ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ನಿವೃತ್ತ ಉಪ ಮಹಾಪ್ರಬಂಧಕರಿಗೆ ಸೈಬರ್ ವಂಚಕರಿಂದ 1.10 ಕೋಟಿ ರೂಪಾಯಿ ವಂಚನೆ! Cyber Crime DGM Punjab National Bank

ಉತ್ತಮ ಲಾಭದ ಆಮಿಷವೊಡ್ಡಿ ವಂಚನೆ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ‘ಪಂಜಾಬ್ ನ್ಯಾಷನಲ್ ಬ್ಯಾಂಕ್’ನ ನಿವೃತ್ತ ಉಪ ಮಹಾಪ್ರಬಂಧಕ ದಿನೇಶ್ ಶರ್ಮಾ ಅವರಿಗೆ ೧ ಕೋಟಿ ೧೦ ಲಕ್ಷ ರೂಪಾಯಿಗಳ ವಂಚನೆಯಾಗಿದೆ. ಶರ್ಮಾ ಅವರನ್ನು ಮೊದಲು ಒಂದು ವಾಟ್ಸಾಪ್ ಗುಂಪಿಗೆ ಸೇರಿಸಲಾಯಿತು. ಅವರಿಗೆ ಅತಿಯಾದ ಬಡ್ಡಿಯಿಂದ ಬಂದ ಲಾಭದ ಮೊತ್ತಗಳನ್ನು ತೋರಿಸಲಾಯಿತು. ಇದನ್ನು ನಂಬಿದ ಶರ್ಮಾ ಅವರು ತಮ್ಮ ಬ್ಯಾಂಕ್ ಖಾತೆಯಿಂದ ಬರೋಬ್ಬರಿ ೧ ಕೋಟಿ ೧೦ ಲಕ್ಷ ರೂಪಾಯಿಗಳನ್ನು ವಂಚಕರ ಬಳಿ ಹೂಡಿಕೆ ಮಾಡಿದರು ಮತ್ತು ಅದರಲ್ಲಿ ಪೂರ್ತಿಯಾಗಿ ಸಿಲುಕಿಕೊಂಡರು.

೧. ಅಲಿಗಢದ ನಿವೃತ್ತ ಬ್ಯಾಂಕಿಂಗ್ ವೃತ್ತಿಪರ ದಿನೇಶ ಶರ್ಮಾ ಆರಂಭದಲ್ಲಿ ಜಾಗರೂಕರಾಗಿದ್ದರು; ಆದರೆ ಸೈಬರ್ ಅಪರಾಧಿಗಳು ಅವರಿಗೆ ಉತ್ತಮ ಲಾಭದ ಭರವಸೆ ನೀಡಿ ಬಲೆಯಲ್ಲಿ ಸಿಲುಕಿಸಿದರು.

೨. ಅಪರಾಧಿಗಳು ಮೊದಲು ಅವರಿಗೆ ೩೦-೪೦ ಪ್ರತಿಶತ ಲಾಭ ನೀಡುವುದಾಗಿ ಭರವಸೆ ನೀಡುವ ಸಂದೇಶ ಕಳುಹಿಸಿದರು. ತದನಂತರ ಅವರನ್ನು ಒಂದು ವಾಟ್ಸಾಪ್ ಗುಂಪಿಗೆ ಸೇರಿಸಲಾಯಿತು. ಗುಂಪಿನಲ್ಲಿದ್ದ ಅನೇಕ ಜನರು ತಮಗೆ ಉತ್ತಮ ಲಾಭ ಸಿಕ್ಕಿದೆ ಎಂದು ಹೇಳಿಕೊಳ್ಳುತ್ತಿದ್ದರು.

೩. ವಂಚಕರು ಶರ್ಮಾ ಅವರಿಗೆ ಒಂದು ಸಣ್ಣ ಹೂಡಿಕೆಯಿಂದ ಆರಂಭಿಸಲು ತಿಳಿಸಿದರು. ಅದರಂತೆ ಶರ್ಮಾ ಅವರು ಆರಂಭದಲ್ಲಿ ೫ ಸಾವಿರ ರೂಪಾಯಿ ವರ್ಗಾಯಿಸಿದರು. ಈ ಹಣಕ್ಕೆ ಅವರಿಗೆ ದೊಡ್ಡ ಮೊತ್ತದ ಲಾಭ ಬಂದಿದೆ ಎಂದು ತೋರಿಸಲಾಯಿತು.

೪. ಲಾಭವನ್ನು ನೋಡಿ ಶರ್ಮಾ ಅವರು ಮತ್ತಷ್ಟು ಆಕರ್ಷಿತರಾದರು. ವಂಚಕರು ಶರ್ಮಾ ಅವರ ವಿಶ್ವಾಸ ಗಳಿಸಿ ಅವರಿಗೆ ದೊಡ್ಡ ಹೂಡಿಕೆ ಮಾಡಲು ತಿಳಿಸಿದರು. ಹೀಗಾಗಿ ಶರ್ಮಾ ಅವರು ೧ ಕೋಟಿ ೧೦ ಲಕ್ಷ ರೂಪಾಯಿ ಹೂಡಿಕೆ ಮಾಡಿದರು. ತದನಂತರ ವಂಚಕರು ಮತ್ತೆ ೩ ಕೋಟಿ ರೂಪಾಯಿಗಳ ಬೇಡಿಕೆಯಿಟ್ಟರು. ಶರ್ಮಾ ಅವರಿಗೆ ಸಂದೇಹ ಬಂದಾಗ ಅವರು ಕುಟುಂಬದವರಿಗೆ ಈ ವಿಷಯ ತಿಳಿಸಿದರು.

೫. ಆನಂತರ ತಮಗೆ ಸೈಬರ್ ವಂಚನೆಯಾಗಿದೆ ಎಂಬುದು ಅವರ ಗಮನಕ್ಕೆ ಬಂದಿತು. ತಕ್ಷಣವೇ ಅವರು ಪೊಲೀಸರಿಗೆ ದೂರು ನೀಡಿದರು.

ಸಂಪಾದಕೀಯ ನಿಲುವು

ಭಾರತದ ನಾಲ್ಕನೇ ಅತಿದೊಡ್ಡ ಬ್ಯಾಂಕಿನ ಉನ್ನತ ಹುದ್ದೆಯಲ್ಲಿದ್ದ ನಿವೃತ್ತ ಅಧಿಕಾರಿಯೇ ಇಂತಹ ವಂಚನೆಗೆ ಒಳಗಾಗಿದ್ದಾರೆ ಎಂದರೆ, ಸಾಮಾನ್ಯ ಜನರು ಎಷ್ಟು ಜಾಗರೂಕರಾಗಿರಬೇಕು ಎಂಬುದು ಇದರಿಂದ ತಿಳಿಯುತ್ತದೆ!