ಅಮೆರಿಕಾ ಗಾಜಾ ಪಟ್ಟಿಯನ್ನು ಎರಡು ಭಾಗಗಳಾಗಿ ವಿಭಜಿಸಲಿದೆ! – America Decision Gaza Strip

  • ಇಸ್ರೇಲ್‌ ನ ನಿಯಂತ್ರಣದಲ್ಲಿರುವ ‘ಗ್ರೀನ್ ಝೋನ್’ ನ ಪುನರಾಭಿವೃದ್ಧಿಯಾಗಲಿದೆ

  • ಪ್ಯಾಲೆಸ್ತೀನ್‌ ನ ‘ರೆಡ್ ಝೋನ್’ ಧ್ವಂಸಗೊಂಡ ಪ್ರದೇಶವಾಗಿಯೇ ಉಳಿಯಲಿದೆ

ವಾಷಿಂಗ್ಟನ/ಟೆಲ್ ಅವೀವ್ – ಅಮೆರಿಕಾ ಗಾಜಾ ಪಟ್ಟಿಯನ್ನು ‘ಗ್ರೀನ್ ಝೋನ್’ ಮತ್ತು ‘ರೆಡ್ ಝೋನ್’ ಎಂಬ ಎರಡು ವಿಭಾಗಗಳಾಗಿ ವಿಭಜಿಸಲಿದೆ ಎಂದು ‘ದ ಗಾರ್ಡಿಯನ್’ ಪತ್ರಿಕೆಯು ತನ್ನ ವರದಿಯಲ್ಲಿ ಮಾಹಿತಿ ನೀಡಿದೆ. ಈ ದೀರ್ಘಕಾಲೀನ ಯೋಜನೆಯ ವಾಸ್ತವಿಕ ಅನುಷ್ಠಾನದ ಪ್ರಕ್ರಿಯೆ ಪ್ರಾರಂಭವಾಗಿದೆ.

ಈ ವರದಿಯ ಪ್ರಕಾರ, ಪೂರ್ವ ಗಾಜಾದಲ್ಲಿರುವ ‘ಗ್ರೀನ್ ಝೋನ್’ ಮೇಲೆ ಅಂತರರಾಷ್ಟ್ರೀಯ ಭದ್ರತಾ ದಳ ಮತ್ತು ಇಸ್ರೇಲಿ ಸೇನೆಯ ನಿಯಂತ್ರಣ ಇರಲಿದೆ. ಆರಂಭದಲ್ಲಿ ಅಲ್ಪ ಪ್ರಮಾಣದ ಸೈನಿಕರಿರುತ್ತಾರೆ, ನಂತರ ಕ್ರಮೇಣ ಈ ಸಂಖ್ಯೆಯನ್ನು 20 ಸಾವಿರ ಸೈನಿಕರವರೆಗೆ ಹೆಚ್ಚಿಸುವ ಪ್ರಸ್ತಾವನೆ ಇದೆ. ಯಾವುದೇ ವಿದೇಶಿ ಸೈನ್ಯಕ್ಕೆ ಈ ಝೋನ್‌ ಗೆ ಅನುಮತಿಯಿಲ್ಲದೆ ಪ್ರವೇಶವಿರುವುದಿಲ್ಲ. ಆದಾಗ್ಯೂ, ಪುನರಾಭಿವೃದ್ಧಿ ಕಾರ್ಯಗಳಿಗೆ ಮಾತ್ರ ಅನುಮತಿ ಇರುತ್ತದೆ. ಇದರ ಹೊರತಾಗಿ, ಪಶ್ಚಿಮ ಗಾಜಾದಲ್ಲಿರುವ ಧ್ವಂಸಗೊಂಡ ಪ್ರದೇಶವನ್ನು ‘ರೆಡ್ ಝೋನ್’ ಎಂದು ಘೋಷಿಸಲಾಗುವುದು. ಬಹುತೇಕ ಎಲ್ಲ ಪ್ಯಾಲೆಸ್ತೀನಿಯರು ಇದೇ ‘ರೆಡ್ ಝೋನ್’ನಿಂದ ಸ್ಥಳಾಂತರಗೊಂಡಿದ್ದಾರೆ.

‘ಗಾಜಾ ಶಾಂತಿ ಒಪ್ಪಂದ’ಕ್ಕೆ ಹಸ್ತಾಕ್ಷರ!

ಟ್ರಂಪ್ ಅವರು ಈ ವರ್ಷ ಅಕ್ಟೋಬರ್ 13 ರಂದು ಈಜಿಪ್ಟನ ಶರ್ಮ್ ಅಲ್-ಶೇಖ್ ನಗರದಲ್ಲಿ ‘ಗಾಜಾ ಶಾಂತಿ ಒಪ್ಪಂದ’ ಕ್ಕೆ ಸಹಿ ಹಾಕಿದರು. ಈ ಸಮಯದಲ್ಲಿ 20 ಕ್ಕೂ ಹೆಚ್ಚು ದೇಶಗಳ ನಾಯಕರು ಉಪಸ್ಥಿತರಿದ್ದರು; ಆದರೆ ಇಸ್ರೇಲ್ ಮತ್ತು ಹಮಾಸಗೆ ಆಹ್ವಾನ ನೀಡಲಾಗಿರಲಿಲ್ಲ. ಶಾಂತಿ ಪ್ರಸ್ತಾವನೆಗೆ ಸಹಿ ಹಾಕಿದ ನಂತರ, ಟ್ರಂಪ್ ಅವರು ಒಪ್ಪಂದದ ಕೊನೆಯ ಪುಟವನ್ನು ಪತ್ರಕರ್ತರಿಗೆ ತೋರಿಸಿದರು. ಅದರ ಮೇಲೆ, ಪ್ರತಿ ವ್ಯಕ್ತಿಯು ಗೌರವ, ಶಾಂತಿ ಮತ್ತು ಸಮಾನ ಅವಕಾಶಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಧರ್ಮ ಅಥವಾ ಜನಾಂಗ ಏನೇ ಇರಲಿ, ಪ್ರತಿಯೊಬ್ಬರೂ ಶಾಂತಿ ಮತ್ತು ಸುರಕ್ಷತೆಯನ್ನು ಅನುಭವಿಸುವಂತಹ ಈ ಪ್ರದೇಶ ನಮಗೆ ಬೇಕು’, ಎಂದು ಬರೆಯಲಾಗಿತ್ತು. ಇದರ ನಂತರ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್ ಅವರು 20 ಅಂಶಗಳ ಯೋಜನೆಯನ್ನು ಘೋಷಿಸಿದರು. ಇದರಲ್ಲಿ ಗಾಜಾದಲ್ಲಿನ ಯುದ್ಧವನ್ನು ನಿಲ್ಲಿಸುವುದು, ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದು, ಗಾಜಾದ ಆಡಳಿತವನ್ನು ನೋಡಿಕೊಳ್ಳಲು ತಾತ್ಕಾಲಿಕ ಮಂಡಳಿಯನ್ನು ಸ್ಥಾಪಿಸುವುದು ಮುಂತಾದ ಅಂಶಗಳು ಸೇರಿವೆ. ಈ ಮಂಡಳಿಯ ಅಧ್ಯಕ್ಷತೆಯನ್ನು ಟ್ರಂಪ್ ಅವರು ಸ್ವತಃ ವಹಿಸಿಕೊಳ್ಳಲಿದ್ದಾರೆ, ಆದರೆ ಮಾಜಿ ಬ್ರಿಟಿಷ್ ಪ್ರಧಾನಿ ಟೋನಿ ಬ್ಲೇರ್ ಅವರು ಈ ಮಂಡಳಿಯ ಸದಸ್ಯರಾಗಿರುತ್ತಾರೆ.