ಪ್ರಧಾನಮಂತ್ರಿ ಮೋದಿಯವರಿಂದಾಗಿ ಭಾರತದಲ್ಲಿ ನನ್ನನ್ನು ಪ್ರತಿಯೊಬ್ಬರೂ ಗುರುತಿಸುವಂತಾಯಿತು!

ಜಿಹಾದಿ ಭಯೋತ್ಪಾದಕರ ಆದರ್ಶವಾಗಿರುವ ಜಾಕಿರ್ ನಾಯ್ಕ್‌ ನ ಹಳೆಯ ವಿಡಿಯೋ ಮತ್ತೆ ಪ್ರಸಾರ

ನವ ದೆಹಲಿ – ಪ್ರಧಾನಮಂತ್ರಿ ಮೋದಿಯವರಿಂದಲೇ ಇಂದು ಭಾರತದಲ್ಲಿ ನನ್ನನ್ನು ಪ್ರತಿಯೊಬ್ಬರೂ ಗುರುತಿಸುತ್ತಾರೆ. ಈ ಮೊದಲು ಕೇವಲ ಮುಸಲ್ಮಾನರಿಗೆ ಮಾತ್ರ ನನ್ನ ವಿಚಾರಗಳು ತಿಳಿದಿದ್ದವು; ಆದರೆ ಈಗ ಮುಸಲ್ಮಾನರಿಗಿಂತ ಮುಸಲ್ಮಾನೇತರ ಜನರೇ ನನ್ನನ್ನು ಹೆಚ್ಚು ಗುರುತಿಸುತ್ತಾರೆ. ಅಷ್ಟೇ ಅಲ್ಲದೆ, ಇದು ಅಲ್ಲಾನ ಯೋಜನೆಯೇ ಆಗಿದೆ, ಅವನು ಇಸ್ಲಾಂನ ಶತ್ರುಗಳಿಂದಲೂ ಒಳ್ಳೆಯ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾನೆ. ಮೋದಿ ಅವರ ಕ್ರಮದಿಂದಲೇ ನನ್ನ ಪ್ರಚಾರ ಹೆಚ್ಚಾಯಿತು ಎಂದು ಜಿಹಾದಿ ಭಯೋತ್ಪಾದಕರ ಆದರ್ಶವಾಗಿರುವ ಜಾಕಿರ್ ನಾಯ್ಕ್ ಪ್ರತಿಪಾದಿಸುವ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ.

ಭಾರತಕ್ಕೆ ಹೋದರೆ ನನ್ನನ್ನು ಕಾರಾಗೃಹಕ್ಕೆ ಹಾಕುತ್ತಾರೆ!

ಪಾಕಿಸ್ತಾನಿ ಯೂಟ್ಯೂಬರ್ ನಾದಿರ್ ಅಲಿ ಎಂಬುವವನು ಜಾಕಿರ್ ನಾಯ್ಕ್‌ ನ ಸಂದರ್ಶನ ಮಾಡಿದ್ದನು. ಈ ಸಂದರ್ಭದಲ್ಲಿ ಜಾಕಿರ್‌ ನಿಗೆ ‘ನೀನು ಮತ್ತೆ ಭಾರತಕ್ಕೆ ಹೋಗುತ್ತೀಯಾ?’ ಎಂದು ಕೇಳಿದಾಗ, ಭಾರತಕ್ಕೆ ಹೋಗುವುದು ಬಹಳ ಸುಲಭ; ಆದರೆ ಅಲ್ಲಿಂದ ಹೊರಬರುವುದು ಅಷ್ಟೇ ಕಷ್ಟ ಎಂದು ಆತ ಉತ್ತರಿಸಿದನು. ಒಂದು ವೇಳೆ ನಾನು ಹೋದರೆ, ಅವರು ನನ್ನನ್ನು ‘ರೆಡ್ ಕಾರ್ಪೆಟ್’ (ಕೆಂಪು ಹಾಸು) ಹಾಕಿ ಸ್ವಾಗತಿಸುತ್ತಾರೆ; ಆದರೆ ನೇರವಾಗಿ ಕಾರಾಗೃಹಕ್ಕೆ ಹಾಕುತ್ತಾರೆ; ಏಕೆಂದರೆ ಅವರ ಪಟ್ಟಿಯಲ್ಲಿ ನಾನು ನಂಬರ್ ೧ ಭಯೋತ್ಪಾದಕನಾಗಿದ್ದೇನೆ ಎಂದು ಜಾಕಿರ್ ಹೇಳಿದ್ದಾನೆ.

ಮೋದಿ ಸರಕಾರ ಇರುವವರೆಗೆ ಭಾರತಕ್ಕೆ ಹೋಗುವುದಿಲ್ಲ!

ನಾನು ಭಾರತಕ್ಕೆ ಹೋಗುವುದಿಲ್ಲ ಎಂದಲ್ಲ; ಆದರೆ ಎಲ್ಲಿಯವರೆಗೆ ಮೋದಿ ಸರಕಾರ ಇದೆಯೋ, ಅಲ್ಲಿಯವರೆಗೆ ಹೋಗುವುದು ಅಪಾಯಕಾರಿ. ಯಾವಾಗ ಮೋದಿ ಪ್ರಧಾನಮಂತ್ರಿಯಾಗಿರುವುದಿಲ್ಲ ವೋ ಮತ್ತು ಹೊಸ ಸರಕಾರ ಬರುತ್ತದೆಯೋ, ಆಗ ನಾನು ಖಂಡಿತವಾಗಿಯೂ ಭಾರತಕ್ಕೆ ಮರಳುತ್ತೇನೆ ಎಂದು ಜಾಕಿರ್ ಹೇಳಿದ್ದಾನೆ.

ಮುಸಲ್ಮಾನೇತರ ಜನರು ನನ್ನ ಭಾಷಣಗಳಿಂದ ಪ್ರಭಾವಿತರಾಗಿ ಇಸ್ಲಾಂ ಧರ್ಮವನ್ನು ಸ್ವೀಕರಿಸುತ್ತಿದ್ದರು, ಇದೇ ಸರಕಾರದ ನಿಜವಾದ ಅಡಚಣೆಯಾಗಿತ್ತು ಎಂದು ಕೂಡ ಅವನು ಈ ಸಂದರ್ಶನದಲ್ಲಿ ಹೇಳಿದ್ದಾನೆ. ತನ್ನ ಮೇಲಿರುವ ಎಲ್ಲಾ ಆರೋಪಗಳನ್ನು ಅವನು ತಳ್ಳಿಹಾಕಿದ್ದು, ಒಂದು ಆರೋಪವೂ ಸಾಬೀತಾಗಿಲ್ಲ ಎಂದು ವಾದಿಸಿದ್ದಾನೆ.

ಸಂಪಾದಕೀಯ ನಿಲುವು

ಎಲ್ಲಿಯವರೆಗೆ ಆರೋಪಗಳು ಕೇಳಿಬರುವುದಿಲ್ಲವೋ ಅಥವಾ ಅಪರಾಧ ದಾಖಲಾಗುವುದಿಲ್ಲವೋ, ಅಲ್ಲಿಯವರೆಗೆ ಜನರಿಗೆ ಆ ವ್ಯಕ್ತಿಯ ಬಗ್ಗೆ ಮಾಹಿತಿ ಇರುವುದಿಲ್ಲ. ಜಾಕಿರ್ ವಿರುದ್ಧ ದೇಶದ್ರೋಹದ ಅಪರಾಧ ದಾಖಲಾದ ನಂತರ ದೇಶದಲ್ಲಿನ ಜನರಿಗೆ ಆತನ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಿತು. ಈ ಬಗ್ಗೆಯೂ ಈ ಭಯೋತ್ಪಾದಕನಿಗೆ ಹೆಮ್ಮೆಯೆನಿಸುತ್ತದೆ ಎಂದರೆ, ಈತ ಎಷ್ಟು ನಿರ್ಲಜ್ಜನಾಗಿದ್ದಾನೆ ಎಂಬುದು ಇದರಿಂದ ತಿಳಿಯುತ್ತದೆ.