ಇರಾನ್‌ಗೆ ಬೆಂಬಲ: ಮಧ್ಯಪ್ರದೇಶದ ರೈಸೇನ್ ಕೋಟೆಯಿಂದ ಫಿರಂಗಿ ಹಾರಿಸಿದ ಯುವಕರು! – MP Raisen Viral Video

ನಾಲ್ವರು ಮುಸ್ಲಿಂ ಯುವಕರ ಬಂಧನ

ರೈಸೇನ್ (ಮಧ್ಯಪ್ರದೇಶ) – ಇಲ್ಲಿನ ರೈಸೇನ್ ಕೋಟೆಯ ಮೇಲೆ ಕೆಲವು ಮುಸ್ಲಿಂ ಯುವಕರು ಫಿರಂಗಿ ಹಾರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡುತ್ತಿದೆ (ವೈರಲ್ ಆಗಿದೆ). ಈ ವಿಡಿಯೋದಲ್ಲಿ ಯುವಕರು ಕೋಟೆಯ ಗುಡ್ಡದ ಮೇಲೆ ನಿಂತು ‘ಅಲ್ಲಾಹೂ ಅಕ್ಬರ್’ (ಅಲ್ಲಾಹೂ ಅಕ್ಬರ್ ಎಂದರೆ ಅಲ್ಲಾಹು ಮಹಾನ್ ಎಂದರ್ಥ) ಮತ್ತು ‘ನಾವು ಇರಾನ್‌ಗೆ ಬೆಂಬಲ ನೀಡಲು ಹೋಗುತ್ತಿದ್ದೇವೆ’ ಎಂದು ಘೋಷಣೆ ಕೂಗುತ್ತಿರುವುದು ಕಂಡುಬಂದಿದೆ. ಅಲ್ಲದೆ, ಒಬ್ಬ ಯುವಕ ಬೆಂಕಿಕಡ್ಡಿಯಿಂದ ಫಿರಂಗಿಗೆ ಕಿಚ್ಚು ಹಚ್ಚುತ್ತಿರುವುದು, ತದನಂತರ ಭಾರಿ ಶಬ್ದದೊಂದಿಗೆ ಫಿರಂಗಿ ಸಿಡಿದು ಇಡೀ ಪ್ರದೇಶ ಹೊಗೆಯಿಂದ ಆವೃತವಾಗುವುದು ವಿಡಿಯೋದಲ್ಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಸೇನ್ ಕೊತ್ವಾಲಿ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಿದ್ದಾರೆ. ಬಂಧಿತರನ್ನು ರೈಸೇನ್‌ನ ಶಾದಾಬ್ ಖುರೇಷಿ, ಭೋಪಾಲ್‌ನ ಯೂಸುಫ್ ಶೇಖ್, ವಸೀಮ್ ಮೊಹಮ್ಮದ್ ಮತ್ತು ಪಪ್ಪು ಅಲಿಯಾಸ್ ಸಲ್ಮಾನ್ ಖುರೇಷಿ ಎಂದು ಗುರುತಿಸಲಾಗಿದೆ.

ರೈಸೇನ್‌ನ ಪಟೇಲ್ ನಗರದ ನಿವಾಸಿ ಬ್ರಿಜೇಶ್ ಚಾವರಿಯಾ ನೀಡಿದ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ವಿಡಿಯೋದಲ್ಲಿರುವ ಆಕ್ಷೇಪಾರ್ಹ ಘೋಷಣೆಗಳು ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದ್ದು, ನಗರದ ಶಾಂತಿಯುತ ವಾತಾವರಣವನ್ನು ಕೆಡಿಸಬಹುದು ಎಂದು ದೂರಿನಲ್ಲಿ ತಿಳಿಸಲಾಗಿದೆ.

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಆಕ್ಷೇಪ

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (NCPCR) ಅಧ್ಯಕ್ಷರಾದ ಪ್ರಿಯಾಂಕ್ ಕಾನೂನಗೊ ಅವರು ಈ ಘಟನೆಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಪುರಾತತ್ವ ಇಲಾಖೆಯಿಂದ ಸಂರಕ್ಷಿಸಲ್ಪಟ್ಟ ಕೋಟೆಯಿಂದ ಜನವಸತಿ ಪ್ರದೇಶದ ಕಡೆಗೆ ಫಿರಂಗಿ ಹಾರಿಸುವುದು ಅತ್ಯಂತ ಅಪಾಯಕಾರಿ ಮತ್ತು ಇದರಿಂದ ಜನರ ಜೀವಕ್ಕೆ ಸಂಚಕಾರ ಬರಬಹುದು ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಪುರಾತತ್ವ ಇಲಾಖೆ ಮತ್ತು ಸ್ಥಳೀಯ ಆಡಳಿತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸಂಪಾದಕೀಯ ನಿಲುವು

ಬೇರೊಂದು ದೇಶಕ್ಕಾಗಿ ಸ್ವಂತ ದೇಶದಲ್ಲಿ ಇಂತಹ ಕೃತ್ಯವೆಸಗುವವರಿಗೆ ಕಠಿಣ ಶಿಕ್ಷೆ ವಿಧಿಸಿ, ಅವರನ್ನು ದೇಶದಿಂದ ಹೊರಹಾಕಬೇಕೆಂದು ಯಾರಾದರೂ ಆಗ್ರಹಿಸಿದರೆ ಅದರಲ್ಲಿ ಆಶ್ಚರ್ಯಪಡಬೇಕಿಲ್ಲ!