SANATAN PRABHAT EXCLUSIVE : ಮಹಾರಾಷ್ಟ್ರ ಸಹಿತ ಭಾರತದಲ್ಲಿ ಬಾಂಗ್ಲಾದೇಶಿ ವಲಸಿಗರನ್ನು ನೆಲೆಗೊಳಿಸಲು ದೊಡ್ಡ ಗ್ಯಾಂಗ್ ಸಕ್ರಿಯದ ಸಾಧ್ಯತೆ!

  • ಎರಡು ವರ್ಷಗಳಲ್ಲಿ ಮುಂಬಯಿನ ೮೦ ಕ್ಕೂ ಹೆಚ್ಚು ಸ್ಥಳಗಳಲ್ಲಿ ೮೬೮, ಹಾಗೂ ಮಹಾರಾಷ್ಟ್ರದಲ್ಲಿ ಒಟ್ಟು ೧,೨೩೭ ಬಾಂಗ್ಲಾದೇಶಿ ವಲಸಿಗರು ಪತ್ತೆ!

  • ವಲಸಿಗರ ಬಳಿ ಭಾರತೀಯ ಪೌರತ್ವದ ಪ್ರಮಾಣಪತ್ರಗಳು ಪತ್ತೆ!

ಶ್ರೀ. ಪ್ರೀತಂ ನಾಚಣಕರ್, ವಿಶೇಷ ಪ್ರತಿನಿಧಿ, ದೈನಿಕ ಸನಾತನ ಪ್ರಭಾತ್

ಮುಂಬಯಿ, ಜನವರಿ ೨೪ (ವಾರ್ತೆ) – ೨೦೨೪ ಮತ್ತು ೨೦೨೫ ನೇ ಸಾಲಿನಲ್ಲಿ ಮುಂಬಯಿನ ೮೦ ಕ್ಕೂ ಹೆಚ್ಚು ವಿವಿಧ ಸ್ಥಳಗಳಲ್ಲಿ ೮೬೮, ಹಾಗೂ ನವಿ ಮುಂಬಯಿ, ಠಾಣೆ, ಮೀರಾ-ಭಯಂದರ್, ಪನ್ವೇಲ್, ನಾಗ್ಪುರ, ನಾಸಿಕ್, ಪುಣೆ ಮತ್ತು ನಾಂದೇಡ್‌ಗಳಲ್ಲಿ ೭೨೩ ಬಾಂಗ್ಲಾದೇಶಿ ಅಕ್ರಮ ವಲಸಿಗರು ಪತ್ತೆಯಾಗಿದ್ದಾರೆ. ಈ ಎರಡು ವರ್ಷಗಳಲ್ಲಿ ಇಡೀ ಮಹಾರಾಷ್ಟ್ರದಲ್ಲಿ ಒಟ್ಟು ೧,೨೩೭ ಬಾಂಗ್ಲಾದೇಶಿ ವಲಸಿಗರು ಪತ್ತೆಯಾಗಿದ್ದಾರೆ. ಈ ಎಲ್ಲಾ ವಲಸಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದರೂ, ಅವರ ಬಳಿ ಭಾರತೀಯ ಪೌರತ್ವದ ಪ್ರಮಾಣಪತ್ರಗಳು ಪತ್ತೆಯಾಗಿರುವುದು ಮತ್ತಷ್ಟು ಕಳವಳಕಾರಿ ಸಂಗತಿಯಾಗಿದೆ.

ಇದರಿಂದ ಮಹಾರಾಷ್ಟ್ರ ಸೇರಿದಂತೆ ದೇಶಾದ್ಯಂತ ಬಾಂಗ್ಲಾದೇಶಿ ವಲಸಿಗರನ್ನು ನೆಲೆಗೊಳಿಸಲು ಒಂದು ದೊಡ್ಡ ಗ್ಯಾಂಗ್ ಸಕ್ರಿಯವಾಗಿದ್ದು, ಕೆಲ ಸರ್ಕಾರಿ ಅಧಿಕಾರಿಗಳು ಕೂಡ ಈ ಗ್ಯಾಂಗ್ ಗೆ ಸಹಕಾರ ನೀಡುತ್ತಿದ್ದಾರೆಂಬ ಬಲವಾದ ಶಂಕೆ ವ್ಯಕ್ತವಾಗಿದೆ. ರಾಜ್ಯದ ಇತರ ಭಾಗಗಳಿಗೆ ಹೋಲಿಸಿದರೆ ಮುಂಬಯಿ ಮೂಲೆ-ಮೂಲೆಗಳಲ್ಲಿ ಪತ್ತೆಯಾದ ವಲಸಿಗರ ಅಂಕಿ-ಅಂಶಗಳನ್ನು ನೋಡಿದರೆ, ಮುಂಬಯಿ ನಗರವು ಈ ಅಕ್ರಮ ವಲಸಿಗರ ಮೊದಲ ಆದ್ಯತೆಯಾಗಿದೆ ಎಂಬುದು ಕಂಡುಬರುತ್ತಿದೆ. ತನಿಖಾ ಸಂಸ್ಥೆಗಳು ಈ ಎಲ್ಲಾ ವಿಚಾರಗಳ ಬಗ್ಗೆ ಗಂಭೀರವಾಗಿ ತನಿಖೆ ನಡೆಸುವ ಅಗತ್ಯವಿದೆ.

ಶ್ರೀ ಪ್ರೀತಮ್ ನಾಚಂಕರ್

ಬಂಧಿತ ಬಾಂಗ್ಲಾದೇಶಿ ವಲಸಿಗರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ೭೨೬ ಅಪರಾಧ ಪ್ರಕರಣಗಳು ದಾಖಲಾಗಿವೆ. ಈ ವಲಸಿಗರು ಸರಕಾರಿ ಯೋಜನೆಗಳ ಲಾಭ ಪಡೆಯುತ್ತಿದ್ದಾರೆಯೇ? ಎಂಬುದನ್ನು ಪರಿಶೀಲಿಸಲು ರಾಜ್ಯದ ಭಯೋತ್ಪಾದನಾ ನಿರೋಧಕ ದಳವು (ATS) ಆರೋಗ್ಯ ಇಲಾಖೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ವಸತಿ ಇಲಾಖೆ, ಕಂದಾಯ ಇಲಾಖೆ ಮುಂತಾದ ಸರಕಾರಿ ಇಲಾಖೆಗಳಿಗೆ ವಲಸಿಗರ ಪಟ್ಟಿಯನ್ನು ಕಳುಹಿಸಿದೆ. ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ.

ಮುಂಬಯಿನ ಗಲ್ಲಿ-ಗಲ್ಲಿಗಳಲ್ಲಿ ಬಾಂಗ್ಲಾದೇಶಿ ವಲಸಿಗರು!

ನಾಗಪಾಡಾ, ವರ್ಲಿ, ಕುರ್ಲಾ, ಧಾರಾವಿ, ನೆಹರೂನಗರ, ಮಾಂಖುರ್ದ್, ಚುನಭಟ್ಟಿ, ಘಾಟ್ಕೋಪರ್, ಮುಲುಂಡ್, ವಿಕ್ರೋಲಿ, ಭಾಂಡುಪ್, ವಿಲೆಪಾರ್ಲೆ, ವರ್ಸೋವಾ, ಬಾಂದ್ರಾ, ಜುಹು, ಸಾಂತಾಕ್ರೂಜ್, ಖಾರ್, ಅಂಧೇರಿ, ಸಾಕಿನಾಕಾ, ಜೋಗೇಶ್ವರಿ, ಗೋರೆಗಾಂವ್, ಮಾಲ್ವಾನಿ, ಮಾಲಾಡ್, ಬೋರಿವಲಿ, ಚಾರ್ಕೋಪ್, ದಹಿಸರ್, ವಡಾಲಾ, ಮಾಹಿಮ್ ಮುಂತಾದ ಮುಂಬಯಿನ ೮೦ ಕ್ಕೂ ಹೆಚ್ಚು ಸ್ಥಳಗಳಲ್ಲಿ ನುಸುಳುಕೋರರು ಪತ್ತೆಯಾಗಿದ್ದಾರೆ. ಈ ಪಟ್ಟಿಯನ್ನು ನೋಡಿದರೆ ಮುಂಬಯಿನ ಗಲ್ಲಿ-ಗಲ್ಲಿಗಳಲ್ಲಿ ನುಸುಳುಕೋರರು ನೆಲೆಸಿರುವುದು ಸ್ಪಷ್ಟವಾಗುತ್ತದೆ.

ವಲಸಿಗರ ಬಳಿ ಸಿಕ್ಕ ಪೌರತ್ವದ ದಾಖಲೆಗಳು !

ಜನನ ಪ್ರಮಾಣಪತ್ರ, ಮತದಾನದ ಕಾರ್ಡ್, ಆಧಾರ್ ಕಾರ್ಡ್, ಪಾನ್ ಕಾರ್ಡ್, ಚಾಲನಾ ಪರವಾನಗಿ, ಪಾಸ್‌ಪೋರ್ಟ್, ಪಡಿತರ ಚೀಟಿ ಮುಂತಾದ ಭಾರತೀಯ ಪೌರತ್ವದ ಪ್ರಮುಖ ದಾಖಲೆಗಳು ವಲಸಿಗರ ಬಳಿ ಪತ್ತೆಯಾಗಿವೆ. ಈ ಪ್ರಮಾಣಪತ್ರಗಳನ್ನು ನಕಲಿ ದಾಖಲೆಗಳ ಆಧಾರದ ಮೇಲೆ ತಯಾರಿಸಲಾಗಿದೆ.

ಉಗ್ರ ನಿಗ್ರಹ ದಳದ ಆತಂಕ!

ಈ ಬಾಂಗ್ಲಾದೇಶಿ ನುಸುಳುಕೋರರನ್ನು ಬಂಧಿಸಲಾಗಿದ್ದರೂ ಸಹ ಅವರು ಪಡೆದುಕೊಂಡ ಎಲ್ಲಾ ನಕಲಿ ದಾಖಲೆಗಳು ಇನ್ನೂ ಪೊಲೀಸರ ಕೈ ಸೇರಿಲ್ಲ. ಪ್ರಮಾಣಪತ್ರಗಳ ಆಧಾರದ ಮೇಲೆಯೇ ಈ ವಲಸಿಗರು ವಿವಿಧ ಸರಕಾರಿ ಯೋಜನೆಗಳ ಲಾಭ ಪಡೆಯುತ್ತಿರಬಹುದು ಎಂದು ಭಯೋತ್ಪಾದನಾ ನಿರೋಧಕ ದಳ ಶಂಕಿಸಿದೆ. ಹೀಗಾಗಿ ಮಹಾರಾಷ್ಟ್ರ ಎಟಿಎಸ್‌ನ ಅಪರ ಪೊಲೀಸ್ ಮಹಾನಿರ್ದೇಶಕ ನವಲ್ ಬಜಾಜ್ ಅವರ ಸಹಿಯೊಂದಿಗೆ ವಿವಿಧ ಸರಕಾರಿ ಇಲಾಖೆಗಳಿಗೆ ವಲಸಿಗರ ಪಟ್ಟಿಯನ್ನು ಕಳುಹಿಸಲಾಗಿದ್ದು, ಪರಿಶೀಲನೆ ಮುಂದುವರಿದಿದೆ.

ಆಡಳಿತದ ಮಂದಗತಿ ಕಾರ್ಯ!

ಭಯೋತ್ಪಾದನಾ ನಿರೋಧಕ ದಳ ಮೇ ೨೦೨೫ ರಲ್ಲಿ ಈ ಪಟ್ಟಿಯನ್ನು ವಿವಿಧ ಸರಕಾರಿ ಇಲಾಖೆಗಳಿಗೆ ಕಳುಹಿಸಿತ್ತು; ಆದರೆ ಸಂಬಂಧಿತ ಇಲಾಖೆಗಳ ಯೋಜನೆಗಳಲ್ಲಿ ವಲಸಿಗರ ಹೆಸರು ಇದೆಯೇ ಎಂದು ಪರಿಶೀಲಿಸುವ ವೇಗವು ತುಂಬಾ ನಿಧಾನವಾಗಿದೆ. ೮ ತಿಂಗಳು ಕಳೆದರೂ ಕೆಲವು ಇಲಾಖೆಗಳು ಗೃಹ ಇಲಾಖೆಗೆ ವರದಿಯನ್ನು ನೀಡಿಲ್ಲ. ಆದ್ದರಿಂದ ಸರಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.

ಒಟ್ಟಾರೆಯಾಗಿ ಕಳೆದ ಕೆಲವು ವರ್ಷಗಳಲ್ಲಿ ನಿರಂತರವಾಗಿ ಪತ್ತೆಯಾಗುತ್ತಿರುವ ಬಾಂಗ್ಲಾದೇಶಿ ವಲಸಿಗರ ಸಂಖ್ಯೆಯನ್ನು ನೋಡಿದರೆ, ಮಹಾರಾಷ್ಟ್ರದಲ್ಲಿ ಇವರ ಸಂಖ್ಯೆ ಲಕ್ಷಾಂತರ ಇರಬಹುದೆಂಬ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಸ್ಥಳೀಯ ಮಟ್ಟದಲ್ಲಿ ವಲಸಿಗರಿಗೆ ಸಿಗುತ್ತಿರುವ ಸಹಾಯ ಮತ್ತು ಸರ್ಕಾರದಿಂದ ದೊರೆಯುತ್ತಿರುವ ಪ್ರಮಾಣಪತ್ರಗಳು ಎರಡೂ ಗಂಭೀರ ವಿಷಯಗಳಾಗಿದ್ದು, ಇದಕ್ಕಾಗಿ ಸರಕಾರ, ಪೊಲೀಸ್, ಆಡಳಿತ ಮತ್ತು ನಾಗರಿಕರು ಒಟ್ಟಾಗಿ ಬಾಂಗ್ಲಾದೇಶಿ ವಲಸಿಗರನ್ನು ಪತ್ತೆಹಚ್ಚಲು ಕೊಡುಗೆ ನೀಡಬೇಕಿದೆ.

ಸಂಪಾದಕೀಯ ನಿಲುವು

ಮಹಾರಾಷ್ಟ್ರದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಬಾಂಗ್ಲಾದೇಶಿ ಅಕ್ರಮ ವಲಸಿಗರು ಪತ್ತೆಯಾಗುವುದು ಒಂದು ರೀತಿಯಲ್ಲಿ ತನಿಖಾ ಸಂಸ್ಥೆಗಳ ವೈಫಲ್ಯವಾಗಿದೆ, ಹಾಗೆಯೇ ಅಕ್ರಮ ವಲಸಿಗರ ಬಳಿ ಭಾರತೀಯ ಪೌರತ್ವದ ದಾಖಲೆಗಳು ಸಿಗುತ್ತಿರುವುದು ಆಡಳಿತ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ದ್ಯೋತಕವಾಗಿದೆ. ದೇಶವನ್ನು ಪೊಳ್ಳು ಮಾಡುತ್ತಿರುವ ಇಂತಹ ಅಧಿಕಾರಿಗಳ ವಿರುದ್ಧ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು!