ಭಾರತವನ್ನು ಎದುರಿಸಲು ಪಾಕಿಸ್ತಾನ ಕ್ಷಿಪಣಿಗಳನ್ನು ಸಿದ್ಧಪಡಿಸಿದೆ! Pakistan Missiles Threat

ಅಮೆರಿಕಕ್ಕೆ ಪಾಕಿಸ್ತಾನದ ಕ್ಷಿಪಣಿಗಳು ಆತಂಕಕಾರಿ ಎಂಬ ದಾವೆಗೆ ಪಾಕಿಸ್ತಾನದ ಪ್ರತ್ಯುತ್ತರ

ಇಸ್ಲಾಮಾಬಾದ್ (ಪಾಕಿಸ್ತಾನ) – ಅಮೆರಿಕದ ಗುಪ್ತಚರ ವಿಭಾಗದ ಮುಖ್ಯಸ್ಥರಾದ ತುಳಸಿ ಗಬ್ಬಾರ್ಡ್ ಅವರು, ಅಮೆರಿಕಕ್ಕೆ ಸಂಭವನೀಯ ಕ್ಷಿಪಣಿ ಭೀತಿ ಒಡ್ಡಬಲ್ಲ ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನವನ್ನು ಸೇರಿಸಿದ್ದಾರೆ. ಇದಕ್ಕೆ ತೀವ್ರ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ, ‘ನಮ್ಮ ಕ್ಷಿಪಣಿ ಕಾರ್ಯಕ್ರಮವು ಸಂಪೂರ್ಣವಾಗಿ ರಕ್ಷಣಾತ್ಮಕವಾಗಿದೆ’ ಎಂದು ಹೇಳಿಕೊಂಡಿದೆ. ಪಾಕಿಸ್ತಾನದ ವಿದೇಶಾಂಗ ಇಲಾಖೆಯ ವಕ್ತಾರ ತಾಹಿರ್ ಅಂದ್ರಾಬಿ ಅವರು, ಈ ಕಾರ್ಯಕ್ರಮವು ಕೇವಲ ದೇಶದ ಸಾರ್ವಭೌಮತ್ವದ ರಕ್ಷಣೆಗಾಗಿ ಮತ್ತು ದಕ್ಷಿಣ ಏಷ್ಯಾದಲ್ಲಿ ಸಮತೋಲನ ಕಾಯ್ದುಕೊಳ್ಳಲು ಮಾತ್ರವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನದ ಕ್ಷಿಪಣಿ ಸಾಮರ್ಥ್ಯವು ಖಂಡಾಂತರ ಮಟ್ಟಕ್ಕಿಂತ ಬಹಳ ಕಡಿಮೆ ಇದೆ. ಇದು ‘ವಿಶ್ವಾಸಾರ್ಹ ಮತ್ತು ಕನಿಷ್ಠ ಪ್ರತಿರೋಧ’ (credible minimum deterrence) ಎಂಬ ನೀತಿಯನ್ನು ಆಧರಿಸಿದ್ದು, ವಿಶೇಷವಾಗಿ ಭಾರತವನ್ನು ಎದುರಿಸಲು ಸಿದ್ಧಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಭಾರತದ ಕ್ಷಿಪಣಿಗಳು ನೆರೆಹೊರೆಯ ದೇಶಗಳಿಗೆ ಆತಂಕಕಾರಿ! – ಪಾಕಿಸ್ತಾನದ ಕಿಡಿನುಡಿ

ಭಾರತವು 12 ಸಾವಿರ ಕಿಲೋಮೀಟರ್‌ಗಿಂತಲೂ ಹೆಚ್ಚು ದೂರ ಕ್ರಮಿಸುವ ಸಾಮರ್ಥ್ಯವಿರುವ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುತ್ತಿದೆ, ಇದು ಪ್ರಾದೇಶಿಕ ಭದ್ರತೆಯನ್ನು ಮೀರಿದ ಧೋರಣೆಯನ್ನು ತೋರಿಸುತ್ತದೆ ಮತ್ತು ನೆರೆಹೊರೆಯ ದೇಶಗಳಲ್ಲಿ ಕಳವಳ ಮೂಡಿಸುತ್ತದೆ ಎಂದು ಅಂದ್ರಾಬಿ ದಾವೆ ಮಾಡಿದ್ದಾರೆ. ಪಾಕಿಸ್ತಾನದ ಈ ಟೀಕೆಯು ಮುಖ್ಯವಾಗಿ ಭಾರತದ ‘ಅಗ್ನಿ-6’ ಕ್ಷಿಪಣಿಯನ್ನು ಗುರಿಯಾಗಿಸಿಕೊಂಡಿದೆ.

ಸಂಪಾದಕೀಯ ನಿಲುವು

ಪಾಕಿಸ್ತಾನದ ತೋರಿಸುವ ಹಲ್ಲು ಮತ್ತು ತಿನ್ನುವ ಹಲ್ಲು ಬೇರೆ ಬೇರೆ ಇದೆ ಇದು ಇಡೀ ಜಗತ್ತಿಗೇ ತಿಳಿದಿದೆ. ಆದ್ದರಿಂದ ಪಾಕಿಸ್ತಾನ ಏನೇ ಸಮರ್ಥನೆ ನೀಡಿದರೂ, ವಾಸ್ತವ ಏನೆಂಬುದು ಅಮೆರಿಕಕ್ಕೆ ಚೆನ್ನಾಗಿ ತಿಳಿದಿದೆ!