ನ್ಯೂಯಾರ್ಕ್ ಮೇಯರ್ ಜೊಹ್ರಾನ್ ಮಮ್ದಾನಿ ಅವರಿಂದ ಹಿಜಾಬ್ ಅನ್ನು ವೈಭವಿಕರಿಸಿದ್ದಕ್ಕೆ ತೀವ್ರ ಟೀಕೆ ! – Mamdani Slammed for Hijab Day

ನ್ಯೂಯಾರ್ಕ್ (ಅಮೆರಿಕಾ) – ಫೆಬ್ರವರಿ 1 ರಂದು ವಿಶ್ವಾದ್ಯಂತ ಆಚರಿಸಲಾಗುವ ‘ವಿಶ್ವ ಹಿಜಾಬ್ ದಿನ’ದ ಸಂದರ್ಭದಲ್ಲಿ ನಗರದ ಮೇಯರ್ ಜೊಹ್ರಾನ್ ಮಮ್ದಾನಿ ಅವರ ಕಚೇರಿಯು ಹಿಜಾಬ್ ಅನ್ನು (ಹಿಜಾಬ್ ಎಂದರೆ ಮುಸ್ಲಿಂ ಮಹಿಳೆಯರು ತಲೆ ಮತ್ತು ಕುತ್ತಿಗೆಯನ್ನು ಮುಚ್ಚಲು ಬಳಸುವ ವಸ್ತ್ರ) ವೈಭವಿಕರಿಸುವ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿತ್ತು. ಇದರಿಂದಾಗಿ ಮಾನವ ಹಕ್ಕು ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮಮ್ದಾನಿ ವಿರುದ್ಧ ಟೀಕೆ ಮಾಡಿದ್ದಾರೆ. ಮಮ್ದಾನಿ ಅವರ ಕಚೇರಿಯು ‘ಎಕ್ಸ್’ (X) ನಲ್ಲಿ ಪ್ರಕಟಿಸಿದ ಬರಹದಲ್ಲಿ, ‘ಹಿಜಾಬ್ ಭಕ್ತಿ ಮತ್ತು ಮುಸ್ಲಿಂ ಪರಂಪರೆಯ ಪ್ರಬಲ ಸಂಕೇತವಾಗಿದೆ. ವಿಶ್ವಾದ್ಯಂತ ಮುಸ್ಲಿಂ ಮಹಿಳೆಯರು ಮತ್ತು ಯುವತಿಯರು ಹಿಜಾಬ್ ಧರಿಸುವ ಆಯ್ಕೆಯನ್ನು ಮಾಡಿಕೊಳ್ಳುತ್ತಾರೆ. ಅವರ ನಂಬಿಕೆ, ಗುರುತು ಮತ್ತು ಹೆಮ್ಮೆಯನ್ನು ಸಂಭ್ರಮಿಸಲು ‘ವಿಶ್ವ ಹಿಜಾಬ್ ದಿನ’ ಒಂದು ವಿಶೇಷ ದಿನವಾಗಿದೆ,’ ಎಂದು ಬರೆದಿದ್ದಾರೆ.

೧. ಇರಾನ್ ಮೂಲದ ಅಮೆರಿಕನ್ ಪತ್ರಕರ್ತೆ ಮತ್ತು ಮಾನವ ಹಕ್ಕು ಕಾರ್ಯಕರ್ತೆ ಮಸೀಹ್ ಅಲಿನೆಜಾದ್ ಅವರು ಮೇಯರ್ ಅವರನ್ನು ನೇರವಾಗಿ ಉದ್ದೇಶಿಸಿ, “ನ್ಯೂಯಾರ್ಕ್‌ನಂತಹ ನಗರದಲ್ಲಿ ವಾಸಿಸುತ್ತಿದ್ದರೂ ಮೇಯರ್ ಇಂತಹ ಮಾಹಿತಿಯನ್ನು ಪ್ರಸಾರ ಮಾಡಿರುವುದು ನನಗೆ ಮಾನಸಿಕವಾಗಿ ನೋವುಂಟು ಮಾಡಿದೆ. ಇರಾನ್‌ನಲ್ಲಿ ಮಹಿಳೆಯರ ಮೇಲೆ ಹೇರಲಾಗಿರುವ ಕಡ್ಡಾಯ ಹಿಜಾಬ್ ಕಾನೂನುಗಳು ಮತ್ತು ಅಲ್ಲಿ ನಡೆಯುತ್ತಿರುವ ದಮನಕಾರಿ ನೀತಿಗಳನ್ನು ಮಮ್ದಾನಿ ಅವರ ಕಚೇರಿಯು ಪ್ರಸಾರ ಮಾಡಿದ ವಿಚಾರಗಳು ಕಡೆಗಣಿಸುವಂತೆ ಮಾಡುತ್ತವೆ.”

೨. ಇರಾನ್‌ನಲ್ಲಿ ಹಿಜಾಬ್ ಧರಿಸಲು ನಿರಾಕರಿಸಿದ ಕಾರಣಕ್ಕಾಗಿ ಮಹಿಳೆಯರನ್ನು ಬಂಧಿಸಲಾಗುತ್ತಿದೆ, ಹೊಡೆಯಲಾಗುತ್ತಿದೆ ಮತ್ತು ಅನೇಕ ಪ್ರಕರಣಗಳಲ್ಲಿ ಅವರು ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ವಾತಾವರಣದಲ್ಲಿ ಹಿಜಾಬ್ ಅನ್ನು ಹೆಮ್ಮೆ ಮತ್ತು ಸಂಭ್ರಮದ ಸಂಕೇತವಾಗಿ ಬಿಂಬಿಸುವುದು ಶೂನ್ಯಸೂಕ್ಷ್ಮತೆಯ ಪರಮಾವಧಿ ಎಂದು ಕೆಲವರು ಟೀಕಿಸಿದ್ದಾರೆ.

೩. ಟರ್ಕಿ ಮೂಲದ ಅಮೆರಿಕನ್ ಅರ್ಥಶಾಸ್ತ್ರಜ್ಞ ಮತ್ತು ರಾಜಕೀಯ ವಿಶ್ಲೇಷಕ ತೈಮೂರ್ ಕುರಾನ್ ಅವರು, “ಇರಾನ್, ಟರ್ಕಿ ಮತ್ತು ಸೌದಿ ಅರೇಬಿಯಾದಂತಹ ದೇಶಗಳಲ್ಲಿ ಲಕ್ಷಾಂತರ ಮುಸ್ಲಿಮರು ಹಿಜಾಬ್ ಅನ್ನು ಹೆಮ್ಮೆಯ ಸಂಕೇತವಾಗಿ ಅಲ್ಲ, ಬದಲಿಗೆ ಕಿರುಕುಳದ ಸಂಕೇತವಾಗಿ ನೋಡುತ್ತಾರೆ” ಎಂದು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಮಮ್ದಾನಿ ಅವರು ತಮ್ಮನ್ನು ‘ಸಾಮ್ಯವಾದಿ’ (ಕಮ್ಯುನಿಸ್ಟ್) ಎಂದು ಕರೆದುಕೊಳ್ಳುತ್ತಾರೆ. ಇನ್ನೊಂದೆಡೆ ವಿಶ್ವಾದ್ಯಂತ ಹಿಜಾಬ್ ವಿರೋಧಿ ಪ್ರತಿಭಟನೆಗಳು ನಡೆಯುತ್ತಿರುವಾಗ, ಅವುಗಳಿಗೆ ಬೆಂಬಲ ನೀಡುವ ಬದಲು ಮಮ್ದಾನಿ ಹಿಜಾಬ್ ಅನ್ನು ವೈಭವಿಕರಿಸುತ್ತಿದ್ದಾರೆ. ಇದರಿಂದ ಸಾಮ್ಯವಾದಿಗಳ ಮುಸ್ಲಿಂ ತುಷ್ಟೀಕರಣದ ಧೋರಣೆ ಕಂಡುಬರುತ್ತದೆ. ಮಮ್ದಾನಿ ಅವರಂತಹ ಸಾಮ್ಯವಾದಿಗಳು ಮತ್ತು ಅದಕ್ಕಿಂತ ಹೆಚ್ಚಾಗಿ ಧಾರ್ಮಿಕ ಕಟ್ಟರತೆಯು ಜಗತ್ತಿಗೆ ಅಪಾಯಕಾರಿಯಾಗಿದ್ದಾರೆ!