ಧಾರ್ಮಿಕ ಸಂಪ್ರದಾಯಗಳಲ್ಲಿ ಬದಲಾವಣೆ ಮಾಡುವ ಮೊದಲು ಆ ಧರ್ಮದ ವಿದ್ವಾಂಸರ ಅಭಿಪ್ರಾಯ ಪಡೆಯಿರಿ! – ಕೇರಳಂ ಸರಕಾರ

  • ಶಬರಿಮಲೈ ದೇಗುಲಕ್ಕೆ 10 ರಿಂದ 50 ವರ್ಷ ವಯಸ್ಸಿನ ಮಹಿಳೆಯರ ಪ್ರವೇಶ ಪ್ರಕರಣ: ಕೇರಳಂ ಸರಕಾರದ ನಿಲುವು ಬದಲಾವಣೆ

  • ಸುಪ್ರೀಂ ಕೋರ್ಟ್ ನ 9 ನ್ಯಾಯಾಧೀಶರ ಸಾಂವಿಧಾನಿಕ ಪೀಠದ ಮುಂದೆ ವಿಚಾರಣೆ ನಡೆಯಲಿದೆ.

ತಿರುವನಂತಪುರಂ (ಕೇರಳಂ) – ಕೇರಳಂದ ಪ್ರಸಿದ್ಧ ಶಬರಿಮಲೈ ದೇವಾಲಯದಲ್ಲಿ 10 ರಿಂದ 50 ವರ್ಷ ವಯಸ್ಸಿನ ಮಹಿಳೆಯರ ಪ್ರವೇಶದ ಮೇಲಿದ್ದ ಹಲವು ವರ್ಷಗಳ ಸಾಂಪ್ರದಾಯಿಕ ನಿಷೇಧವನ್ನು ಸುಪ್ರೀಂ ಕೋರ್ಟ್ ನ 5 ನ್ಯಾಯಾಧೀಶರ ಪೀಠವು 2018 ರಲ್ಲಿ 4:1 ಬಹುಮತದೊಂದಿಗೆ ರದ್ದುಗೊಳಿಸಿತ್ತು. ನ್ಯಾಯಾಲಯವು ಈ ನಿಷೇಧವನ್ನು ಅಸಂವಿಧಾನಿಕ ಎಂದು ಘೋಷಿಸಿ, ಎಲ್ಲಾ ವಯಸ್ಸಿನ ಮಹಿಳೆಯರಿಗೂ ಪ್ರವೇಶಕ್ಕೆ ಅನುಮತಿ ನೀಡಿತ್ತು. ಆ ಸಮಯದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಕೇರಳಂ ಸರಕಾರವು ಈ ತೀರ್ಪನ್ನು ಬಲವಾಗಿ ಬೆಂಬಲಿಸಿತ್ತು, ಇದು ಇಡೀ ರಾಜ್ಯದಲ್ಲಿ ತೀವ್ರ ಪ್ರತಿಭಟನೆಗೆ ಕಾರಣವಾಗಿತ್ತು. ಈಗ ಈ ಪ್ರಕರಣವನ್ನು 9 ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಮತ್ತೆ ವಿಚಾರಣೆ ನಡೆಸಲಿದ್ದು, ಈ ಬಾರಿ ಕೇರಳಂ ಸರಕಾರವು ತನ್ನ ನಿಲುವನ್ನು ಬದಲಿಸಿಕೊಂಡಿದೆ. ಈ ಹಿಂದೆ ನ್ಯಾಯಾಲಯದ ತೀರ್ಪನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪಟ್ಟು ಹಿಡಿದಿದ್ದ ಸರಕಾರ, ಈಗ ಯಾವುದೇ ಬದಲಾವಣೆ ಮಾಡುವ ಮೊದಲು ಧರ್ಮದ ವಿದ್ವಾಂಸರು ಮತ್ತು ಸಮಾಜ ಸುಧಾರಕರ ಅಭಿಪ್ರಾಯವನ್ನು ಪಡೆಯುವುದು ಅಗತ್ಯ ಎಂಬ ನಿಲುವನ್ನು ತಳೆದಿದೆ.

ನಂಬಿಕೆಯನ್ನು ತರ್ಕದ ಅಳತೆಗೋಲಿನಿಂದ ಪರೀಕ್ಷಿಸಬಾರದು! – ಕೇರಳಂ ಸರಕಾರ

ಮಾರ್ಚ್ 14 ರಂದು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಲಿಖಿತ ಪ್ರತಿಕ್ರಿಯೆಯಲ್ಲಿ ಕೇರಳಂ ಸರಕಾರವು, ನ್ಯಾಯಾಂಗ ವಿಮರ್ಶೆ ನಡೆಸುವಾಗ ಯಾವುದೇ ಧಾರ್ಮಿಕ ಆಚರಣೆಯು ತರ್ಕಬದ್ಧವಾಗಿದೆಯೇ ಅಥವಾ ಭಾವನೆಗಳಿಗೆ ಅನುಗುಣವಾಗಿದೆಯೇ ಎಂದು ಯೋಚಿಸಬಾರದು. ಬದಲಾಗಿ, ಆ ನಂಬಿಕೆಯನ್ನು ಪ್ರಾಮಾಣಿಕವಾಗಿ ಧರ್ಮದ ಭಾಗವೆಂದು ಪರಿಗಣಿಸಲಾಗುತ್ತದೆಯೇ ಎಂಬುದನ್ನು ನೋಡಬೇಕು. ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಧಾರ್ಮಿಕ ಸಂಪ್ರದಾಯದಲ್ಲಿ ಬದಲಾವಣೆ ಮಾಡುವ ಮೊದಲು, ಆ ಧರ್ಮದ ಪ್ರತಿಷ್ಠಿತ ವಿದ್ವಾಂಸರು ಮತ್ತು ಸಮಾಜ ಸುಧಾರಕರ ಅಭಿಪ್ರಾಯವನ್ನು ಪಡೆಯುವುದು ನ್ಯಾಯದ ದೃಷ್ಟಿಯಿಂದ ಅತ್ಯಗತ್ಯ.

2018 ರ ತೀರ್ಪಿನ ವಿರುದ್ಧ ಸಲ್ಲಿಕೆಯಾದ ಮರುಪರಿಶೀಲನಾ ಅರ್ಜಿಗಳ ವಿಚಾರಣೆ ನಡೆಸುವಾಗ, ನವೆಂಬರ್ 2019 ರಲ್ಲಿ 5 ನ್ಯಾಯಾಧೀಶರ ಪೀಠವು 3:2 ಬಹುಮತದೊಂದಿಗೆ ಈ ತೀರ್ಪಿನ ಪರಿಣಾಮ ಇತರ ಧರ್ಮಗಳ ಮೇಲೂ ಆಗಬಹುದು, ಆದ್ದರಿಂದ ಹೆಚ್ಚಿನ ಆಳವಾದ ಚಿಂತನೆಯ ಅಗತ್ಯವಿದೆ ಎಂದು ಹೇಳಿತ್ತು. ದೊಡ್ಡ ಪೀಠವು ನಿರ್ಧಾರ ನೀಡುವವರೆಗೆ ಮರುಪರಿಶೀಲನಾ ಅರ್ಜಿಗಳನ್ನು ಬಾಕಿ ಇರಿಸಬೇಕೆಂದು ಸೂಚಿಸಲಾಗಿತ್ತು. ಇದರ ನಂತರ ಪ್ರಕರಣವನ್ನು 9 ನ್ಯಾಯಾಧೀಶರ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಲಾಗಿದ್ದು, ಮುಂದಿನ 7 ಪ್ರಮುಖ ಪ್ರಶ್ನೆಗಳ ಮೇಲೆ ನಿರ್ಧಾರವಾಗಲಿದೆ.

1. ಸಂವಿಧಾನದ ವಿಧಿ 25 ಮತ್ತು 26 ರ ಅಡಿಯಲ್ಲಿ ಧಾರ್ಮಿಕ ಸ್ವಾತ್ಸಂತ್ರ್ಯ ಮತ್ತು ಭಾಗ 3 ರ ಇತರ ನಿಬಂಧನೆಗಳ ನಡುವಿನ ಸಂಬಂಧವೇನು?

2. ವಿಧಿ 25(1) ರಲ್ಲಿ ಉಲ್ಲೇಖಿಸಲಾದ ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯ ಎಂಬ ಮಿತಿಗಳ ವ್ಯಾಪ್ತಿ ಏನು?

3. ವಿಧಿ 25 ಮತ್ತು 26 ರಲ್ಲಿನ ನೈತಿಕತೆ ಎಂಬ ಪದದ ಅರ್ಥ ಮತ್ತು ವಿಸ್ತಾರವೇನು? ಅದರಲ್ಲಿ ಸಾಂವಿಧಾನಿಕ ನೈತಿಕತೆಯನ್ನು ಸೇರಿಸಬೇಕೆ?

4. ಅಗತ್ಯ ಧಾರ್ಮಿಕ ಆಚರಣೆಗಳನ್ನು ಗುರುತಿಸುವ ವಿಷಯದಲ್ಲಿ ನ್ಯಾಯಾಂಗ ವಿಮರ್ಶೆಯ ವ್ಯಾಪ್ತಿ ಮತ್ತು ಮಿತಿಗಳೇನು?

5. ವಿಧಿ 25(2)(ಬಿ) ನಲ್ಲಿ ಬಳಸಲಾದ ಹಿಂದೂಗಳ ವರ್ಗ ಎಂಬ ಪದದ ಅರ್ಥವೇನು?

6. ವಿಧಿ 26 ರ ಅಡಿಯಲ್ಲಿ ಅಗತ್ಯ ಧಾರ್ಮಿಕ ಆಚರಣೆಗಳಿಗೆ ರಕ್ಷಣೆ ಸಿಗುತ್ತದೆಯೇ?

7. ವ್ಯಕ್ತಿಯೊಬ್ಬರು ಆ ಧಾರ್ಮಿಕ ಸಂಪ್ರದಾಯಕ್ಕೆ ಸೇರದಿದ್ದರೂ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಆ ಸಂಪ್ರದಾಯದ ಆಚರಣೆಯನ್ನು ಪ್ರಶ್ನಿಸಬಹುದೇ?

ಸಾಂವಿಧಾನಿಕ ನೈತಿಕತೆಯ ಕುರಿತಾದ ನಿಲುವು

ವೈಯಕ್ತಿಕ ನಂಬಿಕೆಗಳನ್ನು ಬದಲಾಯಿಸುವ ಮೂಲಕ ನೈತಿಕತೆಯನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಕೇರಳಂ ಸರಕಾರ ಸ್ಪಷ್ಟಪಡಿಸಿದೆ. ಅದು ಸಮಾನತೆ, ತಾರತಮ್ಯದ ನಿರ್ಮೂಲನೆ ಮತ್ತು ಅಸ್ಪೃಶ್ಯತೆಯ ನಿವಾರಣೆಯಂತಹ ಸಾಂವಿಧಾನಿಕ ತತ್ವಗಳೊಂದಿಗೆ ಬೆಸೆದುಕೊಂಡಿರಬೇಕು. ಆದಾಗ್ಯೂ, ಯಾವುದೇ ಆಚರಣೆಯು ಕಾನೂನಿಗೆ ವಿರುದ್ಧವಾಗಿದ್ದರೆ ಅಥವಾ ಸಾಮಾಜಿಕ ಶಿಷ್ಟಾಚಾರಕ್ಕೆ ವಿರುದ್ಧವಾಗಿದ್ದರೆ ಅದನ್ನು ಧರ್ಮದ ಹೆಸರಿನಲ್ಲಿ ಒಪ್ಪಲು ಸಾಧ್ಯವಿಲ್ಲ ಎಂದೂ ಹೇಳಿದೆ.

ಶಬರಿಮಲೈ ದೇವಾಲಯದ ಪ್ರವೇಶದ ಸಂಪ್ರದಾಯವೇನು?

ಶಬರಿಮಲೈ ದೇವಾಲಯದಲ್ಲಿ ಭಗವಾನ್ ಅಯ್ಯಪ್ಪನನ್ನು ನೈಷ್ಠಿಕ ಬ್ರಹ್ಮಚಾರಿ ರೂಪದಲ್ಲಿ ಪೂಜಿಸಲಾಗುತ್ತದೆ. ಈ ಸಂಪ್ರದಾಯದ ಕಾರಣದಿಂದಾಗಿ 10 ರಿಂದ 50 ವರ್ಷ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧವಿತ್ತು. ಭಕ್ತರ ನಂಬಿಕೆಯ ಪ್ರಕಾರ, ದೇವತೆಯ ಬ್ರಹ್ಮಚರ್ಯ ಮತ್ತು ತಪಸ್ಸಿನ ಶಕ್ತಿಯನ್ನು ಕಾಪಾಡಿಕೊಳ್ಳಲು ಋತುಚಕ್ರದ ವಯಸ್ಸಿನ ಮಹಿಳೆಯರ ಪ್ರವೇಶವನ್ನು ವರ್ಜ್ಯವೆಂದು ಪರಿಗಣಿಸಲಾಗುತ್ತದೆ.

ಸಂಪಾದಕೀಯ ನಿಲುವು

ಈ ವಯೋಮಾನದ ಮಹಿಳೆಯರಿಗೆ ದೇವಾಲಯ ಪ್ರವೇಶ ನೀಡುವ ನಿರ್ಧಾರವನ್ನು ಮೊದಲು ಕೈಗೊಂಡಾಗ ಸರಕಾರವು ಇದೇ ನಿಲುವನ್ನು ಏಕೆ ತೆಗೆದುಕೊಳ್ಳಲಿಲ್ಲ? ಇದರಿಂದ ಸಾಮ್ಯವಾದಿ ಕೇರಳಂ ಸರಕಾರಕ್ಕೆ ಹಿಂದೂಗಳ ಆಚಾರ-ವಿಚಾರಗಳನ್ನು ಮುರಿಯುವ ಉದ್ದೇಶವಿದೆ ಎಂಬುದು ಸಾಬೀತಾಗುತ್ತದೆ!