ಬಾಂಗ್ಲಾದೇಶಕ್ಕೆ ಮರಳುವುದಾಗಿ ಘೋಷಿಸಿದ ಶೇಖ್ ಹಸೀನಾ! Sheikh Hasina Announced Return Bangladesh

ನವದೆಹಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಮಂತ್ರಿ ಶೇಖ್ ಹಸೀನಾ ಅವರು ತಮ್ಮ ಪ್ರಾಣ ಉಳಿಸಿಕೊಳ್ಳಲು ಆಗಸ್ಟ್ 5. 2024 ರಂದು ಭಾರತಕ್ಕೆ ಆಗಮಿಸಿದ್ದರು. ಅಂದಿನಿಂದ ಅವರು ಭಾರತದಲ್ಲೇ ನೆಲೆಸಿದ್ದಾರೆ. ಆದರೆ, ಈಗ ತಾವು ಮತ್ತೆ ತಾಯ್ನಾಡಿಗೆ ಮರಳುವುದಾಗಿ ಸ್ವತಃ ಘೋಷಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಚುನಾವಣೆಗಳನ್ನು ಕಟುವಾಗಿ ಟೀಕಿಸಿದ ಅವರು, ತಮ್ಮ ‘ಆವಾಮಿ ಲೀಗ್’ ಪಕ್ಷಕ್ಕೆ ಆಗಿರುವ ಅನ್ಯಾಯದ ಬಗ್ಗೆಯೂ ಧ್ವನಿ ಎತ್ತಿದ್ದಾರೆ. ಢಾಕಾದಲ್ಲಿ ನಡೆದ ಆವಾಮಿ ಲೀಗ್ ಪಕ್ಷದ ಕೆಲವು ನಾಯಕರ ಸಭೆಯಲ್ಲಿ ಹಸೀನಾ ಅವರು ದೆಹಲಿಯಿಂದ ಆನ್‌ಲೈನ್ ಮೂಲಕ ಭಾಗವಹಿಸಿದ್ದರು.

“ನಮ್ಮ ತಾಯ್ನಾಡಿಗೆ ಮರಳಲೇಬೇಕು!” – ಶೇಖ್ ಹಸೀನಾ

ಹಸೀನಾ ಅವರು ಪಕ್ಷದ ನಾಯಕರಿಗೆ ಕರೆ ನೀಡುತ್ತಾ, “ಮಾನಸಿಕವಾಗಿ ಮತ್ತು ದೈಹಿಕವಾಗಿ ಸಿದ್ಧರಾಗಿ. ಈಗ ನಾವೆಲ್ಲರೂ ನಮ್ಮ ತಾಯ್ನಾಡಿಗೆ ಮರಳಿ ಬೀದಿಗಿಳಿದು ಹೋರಾಡಬೇಕಾಗಿದೆ. ಸಾಮಾನುಗಳನ್ನು ಪ್ಯಾಕ್ ಮಾಡಿ, ದೇಶಕ್ಕೆ ಮರಳಿ ಮೈದಾನಕ್ಕಿಳಿಯುವ ಸಮಯ ಬಂದಿದೆ,” ಎಂದು ಹೇಳಿದರು.

ಹಸೀನಾ ಅವರು ಮೊಹಮ್ಮದ್ ಯೂನಸ್ ಅವರ ಮಧ್ಯಂತರ ಸರಕಾರ ಮತ್ತು ತಾರಿಕ್ ರೆಹಮಾನ್ ನೇತೃತ್ವದಲ್ಲಿ ಇತ್ತೀಚೆಗೆ ಸ್ಥಾಪನೆಯಾದ ಸರಕಾರಕ್ಕೆ ನೇರ ಸವಾಲು ಹಾಕಿದರು. “ಯೂನಸ್ ಸರಕಾರ ಅಕ್ರಮವಾಗಿತ್ತು, ಆದ್ದರಿಂದ ಅವರ ಆದೇಶಗಳಿಗೆ ಯಾವುದೇ ಅರ್ಥವಿಲ್ಲ. ಸರಕಾರವು ಆವಾಮಿ ಲೀಗ್ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳದಿದ್ದರೆ, ಪಕ್ಷವು ತನ್ನದೇ ಆದ ಕಾರ್ಯತಂತ್ರವನ್ನು ರೂಪಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ,” ಎಂದು ಅವರು ಎಚ್ಚರಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ನಡೆದ ಚುನಾವಣೆಯನ್ನು ಹಸೀನಾ ‘ಹಾಸ್ಯಾಸ್ಪದ’ ಎಂದು ಕರೆದಿದ್ದಾರೆ ಮತ್ತು “ಜನರು ಮತದಾನವನ್ನು ಬಹಿಷ್ಕರಿಸಿದ್ದಾರೆ” ಎಂದು ಒತ್ತಿ ಹೇಳಿದರು. ಶೇಕಡಾ 60% ರಷ್ಟು ಮತದಾನವಾಗಿದೆ ಎಂಬ ಅಂಕಿ-ಅಂಶವು ಸಂಪೂರ್ಣ ಸುಳ್ಳು, ಏಕೆಂದರೆ ಮತದಾನಕ್ಕೆ ಮೊದಲೇ ಬ್ಯಾಲೆಟ್ ಬಾಕ್ಸ್‌ಗಳನ್ನು ತುಂಬಿಸಲಾಗಿತ್ತು ಎಂದು ಹಸೀನಾ ಆರೋಪಿಸಿದ್ದಾರೆ.

ಗಮನಾರ್ಹವೆಂದರೆ: ಪ್ರಸ್ತುತ ಆವಾಮಿ ಲೀಗ್ ಪಕ್ಷದ ಮೇಲೆ ನಿಷೇಧ ಹೇರಲಾಗಿದ್ದು, ಶೇಖ್ ಹಸೀನಾ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.