ಮೇರಠನ ಹಿಂದೂಬಾಹುಳ್ಯ ಪ್ರದೇಶದಲ್ಲಿ ಮುಸಲ್ಮಾನನು ಮನೆ ಖರೀದಿಸಿ ವ್ಯಾಪಾರ ಆರಂಭಿಸಿದ್ದರಿಂದ ಹಿಂದೂಗಳಿಂದ ಪ್ರತಿಭಟನೆ – Police Locked the Muslim’s house

ಹಿಂದೂಗಳ ವಿರೋಧದ ನಂತರ ಪೊಲೀಸರು ಮುಸಲ್ಮಾನರ ಮನೆಗೆ ಬೀಗ ಜಡಿದರು!

ಮೇರಠ (ಉತ್ತರ ಪ್ರದೇಶ) – ಇಲ್ಲಿನ ಸದರ ಬಜಾರ್ ಪ್ರದೇಶದ ಥಾಪರನಗರದಲ್ಲಿ ಮುಸಲ್ಮಾನ ಕುಟುಂಬವೊಂದು ಮನೆಯನ್ನು ಖರೀದಿಸಿ, ಹಾಲಿನ ವ್ಯಾಪಾರವನ್ನು ಪ್ರಾರಂಭಿಸಿತು. ಈ ವಿಷಯ ತಿಳಿದ ಕೂಡಲೇ ನವೆಂಬರ್ 28 ರಂದು ಸಂಜೆ ಸ್ಥಳೀಯರು ಪ್ರತಿಭಟನೆ ನಡೆಸಿದರು. ಸ್ಥಳೀಯರು ತಾವು ಸ್ಥಳಾಂತರಗೊಳ್ಳುವುದಾಗಿ ಬೆದರಿಕೆ ಹಾಕಿದರು. ನಂತರ ಹಿಂದೂ ಸಂಘಟನೆಯ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ, ಮುಸಲ್ಮಾನ ಕುಟುಂಬವನ್ನು ಮನೆಯನ್ನು ಖಾಲಿ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿದರು. ಅಂತಿಮವಾಗಿ ಪೊಲೀಸರು ಆ ಮುಸಲ್ಮಾನ ಕುಟುಂಬದ ಮನೆಗೆ ಬೀಗ ಹಾಕಿದರು.

ಮುಸಲ್ಮಾನ ಕುಟುಂಬ ಖರೀದಿಸಿದ ಮನೆ

1. ಈ ಮುಸಲ್ಮಾನ ಕುಟುಂಬವು ಅನುಭವ ಕಾಲರಾ ಮತ್ತು ರೀನಾ ಕಾಲರಾ ಅವರಿಂದ ಈ ಮನೆಯನ್ನು ಸುಮಾರು 1 ಕೋಟಿಗೆ ಖರೀದಿಸಿದೆ. ಅವರು ಐದು ದಿನಗಳ ಹಿಂದೆ ಮನೆಯನ್ನು ನೋಂದಾಯಿಸಿಕೊಂಡು ಕುಟುಂಬದೊಂದಿಗೆ ವಾಸಿಸಲು ಬಂದು ಹಾಲಿನ ವ್ಯಾಪಾರವನ್ನು ಪ್ರಾರಂಭಿಸಿದ್ದರು.

2. ಮುಸಲ್ಮಾನ ಕುಟುಂಬದ ಹಾಲಿನ ವ್ಯಾಪಾರದಿಂದ ಗ್ರಾಹಕರ ದಟ್ಟಣೆ ಹೆಚ್ಚಾಯಿತು. ಅವರ ವಾಹನಗಳಿಂದ ಗಲ್ಲಿಗಳಲ್ಲಿ ರಸ್ತೆಗಳು ಬಂದ್ ಆಗಲಾರಂಭಿಸಿದವು. ಇದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಹಾಗೆಯೇ ಅಲ್ಲದೆ, ಇಲ್ಲಿ ಮದ್ಯಸೇವನೆಯೂ ಶುರುವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

3. ಹಿಂದೂ ಸಂಘಟನೆಯ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದರು. ಆಗ ಸ್ಥಳೀಯರು ‘ಮಾರಾಟಕ್ಕಿದೆ ಮನೆ’ ಎಂಬ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು. ಸ್ಥಳೀಯರು ಈ ವಿಷಯದ ಬಗ್ಗೆ ಥಾಪರನಗರ ಪೊಲೀಸ್ ಠಾಣೆಯ ಮುಖ್ಯಸ್ಥರಿಗೆ ಮನವಿ ಪತ್ರವನ್ನೂ ಸಲ್ಲಿಸಿದರು.

4. ಈ ಪ್ರತಿಭಟನೆಯ ನಂತರ ಸದರ ಬಜಾರ್ ಪೊಲೀಸ್ ಠಾಣೆಯ ಪೊಲೀಸರು ಘಟನಾಸ್ಥಳಕ್ಕೆ ಬಂದರು. ಸ್ಥಳೀಯರು ಮುಸಲ್ಮಾನ ಕುಟುಂಬವು ಮನೆಯನ್ನು ಖಾಲಿ ಮಾಡಬೇಕು, ಇಲ್ಲದಿದ್ದರೆ ಸಂಪೂರ್ಣ ಪ್ರದೇಶವನ್ನು ಖಾಲಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಉದ್ವಿಗ್ನತೆ ಹೆಚ್ಚುತ್ತಿರುವುದನ್ನು ಗಮನಿಸಿದ ಪೊಲೀಸರು ಮನೆಗೆ ಬೀಗ ಹಾಕಿ, ಎರಡೂ ಕಡೆಯವರು ಪೊಲೀಸ್ ಠಾಣೆಗೆ ಬಂದು ಮಾತನಾಡಲು ಸೂಚಿಸಿದರು.