Maharashtra Freedom of Religion Bill 2026 : ಆಮಿಷ, ವಂಚನೆ ಮತ್ತು ಪ್ರಲೋಭನೆ ಮೂಲಕ ನಡೆಯುವ ಮತಾಂತರ ತಡೆಗೆ ‘ಮಹಾರಾಷ್ಟ್ರ ಧರ್ಮ ಸ್ವಾತಂತ್ರ್ಯ ಅಧಿನಿಯಮ’ ವಿಧಾನಸಭೆಯಲ್ಲಿ ಮಂಡನೆ !

ಮುಂಬಯಿ, ಮಾರ್ಚ್ 13 (ವಾರ್ತೆ): ಆಮಿಷ, ವಂಚನೆ ಮತ್ತು ಪ್ರಲೋಭನೆಗಳ ಮೂಲಕ ನಡೆಯುವ ಮತಾಂತರವನ್ನು ತಡೆಗಟ್ಟಲು ‘ಮಹಾರಾಷ್ಟ್ರ ಧರ್ಮ ಸ್ವಾತಂತ್ರ್ಯ ಅಧಿನಿಯಮ 2026’ ವಿಧೇಯಕವನ್ನು ಮಾರ್ಚ್ 13 ರಂದು ವಿಧಾನಸಭೆಯಲ್ಲಿ ಮಂಡಿಸಲಾಯಿತು. ಗೃಹ ರಾಜ್ಯ ಸಚಿವ (ಗ್ರಾಮೀಣ) ಡಾ. ಪಂಕಜ್ ಭೋಯರ್ ಅವರು ಈ ವಿಧೇಯಕವನ್ನು ಸದನದಲ್ಲಿ ಮಂಡಿಸಿದರು. ‘ವಂಚನೆಯ ಮೂಲಕ ನಡೆಯುವ ಮತಾಂತರವನ್ನು ತಡೆಯಲು ಮಹಾರಾಷ್ಟ್ರದಲ್ಲಿ ಸಮರ್ಥ ಕಾನೂನನ್ನು ಜಾರಿಗೆ ತರಬೇಕು’ ಎಂದು ಕಳೆದ ಹಲವು ವರ್ಷಗಳಿಂದ ಹಿಂದುತ್ವನಿಷ್ಠ ಸಂಘಟನೆಗಳು ಸರಕಾರವನ್ನು ಒತ್ತಾಯಿಸುತ್ತಿದ್ದವು.

ಕಳೆದ ವಾರವಷ್ಟೇ ಈ ಕಾನೂನಿನ ಕರಡು ಪ್ರತಿಯನ್ನು ಸಚಿವ ಸಂಪುಟದ ಸಭೆಯಲ್ಲಿ ಅನುಮೋದಿಸಲಾಗಿತ್ತು. ಈ ವಿಧೇಯಕ ಈಗ ವಿಧಾನಸಭೆಯಲ್ಲಿ ಮಂಡನೆಯಾಗಿರುವುದರಿಂದ, ಮುಂಬರುವ ದಿನಗಳಲ್ಲಿ ಈ ವಿಧೇಯಕದ ಬಗ್ಗೆ ಸದನದಲ್ಲಿ ಚರ್ಚೆ ನಡೆಯಲಿದೆ. ನಂತರ ಇದು ಕಾನೂನಾಗಿ ರೂಪಗೊಳ್ಳಲು ರಾಜ್ಯಪಾಲರ ಅಂಕಿತಕ್ಕಾಗಿ ಕಳುಹಿಸಲಾಗುವುದು. ವಿಧಾನಸಭೆ ಮತ್ತು ವಿಧಾನ ಪರಿಷತ್ ಎರಡರಲ್ಲೂ ಸರಕಾರಕ್ಕೆ ಬಹುಮತ ಇರುವುದರಿಂದ, ಈ ವಿಧೇಯಕವು ಯಾವುದೇ ಅಡೆತಡೆಯಿಲ್ಲದೆ ಅಂಗೀಕಾರವಾಗಲಿದೆ ಎಂದು ಹೇಳಲಾಗುತ್ತಿದೆ.