ಬಾಂಗ್ಲಾದೇಶದ ಮೈಮನ್‌ಸಿಂಗ್ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಲ್ಲಿ ಹಿಂದೂಗಳ ಮೇಲೆ 200ಕ್ಕೂ ಹೆಚ್ಚು ದಾಳಿಗಳು! Bangladesh Hindu Attacks

ಪ್ರತಿನಿಧಿ ಚಿತ್ರ

ನವ ದೆಹಲಿ – ಬಾಂಗ್ಲಾದೇಶದ ಮೈಮನ್‌ಸಿಂಗ್ ಜಿಲ್ಲೆಯು ಪ್ರಸ್ತುತ ಅಲ್ಪಸಂಖ್ಯಾತ ಹಿಂದೂಗಳಿಗೆ ಅತ್ಯಂತ ಅಸುರಕ್ಷಿತವಾಗಿದೆ. ಕೇವಲ ಕೆಲವು ದಿನಗಳಲ್ಲಿ ಇಲ್ಲಿ 200ಕ್ಕೂ ಹೆಚ್ಚು ದಾಳಿಗಳು ನಡೆದಿರುವ ಆಘಾತಕಾರಿ ಮಾಹಿತಿ ಹೊರಬಂದಿದೆ. ಇಲ್ಲಿಯೇ ಕೆಲವು ದಿನಗಳ ಹಿಂದೆ ದೀಪು ಚಂದ್ರ ದಾಸ್ ಎಂಬ ಹಿಂದೂ ಯುವಕನನ್ನು ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ದೀಪು ಚಂದ್ರ ದಾಸ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು; ಆದರೆ ಉದ್ರಿಕ್ತ ಗುಂಪು ಪೊಲೀಸರ ಕೈಯಿಂದ ಅವರನ್ನು ಎಳೆದುಕೊಂಡು ಹೋಗಿ ಕೊಲೆ ಮಾಡಿದೆ. ಈ ಘಟನೆಯು ಬಾಂಗ್ಲಾದೇಶದ ಕಾನೂನು ಮತ್ತು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದನ್ನು ತೋರಿಸುತ್ತದೆ. ಈ ಘಟನೆಯ ಪ್ರತಿಧ್ವನಿಗಳು ಪ್ರಪಂಚದಾದ್ಯಂತ ಕೇಳಿಬಂದಿವೆ. ಒಂದು ಕಾಲದಲ್ಲಿ ಹಿಂದೂ ಬಹುಸಂಖ್ಯಾತವಾಗಿದ್ದ ಈ ಪ್ರದೇಶದಲ್ಲಿ ಈಗ ಹಿಂದೂಗಳ ಅಸ್ತಿತ್ವವೇ ಅಪಾಯದಲ್ಲಿದೆ.

ಹಿಂದೂಗಳ ಜನಸಂಖ್ಯೆ ಶೇ. 78 ರಿಂದ ಶೇ. 9ಕ್ಕೆ ಇಳಿಕೆ

1937ರ ಸುಮಾರಿಗೆ ಮೈಮನ್‌ಸಿಂಗ್‌ನಲ್ಲಿ ಹಿಂದೂಗಳ ಜನಸಂಖ್ಯೆಯು ಶೇ. 78ರಷ್ಟಿತ್ತು; ಆದರೆ ಇಂದು ಈ ಸಂಖ್ಯೆ ಕೇವಲ ಶೇ. 9ಕ್ಕೆ ಬಂದು ನಿಂತಿದೆ. ಬ್ರಹ್ಮಪುತ್ರ ನದಿಯ ದಡದಲ್ಲಿರುವ ಈ ಜಿಲ್ಲೆಯಿಂದ ಹಿಂದೂಗಳನ್ನು ವ್ಯವಸ್ಥಿತವಾಗಿ ಹೊರಹಾಕಲಾಯಿತು. 51 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಈ ಜಿಲ್ಲೆಯಲ್ಲಿ ಈಗ ಶೇ. 90ರಷ್ಟು ಮುಸ್ಲಿಮರಿದ್ದಾರೆ. ಇಲ್ಲಿ 2025ರಲ್ಲಿ ಇದುವರೆಗೆ ದೇವಾಲಯಗಳು ಮತ್ತು ಹಿಂದೂಗಳ ಮೇಲೆ 10 ದೊಡ್ಡ ದಾಳಿಗಳು ನಡೆದಿವೆ, ಹಾಗೆಯೇ ಆಗಸ್ಟ್ 2024ರಲ್ಲಿ ಒಂದೇ ತಿಂಗಳಲ್ಲಿ 183 ಕಡೆಗಳಲ್ಲಿ ಹಿಂಸಾತ್ಮಕ ಘಟನೆಗಳು ನಡೆದಿವೆ.

ನಿರಾಶ್ರಿತ ಹಿಂದೂಗಳು!

ಮೈಮನ್‌ಸಿಂಗ್‌ನಲ್ಲಿ ಬಾಂಗ್ಲಾದೇಶದ ಅತಿದೊಡ್ಡ ಶ್ರೀ ದುರ್ಗಾ ಮಂದಿರ (ದುರ್ಗಾಬಾರಿ) ಮತ್ತು ರಾಮಕೃಷ್ಣ ಪರಮಹಂಸರ ಮಂದಿರಗಳಿವೆ. ಐತಿಹಾಸಿಕವಾಗಿ ಈ ಸ್ಥಳವು ಹಿಂದೂಗಳ ಭದ್ರಕೋಟೆಯೆಂದು ಪರಿಗಣಿಸಲ್ಪಟ್ಟಿತ್ತು. 1971ರಲ್ಲಿ ಪಾಕಿಸ್ತಾನದಿಂದ ಮುಕ್ತಿ ಪಡೆದ ನಂತರ ಇಲ್ಲಿ ಹಿಂದೂಗಳ ದೊಡ್ಡ ಶಕ್ತಿಯಿತ್ತು; ಆದರೆ ಈಗ ಅದೇ ಹಿಂದೂ ಸಮಾಜವನ್ನು ಅಲ್ಲಿ ಪರಕೀಯರಂತೆ ನೋಡಲಾಗುತ್ತಿದೆ. ಆಡಳಿತದ ನಿರ್ಲಕ್ಷ್ಯ ಮತ್ತು ಪೊಲೀಸರ ಅಸಹಾಯಕತೆಯಿಂದಾಗಿ ಅಲ್ಲಿನ ಉಳಿದಿರುವ ಹಿಂದೂ ಕುಟುಂಬಗಳಲ್ಲಿ ಭೀತಿಯ ವಾತಾವರಣ ಮನೆಮಾಡಿದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದ ಒಂದು ಜಿಲ್ಲೆಯಲ್ಲಿ ಹಿಂದೂಗಳ ಮೇಲೆ ಇಷ್ಟೊಂದು ದಾಳಿಗಳು ನಡೆದಿದ್ದರೆ, ಇಡೀ ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಹೇಗಿರಬಹುದು ಎಂದು ಊಹಿಸುವುದೂ ಕಷ್ಟ! ಅಲ್ಲಿನ ಹಿಂದೂಗಳಿಗೆ ಈಗ ಯಾರೂ ದಿಕ್ಕಿಲ್ಲದಂತಾಗಿರುವುದು ಕಟು ಸತ್ಯ!