ಭಾರತದ ಹಲಾಲ್ ಪ್ರಮಾಣಪತ್ರಕ್ಕೆ ಓಮನ್ ಮಾನ್ಯತೆ : Oman Approves Halal

ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್

ನವದೆಹಲಿ – ಭಾರತದ ಹಲಾಲ್ ಮಾಂಸ ಪ್ರಮಾಣೀಕರಣಕ್ಕೆ ಓಮನ್ ಅಧಿಕೃತ ಮಾನ್ಯತೆ ನೀಡಿದೆ. ಈಗ ಭಾರತ ಸರಕಾರವು ಇತರ 55 ಇಸ್ಲಾಮಿಕ್ ದೇಶಗಳಿಂದಲೂ ಇಂತಹದ್ದೇ ಮಾನ್ಯತೆಯನ್ನು ಪಡೆಯಲು ಪ್ರಯತ್ನಿಸಲಿದೆ. ಮಾಂಸ ಮತ್ತು ಮಾಂಸದ ಉತ್ಪನ್ನಗಳ ರಫ್ತಿಗಾಗಿ ಹಲಾಲ್ ಪ್ರಮಾಣೀಕರಣ ಅಗತ್ಯವಿರುವ ದೇಶಗಳೊಂದಿಗೆ ಭಾರತ ಮಾತುಕತೆ ನಡೆಸುತ್ತಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ತಿಳಿಸಿದ್ದಾರೆ. ಕಳೆದ 3-4 ವರ್ಷಗಳಿಂದ ಕೊಲ್ಲಿ ರಾಷ್ಟ್ರಗಳೊಂದಿಗೆ ನಿರಂತರ ಸಂವಾದ ನಡೆಯುತ್ತಿದ್ದು, ಅನೌಪಚಾರಿಕ ಪದ್ಧತಿಗಳ ಬದಲಿಗೆ ಭಾರತದ ಅಧಿಕೃತ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ಸ್ವೀಕರಿಸುವಂತೆ ಪ್ರಯತ್ನಗಳು ನಡೆಯುತ್ತಿವೆ.

ರಫ್ತುದಾರರಿಗೆ ಆಗುವ ಲಾಭಗಳು

ಓಮನ್‌ನಿಂದ ಭಾರತದ ಹಲಾಲ್ ಪ್ರಮಾಣೀಕರಣಕ್ಕೆ ಮಾನ್ಯತೆ ದೊರೆತಿರುವುದರಿಂದ ಹಲವು ಪ್ರಯೋಜನಗಳಾಗಲಿವೆ. ಪದೇ ಪದೇ ತಪಾಸಣೆ ಮತ್ತು ಪುನಃ ಪ್ರಮಾಣೀಕರಣ ಮಾಡುವ ಅಗತ್ಯವಿರುವುದಿಲ್ಲ. ಇದರಿಂದ ವೆಚ್ಚ ಕಡಿಮೆಯಾಗುತ್ತದೆ ಮತ್ತು ಭಾರತೀಯ ರಫ್ತುದಾರರಿಗೆ ಮಾರುಕಟ್ಟೆ ಪ್ರವೇಶ ಸುಲಭವಾಗಲಿದೆ. ಅಧಿಕೃತವಾಗಿ ಮಾನ್ಯತೆ ಪಡೆದ ಹಲಾಲ್ ಪ್ರಮಾಣೀಕರಣವನ್ನು ಮಾತ್ರ ಪರಿಗಣಿಸಬೇಕು ಎಂಬುದರ ಮೇಲೆ ಸರಕಾರ ಒತ್ತು ನೀಡಲಿದೆ ಎಂದು ಪೀಯೂಷ್ ಗೋಯಲ್ ಸ್ಪಷ್ಟಪಡಿಸಿದ್ದಾರೆ. ಇದು ಸರಿಯಾದ ಮತ್ತು ಪ್ರಕ್ರಿಯಾಧಾರಿತ ಹಲಾಲ್ ಪ್ರಮಾಣೀಕರಣ ಪದ್ಧತಿಯಾಗಿದ್ದು, ಧಾರ್ಮಿಕ ಭಾವನೆಗಳನ್ನು ಅಧಿಕೃತ ಮತ್ತು ಶಿಸ್ತುಬದ್ಧ ಪ್ರಕ್ರಿಯೆಯ ಮೂಲಕ ಗೌರವಿಸಬೇಕು ಎಂಬುದು ಸರಕಾರದ ನಿಲುವಾಗಿದೆ.

ಪ್ರಮಾಣೀಕರಣ ಪ್ರಕ್ರಿಯೆಯಲ್ಲಿನ ಬದಲಾವಣೆ

ಈ ಹಿಂದೆ ಅನೇಕ ಖಾಸಗಿ ಸಂಸ್ಥೆಗಳು ಹಲಾಲ್ ಪ್ರಮಾಣಪತ್ರಗಳನ್ನು ನೀಡುತ್ತಿದ್ದವು, ಆದರೆ ಇವುಗಳಿಗೆ ಸರಕಾರಿ ಮಾನ್ಯತೆ ಇರಲಿಲ್ಲ. ಮಾರ್ಚ್ 2023 ರಲ್ಲಿ ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯವು ಅಧಿಸೂಚನೆಯನ್ನು ಹೊರಡಿಸಿತ್ತು. ಅದರ ಪ್ರಕಾರ, ಭಾರತೀಯ ಗುಣಮಟ್ಟ ಮಂಡಳಿಯ ‘ಇಂಡಿಯಾ ಕನ್ಫರ್ಮಿಟಿ ಅಸೆಸ್‌ಮೆಂಟ್ ಸ್ಕೀಮ್’ ಹಲಾಲ್ ಅಡಿಯಲ್ಲಿ ಮಾನ್ಯತೆ ಪಡೆದ ಸಂಸ್ಥೆಗಳು ನೀಡುವ ಪ್ರಮಾಣೀಕರಣ ಮಾತ್ರ ಮಾನ್ಯವಾಗಲಿದೆ. ಅಕ್ಟೋಬರ್ 2024 ರ ಅಧಿಸೂಚನೆಯಲ್ಲಿ ಕನಿಷ್ಠ 15 ದೇಶಗಳ ಪಟ್ಟಿಯನ್ನು ನೀಡಲಾಗಿದ್ದು, ಅಲ್ಲಿ ಮಾಂಸ ಮತ್ತು ಮಾಂಸದ ಉತ್ಪನ್ನಗಳಿಗೆ ಹಲಾಲ್ ಪ್ರಮಾಣೀಕರಣ ಕಡ್ಡಾಯವಾಗಿದೆ. ಇದರಲ್ಲಿ ಟರ್ಕಿ, ಓಮನ್, ಯುನೈಟೆಡ್ ಅರಬ್ ಎಮಿರೇಟ್ಸ್, ಬಾಂಗ್ಲಾದೇಶ, ಫಿಲಿಪೈನ್ಸ್ ಮತ್ತು ಸಿಂಗಾಪುರ ಸೇರಿವೆ.

ಸಂಪಾದಕೀಯ ನಿಲುವು

ಭಾರತ ಸರಕಾರವು ಹಲಾಲ್ ಪ್ರಮಾಣೀಕರಣವನ್ನು ಕೇವಲ ಇಸ್ಲಾಮಿಕ್ ಅಥವಾ ವಿದೇಶಿ ರಾಷ್ಟ್ರಗಳಿಗೆ ಮಾತ್ರ ಸೀಮಿತಗೊಳಿಸಬೇಕು. ಭಾರತದಲ್ಲಿ ಇದನ್ನು ಅನ್ವಯಿಸಬಾರದು ಎಂಬ ಕಾನೂನು ತರಬೇಕು. ಭಾರತದ ಹಿಂದೂಗಳು ಅನಗತ್ಯವಾಗಿ ಹಲಾಲ್ ಪ್ರಮಾಣೀಕೃತ ವಸ್ತುಗಳನ್ನು ಮತ್ತು ಆಹಾರ ಪದಾರ್ಥಗಳನ್ನು ಖರೀದಿಸಬೇಕಾಗಿ ಬರುತ್ತಿದೆ, ಈ ಕಡೆಗೆ ಗಮನ ಹರಿಸಬೇಕು!