ಕೆಲಸದಲ್ಲಿನ ಭಿನ್ನಾಭಿಪ್ರಾಯಗಳು ‘ಪರಿಶಿಷ್ಟ ಜಾತಿ-ಪಂಗಡ ದೌರ್ಜನ್ಯ ತಡೆ ಕಾಯ್ದೆ’ ಅಡಿಯಲ್ಲಿ ಅಪರಾಧವಲ್ಲ! – ಕೋಲಕಾತಾ ಉಚ್ಚ ನ್ಯಾಯಾಲಯ Kolkata High Court Order

ಕೋಲಕಾತಾ (ಬಂಗಾಳ) – ಕೆಲಸದ ಸ್ಥಳದಲ್ಲಿ ಉಂಟಾಗುವ ವೃತ್ತಿಪರ ಭಿನ್ನಾಭಿಪ್ರಾಯಗಳು, ಆಡಳಿತಾತ್ಮಕ ವಿವಾದಗಳು ಅಥವಾ ತಥಾಕಥಿತ ಅಪಮಾನದ ಪ್ರತಿಯೊಂದು ಘಟನೆಯನ್ನು ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ’ ಅಡಿಯಲ್ಲಿ ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲ. ಈ ಕಾಯ್ದೆಯಡಿ ಅಪರಾಧವೆಂದು ನಿರ್ಧರಿಸಲು, ಸ್ಪಷ್ಟವಾಗಿ ಜಾತಿ ಆಧಾರಿತವಾಗಿ ಮತ್ತು ಸಾರ್ವಜನಿಕ ಸ್ಥಳದಲ್ಲಿ ಅಪಮಾನ ಅಥವಾ ನಿಂದನೆ ನಡೆದಿರುವುದು ಸಾಬೀತಾಗುವುದು ಅವಶ್ಯಕವಾಗಿದೆ ಎಂದು ಕೋಲಕಾತಾ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ನ್ಯಾಯಾಲಯವು ಕ್ರಿಮಿನಲ್ ಪ್ರಕ್ರಿಯೆ ಸಂಹಿತೆಯ ಕಲಂ ೪೮೨ ರ ಅಡಿಯಲ್ಲಿ ಮುಂದಿನ ವಿಚಾರಣೆಗೆ ಅನುಮತಿ ನೀಡಿತು; ಆದರೆ ಪರಿಶಿಷ್ಟ ಜಾತಿ-ಪಂಗಡ ದೌರ್ಜನ್ಯ ತಡೆ ಕಾಯ್ದೆಯ ಕಲಂ ೩(೧)(ಆರ್) ಅಡಿಯಲ್ಲಿ ಹೊರಿಸಲಾದ ಆರೋಪಗಳನ್ನು ರದ್ದುಗೊಳಿಸಿತು.

೧. ಈ ಸಂಪೂರ್ಣ ಪ್ರಕರಣವು ಸಂಸ್ಕೃತ ಮಹಾವಿದ್ಯಾಲಯ ಮತ್ತು ವಿಶ್ವವಿದ್ಯಾಲಯದ ಒಬ್ಬ ಮಹಿಳಾ ಪ್ರಾಧ್ಯಾಪಕರಿಗೆ ಸಂಬಂಧಿಸಿದ್ದಾಗಿದೆ. ಪ್ರಾಧ್ಯಾಪಕರು ಸಂಸ್ಕೃತ ವಿಭಾಗದ ಮಾಜಿ ವಿಭಾಗ ಮುಖ್ಯಸ್ಥರಾಗಿದ್ದರು. ಅವರ ವಿರುದ್ಧ ಅದೇ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಒಬ್ಬ ಸಹಾಯಕ ಪ್ರಾಧ್ಯಾಪಕರು ದೂರು ದಾಖಲಿಸಿದ್ದರು. ವಿಭಾಗ ಮುಖ್ಯಸ್ಥರು ತಮ್ಮನ್ನು ಇಲಾಖೆಯ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಿಂದ ದೂರವಿಟ್ಟಿದ್ದಾರೆ, ತಮ್ಮ ಬೋಧನಾ ಕಾರ್ಯವನ್ನು ನಿಲ್ಲಿಸಿದ್ದಾರೆ, ಇಲಾಖೆಯ ಕೆಲಸ ಕಾರ್ಯಗಳಲ್ಲಿ ಅಡಚಣೆ ಉಂಟುಮಾಡಿದ್ದಾರೆ ಮತ್ತು ಆನ್‌ಲೈನ್ ಸಭೆಯ ಸಂದರ್ಭದಲ್ಲಿ ನಿಂದನೀಯ ಭಾಷೆಯನ್ನು ಬಳಸಿದ್ದಾರೆಂದು ಆರೋಪಿಸಿದ್ದರು. ಜಾತಿಯ ಕಾರಣಕ್ಕಾಗಿಯೇ ಈ ಭೇದ-ಭಾವ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದರು.

೨. ದೂರಿನಲ್ಲಿರುವ ಆರೋಪಗಳು ಪ್ರಮುಖವಾಗಿ ವೃತ್ತಿಪರ ಮತ್ತು ಆಡಳಿತಾತ್ಮಕ ವಿವಾದಗಳಿಗೆ ಸಂಬಂಧಿಸಿವೆ ಎಂದು ನ್ಯಾಯಾಲಯವು ಗಮನಿಸಿತು. ದಾಖಲೆಗಳಲ್ಲಿ ಅಂತಹ ಯಾವುದೇ ದೃಢವಾದ ಆರೋಪಗಳು ಕಂಡುಬಂದಿಲ್ಲ, ಈ ಆಧಾರದ ಮೇಲೆ ಆಪಾದಿತ ಅಪಮಾನವು ಜಾತಿ ಆಧಾರಿತ ಮತ್ತು ಸಾರ್ವಜನಿಕ ರೂಪದಲ್ಲಿ ನಡೆದಿದೆ ಎಂದು ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

೩. ನ್ಯಾಯಾಲಯವು ಕಲಂ ೩(೧)(ಆರ್) ಅಡಿಯಲ್ಲಿ ಅಪರಾಧವನ್ನು ಸಾಬೀತುಪಡಿಸಲು ಉದ್ದೇಶಪೂರ್ವಕವಾಗಿ ಜಾತಿ ಆಧಾರಿತ ಮತ್ತು ಸಾರ್ವಜನಿಕವಾಗಿ ಅವಮಾನವಾಗಿರಬೇಕೆಂದು ಸ್ಪಷ್ಟಪಡಿಸಿದೆ. ಕೇವಲ ಕೆಲಸದ ಸ್ಥಳದಲ್ಲಿ ವಿವಾದ ಉಂಟಾಗುವುದು ಅಥವಾ ಸಂತ್ರಸ್ತನ ಜಾತಿ ತಿಳಿದಿರುವುದು ಮಾತ್ರವೇ ಈ ಕಾಯ್ದೆಯ ಅಡಿಯಲ್ಲಿ ಕ್ರಮ ಕೈಗೊಳ್ಳಲು ಸಾಕಾಗುವುದಿಲ್ಲ.