19 ದೇಶಗಳ ಜನರಿಗೆ ಪೌರತ್ವ ಪ್ರಕ್ರಿಯೆ ಸ್ಥಗಿತಗೊಳಿಸಿದ ಟ್ರಂಪ್ !

ಅಮೆರಿಕನ್ ಸೈನಿಕರ ಮೇಲೆ ಅಫ್ಘಾನ್ ನಿರಾಶ್ರಿತನ ದಾಳಿ ಪ್ರಕರಣ

ವಾಷಿಂಗ್ಟನ್ (ಅಮೆರಿಕ) – ಅಮೆರಿಕದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 19 ದೇಶಗಳ ನಾಗರಿಕರಿಗೆ ಅಮೆರಿಕದ ಪೌರತ್ವ ಮತ್ತು ‘ಗ್ರೀನ್ ಕಾರ್ಡ್’ ನೀಡುವ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಿದ್ದಾರೆ. ಕಳೆದ ತಿಂಗಳು ಅಮೆರಿಕದ ಶ್ವೇತಭವನದ ಬಳಿ ‘ನ್ಯಾಷನಲ್ ಗಾರ್ಡ್ಸ್’ ಮೇಲೆ ಓರ್ವ ಅಫ್ಘಾನ್ ನಿರಾಶ್ರಿತ ದಾಳಿ ಮಾಡಿದ ನಂತರ ಟ್ರಂಪ್ ಈ ನಿರ್ಧಾರ ಕೈಗೊಂಡಿದ್ದಾರೆ. ಪೌರತ್ವವನ್ನು ಸ್ಥಗಿತಗೊಳಿಸಲಾದ 19 ದೇಶಗಳಲ್ಲಿ ಅಫ್ಘಾನಿಸ್ತಾನ, ಮ್ಯಾನ್ಮಾರ್, ಬುರುಂಡಿ, ಚಾಡ್, ಕಾಂಗೋ, ಕ್ಯೂಬಾ, ಈಕ್ವಟೋರಿಯಲ್ ಗಿನಿ, ಎರಿಟ್ರಿಯಾ, ಹೈಟಿ, ಇರಾನ್, ಲಾವೋಸ್, ಲಿಬಿಯಾ, ಸಿಯೆರಾ ಲಿಯೋನ್, ಸೊಮಾಲಿಯಾ, ಸುಡಾನ್, ಟೋಗೋ, ತುರ್ಕಮೆನಿಸ್ತಾನ್, ವೆನೆಜುವೆಲಾ ಮತ್ತು ಯೆಮೆನ್ ಗಳಿವೆ. ಟ್ರಂಪ್ ಈ ದೇಶಗಳ ಮೇಲೆ ಈಗಾಗಲೇ ಪ್ರಯಾಣ ನಿಷೇಧ ಹೇರಿದ್ದಾರೆ. ಟ್ರಂಪ್ ಅವರ ನಿರ್ಧಾರದ ಪ್ರಕಾರ, ಜನವರಿ 20, 2021 ರ ನಂತರ ಅಮೆರಿಕಕ್ಕೆ ಬಂದ ಜನರ ಮರು-ಪರಿಶೀಲನೆ (ರೀ-ವೆರಿಫಿಕೇಶನ್) ನಡೆಸಲಾಗುವುದು ಮತ್ತು ಅವರ ಸಂದರ್ಶನವನ್ನೂ ಸಹ ಮಾಡಲಾಗುವುದು.

ಸಮಸ್ಯೆಗಳನ್ನು ಸೃಷ್ಟಿಸುವ ಜನರ ಸಂಖ್ಯೆ ಕಡಿಮೆಯಾಗಲಿದೆ! – ಟ್ರಂಪ್

ಟ್ರಂಪ್ ಅವರ ಪ್ರಕಾರ, ಈ ನಿರ್ಧಾರದಿಂದ ಸಮಸ್ಯೆಗಳನ್ನು ಸೃಷ್ಟಿಸುವ ಜನರ ಸಂಖ್ಯೆ ಕಡಿಮೆಯಾಗಲಿದೆ. ಎರಡನೇ ಮಹಾಯುದ್ಧದ ನಂತರ ಅಮೆರಿಕದಲ್ಲಿ ಇಂತಹ ಸಾಮಾಜಿಕ ಸಮಸ್ಯೆಗಳಿರಲಿಲ್ಲ; ಆದರೆ ತಪ್ಪು ನೀತಿಗಳಿಂದಾಗಿ ಅಪರಾಧಗಳು ಹೆಚ್ಚಾಗಿವೆ. ತಪ್ಪು ವಲಸೆ ನೀತಿಗಳು ಸಾಮಾನ್ಯ ಅಮೆರಿಕನ್ ಜನರ ಜೀವನವನ್ನು ಹಾಳು ಮಾಡಿವೆ. ಈ ಸಮಸ್ಯೆಗೆ ‘ಹೊರಗಿನವರನ್ನು ಅವರ ದೇಶಕ್ಕೆ ಹಿಂದಿರುಗಿಸುವುದೇ (ರಿವರ್ಸ್ ಮೈಗ್ರೇಷನ್)’ ಏಕೈಕ ಪರಿಹಾರವಾಗಿದೆ ಎಂದು ಹೇಳಿದರು.