‘ಕೊಲಿಜಿಯಂ’ನಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿಯುವುದಿಲ್ಲ ! – Collegium

ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರಿಂದ ‘ಕೊಲಿಜಿಯಂ’ ವ್ಯವಸ್ಥೆಯ ಬಗ್ಗೆ ಪ್ರಶ್ನೆ !

ನವ ದೆಹಲಿ – ‘ಕೊಲಿಜಿಯಂ’ನಲ್ಲಿ ಏನು ನಡೆಯುತ್ತಿದೆ ಎಂಬುದು ನನಗೇ ತಿಳಿಯುತ್ತಿಲ್ಲ ಎಂಬ ವಿಷಯ ನಿಮಗೆ ಆಶ್ಚರ್ಯವನ್ನು ಉಂಟುಮಾಡಬಹುದು. ‘ಕೊಲಿಜಿಯಂ’ ಎಲ್ಲಿ ಭೇಟಿಯಾಗುತ್ತದೆ (ಸಭೆ ಎಲ್ಲಿ ನಡೆಯುತ್ತದೆ?) ಎಂಬುದು ಕೂಡ ನನಗೆ ತಿಳಿದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ದೀಪಂಕರ ದತ್ತಾ ಅವರು ಹೇಳಿಕೆ ನೀಡಿದರು. ಈ ಮೂಲಕ ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇಮಕಾತಿ ಮತ್ತು ವರ್ಗಾವಣೆಯ ಶಿಫಾರಸು ಮಾಡಲು ಬಳಸುವ ‘ಕೊಲಿಜಿಯಂ’ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ. (‘ಕೊಲಿಜಿಯಂ’ ಎಂದರೆ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇಮಕಾತಿ ಮತ್ತು ವರ್ಗಾವಣೆಗೆ ಸಂಬಂಧಿಸಿದ ಒಂದು ವ್ಯವಸ್ಥೆ)

ನ್ಯಾಯಾಂಗ ನೇಮಕಾತಿಗಳು ಲಿಂಗಕ್ಕಿಂತ ಅರ್ಹತೆಯ ಮೇಲೆ ಆಧಾರದ ಮೇಲೆ ನಡೆಯಬೇಕು!

ನ್ಯಾಯಮೂರ್ತಿ ದೀಪಂಕರ ದತ್ತಾ ಅವರು ಮಾತು ಮುಂದುವರಿಸುತ್ತಾ, ನ್ಯಾಯಾಂಗದ ನೇಮಕಾತಿಗಳು ಲಿಂಗಕ್ಕಿಂತ ಹೆಚ್ಚಾಗಿ ಅರ್ಹತೆಯ (ಗುಣಮಟ್ಟದ) ಮೇಲೆ ಆಧಾರಿತವಾಗಿರಬೇಕು. ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಪದೋನ್ನತಿಯ ಪ್ರಶ್ನೆ ಬಂದಾಗ, ನಾನು ಕೇವಲ ಸಂಖ್ಯೆಯನ್ನು ನೋಡುವುದಿಲ್ಲ. ನಾವು ಅವರ ಅರ್ಹತೆಯ ಕಡೆಗೆ ಗಮನ ಹರಿಸಬೇಕು,” ಎಂದರು.

ಸಾಮರ್ಥ್ಯ, ಪ್ರಾಮಾಣಿಕತೆ ಮತ್ತು ಸ್ವಭಾವವನ್ನು ಪರಿಗಣಿಸಬೇಕು

ಪೀಠಕ್ಕೆ ಪದೋನ್ನತಿ ನೀಡುವ ಮೊದಲು ಆ ವ್ಯಕ್ತಿಯ ಸಾಮರ್ಥ್ಯ, ಪ್ರಾಮಾಣಿಕತೆ ಮತ್ತು ಸ್ವಭಾವವನ್ನು ಗಣನೆಗೆ ತೆಗೆದುಕೊಳ್ಳಬೇಕು. ಯಾರಾದರೂ ನ್ಯಾಯಾಧೀಶರಾಗಲು ಅರ್ಹರಾಗಿದ್ದರೆ, ಅವರು ಖಂಡಿತವಾಗಿಯೂ ಆ ಸ್ಥಾನಕ್ಕೆ ಏರಬೇಕು ಎಂದು ನ್ಯಾಯಮೂರ್ತಿ ದತ್ತಾ ಹೇಳಿದರು.

‘ಕೊಲಿಜಿಯಂ’ ವ್ಯವಸ್ಥೆ ಎಂದರೇನು?

ಉನ್ನತ ನ್ಯಾಯಾಂಗದಲ್ಲಿ ನ್ಯಾಯಾಧೀಶರ ನೇಮಕಾತಿ ಮತ್ತು ವರ್ಗಾವಣೆಗೆ ಕೊಲಿಜಿಯಂ ವ್ಯವಸ್ಥೆಯು ಜವಾಬ್ದಾರಿಯಾಗಿದೆ. ಈ ಕೊಲಿಜಿಯಂ ವ್ಯವಸ್ಥೆಯನ್ನು ಸಂಸತ್ತು ಜಾರಿಗೆ ತಂದಿಲ್ಲ ಮತ್ತು ಇದು ಯಾವುದೇ ಸಾಂವಿಧಾನಿಕ ತಿದ್ದುಪಡಿಯೂ ಅಲ್ಲ. ಬದಲಾಗಿ, ಸರ್ವೋಚ್ಚ ನ್ಯಾಯಾಲಯದ ವಿವಿಧ ತೀರ್ಪುಗಳ ಮೂಲಕ ಈ ವ್ಯವಸ್ಥೆಯು ರೂಪಗೊಂಡಿದೆ. ಇದರಲ್ಲಿ 5 ಹಿರಿಯ ನ್ಯಾಯಾಧೀಶರು ಇರುತ್ತಾರೆ. ಈ ವ್ಯವಸ್ಥೆಯ ನೇತೃತ್ವವನ್ನು ಭಾರತದ ಮುಖ್ಯ ನ್ಯಾಯಮೂರ್ತಿಗಳು ವಹಿಸುತ್ತಾರೆ. ಉಚ್ಚ ನ್ಯಾಯಾಲಯದ ಕೊಲಿಜಿಯಂ ನೇತೃತ್ವವನ್ನು ಆಯಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ವಹಿಸುತ್ತಾರೆ ಮತ್ತು ಅದರಲ್ಲಿ ಆ ನ್ಯಾಯಾಲಯದ ಇಬ್ಬರು ಹಿರಿಯ ನ್ಯಾಯಾಧೀಶರು ಇರುತ್ತಾರೆ. ಈ ವ್ಯವಸ್ಥೆಯು ನ್ಯಾಯಾಧೀಶರ ಹೆಸರುಗಳನ್ನು ಶಿಫಾರಸು ಮಾಡಿದ ನಂತರವಷ್ಟೇ ಸರಕಾರದ ಪಾತ್ರವು ಆರಂಭವಾಗುತ್ತದೆ.

ಸಂಪಾದಕೀಯ ನಿಲುವು

ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇಮಕಾತಿ ಹಾಗೂ ವರ್ಗಾವಣೆಯ ವಿಷಯದಲ್ಲಿ ಯಾವಾಗಲೂ ಅನೇಕರಿಂದ ಪ್ರಶ್ನೆಗಳು ವ್ಯಕ್ತವಾಗುತ್ತಿರುತ್ತವೆ. ‘ಈ ವ್ಯವಸ್ಥೆಯು ಬದಲಾಗಬೇಕು’ ಎಂಬ ಬೇಡಿಕೆಯೂ ಕೇಳಿಬರುತ್ತಿದೆ. ಈಗ ನೇರವಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳೇ ಇದರ ಮೇಲೆ ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕಿರುವುದರಿಂದ ಇದರ ಬಗ್ಗೆ ಚರ್ಚೆ ನಡೆಯುವುದು ಆವಶ್ಯಕವಾಗಿದೆ !