ಮುಸಲ್ಮಾನ ಹೆಣ್ಣುಮಕ್ಕಳ ‘ಖತ್ನಾ’ ಮೇಲೆ ನಿಷೇಧ ಹೇರುವ ಬೇಡಿಕೆಯ ಕುರಿತು ಸರ್ವೋಚ್ಚ ನ್ಯಾಯಾಲಯದಿಂದ ಕೇಂದ್ರಸರಕಾರಕ್ಕೆ ನೋಟಿಸ್ – Demand to Impose a Ban on ‘Khatna’

ನವ ದೆಹಲಿ – ಸರ್ವೋಚ್ಚ ನ್ಯಾಯಾಲಯವು ಮುಸಲ್ಮಾನ ಹೆಣ್ಣುಮಕ್ಕಳ ಖತ್ನಾ ಪದ್ಧತಿಯು (ಖತ್ನಾ ಎಂದರೆ ಮಹಿಳೆಯರ ಜನನಾಂಗದ ಒಂದು ಭಾಗವನ್ನು ಕತ್ತರಿಸುವುದು) ‘ಪೋಕ್ಸೋ’ ಕಾಯಿದೆಯ ಉಲ್ಲಂಘನೆಯೇ ಎಂಬುದರ ಬಗ್ಗೆ ವಿಚಾರ ಮಾಡಲು ಸಮ್ಮತಿಸಿದೆ. ಈ ಪದ್ಧತಿಯ ಮೇಲೆ ನಿಷೇಧ ಹೇರಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಸಮ್ಮತಿಯನ್ನು ವ್ಯಕ್ತಪಡಿಸಿ ಕೇಂದ್ರ ಸರಕಾರ ಸೇರಿದಂತೆ ಸಂಬಂಧಪಟ್ಟ ಪಕ್ಷಗಳಿಗೆ ನೋಟಿಸ್ ಜಾರಿ ಮಾಡಿದೆ.

‘ಖತ್ನಾ’ ಎಂದರೇನು?

ಕೆಲವು ಸಂಪ್ರದಾಯವಾದಿ ಮುಸಲ್ಮಾನ ಸಮುದಾಯಗಳಲ್ಲಿ, ಮಹಿಳೆಯರು ಶುದ್ಧರಾಗಲು ಮತ್ತು ಮದುವೆಗೆ ಸಿದ್ಧರಾಗಲು ಖತ್ನಾ ಮಾಡಿಸಿಕೊಳ್ಳುವುದು ಅವಶ್ಯಕ ಎಂದು ಪರಿಗಣಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಮಹಿಳೆಯರ ಜನನಾಂಗದ ಒಂದು ಭಾಗವನ್ನು ಕತ್ತರಿಸಲಾಗುತ್ತದೆ. ಕಾಯಿದೆಯ ಪ್ರಕಾರ, ಖತ್ನಾ ಮಾಡಿದವರಿಗೆ ದೋಷಿ ಎಂದು ಕಂಡುಬಂದರೆ 7 ವರ್ಷಗಳವರೆಗೆ ಜೈಲು ಶಿಕ್ಷೆಯಾಗಬಹುದು.

‘ಚೇತನಾ ವೆಲ್ ಫೇರ್ ಸೊಸಾಯಟಿ’ ಎಂಬ ಖಾಸಗಿ ಸಂಸ್ಥೆಯು ಸಲ್ಲಿಸಿರುವ ಅರ್ಜಿಯಲ್ಲಿ,

ಈ ಪದ್ಧತಿಯು ಇಸ್ಲಾಂ ಧರ್ಮದ ಕಡ್ಡಾಯ ಭಾಗವಲ್ಲ ಎಂದು ಹೇಳಲಾಗಿದೆ. ಅಪ್ರಾಪ್ತ ಹೆಣ್ಣುಮಕ್ಕಳ ಖತ್ನಾ ಮಾಡುವುದು ನೇರವಾಗಿ ಮಕ್ಕಳ ಹಕ್ಕುಗಳು ಮತ್ತು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ. ಪೋಕ್ಸೋ ಕಾಯಿದೆಯ ಅಡಿಯಲ್ಲಿ, ವೈದ್ಯಕೀಯ ಕಾರಣಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕಾರಣಗಳಿಗಾಗಿ ಅಪ್ರಾಪ್ತ ಮಕ್ಕಳ ಜನನಾಂಗಗಳನ್ನು ಸ್ಪರ್ಶಿಸುವುದು ಕಾಯಿದೆಯ ಉಲ್ಲಂಘನೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ಕೂಡ ಮಹಿಳೆಯರ ಖತ್ನಾವನ್ನು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆ ಎಂದು ಪರಿಗಣಿಸಿದೆ.