‘ಆಪರೇಷನ್ ಸಿಂದೂರ್’ ಕೇವಲ ಒಂದು ಝಲಕ್ ಮಾತ್ರ! – ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ

ನವದೆಹಲಿ – ಭಯೋತ್ಪಾದನೆಯು ಭಾರತಕ್ಕೆ ಅತಿ ದೊಡ್ಡ ಅಪಾಯವಾಗಿದೆ. ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ. ಮಾತುಕತೆ ಮತ್ತು ಭಯೋತ್ಪಾದನೆ ಈ ಎರಡೂ ವಿಷಯಗಳು ಎಂದಿಗೂ ಒಟ್ಟಿಗೆ ಸಾಗುವುದಿಲ್ಲ. ‘ಆಪರೇಷನ್ ಸಿಂದೂರ್’ ಕೇವಲ ಒಂದು ಝಲಕ್ ಮಾತ್ರ. ಅಗತ್ಯ ಬಿದ್ದರೆ, ನೆರೆಯವರೊಂದಿಗೆ ಜವಾಬ್ದಾರಿಯುತ ರಾಷ್ಟ್ರವು ಹೇಗೆ ವರ್ತಿಸುತ್ತದೆ ಎಂಬುದನ್ನು ಪಾಕಿಸ್ತಾನಕ್ಕೆ ತೋರಿಸಲಾಗುವುದು, ಎಂದು ಭಾರತದ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಪಾಕಿಸ್ತಾನಕ್ಕೆ ಖಡಕ್ ಮಾತುಗಳಲ್ಲಿ ಎಚ್ಚರಿಕೆ ನೀಡಿದರು. ರಾಜಧಾನಿಯ ಚಾಣಕ್ಯ ಸಂರಕ್ಷಣಾ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಜನರಲ್ ದ್ವಿವೇದಿ ಅವರು ಭದ್ರತಾ ಸವಾಲುಗಳು, ಪಾಕಿಸ್ತಾನದ ಪಾತ್ರ, ಕಾಶ್ಮೀರದ ಪರಿಸ್ಥಿತಿ ಮತ್ತು ಪ್ರಾದೇಶಿಕ ಬೆಳವಣಿಗೆಗಳ ಕುರಿತು ತಮ್ಮ ನಿಲುವನ್ನು ಸ್ಪಷ್ಟವಾಗಿ ಮಂಡಿಸಿದರು.

ಜನರಲ್ ದ್ವಿವೇದಿ ಅವರು ತಿಳಿಸಿದ ಪ್ರಮುಖ ಅಂಶಗಳು:

೧. ಪಾಕಿಸ್ತಾನವು ಪರೋಕ್ಷವಾಗಿ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದ್ದರೂ, ಭಾರತೀಯ ಸೇನೆಯು ಅದರ ಪ್ರತಿಯೊಂದು ಚಲನವಲನದ ಮೇಲೆ ಕಣ್ಣಿಟ್ಟಿದೆ. (ಪರೋಕ್ಷ ಬೆಂಬಲ ಎಂದರೆ, ಅದು ಒಂದು ರೀತಿಯಲ್ಲಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದೆ ಎಂಬುದನ್ನು ಗಮನಿಸಬೇಕು. – ಸಂಪಾದಕರು)

೨. ಕಳೆದ ೫ ವರ್ಷಗಳಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದನೆಯು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿದೆ ಮತ್ತು ನಾಶಗೊಂಡ ಭಯೋತ್ಪಾದಕರಲ್ಲಿ ಶೇಕಡಾ ೬೦% ಕ್ಕಿಂತ ಹೆಚ್ಚು ಜನರು ಗಡಿ ದಾಟಿ ಬಂದವರು.

೩. ಭಾರತವು ಯಾವುದೇ ಪರಮಾಣು ಒತ್ತಡಕ್ಕೆ ಮಣಿಯುವುದಿಲ್ಲ ಮತ್ತು ಯುದ್ಧ ೪ ತಿಂಗಳು ನಡೆದರೂ ಅಥವಾ ೪ ವರ್ಷಗಳ ಕಾಲ ನಡೆದರೂ ಸಹ ಭಾರತೀಯ ಸೇನೆಯು ಪ್ರತಿವೊಂದು ಪರಿಸ್ಥಿತಿಗೂ ಸಿದ್ಧವಾಗಿದೆ.

ಸಂಪಾದಕೀಯ ನಿಲುವು

ಪಾಕಿಸ್ತಾನ ನಡೆಸುವ ಜಿಹಾದಿ ಭಯೋತ್ಪಾದನೆಯು ಸಂಪೂರ್ಣವಾಗಿ ನಾಶವಾಗುವವರೆಗೆ, ಭಾರತವು ಇಂತಹ ಝಲಕ್ ತೋರಿಸಿ ಸುಮ್ಮನಾಗಬಾರದು. ‘ಆರ್-ಪಾರ್ ಕೀ ಲಡಾಯಿ’ (ಸಂಪೂರ್ಣ ಕಾರ್ಯಾಚರಣೆ) ಮಾಡಬೇಕು ಎಂಬುದು ಜನರ ನಿರೀಕ್ಷೆಯಾಗಿದೆ !