ಆಸಿಡ್ ದಾಳಿ ಪ್ರಕರಣ ೧೬ ವರ್ಷಗಳಿಂದ ಬಾಕಿ ಇರುವುದು ದೇಶಕ್ಕೆ ಅವಮಾನಕಾರಿ ಸಂಗತಿ ! – ಸರ್ವೋಚ್ಚ ನ್ಯಾಯಾಲಯ – Acid Attack Supreme Court

ಬಾಕಿ ಇರುವ ಇಂತಹ ಪ್ರಕರಣಗಳ ವಿವರಗಳನ್ನು ಎಲ್ಲ ಉಚ್ಚ ನ್ಯಾಯಾಲಯಗಳಿಂದ ಕೇಳಿದೆ

ನವದೆಹಲಿ – ೨೦೦೯ ರಿಂದ ಆಸಿಡ್‌ನಿಂದ ದಾಳಿ ಮಾಡಿದ ಒಂದು ಪ್ರಕರಣವು ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ಬಾಕಿ ಇದೆ. ಇದನ್ನು ಸರ್ವೋಚ್ಚ ನ್ಯಾಯಾಲಯವು ‘ರಾಷ್ಟ್ರಕ್ಕೆ ನಾಚಿಕೆಗೇಡಿನ ಸಂಗತಿ’ ಎಂದು ಹೇಳಿದೆ. ಅಲ್ಲದೆ, ದೇಶಾದ್ಯಂತದ ಎಲ್ಲಾ ಉಚ್ಚ ನ್ಯಾಯಾಲಯಗಳಿಗೆ ಇಂತಹ ಬಾಕಿ ಇರುವ ಪ್ರಕರಣಗಳ ವಿವರಗಳನ್ನು ೪ ವಾರಗಳಲ್ಲಿ ಸಲ್ಲಿಸುವಂತೆ ಸೂಚನೆ ನೀಡಿದೆ. ಈ ಪ್ರಕರಣಗಳ ತ್ವರಿತ ಇತ್ಯರ್ಥಕ್ಕಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಕುರಿತು ಮುಖ್ಯ ನ್ಯಾಯಮೂರ್ತಿಗಳು ಈ ಸಂದರ್ಭದಲ್ಲಿ ಚರ್ಚಿಸಿದರು.

ಕೇಂದ್ರ ಸರಕಾರಕ್ಕೆ ಸೂಚನೆ

ನ್ಯಾಯಾಲಯವು ಕೇಂದ್ರ ಸರಕಾರಕ್ಕೆ, ಸಂಸತ್ತಿನ ಮೂಲಕ ಅಥವಾ ಸುಗ್ರೀವಾಜ್ಞೆಯ ಮೂಲಕ ಕಾನೂನಿನಲ್ಲಿ ಸುಧಾರಣೆ ತರಬೇಕು, ಇದರಿಂದ ಇಂತಹ ದಾಳಿಗಳಲ್ಲಿ ಬದುಕುಳಿದ ಸಂತ್ರಸ್ತರನ್ನು ವಿಕಲಚೇತನರ ವ್ಯಾಪ್ತಿಗೆ ಸೇರಿಸಬಹುದು ಮತ್ತು ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಪಡೆಯಬಹುದು ಎಂದು ಹೇಳಿದೆ.

ಇಂತಹ ಆರೋಪಿಗಳ ಬಗ್ಗೆ ಯಾವುದೇ ಸಹಾನುಭೂತಿ ಇರಬಾರದು ! – ಮುಖ್ಯ ನ್ಯಾಯಮೂರ್ತಿಗಳು

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ವಿಭಾಗೀಯ ಪೀಠದ ಮುಂದೆ ಈ ಪ್ರಕರಣ ನಡೆಯುತ್ತಿತ್ತು. ಆಗ ಸಂತ್ರಸ್ತ ಯುವತಿ ಶಾಹೀನ್ ಮಲಿಕ್, ‘ನನಗೆ ಆಸಿಡ್ ಕುಡಿಸಲಾಗಿದೆ. ಸದ್ಯ ನಾನು ಕೃತಕ ಫೀಡಿಂಗ್ ಟ್ಯೂಬ್‌ನ (ಕೃತಕ ಆಹಾರ ನಾಳದ ಮೂಲಕ) ಸಹಾಯದಿಂದ ಜೀವಿಸುತ್ತಿದ್ದೇನೆ’ ಎಂದು ತಿಳಿಸಿದರು. ಆಸಿಡ್ ಎರಚುವ ಬಗ್ಗೆ ಕೇಳಿದ್ದೆ, ಆದರೆ ಆಸಿಡ್ ಕುಡಿಸಿದ ಪ್ರಕರಣಗಳನ್ನು ನೋಡಿಲ್ಲ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು. ಅಪರಾಧದ ಗಂಭೀರತೆ ಮತ್ತು ಪರಿಣಾಮಗಳನ್ನು ನೋಡಿದರೆ, ಈ ಮೊಕದ್ದಮೆಯನ್ನು ವಿಶೇಷ ನ್ಯಾಯಾಲಯದಲ್ಲಿ ನಡೆಸಬೇಕು. ಇಂತಹ ಆರೋಪಿಗಳ ಬಗ್ಗೆ ಯಾವುದೇ ಸಹಾನುಭೂತಿ ಇರಬಾರದು.

ದೇಶಾದ್ಯಂತ ಆಸಿಡ್ ದಾಳಿಯ ೮೪೪ ಪ್ರಕರಣಗಳು ಬಾಕಿ

ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗದ ಅಂಕಿಅಂಶಗಳ ಪ್ರಕಾರ, ವಿವಿಧ ನ್ಯಾಯಾಲಯಗಳಲ್ಲಿ ಆಸಿಡ್ ದಾಳಿಗೆ ಸಂಬಂಧಿಸಿದ ೮೪೪ ಪ್ರಕರಣಗಳು ಬಾಕಿ ಇವೆ. ಈ ಅಂಕಿಅಂಶವು ೨೦೨೩ ರವರೆಗಿನದ್ದಾಗಿದೆ. ದೇಶದಲ್ಲಿ ೨೦೨೧ ರ ನಂತರ ಇಂತಹ ದಾಳಿಗಳ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಫ್ಲೋರಿಡಾ ಇಂಟರ್ನ್ಯಾಷನಲ್ ಯೂನಿವರ್ಸಿಟಿಯ ೨೦೨೪ ರ ವರದಿಯ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ ೨೫೦ ರಿಂದ ೩೦೦ ಆಸಿಡ್ ದಾಳಿ ಪ್ರಕರಣಗಳು ದಾಖಲಾಗುತ್ತವೆ. ವಾಸ್ತವವಾಗಿ, ಈ ಸಂಖ್ಯೆ ೧ ಸಾವಿರಕ್ಕಿಂತ ಹೆಚ್ಚಿರಬಹುದು.