ಸಂಭಲ್ ನಮಾಜ್ ವಿವಾದ: ಅಲಹಾಬಾದ ಹೈಕೋರ್ಟ್ ಕೆಂಗಣ್ಣು

ಆಡಳಿತಾತ್ಮಕ ಮತ್ತು ಪೊಲೀಸ್ ಅಧಿಕಾರಿಗಳು ರಾಜೀನಾಮೆ ನೀಡಲಿ ಅಥವಾ ವರ್ಗಾವಣೆ ಮಾಡಿಸಿಕೊಳ್ಳಲಿ

ಪ್ರಯಾಗರಾಜ್ (ಉತ್ತರ ಪ್ರದೇಶ) – ಯಾವುದೇ ಪರಿಸ್ಥಿತಿಯಲ್ಲೂ ಕಾನೂನು ವ್ಯವಸ್ಥೆ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳುವುದು ರಾಜ್ಯದ ಕರ್ತವ್ಯವಾಗಿದೆ. ಒಂದು ವೇಳೆ ಸ್ಥಳೀಯ ಅಧಿಕಾರಿಗಳು, ಪೊಲೀಸ್ ಅಧೀಕ್ಷಕರು ಮತ್ತು ಜಿಲ್ಲಾಧಿಕಾರಿಗಳಿಗೆ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ ಎಂದು ಅನಿಸಿದರೆ ಮತ್ತು ಅದಕ್ಕಾಗಿ ನಮಾಜ್ ಮಾಡುವವರ ಸಂಖ್ಯೆಯನ್ನು ಸೀಮಿತಗೊಳಿಸಲು ಬಯಸುವುದಾದರೆ, ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಅಥವಾ ಸಂಭಲ್‌ ನಿಂದ ವರ್ಗಾವಣೆ ಮಾಡಿಸಿಕೊಳ್ಳಬೇಕೆಂದು ಅಲಹಾಬಾದ ಉಚ್ಚ ನ್ಯಾಯಾಲಯವು ಸ್ಥಳೀಯ ಆಡಳಿತದ ನಿರ್ಧಾರದ ಬಗ್ಗೆ ಕಠಿಣ ನಿಲುವು ತಳೆದಿದೆ. ರಾಜ್ಯದ ಸಂಭಲ್‌ ನಲ್ಲಿ ರಮಜಾನ್ ನಮಾಜ್ ಮಾಡುವುದಕ್ಕೆ ಮಿತಿ ಹೇರಲಾದ ಪ್ರಕರಣದ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯ ಈ ನಿಲುವನ್ನು ವ್ಯಕ್ತಪಡಿಸಿತು. ನ್ಯಾಯಮೂರ್ತಿ ಅತುಲ್ ಶ್ರೀಧರನ್ ಮತ್ತು ನ್ಯಾಯಮೂರ್ತಿ ಸಿದ್ದಾರ್ಥ್ ನಂದನ್ ಅವರ ಪೀಠದ ಮುಂದೆ ಈ ವಿಚಾರಣೆ ನಡೆಯಿತು.

೧. ಪ್ರತಿಯೊಂದು ಸಮುದಾಯಕ್ಕೂ ನಿಗದಿತ ಆರಾಧನಾ ಸ್ಥಳದಲ್ಲಿ ಶಾಂತಿಯುತವಾಗಿ ಪೂಜೆ-ಪ್ರಾರ್ಥನೆ ಸಲ್ಲಿಸಲು ಭರವಸೆ ನೀಡುವುದು ರಾಜ್ಯದ ಕರ್ತವ್ಯವಾಗಿದೆ ಎಂದು ಪೀಠವು ಹೇಳಿದೆ. ನ್ಯಾಯಾಲಯವು ಈಗಾಗಲೇ ನಮೂದಿಸಿರುವಂತೆ, ಆ ಸ್ಥಳವು ಖಾಸಗಿ ಆಸ್ತಿಯಾಗಿದ್ದರೆ, ಅಲ್ಲಿ ಸರಕಾರದ ಅನುಮತಿ ಪಡೆಯದೆಯೇ ಪೂಜೆ ಮಾಡಬಹುದು. ಸಾರ್ವಜನಿಕ ಭೂಮಿಯಲ್ಲಿ ಅಥವಾ ಸಾರ್ವಜನಿಕ ಆಸ್ತಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದರೆ ಮಾತ್ರ ಸರಕಾರದ ಹಸ್ತಕ್ಷೇಪ ಅಗತ್ಯವಾಗುತ್ತದೆ.

೨. ಅರ್ಜಿದಾರ ಮುನಾಜಿರ್ ಖಾನ್ ಅವರು ಗಾಟಾ ಸಂಖ್ಯೆ ೨೯೧ ರಲ್ಲಿ ರಮಜಾನ್ ಸಮಯದಲ್ಲಿ ನಮಾಜ್ ಮಾಡಲು ಅಡ್ಡಿಪಡಿಸಲಾಗುತ್ತಿದೆ ಎಂದು ವಾದಿಸಿದರು. ಅವರ ಪರ ನ್ಯಾಯವಾದಿಗಳು ಅಲ್ಲಿ ಮಸೀದಿ ಇದೆ ಎಂದು ತಿಳಿಸಿದರು; ಆದರೆ ನಮಾಜ್ ಮಾಡಲು ಬಳಸುವ ಆ ಸ್ಥಳದ ಯಾವುದೇ ಛಾಯಾಚಿತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಿಲ್ಲ.

೩. ಗಾಟಾ ಸಂಖ್ಯೆ ೨೯೧ ಕಂದಾಯ ದಾಖಲೆಗಳ ಪ್ರಕಾರ ಮೋಹನ ಸಿಂಗ್ ಮತ್ತು ಭೂರಜ ಸಿಂಗ್ ಎಂಬುವವರ ಹೆಸರಿನಲ್ಲಿದೆ ಎಂದು ಸರಕಾರವು ನ್ಯಾಯಾಲಯಕ್ಕೆ ತಿಳಿಸಿದೆ. ಆ ಸ್ಥಳದಲ್ಲಿ ಕೇವಲ ೨೦ ಜನರಿಗೆ ಮಾತ್ರ ನಮಾಜ್ ಮಾಡಲು ಅನುಮತಿ ನೀಡಲಾಗಿದೆ.

೪. ರಮಜಾನ್ ತಿಂಗಳಾಗಿರುವುದರಿಂದ ಇದಕ್ಕಿಂತ ಹೆಚ್ಚಿನ ಸಂಖ್ಯೆಯ ಜನರು ನಮಾಜ್ ಮಾಡಲು ಬರಬಹುದು ಎಂದು ಅರ್ಜಿದಾರರ ಪರವಾಗಿ ಹೇಳಲಾಯಿತು. ಕಾನೂನು-ಸುವ್ಯವಸ್ಥೆಯ ಕಾರಣ ನೀಡಿ ಭಕ್ತರ ಸಂಖ್ಯೆಯನ್ನು ಸೀಮಿತಗೊಳಿಸುವ ಆದೇಶವನ್ನು ಸರಕಾರವು ನೀಡಿದೆ ಎಂದು ನ್ಯಾಯಾಲಯದಲ್ಲಿ ತಿಳಿಸಲಾಯಿತು.

೫. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರಕಾರವು ನಿರ್ಧಾರಕ್ಕಾಗಿ ಸಮಯ ಕೋರಿದ್ದು, ಅರ್ಜಿದಾರರು ಪೂರಕ ಅಫಿಡವಿಟ್ ಸಲ್ಲಿಸಲಿದ್ದು, ಅದರಲ್ಲಿ ಛಾಯಾಚಿತ್ರಗಳು ಮತ್ತು ಕಂದಾಯ ದಾಖಲೆಗಳನ್ನು ನೀಡಿ ನಮಾಜ್ ಎಲ್ಲಿ ಮಾಡಲಾಗುವುದು? ಎಂಬುದನ್ನು ಸ್ಪಷ್ಟಪಡಿಸಲಾಗುವುದು. ಸರಕಾರದ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಮಾರ್ಚ್ ೧೬ಕ್ಕೆ ನಿಗದಿಪಡಿಸಿದೆ.