ನ್ಯಾಯಮೂರ್ತಿ ಯಶವಂತ ವರ್ಮಾ ಅವರ ರಾಜೀನಾಮೆ

  • ಮನೆಯಲ್ಲಿ ೫೦೦ ರೂಪಾಯಿಯ ಸುಟ್ಟ ನೋಟುಗಳು ಪತ್ತೆ!

  • ಅಲಹಾಬಾದ್ ಉಚ್ಚ ನ್ಯಾಯಾಲಯವು ನ್ಯಾಯಾಂಗ ಕಾರ್ಯಗಳಿಂದ ದೂರವಿಟ್ಟಿತ್ತು !

ಪ್ರಯಾಗರಾಜ – ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಯಶವಂತ ವರ್ಮಾ ಅವರು ರಾಷ್ಟ್ರಪತಿಗಳಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಮಾರ್ಚ್ ೧೪, ೨೦೨೫ ರಂದು ದೆಹಲಿಯ ಅವರ ಮನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ೫೦೦ ರೂಪಾಯಿ ನೋಟುಗಳ ಕಂತೆಗಳು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಈ ವಿವಾದದ ಕಾರಣದಿಂದಾಗಿ ಅವರನ್ನು ದೆಹಲಿ ಉಚ್ಚ ನ್ಯಾಯಾಲಯದಿಂದ ಅಲಹಾಬಾದ್ ಉಚ್ಚ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು. ವರ್ಮಾ ಅವರ ವಿರುದ್ಧದ ತನಿಖೆ ಪೂರ್ಣಗೊಳ್ಳುವವರೆಗೆ ಅವರನ್ನು ನ್ಯಾಯಾಂಗ ಕಾರ್ಯಗಳಿಂದ ದೂರ ಇಡಲಾಗಿತ್ತು.

ನಗದು ಹಣದ ಪ್ರಕರಣದಲ್ಲಿ ಹೆಸರು ಕೇಳಿಬಂದ ನಂತರ ನ್ಯಾಯಮೂರ್ತಿ ವರ್ಮಾ ಅವರ ವಿರುದ್ಧ ಲೋಕಸಭೆಯಲ್ಲಿ ಮಹಾಭಿಯೋಗ ಪ್ರಸ್ತಾವನೆ ಮಂಡಿಸಲಾಗಿತ್ತು. ನ್ಯಾಯಮೂರ್ತಿ ವರ್ಮಾ ಅವರು ತಮ್ಮ ವಿರುದ್ಧ ಮಂಡಿಸಲಾದ ಈ ಮಹಾಭಿಯೋಗ ಪ್ರಸ್ತಾವನೆಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಜನವರಿ ೬, ೨೦೨೬ ರಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಅರ್ಜಿಯ ವಿಚಾರಣೆ ಆರಂಭವಾಯಿತು. ಎರಡು ದಿನಗಳ ವಿಚಾರಣೆಯ ನಂತರ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ದೀಪಂಕರ ದತ್ತಾ ಮತ್ತು ನ್ಯಾಯಮೂರ್ತಿ ಸತೀಶ ಚಂದ್ರ ಶರ್ಮಾ ಅವರ ಪೀಠವು ಜನವರಿ ೮ ರಂದು ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಅರ್ಜಿಯ ತೀರ್ಪನ್ನು ಕಾಯ್ದಿರಿಸಿತ್ತು. ಆದಾಗ್ಯೂ, ಪೀಠವು ನ್ಯಾಯಮೂರ್ತಿ ವರ್ಮಾ ಅವರಿಗೆ ಸಂಸದೀಯ ಸಮಿತಿಯ ಮುಂದೆ ಉತ್ತರಿಸಲು ನೀಡಿದ್ದ ಕಾಲಾವಕಾಶವನ್ನು ವಿಸ್ತರಿಸಲು ನಿರಾಕರಿಸಿತ್ತು.