ಭಯೋತ್ಪಾದನೆಯು ಪಾಕಿಸ್ತಾನದ ರಾಜ್ಯ ನೀತಿಯಾಗಿದೆ ಮತ್ತು ಅದನ್ನು ಸಹಿಸಲು ಸಾಧ್ಯವಿಲ್ಲ!

ವಿಶ್ವ ಸಂಸ್ಥೆ: ಭಾರತದಿಂದ ಪಾಕಿಸ್ತಾನಕ್ಕೆ ಪ್ರತ್ಯುತ್ತರ !

ನ್ಯೂಯಾರ್ಕ್ (ಅಮೆರಿಕಾ) – ಭಯೋತ್ಪಾದನೆಯನ್ನು ಎಂದಿಗೂ ಸಾಮಾನ್ಯ ವಿಷಯವೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಪಾಕಿಸ್ತಾನವು ಭಯೊತ್ಪಾದನೆಯನ್ನು ಸಾಮಾನ್ಯ ಸಮಸ್ಯೆ ಮಾಡಲು ಬಯಸುತ್ತಿದೆ; ಆದರೆ ಅದನ್ನು ನಾವು ಒಪ್ಪುವುದಿಲ್ಲ. ಭಯೋತ್ಪಾದನೆಯು ಪಾಕಿಸ್ತಾನದ ಅಧಿಕೃತ ರಾಜ್ಯ ನೀತಿಯಾಗಿದೆ ಮತ್ತು ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವಿಶ್ವ ಸಂಸ್ಥೆಯಲ್ಲಿನ ಭಾರತದ ಪ್ರತಿನಿಧಿ ಪಿ. ಹರೀಶ್ ಅವರು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು.

‘ಆಪರೇಷನ್ ಸಿಂದೂರ್’ ಮೂಲಕ ಭಾರತ ನೀಡಿದ ಪ್ರತಿಕ್ರಿಯೆಯಿಂದಾಗಿ ಬಲವಂತದ ಆಧಾರದ ಮೇಲೆ ಎರಡೂ ದೇಶಗಳ ನಡುವೆ ಯಾವುದೇ ‘ಹೊಸ ಸಾಮಾನ್ಯ’ (ನ್ಯೂ ನಾರ್ಮಲ್) ನೀತಿ ಸೃಷ್ಟಿಯಾಗಲು ಸಾಧ್ಯವಿಲ್ಲ ಎಂದು ಪಾಕಿಸ್ತಾನವು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಗೆ ತಿಳಿಸಿತ್ತು. ಅದಕ್ಕೆ ಭಾರತವು ಈ ಮೇಲಿನಂತೆ ಉತ್ತರಿಸಿದೆ.

ಭಾರತವು ದೃಢವಾಗಿ ಹೇಳಿದ್ದೇನೆಂದರೆ, ಈ ಪವಿತ್ರ ಸದನವು ಪಾಕಿಸ್ತಾನಕ್ಕೆ ಭಯೋತ್ಪಾದನೆಯನ್ನು ಸಮರ್ಥಿಸಿಕೊಳ್ಳುವ ವೇದಿಕೆಯಾಗಲು ಸಾಧ್ಯವಿಲ್ಲ. ಭಾರತದ ಆಂತರಿಕ ವಿಷಯಗಳ ಬಗ್ಗೆ ಕಾಮೆಂಟ್ ಮಾಡುವ ಯಾವುದೇ ಹಕ್ಕು ಪಾಕಿಸ್ತಾನಕ್ಕಿಲ್ಲ. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವು ಭಾರತದ ಅವಿಭಾಜ್ಯ ಮತ್ತು ಅಖಂಡ ಭಾಗವಾಗಿತ್ತು, ಇದೆ ಮತ್ತು ಎಂದಿಗೂ ಇರಲಿದೆ.

‘ಆಪರೇಷನ್ ಸಿಂದೂರ್’ ಬಗ್ಗೆ ಪಾಕಿಸ್ತಾನದಿಂದ ಸುಳ್ಳು ಮತ್ತು ಸ್ವಾರ್ಥದ ಹೇಳಿಕೆ!

ಪಿ. ಹರೀಶ್ ಅವರು ಮಾತನಾಡುತ್ತಾ, ಪಾಕಿಸ್ತಾನದ ಏಕೈಕ ಕಾರ್ಯಸೂಚಿ (Agenda) ನನ್ನ ದೇಶ ಮತ್ತು ನನ್ನ ಜನರಿಗೆ ಹಾನಿ ಮಾಡುವುದಾಗಿದೆ ಎಂದರು. ಕಳೆದ ವರ್ಷ ಮೇ ತಿಂಗಳಲ್ಲಿ ‘ಆಪರೇಷನ್ ಸಿಂದೂರ್’ ಬಗ್ಗೆ ಪಾಕಿಸ್ತಾನವು ಸುಳ್ಳು ಮತ್ತು ಸ್ವಾರ್ಥದ ಹೇಳಿಕೆ ನೀಡಿತು. ಕಳೆದ ವರ್ಷ ಮೇ 9 ರವರೆಗೆ ಪಾಕಿಸ್ತಾನವು ಭಾರತದ ಮೇಲೆ ಹೆಚ್ಚಿನ ದಾಳಿ ಮಾಡುವುದಾಗಿ ಬೆದರಿಕೆ ಹಾಕುತ್ತಿತ್ತು; ಆದರೆ ಮೇ 10 ರಂದು ಪಾಕಿಸ್ತಾನದ ಸೇನೆಯು ನೇರವಾಗಿ ನಮ್ಮ ಸೇನೆಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಂಘರ್ಷವನ್ನು ನಿಲ್ಲಿಸುವಂತೆ ವಿನಂತಿಸಿತು. ಭಾರತೀಯ ಕಾರ್ಯಾಚರಣೆಯಿಂದಾಗಿ ಪಾಕಿಸ್ತಾನದ ಅನೇಕ ವಾಯುಪಡೆ ನೆಲೆಗಳಿಗೆ ಹಾನಿಯಾಗಿದೆ. ಅಲ್ಲಿ ಧ್ವಂಸಗೊಂಡ ರನ್‌ವೇಗಳು ಮತ್ತು ಸುಟ್ಟುಹೋದ ಹ್ಯಾಂಗರ್‌ಗಳ (ವಿಮಾನ ನಿಲುಗಡೆ ಜಾಗ) ಚಿತ್ರಗಳು ಸಾರ್ವಜನಿಕವಾಗಿ ಲಭ್ಯವಿವೆ ಎಂದು ಅವರು ಹೇಳಿದರು.

ಸಿಂಧೂ ನದಿ ನೀರಿನ ಒಪ್ಪಂದದ ಬಗ್ಗೆಯೂ ಭಾರತದ ತರಾಟೆ

ಭಾರತವು 65 ವರ್ಷಗಳ ಹಿಂದೆ ಸದ್ಭಾವನೆ ಮತ್ತು ಸ್ನೇಹದ ಸಂಕೇತವಾಗಿ ‘ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ’ ಮಾಡಿಕೊಂಡಿತ್ತು ಎಂದು ಪಿ. ಹರೀಶ್ ನೆನಪಿಸಿದರು. ಕಳೆದ ಆರೂವರೆ ದಶಕಗಳಲ್ಲಿ ಪಾಕಿಸ್ತಾನವು ಭಾರತದ ಮೇಲೆ ಮೂರು ಯುದ್ಧಗಳು ಮತ್ತು ಸಾವಿರಾರು ಭಯೋತ್ಪಾದಕ ದಾಳಿಗಳನ್ನು ನಡೆಸುವ ಮೂಲಕ ಈ ಒಪ್ಪಂದದ ಆಶಯವನ್ನು ಭಂಗಗೊಳಿಸಿದೆ. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯಿಂದ ಸಾವಿರಾರು ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ. ಆದ್ದರಿಂದಲೇ, ಗಡಿಯಾಚೆಗಿನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ನಿಲ್ಲಿಸುವವರೆಗೆ ಈ ಒಪ್ಪಂದವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಭಾರತ ತೆಗೆದುಕೊಳ್ಳಬೇಕಾಯಿತು ಎಂದು ಅವರು ಸ್ಪಷ್ಟಪಡಿಸಿದರು.