂದ್ರಗುಪ್ತ ಮತ್ತು ಸಾಮ್ರಾಟ್ ಅಶೋಕನ ಸಮಯದಲ್ಲಿ) ಭಾರತ ಮತ್ತು ಪರ್ಷಿಯಾ ನಡುವಿನ ರಾಜತಾಂತ್ರಿಕ ಸಂಬಂಧಗಳು ಉತ್ತುಂಗದಲ್ಲಿದ್ದವು. ಎರಡೂ ಸಾಮ್ರಾಜ್ಯಗಳು ಪರಸ್ಪರ ರಾಜದರ್ಬಾರುಗಳಿಗೆ ರಾಯಭಾರಿಗಳನ್ನು ಕಳುಹಿಸಿದ್ದವು, ಇದರಿಂದ ಆಡಳಿತಾತ್ಮಕ ಪದ್ಧತಿಗಳ ವಿನಿಮಯವೂ ನಡೆಯುತ್ತಿತ್ತು.

೨. ಕೇವಲ ವ್ಯಾಪಾರ ಮತ್ತು ಭಾಷೆಯಷ್ಟೇ ಅಲ್ಲ,  ಸಂಗೀತದ ಮೇಲೆಯೂ ಆಳವಾದ ಪರಿಣಾಮ ಬೀರಿದೆ. ಸಿತಾರ್ ವಾದ್ಯವನ್ನು ಅಮೀರ್ ಖುಸ್ರೋ ಅವರು ಭಾರತೀಯ ವೀಣೆ ಮತ್ತು ಪರ್ಷಿಯನ್ ತನಬುರಾ (ಪರ್ಷಿಯನ್ ಭಾಷೆಯಲ್ಲಿ ’ತೀನ್ ತಾರಾ’ ಅಂದರೆ ಮೂರು ತಂತಿಗಳು) ಇವುಗಳ ಸಂಯೋಜನೆಯಿಂದ ಅಭಿವೃದ್ಧಿಪಡಿಸಿದರು. ಈ ವಾದ್ಯದ ನಿರ್ಮಾಣದಲ್ಲಿ ಭಾರತೀಯ ಮತ್ತು ಪರ್ಷಿಯನ್ ಸಂಗೀತದ ಮಿಶ್ರಣವನ್ನು ಕಾಣಬಹುದು.

೩. ಭಾರತದ ಪ್ರಾಚೀನ ಗ್ರಂಥಗಳಲ್ಲಿ ‘ಮಗ’ ಅಥವಾ ‘ಶಾಕದ್ವೀಪಿ’ ಬ್ರಾಹ್ಮಣರ ಉಲ್ಲೇಖವಿದೆ. ಐತಿಹಾಸಿಕ ಪುರಾವೆಗಳ ಪ್ರಕಾರ ಇವರು ಮೂಲತಃ ಪರ್ಷಿಯಾದ ‘ಮಗಿ’ ಪುರೋಹಿತರಾಗಿದ್ದರು. ಇವರು ಸೌರ (ಸೂರ್ಯನ) ಉಪಾಸನೆ ಮತ್ತು ‘ಸೌರ ಸಿದ್ಧಾಂತ’ವನ್ನು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿದರು. ಇಂದಿಗೂ ಇರಾನ್‌ನಲ್ಲಿ ಉಗಮಿಸಿದ ಪಾರಸಿ ಧರ್ಮದಲ್ಲಿ ‘ಸೂರ್ಯ’ನಿಗೆ ಸರ್ವೋಚ್ಚ ಸ್ಥಾನವಿದೆ. ಪಾರಸಿ ಜನರು ಸೂರ್ಯನನ್ನು ‘ಮಿಥ್ರ’ (Mithra) ಎಂದು ಕರೆಯುತ್ತಾರೆ. (ಸಂಸ್ಕೃತದಲ್ಲಿಯೂ ಸೂರ್ಯನ ಒಂದು ಹೆಸರು ‘ಮಿತ್ರ’ ಎಂದಿದೆ.)

೪. ಪ್ರಾಚೀನ ಪರ್ಷಿಯನ್ ಖಗೋಳಶಾಸ್ತ್ರದಲ್ಲಿ ಗ್ರಹಗಳ ಸ್ಥಿತಿಯ ಆಧಾರದ ಮೇಲೆ ’ಜಿಜ್’ ( Zij) ಎಂಬ ಕೋಷ್ಟಕವನ್ನು ತಯಾರಿಸಲಾಗುತ್ತಿತ್ತು. ಭಾರತೀಯ ‘ಸಿದ್ಧಾಂತ’ ಗ್ರಂಥಗಳೊಂದಿಗೆ ಇದು ಅಪಾರ ಸಾಮ್ಯತೆಯನ್ನು ಹೊಂದಿತ್ತು.

೫. ಭಾರತೀಯ ಪರಂಪರೆಯಲ್ಲಿ ೨೭ ನಕ್ಷತ್ರಗಳಿಗೆ ಮಹತ್ವವಿದ್ದರೆ, ಪರ್ಷಿಯನ್ ಪರಂಪರೆಯಲ್ಲಿ ರಾಶಿಚಕ್ರಕ್ಕೆ ( Zodiac) ಹೆಚ್ಚಿನ ಮಹತ್ವವಿತ್ತು. ಕಾಲಾಂತರದಲ್ಲಿ ಎರಡೂ ಸಂಸ್ಕೃತಿಗಳು ಪರಸ್ಪರರ ಪದ್ಧತಿಗಳನ್ನು ಅಳವಡಿಸಿಕೊಂಡವು.

೬. ‘ಭೃಗು’ ಅಥವಾ ‘ನಾಡಿ’ ಗ್ರಂಥಗಳಲ್ಲಿ ಕುಂಡಲಿಯ ಸ್ಥಾನಗಳನ್ನು ಹೇಗೆ ವಿಚಾರ ಮಾಡಲಾಗುತ್ತದೆಯೋ, ಅಂತಹದ್ದೇ ಪದ್ಧತಿಯು ಪ್ರಾಚೀನ ಪರ್ಷಿಯನ್ ‘ಅಖ್ತರ್’ ಶಾಸ್ತ್ರದಲ್ಲಿ ಕಂಡುಬರುತ್ತದೆ.‘ಭೃಗು’ ಸಂಹಿತೆಯಲ್ಲಿ ಮತ್ತು ‘ನಾಡಿ’ ಗ್ರಂಥಗಳಲ್ಲಿ ಬಳಸಲಾಗುವ ಅನೇಕ ಚಿಹ್ನೆಗಳು (ಉದಾಹರಣೆಗೆ ಮೀನು, ಸಿಂಹ, ಬಿಲ್ಲು) ಕೇವಲ ಕಲ್ಪಿತವಲ್ಲ, ಅವು ಆಕಾಶದ ನಕ್ಷತ್ರಪುಂಜಗಳ ಭಾರತೀಯ ಸಂರಚನೆಯಾಗಿದೆ. ಪ್ರಾಚೀನ ಪರ್ಷಿಯನ್ ಮತ್ತು ಅವರ ‘ಬಂದೆಹಶ್ನ್’ ( Bundahishn) ಎಂಬ ಗ್ರಂಥದಲ್ಲಿರುವ ನಕ್ಷತ್ರಗಳ ವರ್ಗೀಕರಣವು ಭಾರತೀಯ ನಕ್ಷತ್ರ ಮಂಡಲದೊಂದಿಗೆ ಹೊಂದಿಕೆಯಾಗುತ್ತದೆ.

– ಶ್ರೀ. ಚೇತನ ರಾಜಹಂಸ

೩ ಇ. ಚಾಬಹಾರ್ ಬಂದರು ಅಭಿವೃದ್ಧಿಯ ಮೂಲಕ ಆಧುನಿಕ ‘ರೇಷ್ಮೆ ಮಾರ್ಗ’ದ ನಿರ್ಮಾಣ : ಇಂದಿಗೂ ಭಾರತ ಸರಕಾರವು ಇರಾನ್‌ನ ಚಾಬಹಾರ್ ಬಂದರನ್ನು ಸ್ವಂತ ವೆಚ್ಚದಲ್ಲಿ ‘ವ್ಯಾಪಾರಿ ಬಂದರು’ ಆಗಿ ಅಭಿವೃದ್ಧಿಪಡಿಸುತ್ತಿದೆ. ಇಂದಿನ ಯುಗದಲ್ಲಿ ಚಾಬಹಾರ್ ಬಂದರು ಭಾರತ ಮತ್ತು ಇರಾನ್ ನಡುವಿನ ಪ್ರಾಚೀನ ‘ರೇಷ್ಮೆ ಮಾರ್ಗ’ದ ( Silk Route) ಆಧುನಿಕ ಪುನರುಜ್ಜೀವನವೆಂದು ಸಾಬೀತಾಗಲಿದೆ. ಭೌಗೋಳಿಕ ಅಡೆತಡೆಗಳಿಗೆ ಉತ್ತರವಾಗಿ, ಪಾಕಿಸ್ತಾನವನ್ನು ಹೊರತುಪಡಿಸಿ ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾದ ದೇಶಗಳೊಂದಿಗೆ ನೇರ ವ್ಯಾಪಾರ ಮಾಡಲು ಭಾರತವು ಅಭಿವೃದ್ಧಿಪಡಿಸಿದ ಆಯಕಟ್ಟಿನ ಬಂದರು ಇದಾಗಿದೆ.

ಪ್ರಾಚೀನ ಕಾಲದಲ್ಲಿ ಭಾರತೀಯ ವ್ಯಾಪಾರಿಗಳು ಇರಾನ್ ಮೂಲಕ ಯುರೋಪ್‌ಗೆ ಹೇಗೆ ಪ್ರಯಾಣಿಸುತ್ತಿದ್ದರೋ, ಅದೇ ರೀತಿ ಈ ಮಾರ್ಗವು ಈಗ ‘ಇಂಟರ್ನ್ಯಾಷನಲ್ ನಾರ್ತ್-ಸೌತ್ ಟ್ರಾನ್ಸ್‌ಪೋರ್ಟ್ ಕಾರಿಡಾರ್’ ( INSTC ) ನ ಪ್ರಮುಖ ಕೊಂಡಿಯಾಗಿದೆ. ಈ ಹೊಸ ’ರೇಷ್ಮೆ ಮಾರ್ಗ’ದಿಂದಾಗಿ ರಷ್ಯಾ ಮತ್ತು ಯುರೋಪ್ ತಲುಪುವ ಸಮಯ ಮತ್ತು ವೆಚ್ಚ ಸುಮಾರು ಶೇ. ೪೦ ರಷ್ಟು ಕಡಿಮೆಯಾಗಲಿದೆ. ಈ ಬಂದರು ಕೇವಲ ಇಂಧನ ಅಥವಾ ಸರಕುಗಳ ಸಾಗಣೆಯ ಕೇಂದ್ರವಲ್ಲ, ಬದಲಿಗೆ ಇದು ‘ಆರ್ಯಾವರ್ತ’ ಮತ್ತು ’ಆರ್ಯಾಣ’ ಎಂಬ ಎರಡು ಪ್ರಾಚೀನ ಸಂಸ್ಕೃತಿಗಳನ್ನು ಮತ್ತೆ ಜೋಡಿಸುವ ಪ್ರಬಲ ಆಧುನಿಕ ಸೇತುವೆಯಾಗಿದೆ.

೪. ಭಾರತ-ಇರಾನ್ ನಡುವೆ ‘ಆರ್ಯ’ ಸಂಸ್ಕೃತಿಯ ಸನಾತನ ಸಂಬಂಧ !

ಭಾರತ ಮತ್ತು ಇರಾನ್ ನಡುವಿನ ಈ ಸಂಬಂಧವು ಕೇವಲ ‘ತೈಲ’ಕ್ಕೆ ಸಂಬಂಧಿಸಿದ್ದಲ್ಲ, ಬದಲಿಗೆ ಅದು ‘ನಕ್ಷತ್ರ’ ಮತ್ತು ’ಖಗೋಳ ಗಣಿತ’ ಕ್ಕೂ ಸಂಬಂಧಿಸಿದ್ದಾಗಿತ್ತು. ಸುಮಾರು ಕ್ರಿ.ಶ. ೬೫೧ ರಲ್ಲಿ ಇರಾನ್ ಮೇಲೆ ಅರಬರ ಆಕ್ರಮಣವಾಯಿತು ಮತ್ತು ಅಲ್ಲಿನ ಸಾಮಾಜಿಕ ಸ್ಥಿತಿಗತಿಯಲ್ಲಿ ಬದಲಾವಣೆಗಳಾದವು; ಆದರೆ ಅದಕ್ಕೂ ಮುಂಚಿನ ಸಾವಿರಾರು ವರ್ಷಗಳ ಪರಂಪರೆಯು ಎರಡೂ ದೇಶಗಳನ್ನು ಒಂದೇ ಕೊಂಡಿಯಲ್ಲಿ ಬಂಧಿಸುತ್ತದೆ. ಭಾರತ ಮತ್ತು ಇರಾನ್ ನಡುವಿನ ಇಂದಿನ ಸಂಬಂಧಗಳು ಕೇವಲ ಭೂ-ರಾಜಕೀಯ ಅಥವಾ ‘ತೈಲ ವ್ಯವಹಾರ’ಕ್ಕೆ ಸೀಮಿತವಾಗಿಲ್ಲ. ಈ ಸಂಬಂಧವು ‘ಋಗ್ವೇದ’ದ ಸೂಕ್ತಗಳಿಂದ ಹಿಡಿದು ‘ಅವೆಸ್ತಾ’ದ ಗಾಥೆಗಳ ವರೆಗೆ ಮತ್ತು ‘ಆರ್ಯಾವರ್ತ’ದಿಂದ ‘ಆರ್ಯಾಣ’ದವರೆಗೆ ಹರಡಿರುವ ಒಂದು ಸಾಮುದಾಯಿಕ ಸಾಂಸ್ಕೃತಿಕ ಪರಂಪರೆಯ ಫಲವಾಗಿದೆ. ಕಾಲ ಬದಲಾಯಿತು, ಧರ್ಮ ಬದಲಾಯಿತು ಮತ್ತು ಗಡಿಗಳೂ ಬದಲಾದವು, ಆದರೂ ‘ಆರ್ಯ’ ಎಂಬ ಶಬ್ದದಿಂದ ಹೆಣೆಯಲ್ಪಟ್ಟ ಈ ರೇಷ್ಮೆಯಂತಹ ಬಾಂಧವ್ಯಗಳು ಇಂದಿಗೂ ಅಷ್ಟೇ ಗಟ್ಟಿಯಾಗಿವೆ. ತೈಲವು ಕೇವಲ ಇಂದಿನ ಜಗತ್ತಿನ ಅವಶ್ಯಕತೆಯಾಗಿದೆ; ಆದರೆ ’ಆರ್ಯ’ ಸಂಸ್ಕೃತಿಯ ಸಂಬಂಧವು ಸನಾತನವಾಗಿದೆ. ಇಂದಿನ ಅಸ್ಥಿರತೆಯ ಕಾಲದಲ್ಲಿ ಇರಾನ್ ಭಾರತದ ನೌಕೆಗಳಿಗೆ ನೀಡಿದ ಸುರಕ್ಷಿತ ಮಾರ್ಗವಿರಲಿ ಅಥವಾ ಭಾರತವು ಚಾಬಹಾರ್‌ನಲ್ಲಿ ಮಾಡಿದ ಹೂಡಿಕೆಯಿರಲಿ, ಇವೆಲ್ಲವೂ ‘ತೈಲಕ್ಕಿಂತಲೂ ಗಟ್ಟಿಯಾಗಿರುವ’ ಸನಾತನ ಸಂಬಂಧದ ಆಧುನಿಕ ಪುರಾವೆಗಳಾಗಿವೆ.

– ಶ್ರೀ ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ. (೨೪.೩.೨೦೨೬)