ಪೈಪ್ ಮೂಲಕ ಗ್ಯಾಸ್ ಪಡೆಯುವವರಿಗೆ ಇನ್ನು ಮುಂದೆ ಎಲ್.ಪಿ.ಜಿ. ಸಿಲಿಂಡರ್ ಸಿಗಲ್ಲ !

ಪೆಟ್ರೋಲಿಯಂ ಸಚಿವಾಲಯದ ಹೊಸ ಆದೇಶ

ನವ ದೆಹಲಿ – ಮನೆಯಲ್ಲಿ ಪೈಪ್ಡ್ ನ್ಯಾಚುರಲ್ ಗ್ಯಾಸ್ ಅಂದರೆ ಪಿ.ಎನ್.ಜಿ. ಸಂಪರ್ಕ ಹೊಂದಿರುವವರಿಗೆ ಇನ್ನು ಮುಂದೆ ಎಲ್.ಪಿ.ಜಿ. ಸಿಲಿಂಡರ್ ಸಿಗುವುದಿಲ್ಲ. ದೇಶದಲ್ಲಿ ಹೆಚ್ಚುತ್ತಿರುವ ಅನಿಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಸಚಿವಾಲಯವು ಪೂರೈಕೆಯ ನಿಯಮಗಳಲ್ಲಿ ದೊಡ್ಡ ಬದಲಾವಣೆ ಮಾಡಿದೆ.
ಪೆಟ್ರೋಲಿಯಂ ಸಚಿವಾಲಯದ ಹೊಸ ಆದೇಶದಂತೆ ಪಿ.ಎನ್.ಜಿ. ಬಳಕೆದಾರರಿಗೆ ಹೊಸ ಎಲ್.ಪಿ.ಜಿ. ಸಿಲಿಂಡರ್ ದೊರೆಯುವುದಿಲ್ಲ, ಹಾಗೆಯೇ ಹಳೆಯ ಸಿಲಿಂಡರ್ ಅನ್ನು ಕೂಡ ಮರುಪೂರಣ ಮಾಡಿ ಕೊಡಲಾಗುವುದಿಲ್ಲ. ಅನಿಲ ಪೂರೈಕೆಗೆ ಸಂಬಂಧಿಸಿದಂತೆ ಸರಕಾರವು ಕಳೆದ 9 ದಿನಗಳಲ್ಲಿ 3 ಬಾರಿ ಹೊಸ ನಿಯಮಗಳನ್ನು ಹೊರಡಿಸಿದೆ.

ಮನೆಬಳಕೆಯ ಅನಿಲ ಪೂರೈಕೆಗೆ ಸಂಬಂಧಿಸಿದ 4 ಹೊಸ ನಿಯಮಗಳು

1. ಒಂದು ಮನೆಯಲ್ಲಿ ಪಿ.ಎನ್.ಜಿ. ಮತ್ತು ಎಲ್.ಪಿ.ಜಿ. ಸಿಲಿಂಡರ್ ಎರಡನ್ನೂ ಇಟ್ಟುಕೊಳ್ಳುವುದು ಕಾನೂನುಬಾಹಿರವಾಗಿರುತ್ತದೆ.

2. ಯಾರ ಮನೆಯಲ್ಲಿ ಪಿ.ಎನ್.ಜಿ. ಸಂಪರ್ಕ ಸಕ್ರಿಯವಾಗಿದೆಯೋ, ಅವರು ಇನ್ನು ಮುಂದೆ ತಮ್ಮ ಎಲ್.ಪಿ.ಜಿ. ಸಿಲಿಂಡರ್ ಅನ್ನು ರೀಫಿಲ್ ಮಾಡಿಸಿಕೊಳ್ಳಲು ಸಾಧ್ಯವಿಲ್ಲ.

3. ಎರಡೂ ಸೌಲಭ್ಯಗಳನ್ನು ಹೊಂದಿರುವವರು, ತಮ್ಮ ಮನೆಬಳಕೆಯ ಎಲ್.ಪಿ.ಜಿ. ಸಂಪರ್ಕವನ್ನು ತಕ್ಷಣವೇ ರದ್ದುಗೊಳಿಸಬೇಕಾಗುತ್ತದೆ.

4. ಪಿ.ಎನ್.ಜಿ. ಹೊಂದಿರುವ ಗ್ರಾಹಕರು ಹೊಸ ಮನೆಬಳಕೆಯ ಎಲ್.ಪಿ.ಜಿ. ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಎಲ್.ಪಿ.ಜಿ. ಸಂಪರ್ಕವನ್ನು ರದ್ದುಗೊಳಿಸದಿದ್ದರೆ ಕಾನೂನು ಕ್ರಮ ಜರುಗಿಸಬಹುದು. ಹೊಸ ನಿಯಮಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ.

ಭಾರತದ 2 ಹಡಗುಗಳು ಹೋರ್ಮುಜ್ ಜಲಸಂಧಿಯನ್ನು ದಾಟಿ ಮುಂದೆ ಬಂದವು !

92 ಸಾವಿರದ 700 ಮೆಟ್ರಿಕ್ ಟನ್ ಎಲ್.ಪಿ.ಜಿ. ಭಾರತಕ್ಕೆ ಬರುವ ಹಾದಿಯಲ್ಲಿದೆ

ಇರಾನ್-ಅಮೆರಿಕ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ನಡುವೆಯೂ ಭಾರತವು ನಡೆಸಿದ ರಾಜತಾಂತ್ರಿಕ ಪ್ರಯತ್ನದಿಂದಾಗಿ ಶಿವಾಲಿಕ್ ಮತ್ತು ನಂದಾದೇವಿ ಎಂಬ 2 ಭಾರತೀಯ ಎಲ್.ಪಿ.ಜಿ. ಸರಕು ಹಡಗುಗಳು ಹೋರ್ಮುಜ್ ಜಲಸಂಧಿಯನ್ನು ದಾಟಿ ಮುಂದೆ ಬಂದಿವೆ. ಬಂದರು ಮತ್ತು ಹಡಗು ನಿರ್ಮಾಣ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ ಕುಮಾರ ಸಿನ್ಹಾ ಅವರು, ಈ ಹಡಗುಗಳು 92 ಸಾವಿರದ 700 ಮೆಟ್ರಿಕ್ ಟನ್ ಎಲ್.ಪಿ.ಜಿ.ಯನ್ನು ಹೊತ್ತು ತರುತ್ತಿವೆ ಎಂದು ತಿಳಿಸಿದ್ದಾರೆ. ಈ ಹಡಗುಗಳು ಮಾರ್ಚ್ 16 ಮತ್ತು 17 ರೊಳಗೆ ಮುಂದ್ರಾ ಮತ್ತು ಕಾಂಡ್ಲಾ ಬಂದರುಗಳನ್ನು ತಲುಪುವ ನಿರೀಕ್ಷೆಯಿದೆ.

ವಾಣಿಜ್ಯ ಎಲ್.ಪಿ.ಜಿ. ಸಿಲಿಂಡರ್ ಪೂರೈಕೆ ಆರಂಭ !

ಮಾರ್ಚ್ 9 ರಿಂದ ಕೆಲವು ದಿನಗಳ ಕಾಲ ಸ್ಥಗಿತಗೊಂಡಿದ್ದ ವಾಣಿಜ್ಯ ಎಲ್.ಪಿ.ಜಿ. ಸಿಲಿಂಡರ್ ಪೂರೈಕೆಯನ್ನು ಸರಕಾರವು ಪುನಃ ಆರಂಭಿಸಿದೆ. ಪೆಟ್ರೋಲಿಯಂ ಸಚಿವಾಲಯವು ದೇಶದ 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಣಿಜ್ಯ ಸಿಲಿಂಡರ್‌ಗಳ ವಿತರಣೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದೆ. ಸರಕಾರವು ಒಂದು ವಾರದ ಹಿಂದೆ ವಾಣಿಜ್ಯ ಸಿಲಿಂಡರ್ ಪೂರೈಕೆಯ ಮೇಲೆ ನಿಷೇಧ ಹೇರಿತ್ತು.

ಭಾರತೀಯ ಹಡಗುಗಳನ್ನು ತಡೆಯುವುದಿಲ್ಲ ! – ಇರಾನ್ ನಿಲುವು

ಭಾರತದಲ್ಲಿರುವ ಇರಾನ್ ನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಪ್ರತಿನಿಧಿ ಅಬ್ದುಲ್ ಮಜಿದ್ ಹಕೀಮ್ ಇಲಾಹಿ ಅವರು, ಯುದ್ಧದ ಪರಿಸ್ಥಿತಿಯಲ್ಲೂ ಭಾರತೀಯ ಹಡಗುಗಳಿಗೆ ಹೋರ್ಮುಜ್ ಮಾರ್ಗದ ಮೂಲಕ ಹಾದುಹೋಗಲು ಅನುಮತಿ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಅವರು ಮಾತನಾಡುತ್ತಾ, ನಾವು ಭಾರತದ ಇಂಧನ ಅಗತ್ಯಗಳನ್ನು ಅರ್ಥಮಾಡಿಕೊಳ್ಳುತ್ತೇವೆ. ಭಾರತದ ಜನರು ಅನಿಲ ಮತ್ತು ಪೆಟ್ರೋಲ್ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂಬುದು ನಮಗೆ ತಿಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಅವರಿಗೆ ಸಹಾಯ ಮತ್ತು ಬೆಂಬಲ ನೀಡುತ್ತೇವೆ. ಇರಾನ್ ರಾಯಭಾರ ಕಚೇರಿಯು ಭಾರತೀಯ ಹಡಗುಗಳಿಗೆ ದಾರಿ ಮಾಡಿಕೊಡಲು ವಿಶೇಷ ಪ್ರಯತ್ನಗಳನ್ನು ಮಾಡಿದೆ, ಎಂದು ಹೇಳಿದರು.