ಒಪ್ಪಂದ ಮಾಡಿಕೊಳ್ಳದಿದ್ದರೆ ಇರಾನ್ ಅನ್ನು ಶಿಲಾಯುಗಕ್ಕೆ ತಳ್ಳುತ್ತೇವೆ! – ಟ್ರಂಪ್ ಎಚ್ಚರಿಕೆ

೨-೩ ವಾರಗಳಲ್ಲಿ ದೊಡ್ಡ ಮಟ್ಟದ ದಾಳಿ ನಡೆಸುವ ಎಚ್ಚರಿಕೆ

ನವದೆಹಲಿ – ಒಂದು ವೇಳೆ ಒಪ್ಪಂದವಾಗದಿದ್ದರೆ, ಅಮೇರಿಕವು ಇರಾನನ್ನು ಮತ್ತೆ ಶಿಲಾಯುಗಕ್ಕೆ ಕಳುಹಿಸುವುದು ಎಂದು ಅಮೇರಿಕದ ರಾಷ್ಟ್ರಾಧ್ಯಕ್ಷರಾದ ಡೊನಾಲ್ಡ್ ಟ್ರಂಪರವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡುವಾಗ ಎಚ್ಚರಿಕೆ ನೀಡಿದ್ದಾರೆ. ಅಮೇರಿಕವು ಇರಾನ್ ವಿರುದ್ಧದ ಯುದ್ಧವನ್ನು ಗೆದ್ದಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ, ಮುಂಬರುವ ೨-೩ ವಾರಗಳಲ್ಲಿ ಇರಾನ್ ಮೇಲೆ ಬೃಹತ್ ದಾಳಿ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಟ್ರಂಪರವರು ಮುಂದುವರಿದು,

೧. ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್ ಸಾಮರ್ಥ್ಯ, ಹಾಗೆಯೇ ನೌಕಾಪಡೆಯನ್ನು ನಾಶಪಡಿಸಲಾಗಿದೆ. ಅದರ ಸೈನ್ಯಶಕ್ತಿಯು ಗಣನೀಯವಾಗಿ ಕುಗ್ಗಿದೆ. ಅಮೇರಿಕಕ್ಕೆ ಅಪಾಯವನ್ನುಂಟು ಮಾಡುವ ಅಥವಾ ವಿದೇಶಗಳಲ್ಲಿ ಪ್ರಭಾವ ಬೀರುವ ಇರಾನಿನ ಶಕ್ತಿಯನ್ನು ಅಮೇರಿಕವು ವ್ಯವಸ್ಥಿತವಾಗಿ ನಾಶಪಡಿಸುತ್ತಿದೆ. ಈ ಸೈನ್ಯ ಕಾರ್ಯಾಚರಣೆಯ ಮುಖ್ಯ ಉದ್ದೇಶ ಪೂರ್ಣಗೊಳ್ಳುವ ಹಂತದಲ್ಲಿದೆ.

೨. ಇರಾನಿನ ಎಲ್ಲ ಪ್ರಮುಖ ನಾಯಕರನ್ನು ಕೊಲ್ಲಲಾಗಿದೆ ಮತ್ತು ಅಲ್ಲಿ ಅಧಿಕಾರ ಹಸ್ತಾಂತರವಾಗಿದೆ.

೩. ಇರಾನ್ ತನ್ನದೇ ೪೫ ಸಾವಿರ ಜನರನ್ನು ಕೊಂದಿದೆ.

೪. ಇರಾನನ್ನು ಅಣುಶಕ್ತಿಯ ದೇಶವಾಗಲು ಬಿಡುವುದಿಲ್ಲ.

೫. ಹಾರ್ಮುಜ್ ಜಲಸಂಧಿಯ ತೈಲ ಯಾರಿಗೆ ಅಗತ್ಯವಿದೆಯೋ ಅವರು ಅದನ್ನು ರಕ್ಷಿಸಿಕೊಳ್ಳಲಿ, ನಮಗೆ ಅದರ ಅಗತ್ಯವಿಲ್ಲ.

೬. ಸೌದಿ ಅರೇಬಿಯಾ ಮತ್ತು ಬಹ್ರೇನ್ ದೇಶಗಳನ್ನು ಏಕಾಂಗಿಯಾಗಿ ಬಿಡುವುದಿಲ್ಲ, ಎಂದು ಹೇಳಿದರು.

ಯುದ್ಧ, ಚರ್ಚೆ ಮತ್ತು ಕದನ ವಿರಾಮದ ಚಕ್ರದಲ್ಲಿ ಸಿಲುಕುವುದಿಲ್ಲ! – ಇರಾನ್

ಇರಾನಿನ ವಿದೇಶಾಂಗ ಸಚಿವಾಲಯದ ವಕ್ತಾರರಾದ ಇಸ್ಮಾಯಿಲ್ ಬಘಾಯಿಯವರು ಮಾತನಾಡಿ, “ನಾವು ಯುದ್ಧ, ಚರ್ಚೆ ಮತ್ತು ಕದನ ವಿರಾಮದ ಪುನರಾವೃತ್ತಿಯ ಚಕ್ರದಲ್ಲಿ ಸಿಲುಕಿಕೊಳ್ಳುವುದಿಲ್ಲ. ಇನ್ನು ಮುಂದೆ ಇದನ್ನು ಒಪ್ಪಲು ಸಾಧ್ಯವಿಲ್ಲ. ಪ್ರಸ್ತುತ ಸಂಘರ್ಷವು ಕೇವಲ ಇರಾನ್‌ಗೆ ಮಾತ್ರವಲ್ಲದೆ ಇಡೀ ಪ್ರದೇಶಕ್ಕೆ ವಿನಾಶಕಾರಿಯಾಗಿದೆ. ಅಮೇರಿಕ ಮತ್ತು ಇಸ್ರೇಲ್ ದಾಳಿಗಳನ್ನು ಮುಂದುವರಿಸುತ್ತಿರುವ ವರೆಗೆ ಇರಾನ್ ತಿರುಗೇಟು ನೀಡುತ್ತಲೇ ಇರುತ್ತದೆ. ಇರಾನ್ ನೆರೆಹೊರೆಯ ದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುತ್ತದೆ; ಆದರೆ ಅಮೇರಿಕ ಮತ್ತು ಇಸ್ರೇಲ್, ಇರಾನಿನ ಮೇಲೆ ದಾಳಿ ಮಾಡಲು ಈ ದೇಶಗಳ ಭೂಪ್ರದೇಶವನ್ನು ಬಳಸಿಕೊಳ್ಳುತ್ತಿವೆ,” ಎಂದು ಹೇಳಿದ್ದಾರೆ.

ಬಹ್ರೇನನಲ್ಲಿರುವ ಅಮೇಜಾನ್ ಕಾರ್ಯಾಲಯದ ಮೇಲೆ ಇರಾನಿನ ದಾಳಿ

ಬಹ್ರೇನನಲ್ಲಿರುವ ಅಮೇರಿಕದ ಸಂಸ್ಥೆಯಾದ ‘ಅಮೇಜಾನ್ ವೆಬ್ ಸರ್ವಿಸಸ್’ನ ‘ಡೇಟಾ ಸೆಂಟರ್’ ಮೇಲೆ ಇರಾನ್ ದಾಳಿ ಮಾಡಿದೆ. ಇದರಿಂದಾಗಿ ಅಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಗಲ್ಫ್ ರಾಷ್ಟ್ರಗಳಲ್ಲಿರುವ ೧೮ ಅಮೇರಿಕದ ಸಂಸ್ಥೆಗಳನ್ನು ಗುರಿಯಾಗಿಸುವುದಾಗಿ ಇರಾನಿನ ‘ರೆವಲ್ಯೂಷನರಿ ಗಾರ್ಡ್ಸ್’ ಬೆದರಿಕೆ ಹಾಕಿದ ಮರುದಿನವೇ ಈ ದಾಳಿ ನಡೆದಿದೆ. ಈ ೧೮ ಸಂಸ್ಥೆಗಳಲ್ಲಿ ಮೈಕ್ರೋಸಾಫ್ಟ್, ಆಪಲ್, ಗೂಗಲ್ ಮತ್ತು ಮೆಟಾ ಕೂಡ ಸೇರಿವೆ.

…ಅಲ್ಲಿಯವರೆಗೆ ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಕೆಯನ್ನು ನಿಲ್ಲಿಸುತ್ತೇವೆ! – ಯುರೋಪಿಯನ್ ದೇಶಗಳಿಗೆ ಟ್ರಂಪ್ ಎಚ್ಚರಿಕೆ

ಹಾರ್ಮುಜ್ ಜಲಸಂಧಿಯನ್ನು ಮರುತೆರೆಯಲು ಯುರೋಪಿಯನ್ ಮಿತ್ರ ರಾಷ್ಟ್ರಗಳು ಸಹಾಯ ಮಾಡದ ಹೊರತು ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಕೆಯನ್ನು ನಿಲ್ಲಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ. ತದನಂತರ, ನ್ಯಾಟೋದ (NATO) ‘ಪ್ರಯಾರಿಟೈಸ್ಡ್ ಉಕ್ರೇನ್ ರಿಕ್ವೈರ್ಮೆಂಟ್ಸ್ ಲಿಸ್ಟ್’ (Prioritized Ukraine Requirements List) ಉಪಕ್ರಮಕ್ಕೆ ಮಿಲಿಟರಿ ಸಾಮಗ್ರಿಗಳ ಪೂರೈಕೆಯನ್ನು ನಿಲ್ಲಿಸುವುದಾಗಿಯೂ ಟ್ರಂಪ್ ಬೆದರಿಕೆ ಹಾಕಿದರು. ಈ ಉಪಕ್ರಮದ ಮೂಲಕ ಉಕ್ರೇನ್‌ಗಾಗಿ ಶಸ್ತ್ರಾಸ್ತ್ರಗಳನ್ನು ಖರೀದಿಸಲಾಗುತ್ತದೆ ಮತ್ತು ಇದಕ್ಕೆ ಯುರೋಪಿಯನ್ ದೇಶಗಳಿಂದ ಹಣವನ್ನು ಒದಗಿಸಲಾಗುತ್ತದೆ.

ಇರಾನನಲ್ಲಿ ಸೇನೆಯನ್ನು ಇಳಿಸಿದರೆ ಯಾರೂ ಜೀವಂತವಾಗಿ ಹಿಂತಿರುಗುವುದಿಲ್ಲ! – ಅಮೇರಿಕಕ್ಕೆ ಇರಾನ್ ತಿರುಗೇಟು

ಇರಾನಿನಲ್ಲಿ ಸೇನೆಯನ್ನು ನಿಯೋಜಿಸುವುದಾಗಿ ಟ್ರಂಪ್ ಹೇಳಿದ ನಂತರ ಇರಾನ್ ಇದಕ್ಕೆ ಪ್ರತ್ಯುತ್ತರ ನೀಡಿದೆ. ಇರಾನಿನ ಸೇನಾ ಮುಖ್ಯಸ್ಥರಾದ ಮೇಜರ್ ಜನರಲ್ ಅಮೀರ್ ಹತಾಮಿಯವರು ಮಾತನಾಡಿ, ಶತ್ರುವು ಭೂಮಾರ್ಗದ ಮೂಲಕ ದಾಳಿ ಮಾಡಿದರೆ, ಒಬ್ಬ ವ್ಯಕ್ತಿಯೂ ಜೀವಂತವಾಗಿ ಹಿಂತಿರುಗುವುದಿಲ್ಲ. ನಮ್ಮ ನಿಗದಿತ ಗುರಿಗಳನ್ನು ನಾವು ಸಾಧಿಸುವವರೆಗೆ ಶತ್ರುಗಳನ್ನು ಬೆನ್ನಟ್ಟುವುದನ್ನು ನಾವು ನಿಲ್ಲಿಸುವುದಿಲ್ಲ, ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಏಪ್ರಿಲ್ ತಿಂಗಳಿನಲ್ಲಿ ಮೂರನೇ ಮಹಾಯುದ್ಧ ನಡೆಯುವ ಹಾಗೂ ಅಣುಬಾಂಬ್ ಸ್ಫೋಟಿಸುವ ಸಾಧ್ಯತೆಯಿದೆ ಎಂದು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ. ಇದನ್ನು ಗಮನಿಸಿದರೆ, ಟ್ರಂಪರವರ ಹೇಳಿಕೆಯು ಅದೇ ಪರಿಸ್ಥಿತಿಯತ್ತ ಕೊಂಡೊಯ್ಯುತ್ತಿದೆಯೇ ? ಎಂಬ ಪ್ರಶ್ನೆ ಮೂಡುತ್ತಿದೆ !