ಭಾರತದ ಮೇಲಿನ ಆಮದು ಸುಂಕವನ್ನು ಶೇಕಡಾ 50% ಕ್ಕೆ ಇಳಿಕೆ ಮಾಡಿದ ಟ್ರಂಪ್ !

  • ಭಾರತ ಮತ್ತು ಅಮೆರಿಕ ನಡುವೆ ಕೊನೆಗೂ ವ್ಯಾಪಾರ ಒಪ್ಪಂದ !

  • ಭಾರತವು ರಷ್ಯಾದಿಂದ ತೈಲವನ್ನು ಖರೀದಿಸುವುದಿಲ್ಲ ಎಂಬ ಟ್ರಂಪ್ ಅವರ ಪ್ರತಿಪಾದನೆ; ಭಾರತದ ಮೌನ !

ನವ ದೆಹಲಿ – ಕಳೆದ ಕೆಲವು ತಿಂಗಳುಗಳಿಂದ ಬಾಕಿ ಉಳಿದಿದ್ದ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವು ಅಂತಿಮವಾಗಿ ನೆರವೇರಿದೆ. ಈ ಮಾಹಿತಿಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ನೀಡಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಭಾರತವು ರಶಿಯಾದಿಂದ ಇಂಧನ ತೈಲವನ್ನು ಖರೀದಿಸಿದ್ದರಿಂದ ಅಮೆರಿಕ ಭಾರತದ ಮೇಲೆ ವಿಧಿಸಿದ್ದ ಶೇ. ೫೦% ರಷ್ಟು ಆಮದು ತೆರಿಗೆಯನ್ನು ಈ ಒಪ್ಪಂದದ ಮೂಲಕ ಶೇ. ೧೮% ಕ್ಕೆ ಇಳಿಕೆ ಮಾಡಲಾಗಿದೆ. ಇದೇ ವೇಳೆ ‘ಭಾರತವು ಅಮೆರಿಕದ ರಫ್ತಿನ ಮೇಲಿನ ತೆರಿಗೆಯನ್ನು ಶೂನ್ಯಕ್ಕೆ ಇಳಿಸಲಿದೆ’ ಎಂದು ಟ್ರಂಪ್ ಹೇಳಿದ್ದಾರೆ.

ಟ್ರಂಪ್ ಅವರು ಜನವರಿ ೨ ರ ಬೆಳಿಗ್ಗೆ ಪ್ರಧಾನಿ ಮೋದಿಯವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ರಾತ್ರಿ ಸುಮಾರು ಹತ್ತೂವರೆ ಗಂಟೆಗೆ ಟ್ರಂಪ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡು ವ್ಯಾಪಾರ ಒಪ್ಪಂದವನ್ನು ಘೋಷಿಸಿದರು. ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿ ಅಮೆರಿಕದಿಂದ ಹೆಚ್ಚಿನ ತೈಲ ಖರೀದಿಸಲು ಪ್ರಧಾನಿ ಮೋದಿ ಒಪ್ಪಿಕೊಂಡಿದ್ದಾರೆಂದು ಟ್ರಂಪ್ ಹೇಳಿದ್ದಾರೆ; ಆದರೆ ಪ್ರಧಾನಿ ಮೋದಿ ಹಂಚಿಕೊಂಡ ಮಾಹಿತಿಯಲ್ಲಿ ಈ ಕುರಿತು ಯಾವುದೇ ಉಲ್ಲೇಖವಿಲ್ಲ. ಹೀಗಾಗಿ ಈ ಬಗ್ಗೆ ಸ್ಪಷ್ಟತೆ ಇಲ್ಲ.

೪೩% ಅಲ್ಲ, ಕೇವಲ ಶೇ. ೧೮% ರಷ್ಟು ಮಾತ್ರ ತೆರಿಗೆ !

ಅಮೆರಿಕ ಮೊದಲು ಭಾರತದ ಮೇಲೆ ಶೇ. ೨೫%ರಷ್ಟು ತೆರಿಗೆ ವಿಧಿಸಿತ್ತು, ನಂತರ ಭಾರತ ರಷ್ಯಾದಿಂದ ತೈಲ ಪಡೆಯುತ್ತಿರುವುದಕ್ಕಾಗಿ ಮತ್ತೆ ಶೇ. ೨೫% ರಷ್ಟು ತೆರಿಗೆ ವಿಧಿಸಿತ್ತು; ಅಂದರೆ ಒಟ್ಟು ಶೇ. ೫೦% ರಷ್ಟು ತೆರಿಗೆ ವಿಧಿಸಲಾಗಿತ್ತು. ಈಗ ಅಮೆರಿಕ ಒಟ್ಟು ಶೇ. ೫೦% ರಿಂದ ಶೇ. ೩೨% ರಷ್ಟು ತೆರಿಗೆಯನ್ನು ರದ್ದುಗೊಳಿಸಿ, ತೆರಿಗೆಯನ್ನು ಶೇ. ೧೮% ಕ್ಕೆ ಇಳಿಕೆ ಮಾಡಿದೆ ಎಂದು ವೈಟ್ ಹೌಸ್ ಸ್ಪಷ್ಟಪಡಿಸಿದೆ.

ಒಪ್ಪಂದದಂತೆ ಭಾರತವು ಅಮೆರಿಕದಿಂದ ೪೬ ಲಕ್ಷ ಕೋಟಿ ರೂಪಾಯಿಗಳ ಸರಕನ್ನು ಖರೀದಿಸಲಿದೆ !

ಟ್ರಂಪ್ ಘೋಷಿಸಿದ ಒಪ್ಪಂದದ ಪ್ರಕಾರ, ಭಾರತವು ‘ಬೈ ಅಮೆರಿಕನ್’ (ಅಮೆರಿಕದಿಂದಲೇ ಖರೀದಿಸಿ) ಧೋರಣೆಯಡಿ ಅಮೆರಿಕದಿಂದ ೪೬ ಲಕ್ಷ ಕೋಟಿ ರೂಪಾಯಿಗಳಿಗಿಂತಲೂ (೫೦೦ ಅಬ್ಜ ಡಾಲರ್) ಹೆಚ್ಚಿನ ಮೌಲ್ಯದ ಸರಕನ್ನು ಖರೀದಿಸಲಿದೆ. ಈ ಸರಕನ್ನು ಮುಂದಿನ ೫ ವರ್ಷಗಳಲ್ಲಿ ಖರೀದಿಸಲಾಗುವುದು.

ಭಾರತವು ಅಮೆರಿಕದೊಂದಿಗೆ ವೆನೆಜುವೆಲಾದಿಂದಲೂ ತೈಲ ಖರೀದಿಸಲಿದೆ ! – ಟ್ರಂಪ್

ಇಂದು ಬೆಳಿಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ. ನಾವು ರಷ್ಯಾ-ಉಕ್ರೇನ್ ಯುದ್ಧ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ಪ್ರಧಾನಿ ಮೋದಿ ಅವರು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲು ಸಹಮತ ಸೂಚಿಸಿದ್ದಾರೆ. ಭಾರತವು ಈಗ ಅಮೆರಿಕದಿಂದ ಹೆಚ್ಚಿನ ತೈಲವನ್ನು ಖರೀದಿಸಲಿದೆ. ಇದಲ್ಲದೆ ವೆನೆಜುವೆಲಾದಿಂದ ತೈಲ ಖರೀದಿಸುವ ಸಾಧ್ಯತೆಯ ಬಗ್ಗೆಯೂ ಚರ್ಚಿಸಲಾಗಿದೆ. ಇದರಿಂದ ಪ್ರತಿ ವಾರ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿರುವ ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಸಹಕಾರಿಯಾಗಲಿದೆ. ಪ್ರಧಾನಿ ಮೋದಿ ಅವರೊಂದಿಗಿನ ಸ್ನೇಹ, ಗೌರವ ಮತ್ತು ಅವರ ವಿನಂತಿಯ ಮೇರೆಗೆ ನಾವು ಅಮೆರಿಕ ಮತ್ತು ಭಾರತದ ನಡುವೆ ತಕ್ಷಣದ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಇದರ ಅಡಿಯಲ್ಲಿ ಅಮೆರಿಕ ಭಾರತದ ಮೇಲೆ ವಿಧಿಸುತ್ತಿರುವ ರೆಸಿಪ್ರೋಕಲ್ ಟ್ಯಾರಿಫ್ ಅನ್ನು ಶೇ. ೨೫% ರಿಂದ ಶೇ. ೧೮% ಕ್ಕೆ ಇಳಿಕೆ ಮಾಡಲಿದೆ. ಭಾರತವು ಅಮೆರಿಕದ ವಿರುದ್ಧದ ತನ್ನ ಟ್ಯಾರಿಫ್ ಮತ್ತು ತಾಂತ್ರಿಕೇತರ ಅಡೆತಡೆಗಳನ್ನು ಕಡಿಮೆ ಮಾಡಿ ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ಹೆಜ್ಜೆ ಹಾಕಲಿದೆ. ಪ್ರಧಾನಿ ಮೋದಿಯವರು ‘ಬೈ ಅಮೆರಿಕನ್’ ಸಂಬಂಧವಾಗಿಯೂ ಬದ್ಧತೆಯನ್ನು ತೋರಿಸಿದ್ದಾರೆ. ಇದರ ಅಡಿಯಲ್ಲಿ ಭಾರತವು ಅಮೆರಿಕದಿಂದ ೫೦೦ ಅಬ್ಜ ಡಾಲರ್ ಗಿಂತ ಹೆಚ್ಚಿನ ಮೌಲ್ಯದ ಇಂಧನ, ತಂತ್ರಜ್ಞಾನ, ಕೃಷಿ, ಕಲ್ಲಿದ್ದಲು ಮತ್ತು ಇತರ ಉತ್ಪನ್ನಗಳನ್ನು ಖರೀದಿಸಲಿದೆ. ಭಾರತ ಮತ್ತು ಅಮೆರಿಕದ ಸಂಬಂಧವು ಭವಿಷ್ಯದಲ್ಲಿ ಇನ್ನಷ್ಟು ಗಟ್ಟಿಯಾಗಲಿದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಉತ್ಸುಕರಾಗಿದ್ದೇವೆ ! – ಪ್ರಧಾನಿ ಮೋದಿ

ನನಗೆ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಮಾತನಾಡಲು ಬಹಳ ಸಂತೋಷವಾಯಿತು. ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳ ಮೇಲಿನ ಶುಲ್ಕವನ್ನು ಈಗ ಶೇ. ೧೮% ಕ್ಕೆ ಇಳಿಸಲಾಗಿದೆ ಎಂದು ತಿಳಿದು ತುಂಬಾ ಸಮಾಧಾನವಾಯಿತು. ಈ ಅದ್ಭುತ ನಿರ್ಧಾರಕ್ಕಾಗಿ ಭಾರತದ ೧೪೦ ಕೋಟಿ ಜನರ ಪರವಾಗಿ ಅಧ್ಯಕ್ಷ ಟ್ರಂಪ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಎರಡು ದೊಡ್ಡ ಆರ್ಥಿಕತೆಗಳು ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಿದಾಗ, ಜನರಿಗೆ ಲಾಭವಾಗುತ್ತದೆ ಮತ್ತು ಪರಸ್ಪರ ಸಹಕಾರದ ಹೊಸ ಹಾಗೂ ದೊಡ್ಡ ಅವಕಾಶಗಳು ಸೃಷ್ಟಿಯಾಗುತ್ತವೆ. ನಾನು ಅವರೊಂದಿಗೆ ಕೆಲಸ ಮಾಡಲು ಮತ್ತು ನಮ್ಮ ಪಾಲುದಾರಿಕೆಯನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ಯಲು ಉತ್ಸುಕನಾಗಿದ್ದೇನೆ ಎಂದು ಮೋದಿ ನುಡಿದರು.

ಟ್ರಂಪ್ ಅವರಿಂದ ಭಾರತಕ್ಕೆ ತನ್ನ ಸರಕಾರದ ಕ್ರಮಗಳ ಮಾಹಿತಿ ಸಿಗುತ್ತದೆ ! – ಕಾಂಗ್ರೆಸ್ ಟೀಕೆ

ಅಮೆರಿಕ ಮತ್ತು ಭಾರತದ ನಡುವಿನ ವ್ಯಾಪಾರ ಒಪ್ಪಂದದ ಘೋಷಣೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಟೀಕಿಸಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ, ಇಂದು ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ ನಡುವೆ ಚರ್ಚೆ ನಡೆಯಿತು. ಈ ಮಾಹಿತಿಯನ್ನು ಭಾರತವಲ್ಲ, ಬದಲಿಗೆ ಭಾರತದಲ್ಲಿರುವ ಅಮೆರಿಕದ ರಾಯಭಾರಿಗಳು ನೀಡಿದ್ದಾರೆ. ಇದು ಈಗ ಒಂದು ಸಂಪ್ರದಾಯವಾಗಿ ಬದಲಾಗುತ್ತಿದೆ. ಭಾರತಕ್ಕೆ ತನ್ನದೇ ಸರಕಾರದ ಕಾರ್ಯಗಳ ಬಗೆಗಿನ ಮಾಹಿತಿಯನ್ನು ಅಧ್ಯಕ್ಷ ಟ್ರಂಪ್ ಅಥವಾ ಅವರ ಪ್ರತಿನಿಧಿಗಳಿಂದ ದೊರೆಯುತ್ತಿದೆ. ಪ್ರಧಾನಿ ಮೋದಿ ಅವರು ಯಾವುದೋ ಕಾರಣಕ್ಕೆ ಅಧ್ಯಕ್ಷ ಟ್ರಂಪ್ ಅವರ ಎದುರು ಒತ್ತಡದಲ್ಲಿರುವಂತೆ ಕಾಣಿಸುತ್ತಿದೆ. ಸಾಮಾನ್ಯವಾಗಿ ನಡೆಯುವ ಆಲಿಂಗನದ ಮಾತುಗಳು ದೂರವೇ ಉಳಿದಿದೆ. ಈಗ ಮೋದಿ ಟ್ರಂಪ್ ಜೊತೆಗೆ ಕಾಣಿಸಿಕೊಳ್ಳಲು ಅಸ್ವಸ್ಥರಾಗಿದ್ದಾರೆಂದು ಅನಿಸುತ್ತದೆ. ಅವರು ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದೆನಿಸುತ್ತಿದೆ. ಇದು ಖಂಡಿತವಾಗಿಯೂ ‘ಫಾದರ್ ಆಫ್ ಆಲ್ ಡೀಲ್ಸ್’ (ಸರ್ವ ಒಪ್ಪಂದಗಳಲ್ಲಿ ಸರ್ವೋಚ್ಚ ಒಪ್ಪಂದ) ಆಗಲು ಸಾಧ್ಯವಿಲ್ಲ ಎಂದು ರಮೇಶ್ ಟೀಕಿಸಿದ್ದಾರೆ.