ಇಸ್ರೇಲ್ ವಿರುದ್ಧ ಮಾತನಾಡಿದರೂ ಸಹ, ಅಲ್ಲಿಯವರೆಗೆ ತಲುಪುವಂತಹ ಕ್ಷಿಪಣಿಗಳನ್ನು ಹೊಂದಲು ಪಾಕಿಸ್ತಾನ ಸರಕಾರ ಮತ್ತು ಸೇನೆಗೆ ಆಸಕ್ತಿಯಿಲ್ಲ! – Pakistan Missile Range – Hamid Mir

ಪಾಕಿಸ್ತಾನದ ಕ್ಷಿಪಣಿಗಳ ಸಾಮರ್ಥ್ಯ ಇಸ್ರೇಲ್ ತಲುಪುವುದಿಲ್ಲ ಎಂದು ಪಾಕ್ ಪತ್ರಕರ್ತನ ಮಾಹಿತಿ

ಇಸ್ಲಾಮಾಬಾದ್ (ಪಾಕಿಸ್ತಾನ) – ಅಂದಿನ ರಾಷ್ಟ್ರಪತಿ ಪರ್ವೇಜ್ ಮುಷರ್ರಫ್ ಅವರಿಗೆ ವಿಜ್ಞಾನಿಗಳು ಇಸ್ರೇಲ್ ವರೆಗೆ ತಲುಪುವ ಸಾಮರ್ಥ್ಯದ ಅಣ್ವಸ್ತ್ರವಾಹಕ ಕ್ಷಿಪಣಿ ಸಿದ್ಧಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದಾಗ, ಅವರು ಹಾಗೆ ಮಾಡದಂತೆ ತಡೆದಿದ್ದರು. ಪಾಕಿಸ್ತಾನದಲ್ಲಿ ಇಂದಿಗೂ ಉನ್ನತ ಮಟ್ಟದಲ್ಲಿ ಇಂತಹ ಅನೇಕ ಜನರಿದ್ದಾರೆ, ಅವರು ಪಾಕಿಸ್ತಾನಿ ಕ್ಷಿಪಣಿಗಳ ಮಿತಿಯನ್ನು ಇಸ್ರೇಲ್ ವರೆಗೆ ತಲುಪಲು ಬಿಡುವುದರ ವಿರುದ್ಧವಾಗಿದ್ದಾರೆ ಎಂದು ಪಾಕಿಸ್ತಾನದ ಪತ್ರಕರ್ತ ಹಮೀದ್ ಮೀರ್ ದಾವೆ ಮಾಡಿದ್ದಾರೆ. ಪಾಕಿಸ್ತಾನದ ಕ್ಷಿಪಣಿ ಕಾರ್ಯಕ್ರಮದ ಮೇಲೆ ಅಮೆರಿಕ ಕೂಡ ಸೂಕ್ಷ್ಮವಾಗಿ ನಿಗಾ ಇಟ್ಟಿದೆ ಮತ್ತು ಪಾಕಿಸ್ತಾನಕ್ಕೆ ಇಸ್ರೇಲ್ ಗೆ ಅಪಾಯವಾಗುವಂತಹ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಬಿಡುವುದಿಲ್ಲ.

ಸಾಮರ್ಥ್ಯ ಹೆಚ್ಚಿಸುವುದಕ್ಕೆ ಮುಷರ್ರಫ್ ವಿರೋಧಿಸಿದ್ದರು!

‘ಘೋರಿ’ ಕ್ಷಿಪಣಿಯ ಗುರಿಯನ್ನು ಇಸ್ರೇಲ್ ನ ದಿಕ್ಕಿಗೆ ತಿರುಗಿಸಲು ಡಾ. ಅಬ್ದುಲ್ ಕಾದಿರ್ ಖಾನ್ ಪ್ರಯತ್ನಿಸಿದ್ದರು ಎಂದು ಹಮೀದ್ ಮೀರ್ ತಿಳಿಸಿದ್ದಾರೆ. ಮುಷರ್ರಫ್ ಅವರೊಂದಿಗಿನ ಭಿನ್ನಾಭಿಪ್ರಾಯದ ಬಗ್ಗೆ ಕೇಳಿದಾಗ ಸ್ವತಃ ಡಾ. ಖಾನ್ ಅವರೇ ಈ ಮಾಹಿತಿಯನ್ನು ನೀಡಿದ್ದರು. ಆ ಸಮಯದಲ್ಲಿ ಡಾ. ಖಾನ್ ಅವರು, ತಾವು ‘ಘೋರಿ’ ಕ್ಷಿಪಣಿಯ ಸಾಮರ್ಥ್ಯವನ್ನು ೫ ಸಾವಿರ ಕಿಲೋಮೀಟರ್ ವರೆಗೆ ಹೆಚ್ಚಿಸಲು ಪ್ರಯತ್ನ ಆರಂಭಿಸಿ ಆ ಯೋಜನೆಗೆ ನಿಧಿ ಕೇಳಿದಾಗ, ಮುಷರ್ರಫ್ ಅವರು, ‘ನೀವು ಇಸ್ರೇಲ್ ಅನ್ನು ಗುರಿಯಾಗಿಸಲು ಬಯಸುತ್ತೀರಾ? ನಮ್ಮ ಮುಖ್ಯ ಶತ್ರು ಭಾರತವಾಗಿದೆ, ಆದ್ದರಿಂದ ೧ ಸಾವಿರದ ೫೦೦ ಅಥವಾ ಗರಿಷ್ಠ ೨ ಸಾವಿರ ಕಿಲೋಮೀಟರ್ ಗಿಂತ ಹೆಚ್ಚಿನ ಸಾಮರ್ಥ್ಯದ ಅಗತ್ಯವಿಲ್ಲ’ ಎಂದು ಹೇಳಿದ್ದರು ಎಂದು ತಿಳಿಸಿದರು. ಹಮೀದ್ ಮೀರ್ ಮುಂದುವರಿಸುತ್ತಾ, ಪಾಕಿಸ್ತಾನದಲ್ಲಿ ಇಂದಿಗೂ ಅಂತಹ ಜನರಿದ್ದಾರೆ, ಅವರು ಮೇಲ್ನೋಟಕ್ಕೆ ಇಸ್ರೇಲ್ ನ ದಾಳಿಗಳನ್ನು ಟೀಕಿಸುತ್ತಾರೆ; ಆದರೆ ಅವರ ಮನಸ್ಸಿನಲ್ಲಿ ಬೇರೆಯೇ ನಿಲುವು ಇದೆ ಎಂದು ಹೇಳಿದರು.

ಪಾಕಿಸ್ತಾನಿ ಕ್ಷಿಪಣಿಗಳ ಸಾಮರ್ಥ್ಯ

ಪಾಕಿಸ್ತಾನದ ಬಳಿ ‘ಘೋರಿ’ ಹೆಸರಿನ ಪರಮಾಣು ಶಸ್ತ್ರಾಸ್ತ್ರವಾಹಕ ಬ್ಯಾಲಿಸ್ಟಿಕ್ ಕ್ಷಿಪಣಿಯಿದೆ. ಇದು ದ್ರವರೂಪದ ಇಂಧನದಿಂದ ಚಲಿಸುವ ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ. ಇದರ ಸಾಮರ್ಥ್ಯ ೧ ಸಾವಿರದ ೩೦೦ ರಿಂದ ೧ ಸಾವಿರದ ೫೦೦ ಕಿಲೋಮೀಟರ್‌ಗಳಷ್ಟಿದೆ. ‘ಘೋರಿ-೨’ರ ಸಾಮರ್ಥ್ಯವನ್ನು ಹೆಚ್ಚಿಸಿ ೧ ಸಾವಿರದ ೮೦೦ ರಿಂದ ೨ ಸಾವಿರ ಕಿಲೋಮೀಟರ್‌ವರೆಗೆ ಮಾಡಲಾಗಿದೆ. ಪಾಕಿಸ್ತಾನದಿಂದ ಇಸ್ರೇಲ್ ಗೆ ಇರುವ ದೂರವು ೩ ಸಾವಿರ ಕಿಲೋಮೀಟರ್‌ಗಿಂತ ಹೆಚ್ಚಿದೆ. ಕರಾಚಿಯಿಂದ ಇಸ್ರೇಲ್ ನ ರಾಜಧಾನಿ ಟೆಲ್ ಅವಿವ್ ಗೆ ಇರುವ ದೂರವು ೩ ಸಾವಿರದ ೨೩೯ ಕಿಲೋಮೀಟರ್ ಆಗಿದೆ. ಇಸ್ಲಾಮಾಬಾದ್‌ನಿಂದ ಜೆರುಸಲೆಮ್ ಗೆ ಇರುವ ದೂರವು ೩ ಸಾವಿರದ ೬೧೧ ಕಿಲೋಮೀಟರ್ ಆಗಿದೆ. ಹಾಗೆಯೇ ಲಾಹೋರ್ ನಿಂದ ಟೆಲ್ ಅವಿವ್ ಗೆ ಇರುವ ದೂರವು ೩ ಸಾವಿರದ ೭೨೭ ಕಿಲೋಮೀಟರ್ ಆಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರವಾಹಕ ಕ್ಷಿಪಣಿಗಳಾದ ‘ಘೋರಿ’ ಮುಂತಾದವುಗಳ ಗರಿಷ್ಠ ಸಾಮರ್ಥ್ಯವು ಕೇವಲ ೨ ಸಾವಿರ ಕಿಲೋಮೀಟರ್ ವರೆಗೆ ಮಾತ್ರ ಇದೆ.

ಪಾಕಿಸ್ತಾನದ ಅತಿ ದೂರದ ವ್ಯಾಪ್ತಿಯ ‘ಶಾಹೀನ್-೩’ ಕ್ಷಿಪಣಿಯು ೨ ಸಾವಿರದ ೭೫೦ ಕಿಲೋಮೀಟರ್‌ವರೆಗೆ ದಾಳಿ ಮಾಡಬಲ್ಲದು. ಅಂದರೆ ಇದನ್ನು ಪಾಕಿಸ್ತಾನದ ಪಶ್ಚಿಮ ಭಾಗದಿಂದ, ಉದಾಹರಣೆಗೆ ಬಲೂಚಿಸ್ತಾನದಿಂದ ಉಡಾಯಿಸಿದರೆ, ಸ್ವಲ್ಪ ಮಟ್ಟಿಗೆ ಇಸ್ರೇಲ್ ವರೆಗೆ ತಲುಪುವ ಸಾಧ್ಯತೆಯಿದೆ. ‘ಶಾಹೀನ್-೨’ರ ಗರಿಷ್ಠ ಸಾಮರ್ಥ್ಯವು ೨ ಸಾವಿರದ ೫೦೦ ಕಿಲೋಮೀಟರ್ ಆಗಿದ್ದು, ಅದು ಇಸ್ರೇಲ್ ವರೆಗೆ ತಲುಪಲು ಸಾಧ್ಯವಿಲ್ಲ.