‘ನಮ್ಮ ಮನಸ್ಸಿನತ್ತ ನೋಡುವ ದೃಷ್ಟಿಕೋನವು ಹೇಗಿರಬೇಕು ?’, ಎಂಬುದರ ಬಗ್ಗೆ ಜ್ಞಾನಯೋಗಿ ಪೂ. ಅನಂತ ಆಠವಲೆ ಇವರ ಅಮೂಲ್ಯ ಮಾರ್ಗದರ್ಶನ !

ಸನಾತನದ ಸಾಧಕಿ ಆಧುನಿಕ ವೈದ್ಯೆ (ಸೌ.) ಮಧುವಂತಿ ಪಿಂಗಳೆ ಇವರು ಸನಾತನದ ೧೦೧ ನೇ ಸಂತರಾದ ಜ್ಞಾನಯೋಗಿ ಪೂ. ಅನಂತ ಆಠವಲೆ (ಪೂ. ಭಾವುಕಾಕಾ, ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಹಿರಿಯ ಸಹೋದರ, ವಯಸ್ಸು ೯೦ ವರ್ಷ) ಇವರಿಗೆ ಜಿಜ್ಞಾಸೆಯಿಂದ ಒಂದು ಪ್ರಶ್ನೆಯನ್ನು ಕೇಳಿದರು. ಅವರ ಆ ಪ್ರಶ್ನೆಗಳಿಗೆ ಪೂ. ಅನಂತ ಆಠವಲೆಯವರು ನೀಡಿದ ಉತ್ತರಗಳನ್ನು ಕಳೆದ ವಾರ ನೋಡಿದೆವು ಇಂದು ಅದರ ಅಂತಿಮ ಭಾಗ ನೋಡೋಣ.

ಪೂ. ಅನಂತ ಆಠವಲೆ

೪. ಪುಣ್ಯ ಮತ್ತು ಪಾಪವು ಕರ್ಮಗಳ ಮೇಲೆ ಅವಲಂಬಿಸಿವೆ, ವಿಚಾರಗಳ ಮೇಲಲ್ಲ

ಪುನರ್ಜನ್ಮವನ್ನು ತಪ್ಪಿಸಿ ಈಶ್ವರನಲ್ಲಿ ವಿಲೀನವಾಗುವುದೇ ನಮ್ಮ ಧ್ಯೇಯವಾಗಿದೆ. ನಮ್ಮ ಕರ್ಮಗಳಿಂದ ಪುಣ್ಯ ಅಥವಾ ಪಾಪ ತಗಲುತ್ತದೆ ಮತ್ತು ಅದರ ಫಲಗಳನ್ನು ಭೋಗಿಸಬೇಕಾಗುತ್ತದೆ. ಉಳಿದ ಪುಣ್ಯ ಮತ್ತು ಪಾಪಗಳಿಂದ ಪುನರ್ಜನ್ಮ ಪಡೆಯಬೇಕಾಗುತ್ತದೆ. ಈ ಪುಣ್ಯ-ಪಾಪವನ್ನು ತಡೆಗಟ್ಟಿದರೆ ಮನಸ್ಸಿನಲ್ಲಿ ಎಂತಹ ವಿಚಾರಗಳು ಬಂದರೂ ಪುನರ್ಜನ್ಮ ಆಗುವುದೇ ಇಲ್ಲ, ಆದ್ದರಿಂದ ಪುಣ್ಯ-ಪಾಪವನ್ನು ಹೇಗೆ ತಡೆಗಟ್ಟಬೇಕು ಎಂಬುದನ್ನು ಸಂಕ್ಷಿಪ್ತವಾಗಿ ನೋಡೋಣ.

೪ ಅ. ಮನಸ್ಸಿನಲ್ಲಿ ಬರುವ ಒಳ್ಳೆಯ-ಕೆಟ್ಟ ವಿಚಾರಗಳಂತೆ ಕೃತಿ ಮಾಡಿದರೆ ಮಾತ್ರ ಅದರ ಪುಣ್ಯ ಅಥವಾ ಪಾಪ ತಗಲುತ್ತದೆ ! : ಮನಸ್ಸಿನಲ್ಲಿ ಕೇವಲ ಕೆಟ್ಟ ವಿಚಾರಗಳು ಬಂದರೆ ಅದರಿಂದ ಪಾಪ ತಗಲುವುದಿಲ್ಲ. ಆದ್ದರಿಂದ ಅದರ ಬಗ್ಗೆ ಚಿಂತೆ ಮಾಡುವ ಅವಶ್ಯಕತೆಯಿಲ್ಲ. ಇದು ತಕ್ಷಣ ಒಪ್ಪಿಕೊಳ್ಳಲು ಕಷ್ಟವಾಗಬಹುದು, ಆದ್ದರಿಂದ ಇದನ್ನು ಇನ್ನೊಂದು ದೃಷ್ಟಿಕೋನದಿಂದ ನೋಡೋಣ. ಯಾರದ್ದೋ ಮೇಲೆ ದಯೆ ಬಂದು ‘ಅವರಿಗೆ ದಾನ ನೀಡೋಣ’ ಎಂಬ ವಿಚಾರ ನಮ್ಮ ಮನಸ್ಸಿನಲ್ಲಿ ಬಂತು ಎಂದು ಇಟ್ಟುಕೊಳ್ಳಿ, ಆದರೆ ನಾವು ಪ್ರತ್ಯಕ್ಷವಾಗಿ ದಾನ ನೀಡದಿದ್ದರೆ ದಾನದ ಪುಣ್ಯ ನಮಗೆ ಸಿಗುತ್ತದೆಯೇ ? ಇಲ್ಲ. ಏಕೆಂದರೆ ನಮ್ಮ ಮನಸ್ಸಿನಲ್ಲಿ ಪರೋಪಕಾರದ ವಿಚಾರ ಮಾತ್ರ ಬಂದಿದೆ, ನಮ್ಮಿಂದ ಪರೋಪಕಾರ ಅಂದರೆ ಅಂತಹ ಕೃತಿ ನಡೆದಿಲ್ಲ. ಹಾಗೆಯೇ, ಮನಸ್ಸಿನಲ್ಲಿ ಕೇವಲ ಕೆಟ್ಟ ವಿಚಾರ ಬಂದ ತಕ್ಷಣ ಅದರ ಪಾಪವೇಕೆ ತಟ್ಟಬೇಕು ? ತಟ್ಟುವುದಿಲ್ಲ ! ಏಕೆಂದರೆ ಅದು ಕೇವಲ ವಿಚಾರವಾಗಿತ್ತು, ಆದರೆ ಅಂತಹ ಕೃತಿಯನ್ನು ನಾವು ಮಾಡಿಲ್ಲ. ಶಾಸ್ತ್ರಗಳಲ್ಲಿ ‘ಕರ್ಮಫಲ’ವನ್ನು ಹೇಳಲಾಗಿದೆಯೇ ಹೊರತು, ‘ವಿಚಾರಫಲ’ವನ್ನಲ್ಲ. ಆದ್ದರಿಂದ ಪಾಪದ ಕೆಲಸಗಳನ್ನು ಮಾಡಬಾರದು, ಆದ್ದರಿಂದ ಮನಸ್ಸಿನ ವಿಚಾರಗಳ ಬಗ್ಗೆ ಚಿಂತಿಸುವ ಅವಶ್ಯಕತೆಯಿಲ್ಲ. ಈಗ ಮನಸ್ಸಿನಲ್ಲಿ ಬರುವ ಅನಿಷ್ಟ ವಿಚಾರಗಳು, ಕೆಟ್ಟ ನೆನಪುಗಳು ಮತ್ತು ಅನಗತ್ಯ ವಿಚಾರಗಳ ಪ್ರಾಮುಖ್ಯತೆ ಎಷ್ಟು ಎಂಬುದು ಸ್ಪಷ್ಟವಾಗಿರಬಹುದು.

ಆಧುನಿಕ ವೈದ್ಯೆ (ಸೌ.) ಮಧುವಂತಿ ಪಿಂಗಳೆ

೪ ಅ ೧. ಪಾಪ : ಕೆಟ್ಟ ಕರ್ಮಗಳನ್ನು ಮಾಡಿದರೆ, ಪಾಪ ತಗಲುತ್ತದೆ. ಪಾಪವು ಯಾವ ರೀತಿಯ ಕರ್ಮದಿಂದ ತಗಲುತ್ತದೆ, ಎಂಬುದನ್ನು ಸಂಕ್ಷಿಪ್ತವಾಗಿ ನೋಡೋಣ.

೧. ‘ಆತ್ಮನ : ಪ್ರತಿಕೂಲಾನಿ ಪರೇಷಾಣ ನ ಸಮಾಚರೇತ್‌ |’

ಅಂದರೆ ಇತರರು ನಮ್ಮೊಂದಿಗೆ ಹೇಗೆ ವರ್ತಿಸುವುದು ನಮಗೆ ಇಷ್ಟವಾಗುವುದಿಲ್ಲವೋ, ಹಾಗೆಯೇ ನಾವು ಕೂಡ ಇತರರೊಂದಿಗೆ ಹಾಗೆ ವರ್ತಿಸಬಾರದು.

೨. ‘ಅಷ್ಟದಶಪುರಾಣೆಷು ವ್ಯಸಸ್ಯ ವಚನದ್ದಯಮ್‌ |
ಪರೋಪಕಾರ : ಪುಣ್ಯಾಯ ಪಾಪಾಯ ಪರಪೀಡನಮ್‌ ||’

ಅಂದರೆ ವ್ಯಾಸರು ಹದಿನೆಂಟು ಪುರಾಣಗಳಲ್ಲಿ ಹೇಳಿದುದರ ಸಾರಾಂಶವನ್ನು ಎರಡೇ ಶಬ್ದಗಳಲ್ಲಿ (ಪರೋಪಕಾರ-ಪುಣ್ಯ, ಪರಪೀಡನೆ-ಪಾಪ) ಹೇಳಬಹುದು. ಇತರರಿಗೆ ಉಪಕಾರ ಮಾಡುವುದು ಪುಣ್ಯ, ಇತರರಿಗೆ ತೊಂದರೆ ಕೊಡುವುದು ಪಾಪ. (ಇದು ಕೇವಲ ಮೇಲ್ನೋಟಕ್ಕೆ ಹೇಳಲಾಗಿದೆ. ಕರ್ಮ ಮತ್ತು ಪುಣ್ಯ-ಪಾಪದ ವಿಷಯವು ತುಂಬಾ ಆಳವಾಗಿದೆ. ಗೀತೆಯಲ್ಲಿ ನಾಲ್ಕನೇ ಅಧ್ಯಾಯದಲ್ಲಿ ಹದಿನೇಳನೇ ಶ್ಲೋಕದಲ್ಲಿ ಭಗವಾನ ಶ್ರೀಕೃಷ್ಣನು ಹೇಳಿದ್ದಾನೆ – ‘ಗಹನಾ ಕರ್ಮಣೋ ಗತಿಃ’ ಅರ್ಥ – ಕರ್ಮದ ವೇಗವು ತುಂಬಾ ನಿಗೂಢವಾಗಿದೆ.)

೪ ಅ ೨. ಪುಣ್ಯ : ಪುಣ್ಯವು ಸತ್ಕರ್ಮವಾಗಿದೆ, ಆದರೆ ಅದು ಸಹ ಬಂಧನಕಾರಿ ಮತ್ತು ಪುನರ್ಜನ್ಮಕ್ಕೆ ಕಾರಣವಾಗುತ್ತದೆ. ಒಳ್ಳೆಯ ಕೆಲಸದಲ್ಲಿ ಕರ್ತೃತ್ವದ ಭಾವನೆ ಇದ್ದರೆ, ಪುಣ್ಯವು ಲಭಿಸುತ್ತದೆ. ‘ನಾನು ಮಾಡಿದೆ’ ಎಂಬ ಭಾವನೆಯೇ ಇಲ್ಲದಿದ್ದರೆ, ಪುಣ್ಯವೂ ಅಂಟುವುದಿಲ್ಲ. ಸತ್ಕರ್ಮವನ್ನು ಸಹ ಫಲದ ಆಸೆಯಿಲ್ಲದೆ ನಿಷ್ಕಾಮವಾಗಿ ಮಾಡಬೇಕು. ಪುಣ್ಯಕರ್ಮವನ್ನು ಮಾಡುವುದು ಒಳ್ಳೆಯದೇ, ಆದರೆ ಅದರ ಕರ್ತೃತ್ವವನ್ನು ನಾವು ತೆಗೆದುಕೊಳ್ಳಬಾರದು. ಇಲ್ಲದಿದ್ದರೆ ಆ ಪುಣ್ಯವು ನಮಗೆ ಅಂಟಿಕೊಂಡು ನಮ್ಮ ಸಂಚಿತಕರ್ಮದಲ್ಲಿ ಸೇರುತ್ತದೆ ಮತ್ತು ಪುನರ್ಜನ್ಮಕ್ಕೆ ಕಾರಣವಾಗುತ್ತದೆ. ಮಾಡಿದ ಕರ್ಮದ ಅಥವಾ ಕರ್ತೃತ್ವದ ಅಭಿಮಾನ ಉಂಟಾಗಬಾರದೆಂದು ಭಗವಾನ್‌ ಶ್ರೀಕೃಷ್ಣನ ಬೋಧನೆಯನ್ನು ನೆನಪಿಟ್ಟುಕೊಳ್ಳಬೇಕು. ಯಾವುದೇ ಒಂದು ಕರ್ಮವು ನಡೆಯಬೇಕಾದರೆ ಅದಕ್ಕೆ ಈ ಕೆಳಗಿನ ಐದು ಕಾರಣಗಳಿರುತ್ತವೆ ಎಂದು ಅವರು ಹೇಳುತ್ತಾರೆ.

ಅಧಿಷ್ಠಾನಂ ತಥಾ ಕರ್ತಾ ಕರಣಂ ಚ ಪೃಥಗ್ವಿಧಮ್‌ |
ವಿವಿಧಾಶ್ಚ ಪೃಥಕ್ಚೇಷ್ಟಾ ದೈವಂ ಚೈವಾತ್ರ ಪಞ್ಚಮಮ್‌ ||
– ಭಗವದ್ಗೀತೆ, ಅಧ್ಯಾಯ ೧೮ ಶ್ಲೋಕ ೧೪

ಅರ್ಥ : ಆಧಾರ ಮತ್ತು ಕರ್ತೃ, ಬೇರೆ ಬೇರೆ ಕರಣ ಅಂದರೆ ಸಾಧನ, ಅನೇಕ ರೀತಿಯ ಕರ್ಮ ಮತ್ತು ಐದನೇ ಕರಣವು ದೈವವಾಗಿರುತ್ತದೆ. ಇದನ್ನು ಸ್ಪಷ್ಟಪಡಿಸಲು ಒಂದು ಉದಾಹರಣೆಯನ್ನು ನೋಡೋಣ. ಕೃಷಿ ಮಾಡುವುದಾದರೆ ರೈತನು ಕರ್ತೃ ಇರುತ್ತಾನೆ, ಆದರೆ ಅದಕ್ಕಾಗಿ ಹೊಲ-ಭೂಮಿ ಇದು ಅಧಿಷ್ಠಾನ ಬೇಕಾಗುತ್ತದೆ. ಅದರ ಹೊರತು ರೈತನು ಕೃಷಿ ಮಾಡಲು ಸಾಧ್ಯವಿಲ್ಲ ಮತ್ತು ಆ ಮಣ್ಣು-ಭೂಮಿಯು ರೈತನು ನಿರ್ಮಿಸಿದ್ದಲ್ಲ. ಉಳುವುದಕ್ಕೆ ನೇಗಿಲು ಬೇಕಾಗುತ್ತದೆ, ಹಾಗೆಯೇ ಗುದ್ದಲಿ, ಸಲಿಕೆ, ಬುಟ್ಟಿಗಳು ಬೇಕಾಗುತ್ತವೆ. ಈ ಸಾಧನಗಳೆಂದರೆ ಕರಣವಾಗಿವೆ. ಮುಂದೆ ಬಿತ್ತನೆ, ಗೊಬ್ಬರ ಹಾಕುವುದು, ನೀರು ಹರಿಸುವುದು, ಕೀಟನಾಶಕ ಸಿಂಪಡಿಸುವುದು, ಕಳೆ ತೆಗೆಯುವುದು ಇತ್ಯಾದಿ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ (ಈ ಕೃತಿಗಳು ಅಂದರೆ ಕರ್ಮಗಳಾಗಿವೆ). ಈ ಎಲ್ಲವನ್ನು ಮಾಡಿದರು ಕೂಡ ದೈವ ಅನುಕೂಲವಿರಬೇಕಾಗುತ್ತದೆ. ಸರಿಯಾಗಿ ಮಳೆ ಬಂದರೆ ಮತ್ತು ಯಾವುದೇ ಅಡಚಣೆಗಳು ಬರದಿದ್ದರೆ ಮಾತ್ರ ಬೆಳೆ ಚೆನ್ನಾಗಿ ಬರುತ್ತದೆ; ಆದರೆ ಸರಿಯಾದ ಸಮಯದಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆ ಬರುವುದು ಅಥವಾ ಬರದಿರುವುದು, ಇದು ನಮ್ಮ ಕೈಯಲ್ಲಿರುವುದಿಲ್ಲ. ಹಾಗೆಯೇ ಕೀಟಗಳ ಬಾಧೆ, ಪ್ರಾಣಿಗಳು ಹೊಲದಲ್ಲಿ ನುಗ್ಗುವುದು, ಮಿಡತೆಗಳ ದಾಳಿ, ಬೆಳೆಗಳಿಗೆ ಬರುವ ರೋಗಗಳು ಮುಂತಾದವುಗಳು ಸಂಭವಿಸಬಹುದು. ಈ ಎಲ್ಲವೂ ನಮ್ಮ ಕೈಯಲ್ಲಿರದೇ ದೈವದ ಅಧೀನದಲ್ಲಿರುತ್ತದೆ. ಇದನ್ನು ಗಮನದಲ್ಲಿ ತೆಗೆದುಕೊಂಡರೆ, ಕರ್ತೃತ್ವದ ಅಭಿಮಾನ ಇರುವುದಿಲ್ಲ. ಹೀಗಿರುವಾಗ ‘ನಾನು ಉತ್ತಮ ಫಸಲನ್ನು ಬೆಳೆಸಿದೆ’, ಎಂಬ ಅಭಿಮಾನವು ತಪ್ಪಾಗುತ್ತದೆ. ಅದೇ ರೀತಿ ಪ್ರತಿಯೊಂದು ಒಳ್ಳೆಯ ಅಥವಾ ಪುಣ್ಯ ಕರ್ಮದ ಕರ್ತೃತ್ವವು ನಮ್ಮದಲ್ಲ, ಎಂಬ ವಿಚಾರವಿದ್ದರೆ ಪುಣ್ಯದಿಂದಲೂ ಅಲಿಪ್ತರಾಗಿರಬಹುದು.

ಭಗವಾನ ಶ್ರೀಕೃಷ್ಣನು ಅದನ್ನೇ ಮುಂದೆ ಹೇಳಿದ್ದಾನೆ

ತತ್ರೈವಂ ಸತಿ ಕರ್ತಾರಮಾತ್ಮಾನಂ ಕೇವಲಂ ತು ಯ: |
ಪಶ್ಯತ್ಯಕೃತಬುದ್ಧಿತ್ವಾನ್ನ ಸ ಪಶ್ಯತಿ ದುರ್ಮತಿ: ||
– ಭಗವದ್ಗೀತೆ ಅಧ್ಯಾಯ ೧೮ ಶ್ಲೋಕ ೧೬

ಅರ್ಥ : ಹೀಗಿರುವಾಗ, ಯಾರು ತನ್ನನ್ನು ಮಾತ್ರ ‘ಕರ್ತೃ’ ಎಂದು ಭಾವಿಸುತ್ತಾರೋ ಅವರು ಮತಿಹೀನರು; ಅವರ ಬುದ್ಧಿ ವಿಕಸನಗೊಳ್ಳದ ಕಾರಣ ಅವರು ಸತ್ಯವನ್ನು ಅರಿಯಲಾರರು. ಎಲ್ಲಾ ಬಗೆಯ ಕರ್ತೃತ್ವದ ಅಹಂಕಾರವು ದೂರವಾದಾಗ, ಮನುಷ್ಯನು ಪುಣ್ಯ-ಪಾಪಗಳಿಂದ ಅಲಿಪ್ತನಾಗುತ್ತಾನೆ. ಅಂತಹ ಸ್ಥಿತಿಯಲ್ಲಿ ಮನಸ್ಸಿನ ವಿಚಾರಗಳಿಗೆ ಮಹತ್ವ ಉಳಿಯುವುದಿಲ್ಲ.

೫. ಇತರ ಸಾಮಾನ್ಯ ಉಪಾಯಗಳು ಮನಸ್ಸಿನ ವಿಚಾರಗಳನ್ನು ನಿಯಂತ್ರಿಸಲು ಮನಸ್ಸನ್ನು ಬೇರೆ ವಿಚಾರಗಳಲ್ಲಿ ತೊಡಗಿಸುವುದು

ಮನಸ್ಸಿನಲ್ಲಿ ವಿಚಾರಗಳು ಬರುತ್ತಲೇ ಇರುತ್ತವೆ, ಆದರೆ ಅನಗತ್ಯ ಮತ್ತು ಅಯೋಗ್ಯ ವಿಚಾರಗಳ ಬದಲಿಗೆ ಒಳ್ಳೆಯ ವಿಚಾರಗಳು ಬರುವಂತೆ ನಾವು ಮಾಡಬಹುದು.
ಅರ್ಥಪೂರ್ಣವಾದ ಸುಮಧುರ ಭಕ್ತಿಗೀತೆಗಳನ್ನು ಕೇಳುವ ಅಭ್ಯಾಸವಿದ್ದರೆ, ಅವುಗಳನ್ನು ಕೇಳಿ. ಇದರಿಂದ ಕೇವಲ ಆ ಸಮಯಕ್ಕಷ್ಟೇ ಕೆಟ್ಟ ವಿಚಾರಗಳು ನಿಲ್ಲುವುದು ಮಾತ್ರವಲ್ಲ, ನಂತರವೂ ಆ ಹಾಡಿನ ಸಾಲುಗಳು ಮತ್ತು ಸಾತ್ತ್ವಿಕ ವಿಚಾರಗಳು ದೀರ್ಘಕಾಲದ ವರೆಗೆ ಮನಸ್ಸಿನಲ್ಲಿ ಸುಳಿದಾಡುತ್ತಿರುತ್ತವೆ. ಓದುವ ಆಸಕ್ತಿ ಇದ್ದರೆ, ಭಾಗವತಪುರಾಣ, ಜ್ಞಾನೇಶ್ವರಿ, ದಾಸಬೋಧ, ಏಕನಾಥಿ ಭಾಗವತ ಅಥವಾ ಇತರ ಇಷ್ಟವಾಗುವ ಅಧ್ಯಾತ್ಮದ ಬರವಣಿಗೆಗಳನ್ನು ಓದುವುದರಿಂದ ಅವುಗಳಲ್ಲಿನ ಅಂಶಗಳ ಬಗ್ಗೆ ಮನಸ್ಸು ತಾನಾಗಿಯೇ ವಿಚಾರ ಮಾಡತೊಡಗುತ್ತದೆ. ಯಾರಿಗೆ ಹಾಡಲು ಬರುತ್ತದೆಯೋ, ಅವರು ನಿಜಕ್ಕೂ ಅದೃಷ್ಟವಂತರು ! ಶಾಂತವಾಗಿ ಕುಳಿತು, ವಾದ್ಯಗಳ ಚಿಂತೆಯಿಲ್ಲದೆ, ಕೇಳುಗರ ವಿಚಾರ ಮಾಡದೇ, ತನಗಾಗಿ ಅಥವಾ ಭಗವಂತನ ಪ್ರಸನ್ನತೆಗಾಗಿ ತಮಗೆ ಇಷ್ಟವಾದ ಭಕ್ತಿಗೀತೆಯನ್ನು ಮಧ್ಯಮ ಸ್ವರದಲ್ಲಿ ಹಾಡಬೇಕು. ಇದರಿಂದ ಹಾಡುವವನು ತಲ್ಲೀನನಾಗುತ್ತಾನೆ. ಹಾಡುವಾಗ ಮತ್ತು ಹಾಡಿದ ನಂತರವೂ ದೀರ್ಘಕಾಲದ ವರೆಗೆ ಇತರ ಯಾವುದೇ ವಿಚಾರಗಳು ಮನಸ್ಸಿನಲ್ಲಿ ಸುಳಿಯುವುದಿಲ್ಲ. ನಮ್ಮ ಮನಸ್ಸನ್ನು ಬೇರೆಡೆಗೆ ಸೆಳೆಯುವಂತಹ ಇತರ ಕೆಲಸಗಳನ್ನೂ ನಾವು ಮಾಡಬಹುದು.

೬. ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು

ನಾವು ಕೇವಲ ಮನಸ್ಸಲ್ಲ, ಬದಲಿಗೆ ‘ಆತ್ಮ’ವಾಗಿದ್ದೇವೆ. ಆತ್ಮವು ಪರಮಾತ್ಮನ ಅಂಶವಾಗಿದೆ. ಮನಸ್ಸಿನಲ್ಲಿ ವಿಚಾರಗಳು ಬಂದೇ ಬರುತ್ತವೆ; ಆದರೆ ಅವುಗಳಲ್ಲಿ ನಾವು ಸಿಲುಕಿಕೊಳ್ಳಬಾರದು. ನಮ್ಮ ಮನಸ್ಸಿನಲ್ಲಿ ಕೆಟ್ಟ ವಿಚಾರಗಳು ಬಂದರೂ, ನಾವು ಅದರಂತೆ ವರ್ತಿಸಬಾರದು. ‘ಮನಸ್ಸಿನಲ್ಲಿ ಕೆಟ್ಟ ವಿಚಾರಗಳು ಬಂದ ತಕ್ಷಣ ಪಾಪ ತಟ್ಟುವುದಿಲ್ಲ’ ಎಂದು ಹೇಳಲಾಗಿದೆ ನಿಜ, ಆದರೆ ಇದರರ್ಥ ನಮ್ಮ ಮನಸ್ಸನ್ನು ಸ್ವೇಚ್ಛೆಯಾಗಿ ಬಿಡಬೇಕು ಎಂದಲ್ಲ. ಒಂದು ವೇಳೆ ಮನಸ್ಸಿನಲ್ಲಿ ಸತತವಾಗಿ ಮಲಿನ ವಿಚಾರಗಳೇ ತುಂಬಿದ್ದರೆ, ಬುದ್ಧಿಯು ಆ ಕೆಟ್ಟ ವಿಚಾರಗಳನ್ನೇ ಆಧರಿಸಿ ತಪ್ಪು ಕೆಲಸ ಮಾಡುವ ನಿರ್ಧಾರ ಕೈಗೊಳ್ಳಬಹುದು ಮತ್ತು ಅದರಂತೆ ಕೃತಿಯೂ ನಡೆಯಬಹುದು. ಹಾಗಾಗಿ, ಮನಸ್ಸಿನ ವಿಚಾರಗಳಿಗೆ ಅತಿಯಾದ ಮಹತ್ವ ನೀಡಬಾರದು ಅಷ್ಟೆ.

ಟಿಪ್ಪಣಿ : ಮನಸ್ಸಿನ ವಿಚಾರಗಳಿಗೆ ಮಹತ್ವ ನೀಡದಿರುವುದು ಶಾಸ್ತ್ರಸಮ್ಮತವಾದ ಉಪಾಯವೇ ? ಎಂಬ ಪ್ರಶ್ನೆ ಯಾರಿಗಾದರೂ ಮೂಡಬಹುದು. ಅದಕ್ಕೆ ಉತ್ತರವಾಗಿ ಅಥರ್ವವೇದದ ಮುಂಡಕೋಪನಿಷತ್ತಿನ (ಮುಂಡಕ ೩, ಖಂಡ ೧, ಮಂತ್ರ ೩) ಉಲ್ಲೇಖವನ್ನು ಗಮನಿಸಬಹುದು. ಸನಾತನ ಸಂಸ್ಥೆಯು ಪ್ರಕಟಿಸಿರುವ ‘ಅಧ್ಯಾತ್ಮಶಾಸ್ತ್ರದ ವಿವಿಧ ವಿಷಯಗಳ ಬೋಧನೆ’ ಎಂಬ ಕಿರುಗ್ರಂಥದ ‘ಆತ್ಮಜ್ಞಾನದಿಂದ ಸಂಚಿತ ಕರ್ಮಫಲಗಳು ನಾಶವಾಗುತ್ತವೆ’ ಎಂಬ ಲೇಖನದಲ್ಲೂ ಉಪನಿಷತ್ತಿನ ಇದೇ ವಿಷಯವನ್ನು ಸ್ಪಷ್ಟಪಡಿಸಲಾಗಿದೆ. ಅಲ್ಲಿ ಪ್ರತಿಪಾದಿಸಿರುವ ವಿಷಯವು ಬೇರೆಯದಾಗಿದ್ದರಿಂದ ಶಬ್ದರಚನೆ ಬೇರೆಯಾಗಿರಬಹುದು, ಆದರೆ ಅದರ ತಾತ್ಪರ್ಯ ಮಾತ್ರ ಒಂದೇ ಆಗಿದೆ.