ನೇಪಾಳದಲ್ಲಿ ಮತ್ತೆ ಭುಗಿಲೆದ್ದ ‘ಜೆನ್ ಝಿ’ ಯುವಕರ ಆಂದೋಲನ: ಕರ್ಫ್ಯೂ ಜಾರಿ ! – Nepal ‘Gen Z’ protests flare

ಕಳೆದ ಆಂದೋಲನದಲ್ಲಿ ಕಮ್ಯುನಿಸ್ಟ್ ಪಕ್ಷದ ನಾಯಕ ಮಹೇಶ್ ಬಸ್ನೆತ್ ಅವರು ಮಾಜಿ ಪ್ರಧಾನಿ ಕೆಪಿ ಶರ್ಮಾ ಓಲಿ ಅವರನ್ನು ಬೆಂಬಲಿಸಿದ್ದರಿಂದ ಯುವಕರಲ್ಲಿ ಆಕ್ರೋಶ!

(ಜೆನ್ ಝಿ: ಜನರೇಷನ್ ಝಡ್ – 1996 ರಿಂದ 2010 ರ ಅವಧಿಯಲ್ಲಿ ಜನಿಸಿದ ಪೀಳಿಗೆ)

ಕಾಠ್ಮಂಡು (ನೇಪಾಳ) – ನೇಪಾಳದಲ್ಲಿ ‘ಜೆನ್ ಝಿ’ ಯುವಕರು ಹಿಂದೆ ಮಾಡಿದ ಪ್ರತಿಭಟನೆಯಲ್ಲಿ ‘ನೇಪಾಳ ಕಮ್ಯುನಿಸ್ಟ್ ಪಕ್ಷ (ಏಕೀಕೃತ ಮಾರ್ಕ್ಸ್ವಾದಿ ಮತ್ತು ಲೆನಿನ್ವಾದಿ)’ದ ನಾಯಕ ಮಹೇಶ್ ಬಸ್ನೆತ್ ಅವರು ಮಾಜಿ ಪ್ರಧಾನಿ ಕೆಪಿ ಶರ್ಮಾ ಓಲಿ ಅವರನ್ನು ಬೆಂಬಲಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿ ಯುವಕರು ಮತ್ತೊಮ್ಮೆ ರಸ್ತೆಗೆ ಇಳಿದು ಆಂದೋಲನ ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ಸೆಮ್ರಾ ವಿಮಾನ ನಿಲ್ದಾಣದ ಹೊರಗೆ ದೊಡ್ಡ ಪ್ರಮಾಣದ ಪ್ರತಿಭಟನೆ ನಡೆಯಿತು. ಪ್ರಸ್ತುತ ಈ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣವಿದೆ.

‘ನೇಪಾಳ ಕಮ್ಯುನಿಸ್ಟ್ ಪಕ್ಷ’ದ ನಾಯಕರಾದ ಶಂಕರ್ ಪೌಡೆಲ್ ಮತ್ತು ಮಹೇಶ್ ಬಸ್ನೆತ್ ಅವರು ರಾಜಕೀಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಾರಾ ಜಿಲ್ಲೆಗೆ ಆಗಮಿಸಲಿದ್ದರು. ಈ ಮಾಹಿತಿ ತಿಳಿಯುತ್ತಿದ್ದಂತೆ ಯುವಕರು ಅವರ ವಿರುದ್ಧ ರಸ್ತೆಗೆ ಇಳಿದರು. ಅವರು ಸೆಮ್ರಾ ವಿಮಾನ ನಿಲ್ದಾಣವನ್ನು ಸುತ್ತುವರಿದರು. ನೋಡ ನೋಡುತ್ತಿದ್ದಂತೆಯೇ ಪ್ರತಿಭಟನಾಕಾರರ ಸಂಖ್ಯೆ ನಿಯಂತ್ರಣ ಮೀರಿ ಹೆಚ್ಚಾಯಿತು ಮತ್ತು ಪರಿಸ್ಥಿತಿ ಬಿಗಡಾಯಿಸಿತು. ಇದರ ನಂತರ ವಿಮಾನ ನಿಲ್ದಾಣದ ಭದ್ರತೆಯನ್ನು ಹೆಚ್ಚಿಸಲಾಯಿತು.

ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಧರ್ಮೇಂದ್ರ ಕುಮಾರ್ ಮಿಶ್ರ ಅವರು ತಕ್ಷಣ ಕರ್ಫ್ಯೂ ಜಾರಿಗೊಳಿಸುವಂತೆ ಆದೇಶ ನೀಡಿದರು. ಸೆಮ್ರಾ ವಿಮಾನ ನಿಲ್ದಾಣ ಮತ್ತು ಅದರ ಸುತ್ತಮುತ್ತಲಿನ ಸಂಪೂರ್ಣ ಪ್ರದೇಶದಲ್ಲಿ ಮಧ್ಯಾಹ್ನ 12.30 ರಿಂದ ರಾತ್ರಿ 8 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿತ್ತು. ಈ ಅವಧಿಯಲ್ಲಿ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಯಿತು. ಇದರಿಂದಾಗಿ ಪ್ರಯಾಣಿಕರು ಅನೇಕ ತೊಂದರೆಗಳನ್ನು ಎದುರಿಸಬೇಕಾಯಿತು. ಪ್ರಸ್ತುತ ಬಾರಾ ಜಿಲ್ಲೆಯ ಪರಿಸ್ಥಿತಿಯ ಮೇಲೆ ಆಡಳಿತವು ಸೂಕ್ಷ್ಮವಾಗಿ ಗಮನಹರಿಸಿದೆ.