​ಭಾರತವು ಯೋಗ್ಯ ದಿಕ್ಕಿನಲ್ಲಿ ಸಾಗುತ್ತಿದೆ!

​‘ಇಪ್ಸೋಸ್ ಇಂಡಿಯಾ’ ಸಂಶೋಧನಾ ಸಂಸ್ಥೆಯ ಸಮೀಕ್ಷೆ: ಶೇಕಡಾ ೬೫% ರಷ್ಟು ಭಾರತೀಯರ ಅಭಿಪ್ರಾಯ

ನವ ದೆಹಲಿ – ‘ಇಪ್ಸೋಸ್ ಇಂಡಿಯಾ’ ಎಂಬ ಸಂಶೋಧನಾ ಸಂಸ್ಥೆಯು ಮಾರ್ಚ್ ೨೦೨೬ ರ ವರದಿಯನ್ನು ಪ್ರಕಟಿಸಿದೆ. ಈ ವರದಿಯ ಶೀರ್ಷಿಕೆ ‘ವಾಟ್ ವರಿಸ್ ದ ವರ್ಲ್ಡ್’; ಅಂದರೆ ‘ ಸಂಪೂರ್ಣ ಜಗತ್ತಿಗೆ ಯಾವುದು ಅತಿ ಹೆಚ್ಚು ಚಿಂತೆ ಉಂಟು ಮಾಡುತ್ತಿದೆ?’ ಎಂಬುದಾಗಿದೆ. ಈ ವರದಿಯ ಪ್ರಕಾರ, ಸಮೀಕ್ಷೆ ನಡೆಸಲಾದ ೨೯ ದೇಶಗಳ ಪೈಕಿ ೨೩ ದೇಶಗಳ ಬಹುಪಾಲು ಜನರು ತಮ್ಮ ಭವಿಷ್ಯದ ಬಗ್ಗೆ ನಕಾರಾತ್ಮಕವಾಗಿ ಯೋಚಿಸುತ್ತಾರೆ; ಆದರೆ ಭಾರತ, ಸಿಂಗಾಪುರ, ಮಲೇಷ್ಯಾ, ದಕ್ಷಿಣ ಕೊರಿಯಾ ಮತ್ತು ಥೈಲ್ಯಾಂಡ್‌ನಂತಹ ದೇಶಗಳು ಈ ಪ್ರವೃತ್ತಿಗಿಂತ ಭಿನ್ನವಾಗಿವೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಭಾರತದಲ್ಲಿನ ಶೇಕಡಾ ೬೫% ರಷ್ಟು ಜನರು ನಮ್ಮ ದೇಶವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಗತ್ತಿನಲ್ಲಿ ಈ ಸರಾಸರಿ ಪ್ರಮಾಣವು ಕೇವಲ ಶೇಕಡಾ ೩೯% ರಷ್ಟಿದೆ.

​ಸಮೀಕ್ಷೆಯಲ್ಲಿ ನಾಗರಿಕರ ದೈನಂದಿನ ಜೀವನದ ಮೇಲೆ ನೇರ ಪರಿಣಾಮ ಬೀರುವ ಪ್ರಮುಖ ರಾಷ್ಟ್ರೀಯ ವಿಷಯಗಳ ಕುರಿತಾದ ಅಭಿಪ್ರಾಯಗಳನ್ನೂ ಸೇರಿಸಲಾಗಿದೆ. ತೈಲ ಮತ್ತು ಅನಿಲ ಪೂರೈಕೆಯ ಮೇಲಿನ ಹೆಚ್ಚುತ್ತಿರುವ ಒತ್ತಡವು ಭವಿಷ್ಯದಲ್ಲಿ ಒಂದು ಸವಾಲಾಗಬಹುದು ಎಂದು ಸಮೀಕ್ಷೆಯಲ್ಲಿ ಅನೇಕ ಜನರು ಒಪ್ಪಿಕೊಂಡಿದ್ದಾರೆ.

ಜಾಗತಿಕ ಮಟ್ಟದಲ್ಲಿ ಅಪರಾಧ, ಹಿಂಸಾಚಾರ ಮತ್ತು ನಿರುದ್ಯೋಗವೇ ಪ್ರಮುಖ ಚಿಂತೆಗಳು

ಜಾಗತಿಕ ಚಿಂತೆಗಳಲ್ಲಿ ಅಪರಾಧ, ಹಿಂಸಾಚಾರ, ನಿರುದ್ಯೋಗ, ಹಣದುಬ್ಬರ, ಬಡತನ ಮತ್ತು ಸಾಮಾಜಿಕ ಅಸಮಾನತೆ, ಆರ್ಥಿಕ ಮತ್ತು ರಾಜಕೀಯ ಭ್ರಷ್ಟಾಚಾರಗಳು ಪ್ರಮುಖವಾಗಿವೆ. ಭಾರತದಲ್ಲೂ ಇಂತಹುದೇ ಚಿಂತೆಗಳು ಕಂಡುಬಂದಿವೆ; ಆದರೆ ಅವುಗಳ ಆದ್ಯತೆಯ ಕ್ರಮವು ಭಿನ್ನವಾಗಿವೆ. ಹಣದುಬ್ಬರ, ನಿರುದ್ಯೋಗ, ಶಿಕ್ಷಣ, ಅಪರಾಧ ಮತ್ತು ಹಿಂಸಾಚಾರದ ಹೊರತಾಗಿ ಆರ್ಥಿಕ ಮತ್ತು ರಾಜಕೀಯ ಭ್ರಷ್ಟಾಚಾರವು ಭಾರತೀಯರ ಅತಿದೊಡ್ಡ ಚಿಂತೆಗಳಾಗಿವೆ.

ಸಕಾರಾತ್ಮಕತೆ ಹೆಚ್ಚಲು ಭಾರತದ ತಟಸ್ಥ ನಿಲುವು ಕಾರಣ

ಭಾರತದ ಜನರ ಸಕಾರಾತ್ಮಕ ಆಲೋಚನೆಗಳ ಹಿಂದೆ ಹಲವು ಕಾರಣಗಳಿವೆ. ಭಾರತದ ತಟಸ್ಥ ಭೂ-ರಾಜಕೀಯ ಸ್ಥಿತಿ ಮತ್ತು ಜಾಗತಿಕ ಇಂಧನ ಬಿಕ್ಕಟ್ಟಿನ ಪ್ರಭಾವವನ್ನು ಕಡಿಮೆ ಮಾಡಲು ಕೈಗೊಂಡ ಸಕ್ರಿಯ ಪ್ರಯತ್ನಗಳಿಂದಾಗಿ ಆರ್ಥಿಕತೆಯು ತುಲನಾತ್ಮಕವಾಗಿ ಸ್ಥಿರವಾಗಿದೆ.

​ಭೂ-ರಾಜಕೀಯ ಉದ್ವಿಗ್ನತೆಯಿಂದಾಗಿ ಜಗತ್ತಿನಲ್ಲಿ ಅತಿ ಹೆಚ್ಚು ಆತಂಕ

ಈ ಎಲ್ಲಾ ಚಿಂತೆಗಳು ಒಂದು ಸಾಮಾನ್ಯ ಜಾಗತಿಕ ಸಮಸ್ಯೆಯತ್ತ ತೋರಿಸುತ್ತವೆ. ಈ ಅಶಾಂತಿಯು ಬಹುಮಟ್ಟಿಗೆ ನಿರಂತರವಾಗಿ ನಡೆಯುತ್ತಿರುವ ಭೂ-ರಾಜಕೀಯ ಉದ್ವಿಗ್ನತೆಗಳಿಂದ ಉಂಟಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಈ ಉದ್ವಿಗ್ನತೆಗಳು ಮತ್ತು ಸಂಘರ್ಷಗಳು ವಿಶ್ವದಾದ್ಯಂತ ಆರ್ಥಿಕತೆಯ ಮೇಲೆ ಪರಿಣಾಮ ಬೀರಿವೆ, ಪೂರೈಕೆ ಸರಪಳಿಗಳ ಮೇಲೆ ಒತ್ತಡ ಹೇರಿವೆ ಮತ್ತು ನಾಗರಿಕರಿಗೆ ಕಷ್ಟದ ಪರಿಸ್ಥಿತಿಯನ್ನು ನಿರ್ಮಿಸಿವೆ ಎಂದು ಈ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ರಾಮಲಿಂಗಮ್ ಅವರು ಹೇಳಿದ್ದಾರೆ.