ಗಂಗಾ ನದಿಯಲ್ಲಿ ದೋಣಿಯ ಮೇಲೆ ಡಿಜೆ ಹಾಕಿ ಯುವಕರಿಂದ ಮದ್ಯದ ಔತಣಕೂಟ : ನಾವಿಕರಲ್ಲಿ ಆಕ್ರೋಶ

ವಾರಾಣಸಿ (ಉತ್ತರ ಪ್ರದೇಶ) – ಇಲ್ಲಿ ಗಂಗಾ ನದಿಯಲ್ಲಿ ದೋಣಿಯ ಮೇಲೆ ಕೆಲವು ಯುವಕರು ಮದ್ಯದ ಔತಣಕೂಟ (ಪಾರ್ಟಿ) ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಹರಿದಾಡುತ್ತಿದೆ. ಈ ವಿಡಿಯೋ ಇಫ್ತಾರ್ ನಂತರದ್ದಾಗಿದ್ದು, ಅದರಲ್ಲಿ ಯುವಕರು ಬಹಿರಂಗವಾಗಿ ಮದ್ಯಪಾನ ಮಾಡುತ್ತಾ ಮತ್ತು ಡಿಜೆ (ದೊಡ್ಡ ಸಂಗೀತ ವ್ಯವಸ್ಥೆ) ತಾಳಕ್ಕೆ ಕುಣಿದು ಸಂಭ್ರಮಿಸುತ್ತಿರುವುದು ಕಂಡುಬರುತ್ತಿದೆ. ಪೊಲೀಸರು ಈ ಪ್ರಕರಣದ ತನಿಖೆ ಆರಂಭಿಸಿದ್ದು, ವಿಡಿಯೋ ಆಧಾರದ ಮೇಲೆ ಸಂಬಂಧಪಟ್ಟವರನ್ನು ಗುರುತಿಸುವ ಪ್ರಯತ್ನ ಮುಂದುವರಿದಿದೆ.

೧. ಆಡಳಿತವು ಗಂಗಾ ನದಿಯಲ್ಲಿ ದೋಣಿಯ ಮೇಲೆ ಡಿಜೆ ನುಡಿಸುವುದು ಮತ್ತು ಯಾವುದೇ ರೀತಿಯ ಔತಣಕೂಟವನ್ನು ಆಯೋಜಿಸುವುದನ್ನು ನಿಷೇಧಿಸಿದೆ. ಆದರೂ ಈ ವಿಡಿಯೋದಲ್ಲಿ ಯುವಕರು ಮದ್ಯಪಾನ ಮಾಡುತ್ತಿರುವುದು ಮತ್ತು ದೊಡ್ಡ ಧ್ವನಿಯಲ್ಲಿ ಸಂಗೀತ ಹಾಕಿ ಸಂಭ್ರಮಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

೨. ಸ್ಥಳೀಯ ನಾಗರಿಕರು ಮತ್ತು ನಾವಿಕರ ಪ್ರಕಾರ, ವಿಡಿಯೋದಲ್ಲಿರುವ ದೋಣಿ ಮತ್ತು ಯುವಕರು ಅಸ್ಸಿ ಘಾಟ್ ಪ್ರದೇಶಕ್ಕೆ ಸೇರಿದವರೆಂದು ಹೇಳಲಾಗುತ್ತಿದೆ. ಅಲ್ಲದೆ ಈ ಯುವಕರು ಬಡೀ ಶೀತಲಾ ಮಾತಾ ಮಂದಿರಕ್ಕೆ ಹೋಗುತ್ತಿದ್ದರು ಮತ್ತು ಅದೇ ಸಮಯದಲ್ಲಿ ಈ ಔತಣಕೂಟವನ್ನು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ನಾವಿಕರಲ್ಲಿ ಆಕ್ರೋಶ

ಈ ಘಟನೆಯಿಂದ ಸ್ಥಳೀಯ ನಾವಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವಿಕರ ಪ್ರಕಾರ, ಗಂಗಾ ನದಿಯು ಅವರ ದೃಷ್ಟಿಯಲ್ಲಿ ಶ್ರದ್ಧೆಯ ಹಾಗೂ ಜೀವನೋಪಾಯದ ಸಾಧನವಾಗಿದೆ. ಇಂತಹ ಕೃತ್ಯಗಳಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಮತ್ತು ಕಾಶಿಯ ಪ್ರತಿಷ್ಠೆಯೂ ಕಡಿಮೆಯಾಗುತ್ತದೆ. ದೋಷಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಆಡಳಿತ ಮತ್ತು ಪೊಲೀಸರನ್ನು ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

ಇಂಥವರಿಗೆ ಕಠಿಣ ಶಿಕ್ಷೆಯಾಗಬೇಕು, ಆಗ ಮಾತ್ರ ಗಂಗಾ ನದಿಯನ್ನು ಅವಮಾನಿಸುವವರಿಗೆ ಭಯ ಬರುತ್ತದೆ!