ವಿಶೇಷ ನ್ಯಾಯಾಲಯದಿಂದ ಶಾಸಕ ಟಿ. ರಾಜಾ ಸಿಂಗ್ ಖುಲಾಸೆ!

2022ರಲ್ಲಿ ಮಹಮ್ಮದ್ ಪೈಗಂಬರ್ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣ

ಭಾಗ್ಯನಗರ (ತೆಲಂಗಾಣ) – ಇಲ್ಲಿನ ಪ್ರಖರ ಹಿಂದುತ್ವನಿಷ್ಠ ನಾಯಕ ಮತ್ತು ಶಾಸಕ ಟಿ. ರಾಜಾ ಸಿಂಗ್ ಅವರನ್ನು ವಿಶೇಷ ನ್ಯಾಯಾಲಯವು ಆಗಸ್ಟ್ 2022 ರ ಪ್ರಕರಣವೊಂದರಲ್ಲಿ ಖುಲಾಸೆಗೊಳಿಸಿದೆ. ಮುಹಮ್ಮದ್ ಪೈಗಂಬರ್ ಅವರ ಬಗ್ಗೆ ಆಕ್ಷೇಪಾರ್ಹ ಟಿಪ್ಪಣಿ ಮಾಡಿದ್ದಾರೆ ಎಂಬ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಸಂಸದರು ಮತ್ತು ಶಾಸಕರ (ಎಂಪಿ-ಎಂಎಲ್ಎ) ವಿಶೇಷ ನ್ಯಾಯಾಲಯವು ಈ ತೀರ್ಪು ನೀಡಿದೆ. 2022 ರಲ್ಲಿ ಅವರು 77 ದಿನಗಳ ಕಾಲ ಕಸ್ಟಡಿಯಲ್ಲಿದ್ದರು.

ರಾಜಾ ಸಿಂಹ ಅವರ ಪರ ವಕೀಲ ಕೆ. ಕರುಣಾ ಸಾಗರ್ ಮಾತನಾಡಿ, ಶಾಸಕರ ಮೇಲಿನ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ (ಸರಕಾರಿ ಪಕ್ಷ) ವಿಫಲವಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ಬಂದಿದ್ದರಿಂದ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿದೆ ಎಂದು ತಿಳಿಸಿದರು.

ಸತ್ಯಕ್ಕೆ ಜಯ! – ಶಾಸಕ ಟಿ. ರಾಜಾ ಸಿಂಹ

ಗೋಷಾಮಹಲ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಟಿ. ರಾಜಾ ಸಿಂಹ ಅವರು ನ್ಯಾಯಾಲಯದ ಈ ನಿರ್ಧಾರವನ್ನು ಸ್ವಾಗತಿಸಿದ್ದು, ಇದನ್ನು ‘ಸತ್ಯಕ್ಕೆ ಸಿಕ್ಕ ಜಯ’ ಎಂದು ಕರೆದಿದ್ದಾರೆ. ಅಂದಿನ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಸರಕಾರವು ‘ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತಿಹಾದ್-ಉಲ್-ಮುಸ್ಲಿಮೀನ್’ (ಎಐಎಂಐಎಂ) ಒತ್ತಡಕ್ಕೆ ಮಣಿದು ನನ್ನ ವಿರುದ್ಧ ಈ ಕ್ರಮ ಕೈಗೊಂಡಿತ್ತು ಎಂದು ಅವರು ಆರೋಪಿಸಿದರು.

ಅವರು ಮಾತನ್ನು ಮುಂದುವರೆಸುತ್ತಾ, “ನಾನು ಯಾವಾಗಲೂ ಕಾನೂನು ಮತ್ತು ಸಂವಿಧಾನದ ಚೌಕಟ್ಟಿನಲ್ಲೇ ನನ್ನ ಅಭಿಪ್ರಾಯವನ್ನು ಮಂಡಿಸಿದ್ದೇನೆ. ಇಂದು ನನ್ನ ಮೇಲಿನ ಎಲ್ಲಾ ಆರೋಪಗಳು ನ್ಯಾಯಾಲಯದಲ್ಲಿ ಸುಳ್ಳು ಎಂದು ಸಾಬೀತಾಗಿವೆ. ಇದು ಸತ್ಯ, ನ್ಯಾಯ ಮತ್ತು ಕಾನೂನಿಗೆ ಸಂದ ಜಯವಾಗಿದೆ,” ಎಂದು ಹೇಳಿದರು.

ಘಟನಾವಳಿಗಳನ್ನು ಅರ್ಥಮಾಡಿಕೊಳ್ಳಿ!

ಆಗಸ್ಟ್ 2022 ರಲ್ಲಿ ಶಾಸಕ ಟಿ. ರಾಜಾ ಸಿಂಹ ಅವರ ವಿರುದ್ಧ ‘ಮುಂಜಾಗ್ರತಾ ಬಂಧನ ಕಾಯ್ದೆ’ (ಪಿಡಿ ಆಕ್ಟ್) ಅಡಿಯಲ್ಲಿ ಕ್ರಮ ಕೈಗೊಂಡ ನಂತರ, ಅವರು ಆಗಸ್ಟ್‌ 25 ರಿಂದ ನವೆಂಬರ್ 9. 2023 ರವರೆಗೆ ಜೈಲಿನಲ್ಲಿ ಇರಬೇಕಾಯಿತು. ಆಕ್ಷೇಪಾರ್ಹ ಹೇಳಿಕೆಗಳ ನಂತರ ಭಾಜಪ ಅವರನ್ನು ಪಕ್ಷದಿಂದ ಅಮಾನತುಗೊಳಿಸಿತ್ತು. ನಂತರ 2023 ರ ವಿಧಾನಸಭಾ ಚುನಾವಣೆಗೆ ಮುನ್ನ ಭಾಜಪ ಅವರ ಅಮಾನತನ್ನು ಹಿಂತೆಗೆದುಕೊಂಡು, ಭಾಗ್ಯನಗರ ನಗರದ ಗೋಷಾಮಹಲ್ ಕ್ಷೇತ್ರದಿಂದ ಮತ್ತೊಮ್ಮೆ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತು. ಅವರು ತೆಲಂಗಾಣ ವಿಧಾನಸಭೆಗೆ ಮತ್ತೊಮ್ಮೆ ಆಯ್ಕೆಯಾದರು. ಕಳೆದ ವರ್ಷ ಪಕ್ಷದ ತೆಲಂಗಾಣ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಅನುಮತಿ ನಿರಾಕರಿಸಿದ ಕಾರಣ ಶಾಸಕ ಸಿಂಹ ಅವರು ಭಾಜಪಗೆ ರಾಜೀನಾಮೆ ನೀಡಿದ್ದರು.