ದೋಷ ಸಾಬೀತಾಗುವ ಪ್ರಮಾಣ ಅಲ್ಪವಿದ್ದರೂ ಅನೇಕ ವರ್ಷಗಳ ಕಾಲ ಆರೋಪಿಗಳು ಜೈಲಲ್ಲಿ ಕೊಳೆಯುತ್ತಾರೆ ! – Justice Ujjal Bhuyan

ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ವಲ್ ಭುಯಾನ್ ಅವರ ಹೇಳಿಕೆ

ಬೆಂಗಳೂರು – ನ್ಯಾಯವ್ಯವಸ್ಥೆಯ ಕೆಲವು ಭಾಗಗಳು ‘ರಾಜನಿಗಿಂತ ಹೆಚ್ಚು ನಿಷ್ಠಾವಂತ’ ಎಂಬ ಭಾವನೆಯಿಂದ ಗ್ರಸ್ತವಾಗಿವೆ. ಅಂದರೆ ಈ ಭಾಗಗಳು ರಾಜನಿಗಿಂತಲೂ ಹೆಚ್ಚು ನಿಷ್ಠಾವಂತರಾಗಿರುವ ಪ್ರವೃತ್ತಿಯನ್ನು ಅಳವಡಿಸಿಕೊಳ್ಳುತ್ತಿವೆ. ಇದರಿಂದಾಗಿಯೇ ಜನರು ತಿಂಗಳುಗಟ್ಟಲೆ ಜೈಲಲ್ಲಿ ಕೊಳೆಯುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ವ್ಯವಸ್ಥೆಯು ಎಷ್ಟೊಂದು ಕಠಿಣವಾಗುತ್ತಿದೆ ಎಂದರೆ, ಅಗತ್ಯಕ್ಕಿಂತ ಹೆಚ್ಚು ಮೊಕದ್ದಮೆಗಳು ದಾಖಲಾಗುತ್ತಿವೆ. ಇಂತಹ ಪ್ರಕರಣಗಳನ್ನು ಎದುರಿಸಲು ‘ಮನಿ ಲಾಂಡರಿಂಗ್’ ತಡೆ ಕಾಯ್ದೆಯು ಒಂದು ದೊಡ್ಡ ಸಾಧನವಾಗಿದೆ; ಆದರೆ ಕಾಯ್ದೆಯ ಅಗತ್ಯಕ್ಕಿಂತ ಹೆಚ್ಚಿನ ಬಳಕೆಯು ಅದರ ಪರಿಣಾಮವನ್ನು ದುರ್ಬಲಗೊಳಿಸುತ್ತದೆ.

‘ಯು.ಎ.ಪಿ.ಎ.’ ಕಾಯ್ದೆಯಲ್ಲಿ (ಅನ್‌ಲಾಫುಲ್ ಆಕ್ಟಿವಿಟೀಸ್ ಪ್ರಿವೆನ್ಷನ್ ಆಕ್ಟ್ – ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ದೋಷ ಸಾಬೀತಾಗುವ ಪ್ರಮಾಣವು ಸುಮಾರು ಶೇ. ೫ ಕ್ಕಿಂತಲೂ ಅಲ್ಪವಿರುವಾಗ, ಆರೋಪಿಗಳನ್ನು ಅನೇಕ ವರ್ಷಗಳ ಕಾಲ ಜೈಲಲ್ಲಿ ಏಕೆ ಇಡಬೇಕು ?, ಎಂಬ ಪ್ರಶ್ನೆಯನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ವಲ್ ಭುಯಾನ್ ಅವರು ಇಲ್ಲಿ ನಡೆದ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ನ ಮೊದಲ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡುತ್ತಾ ಎತ್ತಿದರು.

ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳಿಂದ ನ್ಯಾಯಾಲಯದ ಸಮಯದ ಅಪವ್ಯಯ

ನ್ಯಾಯಮೂರ್ತಿ ಭುಯಾನ್ ಅವರು, ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳಿಗೆ ಸಂಬಂಧಿಸಿದ ಕೆಲವು ವಿವಾದಗಳನ್ನು ನಿರ್ವಹಿಸಲು ಸರ್ವೋಚ್ಚ ನ್ಯಾಯಾಲಯಕ್ಕೆ ವಿಶೇಷ ತನಿಖಾ ತಂಡವನ್ನು ಸ್ಥಾಪಿಸಬೇಕಾಯಿತು, ಇದರಿಂದ ಕೇವಲ ಸಮಯದ ಅಪವ್ಯಯವಾಯಿತು ಎಂದು ಹೇಳಿದರು. ‘ವಿಕಸಿತ ಭಾರತ’ ಎಂಬ ಪರಿಕಲ್ಪನೆಯು ಒಂದು ರಾಜಕೀಯ ಉದ್ದೇಶವಾಗಿದೆ ಮತ್ತು ನ್ಯಾಯಾಲಯಗಳು ತಮ್ಮ ಕಾರ್ಯಕಲಾಪಗಳಲ್ಲಿ ಸ್ವತಂತ್ರವಾಗಿರಬೇಕು. ನಾವು ವಿಕಸಿತ ಭಾರತದ ಕುರಿತು ಮಾತನಾಡುವಾಗ, ವಾದವಿವಾದ ಮತ್ತು ಭಿನ್ನಾಭಿಪ್ರಾಯಗಳಿಗೆ ಅವಕಾಶವಿರಬೇಕು. ಭಿನ್ನಾಭಿಪ್ರಾಯಗಳನ್ನು ಅಪರಾಧವೆಂದು ಪರಿಗಣಿಸಬಾರದು.